ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿಗೆ ಬೋಧಕರ ಬರ: ನಡೆಯದ ನೇಮಕಾತಿ, ಅತಿಥಿ ಉಪನ್ಯಾಸಕರ ಮೇಲೆ ಭಾರ

Last Updated 23 ಅಕ್ಟೋಬರ್ 2021, 21:07 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ವಿಶ್ವವಿದ್ಯಾಲಯಗಳನ್ನು ಬೋಧಕರ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಉನ್ನತ ಶಿಕ್ಷಣದ ದೇಗುಲಗಳೆನಿಸಿರುವ ವಿಶ್ವವಿದ್ಯಾಲಯಗಳಲ್ಲಿ ಬೋಧನೆಯ ಗುಣಮಟ್ಟ ಕುಸಿದಿದ್ದರೂ ಸೊಲ್ಲೆತ್ತುವವರಿಲ್ಲ. ಆರ್ಥಿಕ ಮುಗ್ಗಟ್ಟು–ಶೈಕ್ಷಣಿಕ ಬಿಕ್ಕಟ್ಟು ಬಗೆಹರಿದಿಲ್ಲ.

ಇಂಥ ಸನ್ನಿವೇಶದಲ್ಲೇ, ಹೆಚ್ಚು ಅಧ್ಯಾಪಕರನ್ನು ಬಯಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಜಾರಿಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆಯ ಮಹತ್ವಾಕಾಂಕ್ಷೆಗೂ ಅಡ್ಡಿಯಾಗಿರುವ ಈ ಕೊರತೆಯ ನಡುವೆಯೇ, ನ್ಯಾಕ್‌ ಮಾನ್ಯತೆಯನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚಿನ ಮಾನ್ಯತೆ ಪಡೆಯಲು ವಿಶ್ವವಿದ್ಯಾಲಯಗಳು ಹೆಣಗಾಡುತ್ತಿವೆ. ‘ಅಗತ್ಯ ಸಂಖ್ಯೆಯ ಅಧ್ಯಾಪಕರಿರಬೇಕು, ಸಂಶೋಧನೆ ನಡೆಸಬೇಕು. ಸಂಶೋಧನೆಗೆ ಮಾರ್ಗದರ್ಶಕರಾಗಬೇಕು’ ಎಂಬುದು ನ್ಯಾಕ್‌ ಮಾನ್ಯತಾ ಮಾನದಂಡಗಳಲ್ಲಿ ಪ್ರಮುಖವಾದದ್ದು. ಆದರೆ, ಅದರಲ್ಲೇ ವಿಶ್ವವಿದ್ಯಾಲಯಗಳು ಹಿಂದೆ ಬಿದ್ದಿವೆ.

ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಶೇ 50ಕ್ಕಿಂತ ಹೆಚ್ಚು ಬೋಧಕರ ಕೊರತೆಯಿಂದಾಗಿ ಹೊಸ ಕೋರ್ಸ್‌ಗ ಳನ್ನು ಆರಂಭಿಸುವ ಸಾಧ್ಯತೆಯೂ ಇಲ್ಲ. ಸ್ನಾತಕೋತ್ತರ ಕೇಂದ್ರಗಳೂ ನಿಶ್ಶಕ್ತವಾಗಿವೆ.

ಸಂಶೋಧನೆಗಳೂ ನಿಂತ ನೀರಾ ಗಿವೆ. ಕಾಯಂ ಬೋಧಕರಷ್ಟೇ ಸಂಶೋಧನೆಗೆ ಮಾರ್ಗದರ್ಶಕರಾಗಬಹುದು ಎಂಬ ನಿಯಮಕ್ಕೆ ತಕ್ಕಂತೆ, ಬೋಧಕ ರಿಲ್ಲದೆ ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶಗಳೂ ಕಡಿಮೆಯಾಗಿವೆ.

ಇಂಥ ಪರಿಸ್ಥಿತಿಯಲ್ಲಿ ಅತಿಥಿ, ಗುತ್ತಿಗೆ ಆಧಾರದ ಅಧ್ಯಾಪಕರನ್ನೇ ಮಾರ್ಗದರ್ಶಕರನ್ನಾಗಿ ನಿಯೋಜಿಸುವ ಚಿಂತನೆಯೂ ನಡೆದಿದೆ. ಹೀಗೆ ಮಾಡಿದರೆ, ಸಂಶೋಧನೆಯ ಗುಣಮಟ್ಟ ಹೆಚ್ಚುತ್ತದೆ ಎಂಬ ಭರವಸೆ ಯೂ ವಿಶ್ವವಿದ್ಯಾಲಯಗಳಲ್ಲಿ ಇಲ್ಲ.

ಗುತ್ತಿಗೆ ಆಧಾರದ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರಿಗೂ ಪಿಎಚ್‌.ಡಿ ಮಾರ್ಗದರ್ಶಕರ ಮಾನ್ಯತೆ ನೀಡಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮೈಸೂರು ವಿಶ್ವವಿದ್ಯಾಲ ಯದ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗಷ್ಟೇ ನಿರ್ಧರಿಸಲಾಗಿದೆ. ಅಲ್ಲಿ 500 ಅತಿಥಿ ಉಪನ್ಯಾಸಕರಿದ್ದಾರೆ.

ಉದ್ಯೋಗಾವಕಾಶಕ್ಕಾಗಿ ಕಾಯುತ್ತಿರುವವರೇ ವಿಶ್ವವಿದ್ಯಾಲಯಗಳಿಗೆ ಆಪದ್ಬಾಂಧವರಾಗಿದ್ದಾರೆ.

ಶತಮಾನೋತ್ಸವವನ್ನು ಈಗಾಗಲೇ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ನಿಯಮಾನುಸಾರ ಬೋಧಕರಿಲ್ಲವೆಂಬ ಕಾರಣಕ್ಕೆ ನ್ಯಾಕ್‌ ಮಾನ್ಯತೆಯು ಈ ವರ್ಷ ‘ಎ+’ ನಿಂದ ‘ಎ’ಗೆ ಇಳಿದಿದೆ. ಇಂಥ ದೊಡ್ಡ ಹಿನ್ನಡೆ ಎದುರಾದರೂ ವಿಶ್ವವಿದ್ಯಾಲಯ ದನಿ ಎತ್ತದ ಸ್ಥಿತಿಯಲ್ಲಿದೆ. 14 ವರ್ಷದಿಂದ ಇಲ್ಲಿ ಬೋಧಕರ ನೇಮಕಾತಿಯೇ ನಡೆದಿಲ್ಲ!

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಮೂರನೇ ಒಂದು ಭಾಗದಷ್ಟು ಬೋಧಕರ ಕೊರತೆ ಇದೆ. ಇತ್ತೀಚೆಗಷ್ಟೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ದಶಕ ಕಳೆದಿದ್ದರೂ, ಕುಲಪತಿ ಮತ್ತು ಹಣಕಾಸು ಅಧಿಕಾರಿ ಹೊರತುಪಡಿಸಿದರೆ ಉಳಿದವರೆಲ್ಲರೂ ‘ಅತಿಥಿ’ಗಳೇ. ಅನುದಾನವಿಲ್ಲದೆ ಅತಿಥಿ ಉಪನ್ಯಾಸಕರಿಗೆ ಆರು ತಿಂಗಳಿಂದ ವೇತನವನ್ನೂ ನೀಡಿಲ್ಲ. ಯುಜಿಸಿ ವೇತನ, ಅನುದಾನ ಪಡೆಯಲು ಬೇಕಾದ 12ಬಿ ಮಾನ್ಯತೆಯೇ ಈ ವಿಶ್ವವಿದ್ಯಾಲಯಕ್ಕೆ ಸಿಕ್ಕಿಲ್ಲ.

‘ಇಷ್ಟು ವರ್ಷಗಳಲ್ಲಿ ಈ ವಿಶ್ವವಿದ್ಯಾಲಯದಿಂದ ಒಬ್ಬ ಸಾಧಕ ಕಲಾವಿದರು ಕೂಡ ಹೊರಬಂದಿಲ್ಲ’ ಎಂಬ ಕಲಾಕ್ಷೇತ್ರದ ಪರಿಣತರ ಅಸಮಾಧಾನ ಶಮನಗೊಂಡಿಲ್ಲ.

ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ನಾಲ್ಕು ದಶಕದ ಹಿಂದೆ ಸ್ಥಾಪನೆಗೊಂಡ ಗುಲ್ಬರ್ಗಾ ವಿಶ್ವವಿದ್ಯಾಲಯ ಆರಂಭವಾದಾಗ 255 ಕಾಯಂ ಅಧ್ಯಾಪಕರಿದ್ದರು. ಈಗ 60ಕ್ಕೆ ಇಳಿದಿದೆ. ಇತಿಹಾಸ, ಮರಾಠಿ, ಸಂಸ್ಕೃತ, ಪತ್ರಿಕೋದ್ಯಮ ವಿಭಾಗದಲ್ಲಿ ಕಾಯಂ ಪ್ರಾಧ್ಯಾಪಕರಿಲ್ಲ. ಹಲವೆಡೆ ಒಬ್ಬರಷ್ಟೇ ಇದ್ದಾರೆ. ಇತ್ತೀಚೆಗಷ್ಟೇ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು, ಕುಲಪತಿ ಪ್ರೊ.ದಯಾನಂದ ಅಗಸರ ಅವರಿಗೆ ‘ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಿ’ ಎಂದಷ್ಟೇ ಹೇಳಿ ಹೋಗಿದ್ದಾರೆ‍. ‘ಸರ್ಕಾರದ ಕೆಲಸ ಇಷ್ಟೆಯೇ’ ಎಂಬುದು ಸದ್ಯ ಎದುರಾಗಿರುವ ಪ್ರಶ್ನೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ 24 ವರ್ಷದಿಂದ ಬೋಧಕರ ನೇಮಕಾತಿಯಾಗಿಲ್ಲ. ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಬಹಳಷ್ಟು ಸಿಬ್ಬಂದಿ ಕುವೆಂಪು ವಿಶ್ವವಿದ್ಯಾಲಯದಲ್ಲೇ ಉಳಿದಿದ್ದರಿಂದ 171 ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದಾಗಿತ್ತು. ದಾವಣಗೆರೆ ವಿಶ್ವವಿದ್ಯಾಲಯದ ಪರಿಸ್ಥಿತಿ ‘ಪರವಾಗಿಲ್ಲ’ ಎನ್ನುವಂತಿದ್ದರೂ ಅದು ನ್ಯಾಕ್‌ ‘ಬಿ’ ಗ್ರೇಡ್‌ನಿಂದ ‘ಎ’ ಗ್ರೇಡ್‌ಗೇರಲು ಸಿದ್ಧತೆ ನಡೆಸಿದೆ.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 30 ವಿಭಾಗಗಳ ಪೈಕಿ 18 ವಿಭಾಗಗಳಲ್ಲಿ ಬೋಧಕರ ನೇಮಕಕ್ಕೆ ಈಗಷ್ಟೇ ಅನುಮೋದನೆ ನೀಡಲಾಗಿದೆ. ಅಲ್ಲಿನ ನಾಲ್ಕು ಸ್ನಾತಕೋತ್ತರ ಕೇಂದ್ರಗಳಲ್ಲೂ ಬೋಧಕರಿಲ್ಲ. ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ ಗದಗದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಬೋಧಕರಿಲ್ಲ. ಅಲ್ಲಿ ರಿಸರ್ಚ್‌ ಪ್ರೊಫೆಸರ್ಸ್‌ ಹುದ್ದೆಗಳನ್ನೂ ಸೃಜಿಸಲಾಗಿದೆ.

ಕಲ್ಯಾಣ ಕರ್ನಾಟಕ ಕೋಟಾದಡಿ 99 ಹುದ್ದೆಗಳನ್ನು ತುಂಬಲು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹಾಗೂ 280 ಹುದ್ದೆ ತುಂಬಲು ಮೈಸೂರು ವಿಶ್ವವಿದ್ಯಾಲಯಕ್ಕೆ ನೀಡಿದ್ದ ಅನುಮತಿಗೆ ಹಣಕಾಸು ಇಲಾಖೆ ತಡೆ ಒಡ್ಡಿದೆ. ಬೋಧಕರ ಕೊರತೆ ತುಂಬುವಲ್ಲಿ ಕೋವಿಡ್‌ ಕೂಡ ವಿಶ್ವವಿದ್ಯಾಲಯಗಳನ್ನು ಅಸಹಾಯಕಗೊಳಿಸಿದೆ. ಕೆಲವೆಡೆ ಅತಿಥಿ ಉಪನ್ಯಾಸಕರೇ ವಿಭಾಗಗಳನ್ನು ಮುನ್ನಡೆಸುತ್ತಿದ್ದಾರೆ.

‘ಬೋಧಕರ ಕೊರತೆಯು ವಿಶ್ವವಿದ್ಯಾಲಯದ ಬೋಧನೆ ಮತ್ತು ಸಂಶೋಧನೆಯ ಮೇಲೆ ಏಕಕಾಲಕ್ಕೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂಬುದು ಬಹುತೇಕ ಕುಲಪತಿಗಳ ಅಸಹಾಯಕ ನುಡಿ. ‘ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಬಿಟ್ಟುಕೊಟ್ಟು ವಿಶ್ವವಿದ್ಯಾಲಯಗಳನ್ನು ನಡೆಸಬೇಕೇ’ ಎಂದೂ ಕೆಲವರು ಪ್ರಶ್ನಿಸುತ್ತಾರೆ. ಬೋಧಕರ ನೇಮಕದ ವಿಷಯದಲ್ಲಿ ಸರ್ಕಾರ ಉದಾರನೀತಿಯೊಂದನ್ನು ರೂಪಿಸಬೇಕು ಎಂಬುದು ಅವರ ಆಗ್ರಹ.

₹ 50 ಲಕ್ಷ ಲಂಚ: ಸಚಿವ ವಿಷಾದ

‘ಸದ್ಯದ ಬೇಡಿಕೆ–ಪೂರೈಕೆ ಗಮನಿಸಿ, ಖಾಲಿ ಹುದ್ದೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅರ್ಹರ ಸಂಖ್ಯೆ ಕಡಿಮೆ ಇದೆ. ಅನೇಕರಿಗೆ ಈ ವಿಷಯ ಗೊತ್ತಿಲ್ಲ. ಹೀಗಾಗಿ, ₹ 50 ಲಕ್ಷ, ₹ 60 ಲಕ್ಷ ಲಂಚ ಕೊಟ್ಟು ಹುದ್ದೆ ಪಡೆಯಲು ಪೈಪೋಟಿಗಿಳಿಯುವ ವ್ಯವಸ್ಥೆ ನಿರ್ಮಾಣವಾಗಿದೆ. ಭ್ರಷ್ಟಾಚಾರ, ಅಕ್ರಮ ನೇಮಕಾತಿಗಳಿಗೆ ಅವಕಾಶವಾಗುತ್ತಿದೆ. ಅದರಲ್ಲೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಬಳದಲ್ಲಿಯೇ ಪಾಲು ಪಡೆಯುವ ವ್ಯವಸ್ಥೆಯ ಬಗ್ಗೆಯೂ ಆರೋಪಗಳಿವೆ. ಈ ಎಲ್ಲವನ್ನೂ ತಡೆಯಬೇಕಿದೆ. ಹುದ್ದೆ ಭರ್ತಿಯ ವೇಳೆ ಗುಣಮಟ್ಟಕ್ಕೆ ಆದ್ಯತೆ, ಪ್ರತಿಭಾವಂತರಿಗೆ ಅವಕಾಶ ಸಿಗಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT