ಬುಧವಾರ, ಮಾರ್ಚ್ 22, 2023
32 °C
ಸದ್ಬಳಕೆಯಾಗದ ಪರೀಕ್ಷಾ ಕೇಂದ್ರಗಳು lಕಣ್ಣೋಟದಲ್ಲೇ ಗೂಡಿನ ಬೆಲೆ ನಿಗದಿ

ಒಳನೋಟ: ಮೋಸದ ಜಾಲದಲ್ಲಿ ರೇಷ್ಮೆ ಕೃಷಿಕ– ಸಿಗದ ವೈಜ್ಞಾನಿಕ ಬೆಲೆ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದು 2022ರ ಫೆಬ್ರುವರಿ 3. ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರೊಬ್ಬರು ತಂದಿದ್ದ ದ್ವಿತಳಿ ರೇಷ್ಮೆ ಗೂಡು ಕೆ.ಜಿಗೆ ₹1,043ಕ್ಕೆ ಮಾರಾಟವಾಗಿತ್ತು! ಏಷ್ಯಾದ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯಾಗಿರುವ ರಾಮನಗರ ಮಾರುಕಟ್ಟೆಯ ಇತಿಹಾಸದಲ್ಲಿಯೇ ರೇಷ್ಮೆ ಗೂಡಿಗೆ ಸಿಕ್ಕಿರುವ ಗರಿಷ್ಠ ಬೆಲೆ ಅದಾಗಿತ್ತು!

ಇದಾದ ಕೆಲವೇ ದಿನಗಳಲ್ಲಿ (ಫೆ 9) ಶಿಡ್ಲಘಟ್ಟದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದ್ವಿತಳಿ ರೇಷ್ಮೆ ಗೂಡು ಕೆ.ಜಿಗೆ ₹ 1,199ಕ್ಕೆ ಮಾರಾಟವಾಗುವ ಮೂಲಕ ರೇಷ್ಮೆ ಕೃಷಿಕರು, ನೂಲು ಬಿಚ್ಚಾಣಿಕೆದಾರರು (ರೀಲರ್‌ಗಳು) ಹಾಗೂ ರೇಷ್ಮೆ ಅಧಿಕಾರಿಗಳ ಹುಬ್ಬೇರು ವಂತೆ ಮಾಡಿತ್ತು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. 2022ರ ಏಪ್ರಿಲ್‍ನಲ್ಲಿ ಮಿಶ್ರ ತಳಿಯ (ಸಿ.ಬಿ) ಗೂಡು ಕೆ.ಜಿಗೆ ಗರಿಷ್ಠ ₹ 999 ಹಾಗೂ ದ್ವಿತಳಿ (ಬಿ.ವಿ) ಗೂಡು ಕೆ.ಜಿಗೆ ಗರಿಷ್ಠ ₹ 988ಕ್ಕೆ ಮಾರಾಟವಾಗಿತ್ತು. ಡಿಸೆಂಬರ್‌ 7ರಂದು ಸಿ.ಬಿ ಕೆ.ಜಿಗೆ ಗರಿಷ್ಠ 712 ಹಾಗೂ ಬಿ.ವಿ ಕೆ.ಜಿಗೆ ಗರಿಷ್ಠ 825ಕ್ಕೆ ಮಾರಾಟವಾಗಿತ್ತು.

ಮೂರು ನಾಲ್ಕು ವರ್ಷಗಳ ಹಿಂದೆ ಕೆ.ಜಿ ಗೂಡಿಗೆ ₹ 250ರಿಂದ ₹350ರ ಆಸುಪಾಸಿನಲ್ಲಿ ನಿಗದಿಯಾಗುತ್ತಿದ್ದ ಧಾರಣೆ, ದಿಢೀರನೇ ಸರಾಸರಿ ₹ 800 ರಿಂದ ₹900ರವರೆಗೂ ಜಿಗಿದಿದೆ. ಆದರೆ ಈ ಬೆಳವಣಿಗೆ ಶಾಶ್ವತವೇ ಎಂಬ ಪ್ರಶ್ನೆಗೆ ರೇಷ್ಮೆ ಅಧಿಕಾರಿಗಳು, ರೀಲರ್‌ಗಳ ಬಳಿ ಸಮರ್ಪಕ ಉತ್ತರವಿಲ್ಲ. 

ಕಾರಣ ಇದು ವೈಜ್ಞಾನಿವಾಗಿ ಗೂಡಿನ ಗುಣಮಟ್ಟ ಆಧರಿಸಿ, ಶ್ರೇಣೀ ಕರಿಸಿ ನಿಗದಿಯಾದ ಬೆಲೆಯಲ್ಲ. ಬದಲಿಗೆ ಭಾರತ– ಚೀನಾ ನಡುವಿನ ಬಾಂಧವ್ಯ ಹಳಸಿರುವುದರ ‘ಎಫೆಕ್ಟ್‌’. ಭಾರತಕ್ಕೆ ಚೀನಾದಿಂದ ಹೆಚ್ಚಾಗಿ ಬರುತ್ತಿದ್ದ ರೇಷ್ಮೆ ನೂಲಿನ ಪ್ರಮಾಣವೀಗ ಬಹುತೇಕ ಕುಸಿದಿದೆ. ಅದರ ಜತೆಗೆ ರೇಷ್ಮೆ ನೂಲಿನ ಆಮದು ಸುಂಕ ಶೇ 10ರಿಂದ 15ಕ್ಕೆ ಏರಿರುವುದೂ ವರದಾನವಾಗಿದೆ.

ನುಣುಪಾಗದ ಜೀವನ: ಗೂಡಿನ ಬೆಲೆ ಏರುತ್ತಿದ್ದರೂ, ರೇಷ್ಮೆ ಬಟ್ಟೆಯಷ್ಟು ನುಣುಪಾದ ಜೀವನ ರೇಷ್ಮೆ ಕೃಷಿಕರದ್ದಲ್ಲ. ರೇಷ್ಮೆ ಮೊಟ್ಟೆಗಳನ್ನು ಚಾಕಿ ಮಾಡಿ, ಹುಳುಗಳನ್ನು ಬಿದಿರಿನ ತಟ್ಟೆಯಲ್ಲಿರಿಸಿ, ಹಿಪ್ಪುನೇರಳೆ ಸೊಪ್ಪು ಹಾಕಿ ಜೋಪಾನ ವಾಗಿ 3-4 ವಾರಗಳ ಕಾಲ ಬೆಳೆಸುವ ರೈತರ ಶ್ರಮವನ್ನೆಲ್ಲ ರೇಷ್ಮೆ ಮಾರುಕಟ್ಟೆ ಎಂಬ ವ್ಯವಸ್ಥೆ ಗಳಿಗೆಯಲ್ಲಿಯೇ ಹೊಸಕಿ ಹಾಕಿಬಿಡುತ್ತಿದೆ. ಮಾರುಕಟ್ಟೆಯಲ್ಲಿನ ವಿವಿಧ ಬಗೆಯ ಮೋಸದ ಜಾಲದಲ್ಲಿ ಸಿಲುಕಿ ರೇಷ್ಮೆ ಕೃಷಿಕರು ಒದ್ದಾಡುತ್ತಿದ್ದಾರೆ.

ರೈತರು ಮಾರುಕಟ್ಟೆಗೆ ತರುವ ರೇಷ್ಮೆ ಗೂಡಿನೊಳಗಿರುವ ಹುಳುಗಳು ಮೂರು ದಿನಗಳಲ್ಲಿ ಚಿಟ್ಟೆಯಾಗಿ, ಗೂಡನ್ನು ಒಡೆದು ಹೊರಬರುತ್ತವೆ. ಅಷ್ಟರೊಳಗೆ ಗೂಡುಗಳನ್ನು ಮಾರಬೇಕಾದ ಅನಿವಾರ್ಯತೆ ರೈತರದ್ದು. ಇದನ್ನು ಅರಿತಿರುವ ರೀಲರ್‌ಗಳು ಹರಾಜಿನ ಮೊದಲ ಸುತ್ತಿನಲ್ಲಿಯೇ ಕಡಿಮೆ ಬೆಲೆ ನಮೂದಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಮೂಲಕ ರೈತರು ಎರಡು ಮತ್ತು ಮೂರನೇ ಸುತ್ತಿನ ಹರಾಜಿನಲ್ಲಿ ಪಾಲ್ಗೊಂಡು ಇನ್ನಷ್ಟು ಕಡಿಮೆ ಬೆಲೆಗೆ ಗೂಡನ್ನು ಮಾರಲಿ ಎಂಬುದು ಅವರ ಅಪೇಕ್ಷೆಯಾಗಿದೆ ಎಂಬುದು ರೇಷ್ಮೆ ಕೃಷಿಕರ ದೂರು.

ಮಾರುಕಟ್ಟೆಗಳಲ್ಲಿ ಗುಣಮಟ್ಟ ಆಧರಿಸಿ ಗೂಡಿನ ವರ್ಗೀಕರಣ ಮತ್ತು ಶ್ರೇಣೀಕರಣ ಆಗುತ್ತಿಲ್ಲ. ಬದಲಿಗೆ ಗೂಡಿನ ಆವಕವನ್ನು ಆಧರಿಸಿ ಹರಾಜಿನಲ್ಲಿ ಬೆಲೆ ನಮೂದಿಸಲಾಗುತ್ತಿದೆ. ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಾದ ಸರ್ಕಾರ ಮೌನವಾಗಿದೆ. ಇದರ ಪರಿಣಾಮ ರೈತರಿಗೆ ದಶಕಗಳಿಂದಲೂ ಅನ್ಯಾಯ ಮುಂದುವರಿದಿದೆ.

ಸದ್ಬಳಕೆಯಾಗದ ಪರೀಕ್ಷಾ ಕೇಂದ್ರಗಳು: ರಾಜ್ಯದ 55 ರೇಷ್ಮೆ ಗೂಡಿನ ಮಾರುಕಟ್ಟೆಗಳ ಪೈಕಿ ಆರು (ರಾಮನಗರ, ಶಿಡ್ಲಘಟ್ಟ, ಕನಕಪುರ, ಕೋಲಾರ, ಚನ್ನಪಟ್ಟಣ ಮತ್ತು ಚಿಂತಾಮಣಿ) ಮಾರುಕಟ್ಟೆಗಳಲ್ಲಿ ಮೂರು ವರ್ಷಗಳಿಂದ ರೇಷ್ಮೆ ಗೂಡಿನ ಪರೀಕ್ಷಾ ಕೇಂದ್ರಗಳು ಆರಂಭವಾಗಿವೆ.ಆದರೆ ಮಾರುಕಟ್ಟೆಗೆ ಬರುವ ರೈತರ ಎಲ್ಲಾ ರೇಷ್ಮೆ ಗೂಡುಗಳ ಗುಣಮಟ್ಟವನ್ನು ಈ ಕೇಂದ್ರಗಳಲ್ಲಿ ಪರೀಕ್ಷಿಸಲಾಗುತ್ತಿಲ್ಲ. ಇದರಿಂದಾಗಿ ವೈಜ್ಞಾನಿಕ ಬೆಲೆ ರೈತರ ಕೈಗೆಟಕುತ್ತಿಲ್ಲ.

ಅಧಿಕಾರಿಗಳೇ ಹೇಳುವಂತೆ ರಾಮನಗರ ಮಾರುಕಟ್ಟೆಯಲ್ಲಿ ಕೇವಲ ಶೇ 20ರಿಂದ 25ರಷ್ಟು, ಚನ್ನಪಟ್ಟಣ, ಕನಕಪುರ ಮಾರುಕಟ್ಟೆಗಳಲ್ಲಿ ಶೇ 30ರಿಂದ 40ರಷ್ಟು, ಕೋಲಾರ ಮಾರುಕಟ್ಟೆಯಲ್ಲಿ ಶೇ 20ರಷ್ಟು ಲಾಟ್‌ಗಳಲ್ಲಿನ ಗೂಡುಗಳನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಪರೀಕ್ಷಾ ಕೇಂದ್ರ ಇದ್ದರೂ ಅದು ತೆರೆಯುವುದೇ ಅಪರೂಪ. ಚಿಂತಾಮಣಿ ಮಾರುಕಟ್ಟೆಯಲ್ಲಿ ಗೂಡು ಪರೀಕ್ಷೆಯೇ ಆಗುತ್ತಿಲ್ಲ. ಮತ್ತೊಂದು ಪ್ರಮುಖ ಮಾರುಕಟ್ಟೆಯಾದ ಕೊಳ್ಳೇಗಾಲದಲ್ಲಿ ಕೇಂದ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ.

ಒಂದು ವೇಳೆ ಎಲ್ಲ ಮಾರುಕಟ್ಟೆಗಳಲ್ಲಿ ವೈಜ್ಞಾನಿಕವಾಗಿ ಗೂಡಿನ ಗುಣಮಟ್ಟ ಪರೀಕ್ಷೆ ನಡೆದರೆ, ಧಾರಣೆಯಲ್ಲಿ ಇನ್ನಷ್ಟು ಏರಿಕೆ ದಾಖಲಾಗಿ, ರೈತರಿಗೆ ಮತ್ತಷ್ಟು ಲಾಭವಾಗುವುದು ಖಚಿತ. ಆದರೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರ, ಅಧಿಕಾರಿಗಳು, ರೀಲರ್‌ಗಳಿಗೆ ಆಸಕ್ತಿ ಇದ್ದಂತಿಲ್ಲ ಎಂಬುದು ರೇಷ್ಮೆ ರೈತರ ಅಳಲು.

‘ವೈಜ್ಞಾನಿಕ ಬೆಲೆ ನಿಗದಿಗೆ ಬೇಕಾದ ಅಗತ್ಯ ಪರಿಕರಗಳು, ಪರೀಕ್ಷಾ ಕೇಂದ್ರಗಳು ರಾಜ್ಯದ ಕೆಲ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ 2020ರಿಂದ ಇದ್ದರೂ, ಅವುಗಳ ಸದ್ಬಳಕೆ ಆಗುತ್ತಿಲ್ಲ. ಗೂಡಿನಲ್ಲಿರುವ ಕಳಪೆ ಗೂಡುಗಳ (ಕಲೆಯುಳ್ಳ ಅಥವಾ ಊಜಿ ಬಾಧಿತ ಅಥವಾ ಕಾಯಿ ಗೂಡು) ಪ್ರಮಾಣ, ಗೂಡಿನ ತೂಕ, ಕವಚ ಮತ್ತು ತೇವಾಂಶದ ಪ್ರಮಾಣ, ಗೂಡಿನಲ್ಲಿರುವ ಪ್ಯೂಪಾ (ರೇಷ್ಮೆ ಹುಳು) ತೂಕ, ರೇಷ್ಮೆ ಗೂಡಿನ ನಿವ್ವಳ ತೂಕ, ಗೂಡಿನ ನೂಲು ಬಿಚ್ಚಾಣಿಕೆಯ ಸಾಮರ್ಥ್ಯವನ್ನು ಈ ಕೇಂದ್ರಗಳಲ್ಲಿ ಪರೀಕ್ಷಿಸಿ ತಿಳಿದುಕೊಳ್ಳಬಹುದು. ಈ ಮೂಲಕ ಗುಣಮಟ್ಟವನ್ನು ಗುರುತಿಸಿ ಎ, ಬಿ, ಸಿ, ಡಿ ಎಂದು ಶ್ರೇಣಿ ನೀಡಿ, ವೈಜ್ಞಾನಿಕ ಬೆಲೆ ದೊರೆಯುವಂತೆ ಮಾಡಬಹುದು. ಇದು ರಾಜ್ಯದ ರೇಷ್ಮೆ ಕೃಷಿಕರ ಬಹು ವರ್ಷಗಳ ಬೇಡಿಕೆ. ಆದರೆ ಸರ್ಕಾರ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅನುಷ್ಠಾನ ಆಗುತ್ತಿಲ್ಲ’ ಎಂಬುದು ರಾಜ್ಯ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಸಂಚಾಲಕ ಸಿ. ಪುಟ್ಟಸ್ವಾಮಿ ಅವರ ಬೇಸರದ ನುಡಿ.

ರೇಷ್ಮೆ ಗೂಡನ್ನು ವೈಜ್ಞಾನಿಕವಾಗಿ ದೀರ್ಘಕಾಲ ಸಂರಕ್ಷಿಸಿಡಲು ಸಾಧ್ಯವಿರುವ ‘ಹಾಟ್ ಏರ್ ಡ್ರೈಯರ್’ಗಳೂ ರಾಜ್ಯದ ಯಾವುದೇ ಗೂಡಿನ ಮಾರುಕಟ್ಟೆಗಳಲ್ಲಿ ಇಲ್ಲವಾಗಿದೆ. ಈ ಡ್ರೈಯರ್‌ಗಳು ಇದ್ದರೆ, ಧಾರಣೆ ಕುಸಿದಾಗ ಗೂಡನ್ನು ಸಂರಕ್ಷಿಸಿ, ಹೆಚ್ಚು ಬೆಲೆ ಬಂದಾಗ ಮಾರಲು ಅನುಕೂಲವಾಗುತ್ತದೆ. ಆದರೆ ಈ ಸೌಲಭ್ಯ ಇಲ್ಲದ್ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕೆಲ ವ್ಯಾಪಾರಿಗಳು ಈ ಸೌಲಭ್ಯವನ್ನು ಅಳವಡಿಸಿಕೊಂಡು ಗೂಡನ್ನು ಶೇಖರಿಸುತ್ತಿದ್ದಾರೆ. ಸರ್ಕಾರವೇ ಈ ಸವಲತ್ತನ್ನು ನೀಡಿದರೆ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತದೆ.

ಕಣ್ಣಳತೆ, ಕೈಯಳತೆಯಲ್ಲೇ ಲೆಕ್ಕಾಚಾರ: ಮಾರುಕಟ್ಟೆಗೆ ಬರುವ ಗೂಡುಗಳನ್ನು ರೀಲರ್‌ಗಳು ಅವೈಜ್ಞಾನಿಕವಾಗಿ ಕಣ್ಣಳತೆ, ಕೈಯಳತೆಯಲ್ಲಿಯೇ ಅಳೆದು, ಹರಾಜಿನಲ್ಲಿ ಬೆಲೆ ನಮೂದಿಸುತ್ತಿದ್ದಾರೆ. ಇದರಿಂದ ಗೂಡಿಗೆ ವೈಜ್ಞಾನಿಕ ಬೆಲೆ ದೊರೆಯದೆ, ರೈತರು ವಂಚನೆಗೆ ಒಳಗಾಗುತ್ತಿದ್ದಾರೆ.

‘ರೇಷ್ಮೆ ಗೂಡನ್ನು ಮುಟ್ಟಿ ನೋಡಿದರೆ ಸಾಕು ಅದರ ಗುಣಮಟ್ಟ ನಮಗೆ ಗೊತ್ತಾಗುತ್ತದೆ. ನಮ್ಮಜ್ಜರ ಕಾಲದಿಂದ ಇದು ಕರಗತವಾಗಿದೆ. ಏನೇ ಗ್ರೇಡಿಂಗ್ ನೀಡಿದರೂ ನಾವು ವೈಯಕ್ತಿಕವಾಗಿ ಪರಿಶೀಲಿಸಿಯೇ ಆ ಗೂಡು ಬೇಕೊ ಬೇಡವೊ ಎಂಬುದನ್ನು ನಿರ್ಧರಿಸಿ ಹರಾಜಿನಲ್ಲಿ ಬೆಲೆ ನಮೂದಿಸುತ್ತೇವೆ’ ಎನ್ನುತ್ತಾರೆ ಕನಕಪುರದ ರೀಲರ್ ದಸ್ತಗೀರ್ ಪಾಷಾ.

‘ರೇಷ್ಮೆ ಗೂಡುಗಳು ಮಾರುಕಟ್ಟೆಗೆ ಬಂದ ಬಳಿಕ ಅದರ ಗುಣಮಟ್ಟ ಪರೀಕ್ಷಿಸಿದರೆ ಏನು ಪ್ರಯೋಜನ. ಮಾರುಕಟ್ಟೆಗೆ ಬರುವ ಮೊದಲೇ ಅವು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತು ರೈತರದ್ದು’ ಎಂಬುದು ರಾಮನಗರದ ರೀಲರ್ ಪರ್ವೀಜ್ ಪಾಷಾ ಅವರ ಪ್ರತಿಕ್ರಿಯೆ.

ನಿಲ್ಲದ ಗೂಡು ಕಳವು: ಮಾರುಕಟ್ಟೆಯಲ್ಲಿ ಗೂಡು ಕಳ್ಳತನ, ಮೋಸ, ‘ಲಾಭದ ಗೂಡು’ ಪಡೆಯುವುದು ಇನ್ನೂ ನಿಂತಿಲ್ಲ. ಸದ್ಯದ ಮಟ್ಟಿಗೆ ಉತ್ತಮ ಧಾರಣೆಯಿರುವ ಈ ಸಂದರ್ಭದಲ್ಲೂ ವಂಚನೆ ಮುಂದುವರಿದಿರುವುದು ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟುಮಾಡುತ್ತಿದೆ.

ಇದೇ ಅಲ್ಲದೆ, ಹರಾಜಿನಲ್ಲಿ ಹೆಚ್ಚಿನ ದರ ನಮೂದಿಸಿ, ಬಳಿಕ ತಪ್ಪಾಗಿ ನಮೂದಿಸಿದ್ದೇನೆ ಎಂದು ಸಬೂಬು ಹೇಳಿ ರೈತರಿಗೆ ಕಡಿಮೆ ಹಣ ನೀಡುವ ರೀಲರ್‌ಗಳೂ ಇದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ರೈತರು ಮತ್ತು ರೀಲರ್‌ಗಳ ನಡುವೆ ವಾಗ್ವಾದ, ಜಗಳಗಳು ನಡೆದು, ಹಲ್ಲೆ ಪ್ರಕರಣಗಳೂ ದಾಖಲಾಗಿವೆ.

ರೀಲರ್‌ಗಳೇ ಅಲ್ಲದೆ ಮಾರುಕಟ್ಟೆಯ ಅಧಿಕಾರಿ, ಸಿಬ್ಬಂದಿ ಸಹ ರೈತರನ್ನು ಶೋಷಿಸುತ್ತಿದ್ದಾರೆ. ಗೂಡು ಕಳವಿಗೆ ಇಲ್ಲಿನ ಕೆಲ ಸಿಬ್ಬಂದಿ ನೆರವಾಗುತ್ತಿದ್ದಾರೆ ಎಂಬ ಆರೋಪವೂ ಇದೆ. ಮಾರುಕಟ್ಟೆಯ ಕೆಲ ಹಿರಿಯ ಅಧಿಕಾರಿಗಳು ರೈತರಿಗೆ ಸಂದಾಯ ಆಗಬೇಕಾದ ಮೊತ್ತವನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿರುವ ಪ್ರಕರಣಗಳೂ ನಡೆದಿವೆ. ರಾಮನಗರ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕರಾಗಿದ್ದ ಮುನ್ಶಿಬಸಯ್ಯ ಅವರು ರೈತರಿಗೆ ಸಂದಾಯ ಆಗಬೇಕಿದ್ದ ₹ 2 ಕೋಟಿಯಷ್ಟು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೂ ದಾಖಲಾಗಿದೆ.

‘ರೆಂಡಿಟ್ಟಾ’ ಸೌಕರ್ಯವೂ ಇಲ್ಲ: ಒಂದು ಕೆ.ಜಿ ರೇಷ್ಮೆ ನೂಲು ತೆಗೆಯಲು ಎಷ್ಟು ಕೆ.ಜಿ ರೇಷ್ಮೆ ಗೂಡು ಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ವಿಧಾನವೇ ‘ರೆಂಡಿಟ್ಟಾ’. ಇದರ ನೆರವಿನಿಂದ ಖಚಿತ ಮತ್ತು ಕರಾರುವಕ್ಕಾಗಿ ರೇಷ್ಮೆಯ ಗುಣಮಟ್ವನ್ನು ನಿಗದಿಪಡಿಸಲು ಸಾಧ್ಯ. 

ಇದಕ್ಕೆ ಮಾರುಕಟ್ಟೆಗಳಲ್ಲಿ ಪೂರಕ ತಾಂತ್ರಿಕ ಸವಲತ್ತುಗಳಿರಬೇಕು. ಗೂಡಿನಿಂದ ಉತ್ಪಾದನೆಯಾಗುವ ನೂಲಿನ ಪ್ರಮಾಣ, ಉದ್ದ, ಮೃದುತ್ವ, ಗಡಸುತನ, ಗಾತ್ರದ (ಡೀನಿಯರ್) ಬಗ್ಗೆ ‘ರೆಂಡಿಟ್ಟಾ’ದಿಂದ ಕರಾರುವಕ್ಕಾಗಿ ತಿಳಿದುಕೊಳ್ಳಬಹುದು. ಇದನ್ನು ಆಧರಿಸಿ ಯಾವ ಬಗೆಯ ವಸ್ತ್ರಕ್ಕೆ ಯಾವ ಗ್ರೇಡ್‍ ನೂಲಿನ ಅಗತ್ಯವಿದೆ ಎಂಬುದನ್ನು ಸುಲಭವಾಗಿ ನಿರ್ಧರಿಸಬಹುದು. ಆದರೆ ಆ ಸೌಲಭ್ಯ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಇಲ್ಲವಾಗಿದೆ.

ಸಹಕಾರ ಸಂಸ್ಥೆಗಳಿಲ್ಲ: ನಿತ್ಯ ಸಾವಿರಾರು ರೈತರು ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡುಗಳನ್ನು ಮಾರುತ್ತಿದ್ದಾರೆ. ರಾಮನಗರ ಮಾರುಕಟ್ಟೆಯಲ್ಲೇ 86 ಸಾವಿರ ನೋಂದಾಯಿತ ರೈತರಿದ್ದಾರೆ. ಆದರೆ ತಮ್ಮ ಹಿತ ಕಾಯ್ದುಕೊಳ್ಳುವುದಕ್ಕೆ ಇವರು ಇಲ್ಲಿಯವರೆಗೂ ಸಹಕಾರ ಸಂಘವನ್ನು ಕಟ್ಟಿಕೊಂಡಿಲ್ಲ. ಇದು ತುರ್ತಾಗಿ ಆಗಬೇಕು ಎಂಬ ಬೇಡಿಕೆಯೂ ಇದೆ. ಅಲ್ಲದೆ ಸರ್ಕಾರವು ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಯೋಜನೆಯನ್ನು ವಾಣಿಜ್ಯ ಬೆಳೆಯಾದ ರೇಷ್ಮೆಗೂ ವಿಸ್ತರಿಸಿದರೆ, ರೇಷ್ಮೆ ಕೃಷಿ ಬೆಳವಣಿಗೆಯ ಜತೆಗೆ ರೇಷ್ಮೆ ರೈತರ ಹಿತ ಕಾಯಲೂ ಸಾಧ್ಯವಾಗುತ್ತದೆ ಎನ್ನುತ್ತಾರೆ ಪುಟ್ಟಸ್ವಾಮಿ.

* ಪೂರಕ ಮಾಹಿತಿ: ಆರ್‌. ಜಿತೇಂದ್ರ, ಡಿ.ಎಂ.ಕುರ್ಕೆ ಪ್ರಶಾಂತ್, ಕೆ.ಜೆ. ಮರಿಯಪ್ಪ, ಕೆ. ಓಂಕಾರ ಮೂರ್ತಿ, ಸೂರ್ಯನಾರಾಯಣ ವಿ.

–––

ಏನಿದು ‘ಹಾಟ್‌ ಏರ್‌ ಡ್ರೈಯರ್‌’?

ತಂತ್ರಜ್ಞಾನ ಬೆಳೆದಂತೆಲ್ಲ ರೇಷ್ಮೆ ಕೃಷಿಯಲ್ಲೂ ಹೊಸ ಸಂಶೋಧನೆ, ಆವಿಷ್ಕಾರಗಳು ನಡೆದಿದ್ದು, ರೈತರಿಗೆ ಉಪಯುಕ್ತವಾಗಿವೆ. ರೇಷ್ಮೆ ಕೃಷಿಕರು ಮತ್ತು ಗೂಡನ್ನು ಸಂಸ್ಕರಿಸುವ ಉದ್ಯಮಿಗಳ ಅನುಕೂಲಕ್ಕೆಂದು ‘ಹಾಟ್‌ ಏರ್‌ ಡ್ರೈಯರ್‌’ಗಳ ಬಳಕೆ ಹೆಚ್ಚತೊಡಗಿದೆ. ಇದರಿಂದಾಗಿ ರೇಷ್ಮೆಗೂಡನ್ನು ಒಣಗಿಸಿ ದೀರ್ಘ ಕಾಲ ಸಂರಕ್ಷಿಸಬಹುದಾಗಿದೆ. ಸದ್ಯ ಸ್ವಯಂಚಾಲಿತ ರೀಲಿಂಗ್‌ ಘಟಕಗಳಲ್ಲಿ (ಎಆರ್‌ಎಂ) ಈ ತಂತ್ರಜ್ಞಾನ ಬಳಕೆಯಲ್ಲಿದೆ.

ಇಲ್ಲಿ 200–250 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬಳಸಿ ಬಿಸಿ ಗಾಳಿ ಮೂಲಕ ರೇಷ್ಮೆಗೂಡನ್ನು ಒಣಗಿಸಲಾಗುತ್ತದೆ. ಇದರಿಂದಾಗಿ ಗೂಡಿನ ಒಳಗಿನ ಹುಳು ಸಾಯುತ್ತದೆ. ಹೀಗೆ ಒಣಗಿಸಲಾದ ಗೂಡನ್ನು ಮೂರು ತಿಂಗಳುಗಳವರೆಗೆ ಸಂರಕ್ಷಿಸಿ, ನೂಲು ಉತ್ಪಾದನೆಗೆ ಬಳಸಬಹುದಾಗಿದೆ.

ಅನುಕೂಲವೇನು?: ಮಾರುಕಟ್ಟೆಯಲ್ಲಿ ಗೂಡಿಗೆ ಕಡಿಮೆ ಬೆಲೆ ಇದ್ದಾಗ ಅದನ್ನು ಸಂಗ್ರಹ ಮಾಡಿ, ಹೆಚ್ಚು ಬೆಲೆ ಬಂದಾಗ ಮಾರಬಹುದು. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಹೀಗೆ ಸಂಸ್ಕರಿಸಿದ ಗೂಡಿನಿಂದ ಹೆಚ್ಚು ಉದ್ದನೆಯ ನೂಲು ತೆಗೆಯಬಹುದು ಎನ್ನುತ್ತಾರೆ ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಶರ್ಮ.

100 ಕೆ.ಜಿ ಸಾಮರ್ಥ್ಯದ ಡ್ರೈಯರ್‌ಗೆ ₹2.2 ಲಕ್ಷ, 1 ಸಾವಿರ ಕೆ.ಜಿ ಸಾಮರ್ಥ್ಯದ ಡ್ರೈಯರ್‌ಗೆ ₹ 17 ಲಕ್ಷ ಹಾಗೂ 2 ಟನ್‌ ಸಾಮರ್ಥ್ಯದ ಡ್ರೈಯರ್ ಘಟಕ ಸ್ಥಾಪನೆಗೆ ₹25ರಿಂದ ₹30 ಲಕ್ಷದವರೆಗೆ ಖರ್ಚಾಗಲಿದೆ. ‘ಸಿಲ್ಕ್ ಸಮಗ್ರ ಯೋಜನೆ’ ಅಡಿ ಇದಕ್ಕೆ ಸರ್ಕಾರದಿಂದ ನೆರವು ಸಿಗಲಿದೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸರ್ಕಾರ ಈಗಾಗಲೇ ₹2 ಕೋಟಿ ವೆಚ್ಚದಲ್ಲಿ ರೈತರಿಗಾಗಿ ಇಂತಹ ಬೃಹತ್‌ ಡ್ರೈಯರ್‌ ಘಟಕವನ್ನು ತೆರೆದಿದೆ. ಸದ್ಯ ಅದರ ಸಾಧಕ– ಬಾಧಕಗಳ ಬಗ್ಗೆ ಪ್ರಯೋಗ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

----

ಎಲ್ಲ ಲಾಟ್‌ನ ಶ್ರೇಣೀಕರಣ ಸದ್ಯಕ್ಕೆ ಕಷ್ಟ

‘ರಾಮನಗರ ಮಾರುಕಟ್ಟೆಗೆ, ನಿತ್ಯ ಅಂದಾಜು 40ರಿಂದ 50 ಟನ್‍ನಷ್ಟು ಗೂಡು ಬರುತ್ತದೆ. ಸುಮಾರು 400ರಿಂದ 500 ಲಾಟ್‍ಗಳಲ್ಲಿ ಅವುಗಳನ್ನು ಹರಡಲಾಗಿರುತ್ತದೆ. ಈ ಎಲ್ಲ ಲಾಟ್‌ಗಳಲ್ಲಿನ ರೇಷ್ಮೆ ಗೂಡನ್ನು ಪ್ರಯೋಗಾಲ ಯದಲ್ಲಿ ಪರೀಕ್ಷೆಗೆ ಒಳಪಡಿಸುವುದು ಕಷ್ಟ. ಬೆಳಿಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗುತ್ತದೆ. ಪರೀಕ್ಷಾ ಕೇಂದ್ರ ತೆರೆಯುವುದು ಬೆಳಿಗ್ಗೆ 8 ಗಂಟೆಗೆ. ಒಂದು ಲಾಟ್‌ನ ನಿರ್ದಿಷ್ಟ ಗೂಡಿನ ಗುಣಮಟ್ಟ ಪರಿಶೀಲನೆಗೆ 13 ನಿಮಿಷ ಬೇಕಾಗುತ್ತದೆ. ಅಲ್ಪಾವಧಿಯಲ್ಲಿ ಎಲ್ಲ ಲಾಟ್‌ಗಳಲ್ಲಿನ ಗೂಡುಗಳ ಪರೀಕ್ಷೆ ನಡೆಸಿ, ಗುಣಮಟ್ಟ ವರ್ಗೀಕರಿಸಿ, ಶ್ರೇಣಿಗಳನ್ನು ನೀಡುವುದು ಕಷ್ಟವಾಗುತ್ತದೆ’ ಎಂಬುದು ರೇಷ್ಮೆ ಇಲಾಖೆಯ ರಾಮನಗರ ಜಿಲ್ಲೆಯ ಉಪ ನಿರ್ದೇಶಕ ಸಿ.ಡಿ.ಬಸವರಾಜ್ ಅವರ ವಿವರಣೆ.

‘ಕನಕಪುರ ರೇಷ್ಮೆ ಮಾರುಕಟ್ಟೆಯಲ್ಲಿ ನಿತ್ಯ ಶೇ 40ರಷ್ಟು ರೈತರ ಗೂಡುಗಳನ್ನು ಪರೀಕ್ಷೆಗೊಳಪಡಿಸಿ ಗ್ರೇಡಿಂಗ್ ನೀಡುತ್ತಿದ್ದೇವೆ. ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ’ ಎಂದು ಕನಕಪುರ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕರಾದ ಎಂ. ನಾಗರಾಜ್ ಪ್ರತಿಕ್ರಿಯಿಸುತ್ತಾರೆ.

---

ರೇಷ್ಮೆ ಕೃಷಿಯತ್ತ ಸಾಫ್ಟ್‌ವೇರ್‌ ದಂಪತಿ

ಕೋವಿಡ್‌ ಸಮಯದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಕೆಲಸ ಬಿಟ್ಟು, ಹಳ್ಳಿಯ ಕಡೆ ಮುಖ ಮಾಡಿದ ದಂಪತಿಗೆ ರೇಷ್ಮೆ ಕೃಷಿ ಆಸರೆಯಾಗಿದೆ. ತುಮಕೂರಿನ ಗಂಗನಾಳ ಗ್ರಾಮದ ಸುರೇಶ್‌ ಮತ್ತು ಮಹೇಶ್ವರಿ ದಂಪತಿ ಸಾಫ್ಟ್‌ವೇರ್‌ ಎಂಜಿನಿಯರುಗಳು. ಸುರೇಶ್‌ ನವದೆಹಲಿಯಲ್ಲಿ ಕೆಲಸ ಮಾಡಿ, ಅಲ್ಲಿಂದ ಬೆಂಗಳೂರಿಗೆ ವಾಪಸ್‌ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಮಹೇಶ್ವರಿ ಅವರೂ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದಿರುವ ಈ ದಂಪತಿ, ಜಮೀನಿನಲ್ಲಿಯೇ ರೇಷ್ಮೆ ಹುಳು ಸಾಕಾಣಿಕೆ ಶೆಡ್‌ ನಿರ್ಮಿಸಿದ್ದಾರೆ. ರೇಷ್ಮೆ ಕೃಷಿಯಿಂದ ತಿಂಗಳಿಗೆ ₹ 1 ಲಕ್ಷಕ್ಕೂ ಹೆಚ್ಚು  ಆದಾಯ ಪಡೆಯುತ್ತಿದ್ದಾರೆ. ರೇಷ್ಮೆ ಕೃಷಿಯಿಂದ ನೆಮ್ಮದಿ ಮತ್ತು ಉತ್ತಮ ಆರೋಗ್ಯ ಸಿಕ್ಕಿದೆ ಎನ್ನುತ್ತಾರೆ ಈ ದಂಪತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು