ಗುರುವಾರ , ಜುಲೈ 29, 2021
25 °C

ಒಳನೋಟ: ಬಾಲ್ಯ ಕಸಿದ ಬದುಕು, ಆಡುವ ಮಕ್ಕಳು ದುಡಿಮೆಗೆ

ಉದಯ ಯು. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅಂದು ಮಧ್ಯರಾತ್ರಿ. ರಸ್ತೆಪಕ್ಕ ಕುಳಿತಿದ್ದ ಬಾಲಕಿ ಕೈಯಲ್ಲಿ ಐಫೋನ್‌ ಇತ್ತು. ಆಕೆಯ ಹಾವಭಾವ, ಚಹರೆ, ಧರಿಸಿದ್ದ ಬಟ್ಟೆಯನ್ನು ನೋಡಿದವರಿಗೆ ನಂಬಲು ಆಗುತ್ತಿರಲಿಲ್ಲ. ಗಮನಿಸಿದ ಯಾರೋ ಪೊಲೀಸರಿಗೆ ಮಾಹಿತಿ ನೀಡಿದರು. ಪಾಂಡೇಶ್ವರ ಠಾಣೆಯ ಪೊಲೀಸರು ಬಂದು ಆಕೆಯನ್ನು ಠಾಣೆಗೆ ಕರೆದೊಯ್ದು ಸಮಾಧಾನದಿಂದ ವಿಚಾರಿಸಿದಾಗ ಆಕೆಯ ನೋವಿನ ಕತೆ ಅನಾವರಣಗೊಂಡಿತು.

ಹಾಸನ ಜಿಲ್ಲೆಯ ಆ ಬಾಲಕಿಯನ್ನು ಮಧ್ಯವರ್ತಿಯೊಬ್ಬರು ಮನೆ ಕೆಲಸ ಕ್ಕೆಂದು ಇಲ್ಲಿನ ಒಬ್ಬರ ಮನೆಗೆ ತಂದು ಬಿಟ್ಟಿದ್ದರು. ಅವಳನ್ನು ಇಲ್ಲಿ ಬಿಟ್ಟುಹೋದಾತ, ತನಗೆ ಬರಬೇಕಾದ ಹಣವನ್ನು ಪಡೆದಾಗಿತ್ತು. ಮನೆಗೆಲಸಕ್ಕೆ ಸೇರಿ ಎರಡು ತಿಂಗಳು ಕಳೆದಿದ್ದರೂ ಒಂದು ರೂಪಾಯಿಯನ್ನೂ ನೀಡಲಿಲ್ಲ. ಅಂದು ಮಧ್ಯರಾತ್ರಿ, ಮನೆಯ ಮಾಲೀಕ ಆಕೆಯ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದ. ಧೈರ್ಯ ಮಾಡಿದ ಬಾಲಕಿ, ಮಾಲೀಕನ ಐಫೋನನ್ನೂ ಎತ್ತಿಕೊಂಡು ಪರಾರಿಯಾಗಿದ್ದಳು.

ಇನ್ನೊಂದು ಪ್ರಕರಣದಲ್ಲಿ,ಮಂಗಳೂರಿನಲ್ಲಿ ಓದುತ್ತಿದ್ದ ವಿಜಯಪುರದ ಬಾಲಕಿಯೊಬ್ಬಳು ಕೊರೊನಾದಿಂದಾಗಿ ಶಾಲೆ ಮುಚ್ಚಿ
ದಾಗ ತನ್ನೂರಿಗೆ ಹೋಗಿದ್ದಳು. ಈ ಸಂದರ್ಭದಲ್ಲಿ, ಪಾಲಕರು ಮಗಳ ಮದುವೆಯ ಮಾತುಕತೆ ಆರಂಭಿಸಿದ್ದರು. ಇಲ್ಲೇ ಇದ್ದರೆ ತನ್ನನ್ನು ಯಾರಿಗಾದರೂ ಕಟ್ಟಿಬಿಡುತ್ತಾರೆ ಎಂದುಕೊಂಡ ಬಾಲಕಿ, ಮಂಗಳೂರಿಗೆ ಮರಳಿದಳು. ಈಗ ಹಲವು ದಿನಗಳಿಂದ ಆಕೆಗೆ ಒಂದೇ ಸಮನೆ ಮನೆಯವರಿಂದ ಕರೆಗಳು ಬರುತ್ತಿವೆ. ‘ಒಳ್ಳೆಯ ಸಂಬಂಧ ಬಂದಿದೆ, ಮದುವೆ ಮಾಡ್ಕೋ, ಭವಿಷ್ಯ ಚೆನ್ನಾಗಿರುತ್ತೆ’ ಎಂದು ಒತ್ತಾಯಿಸುತ್ತಿದ್ದಾರೆ. ಬಾಲಕಿ ತನ್ನ ನೋವನ್ನು ಮಕ್ಕಳ ಕಲ್ಯಾಣ ಸಮಿತಿ  ಮುಂದೆ ತೋಡಿಕೊಂಡಿದ್ದಾಳೆ. ಈಗ ಸಮಿತಿಯ ಸದಸ್ಯರು, ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ರಾಜ್ಯದ ಹಲವೆಡೆಯ ಮಕ್ಕಳು ಇದೇ ತೆರನಾದ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೊನಾದಿಂದಾಗಿ ಉದ್ಯೋಗ ನಷ್ಟ, ವ್ಯಾಪಾರ ಕುಸಿತ, ಉದ್ದಿಮೆಗಳು ಸ್ಥಗಿತ... ಮುಂತಾದ ನೂರಾರು ಸಮಸ್ಯೆಗಳು ಮುನ್ನೆಲೆಗೆ ಬಂದಿವೆ.

ಆದರೆ, ನಮ್ಮ ಪರಿಸರದಲ್ಲೇ ಆಡಿಕೊಂಡಿದ್ದ, ದಿನ ಬೆಳಗಾದರೆ ಶಾಲಾ ಬ್ಯಾಗ್‌ ಬೆನ್ನಿಗೇರಿಸಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದ ಸಾವಿರಾರು ಅಮಾಯಕ ಮಕ್ಕಳು ಅನುಭವಿಸುತ್ತಿರುವ ಯಾತನೆಯು ಕಣ್ಣಿಗೆ ಕಾಣಿಸದೇಹೋಗಿದೆ. ಎಷ್ಟು ಮಕ್ಕಳು ಇಂಥ ಯಾತನೆಯನ್ನು ಮೌನವಾಗಿ ಸಹಿಸುತ್ತಿದ್ದಾರೆ ಎಂಬುದರ ಅಂದಾಜು ಕೂಡ ಲಭ್ಯವಾಗುತ್ತಿಲ್ಲ ಎಂಬುದು ಆತಂಕದ ವಿಚಾರ.

ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ನಂತರ ರಾಜ್ಯದಲ್ಲೂ ಬಾಲಕಾರ್ಮಿಕ ಪದ್ಧತಿ ಹೆಚ್ಚಳವಾಗಿದೆ ಎನ್ನುವ ವರದಿಗಳಿವೆ. ಹೆಚ್ಚಿನ ಜಿಲ್ಲೆಗಳಲ್ಲಿ ಕೃಷಿ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ, ಕರಾವಳಿಯ ಮೀನುಗಾರಿಕೆಯಲ್ಲಿ, ಶಿವಮೊಗ್ಗದ ನೆಡುತೋಪುಗಳಲ್ಲಿ, ಕಲ್ಯಾಣ ಕರ್ನಾಟಕದಲ್ಲಿ ಹತ್ತಿ ಬಿಡಿಸುವ ಕೆಲಸದಲ್ಲಿ, ವಿವಿಧ ಭಾಗಗಳ ಕಲ್ಲು ಕ್ವಾರಿಗಳಲ್ಲಿ ಮಕ್ಕಳು ದುಡಿಯುತ್ತಿರುವ ಬಗ್ಗೆ ವರದಿಗಳಿವೆ. ಮೈಸೂರು ಹಾಗೂ ಇತರ ಭಾಗಗಳಲ್ಲಿ ಮಕ್ಕಳು ಸೊಪ್ಪು, ತರಕಾರಿ ಮಾರಾಟ ಮಾಡುತ್ತಿರುವುದೂ ಕಂಡುಬಂದಿದೆ. ಆದರೆ, ಎಲ್ಲಿ ಎಷ್ಟು ಮಕ್ಕಳಿದ್ದಾರೆ, ಶಿಕ್ಷಣದಿಂದ ಎಷ್ಟು ಮಂದಿ ವಂಚಿತರಾಗಿದ್ದಾರೆ ಎಂಬ ನಿಖರ ಮಾಹಿತಿ ಎಲ್ಲೂ ಲಭ್ಯವಾಗುತ್ತಿಲ್ಲ.

ಕೊರೊನಾದಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಉದ್ದಿಮೆಗಳು ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ಕಾರ್ಮಿಕ ಇಲಾಖೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ದಾಳಿಗಳೂ ನಡೆಯುತ್ತಿಲ್ಲ. ಕಾರ್ಖಾನೆಗಳು ಹಾಗೂ ಬೇರೆ ಬೇರೆ ಉದ್ದಿಮೆಗಳ ಮೇಲೆ ಆಗಾಗ ದಾಳಿ ನಡೆಯುತ್ತಿದ್ದರೆ ಎಲ್ಲೆಲ್ಲಿ ಯಾವ ಪ್ರಮಾಣದಲ್ಲಿ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಒಂದಷ್ಟು ಅಂಕಿ ಅಂಶಗಳಾದರೂ ಲಭಿಸುತ್ತವೆ. ಈಗಿನ ಸ್ಥಿತಿಯಲ್ಲಿ ಬಾಲಕಾರ್ಮಿಕರ ಪ್ರಮಾಣ ಯಾವ ಮಟ್ಟದಲ್ಲಿ ಹೆಚ್ಚಿದೆ ಎಂದು ಊಹಿಸುವುದೂ ಕಷ್ಟ ಎಂದು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಂಸ್ಥೆಗಳು ಹೇಳುತ್ತವೆ.

‘ಬಡ ಕುಟುಂಬಗಳ ಮಕ್ಕಳನ್ನು ಕೋವಿಡ್‌ ಪಿಡುಗು ಎಂಥ ಸಂಕಷ್ಟಕ್ಕೆ ತಳ್ಳಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಶಾಲೆಗಳು ಪುನಃ ಆರಂಭವಾಗಬೇಕು. ಹಿಂದೆ ಬರುತ್ತಿದ್ದವರಲ್ಲಿ ಎಷ್ಟು ಮಂದಿ ಮತ್ತೆ ಶಾಲೆಗೆ ಬರಲಾರಂಭಿಸಿದ್ದಾರೆ ಎಂಬ ಮಾಹಿತಿ ಶಾಲೆ ಆರಂಭವಾದರೆ ಲಭಿಸುತ್ತದೆ. ಶಾಲೆ ಬಿಟ್ಟವರ ಸಂಖ್ಯೆ ದೊಡ್ಡದಿದ್ದರೆ, ಅಂಥ ಮಕ್ಕಳನ್ನು ಹುಡುಕಿ, ಪುನಃ ಶಾಲೆಗೆ ಕರೆತರುವ ಬಹುದೊಡ್ಡ ಹೊಣೆ ಸರ್ಕಾರ ಮತ್ತು ಸಮಾಜದ ಮೇಲೆ ಇದೆ’ ಎನ್ನುತ್ತಾರೆ ಮಕ್ಕಳ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವ ‘ಪಡಿ’ ಸಂಸ್ಥೆಯ ಮುಖ್ಯಸ್ಥ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ.

ಬೇಸಿಗೆ ರಜೆಯಲ್ಲಿ ಮಕ್ಕಳನ್ನು ದುಡಿಮೆಗೆ ಹಚ್ಚುವ ಪ್ರವೃತ್ತಿ ಹಿಂದೆಯೂ ಇತ್ತು, ಸ್ವಲ್ಪ ಪ್ರಮಾಣದಲ್ಲಿ ಈಗಲೂ ಇದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಇದು ಅನಿವಾರ್ಯವೂ ಸಹ. ನಮ್ಮ ಜತೆಗೆ ಮಕ್ಕಳು ಸಹ ದುಡಿದು ನಾಲ್ಕು ಕಾಸು ಸಂಪಾದಿಸಿದರೆ ಸಂಸಾರದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ ಎಂಬ ಭಾವನೆ ಅವರದ್ದು. ಮಕ್ಕಳು ಶಾಲೆಗೆ ಹೋಗುತ್ತಿದ್ದಷ್ಟು ದಿನ ಒಂದು ರೀತಿಯಾದರೆ, ಶಾಲೆ ಮುಗಿಯುತ್ತಿದ್ದಂತೆಯೇ ಇಂಥ ಪಾಲಕರ ಮನಸ್ಥಿತಿ ಬದಲಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಶಾಲೆಯೇ ನಡೆಯದೆ, ಮಕ್ಕಳು ಮನೆಯಲ್ಲೇ ಇದ್ದಾರೆ. ಸೌಲಭ್ಯ ಇರುವವರು ಮಾತ್ರ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದಾರೆ. ಉಳಿದ ಮಕ್ಕಳು ಇಡೀ ದಿನ ಮನೆಯಲ್ಲೇ ಇದ್ದಾರೆ. ಸಹಜವಾಗಿಯೇ ಪಾಲಕರು ಅವರನ್ನು ದುಡಿಮೆಗೆ ಹಚ್ಚಿದ್ದಾರೆ. ಕೋವಿಡ್‌ ಪಿಡುಗು ಇದನ್ನು ಅನಿವಾರ್ಯಗೊಳಿಸಿದೆ ಎನ್ನುತ್ತಾರೆ ರೆನ್ನಿ.

ದುಡಿಮೆ ಅನಿವಾರ್ಯ
ಮಕ್ಕಳನ್ನು ದುಡಿಮೆಗೆ ಹಚ್ಚಿದ ಪೋಷಕರೆಲ್ಲರೂ, ಮಕ್ಕಳೂ ಹಣ ಸಂಪಾದಿಸಲಿ ಎಂಬ ಒಂದೇ ಉದ್ದೇಶದಿಂದ ಆ ಕೆಲಸ ಮಾಡಿಲ್ಲ. ಬದಲಿಗೆ, ಹೊಟ್ಟೆ ಹೊರೆಯಲು ಅದು ಅನಿವಾರ್ಯವಾಗಿದೆ. ವ್ಯಾಪಾರ- ಉದ್ಯೋಗ ಸ್ಥಗಿತಗೊಂಡಿದ್ದರಿಂದ ಕೆಲಸ ಇಲ್ಲದೆ ಕೈಗಳು ಬರಿದಾಗಿವೆ. ಕಡಿಮೆ ಸಂಬಳ ಕೊಟ್ಟು ಕೃಷಿ, ಮನೆಗೆಲಸದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವವರು ಇದ್ದಾರೆ. ಹಾಗಾದರೂ ಬಂದಷ್ಟು ಹಣ ಬರಲಿ ಎಂದು ಒಲ್ಲದ ಮನಸ್ಸಿನಿಂದ ಮಕ್ಕಳನ್ನು ಕಳುಹಿಸಿದವರಿದ್ದಾರೆ.

‘ಲಾಕ್‌ಡೌನ್‌ನಿಂದ ತುಂಬಾ ಕಷ್ಟವಾಯಿತು. ಐದು ತಿಂಗಳಿಂದ ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ. ಪತ್ನಿಗೂ ಅನಾರೋಗ್ಯ. ಮಕ್ಕಳ ಓದಿಗೂ ಹಣ ಹೊಂದಿಸುವುದು ಕಷ್ಟ. ಮಗಳನ್ನೂ ಕೆಲಸಕ್ಕೆ ಇಳಿಸಬೇಕಾಯಿತು’ ಎಂದು, ಮಗಳನ್ನು ತರಕಾರಿ ಮಾರಾಟಕ್ಕೆ ಹಚ್ಚಿದ ಮೈಸೂರಿನ ಹನುಮಂತು ಎಂಬುವರು ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಲೇ ತಿಳಿಸಿದರು.

*
ಮಗನನ್ನು ಓದಿಸಬೇಕೆಂಬ ಆಸೆ ಇದೆ. ಮನೆಯಲ್ಲಿ ಬಡತನ. ಈಗ ಶಾಲೆಗೆ ರಜೆ ಇರುವುದರಿಂದ, ಅನಿವಾರ್ಯವಾಗಿ ಕೆಲಸಕ್ಕೆ ಕರೆದೊಯ್ಯುತ್ತಿದ್ದೇನೆ.
-ಕೃಷಿ ಕಾರ್ಮಿಕ ಮಹಿಳೆ, ಯಾದಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು