ಮಂಗಳವಾರ, ಆಗಸ್ಟ್ 16, 2022
29 °C

ಅಬಲೆಯರಿಗಾಗಿ ಯೋಜನೆ! ಇದರ ನಿಯಮಗಳು

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶಿಷ್ಟ ಜಾತಿಯ ವಿಧವೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮೂಲಕ, ಅವರ ಜೀವನ ಮಟ್ಟ ಸುಧಾರಣೆಯ ಸಲುವಾಗಿ ‘ವಿಧವಾ ವಿವಾಹ ನೆರವು’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ, ಈವರೆಗೆ ಅತ್ಯಲ್ಪ ಮಂದಿಯಷ್ಟೇ ಸೌಲಭ್ಯ ಪಡೆದುಕೊಂಡಿದ್ದಾರೆ.

ಈ ಸಮುದಾಯದ ವಿಧವೆಯರು ಮರು ಮದುವೆಯಾದರೆ ₹ 3 ಲಕ್ಷ ಪ್ರೋತ್ಸಾಹ ಧನ ನೀಡುವ ಯೋಜನೆ ಕಳೆದ ಎರಡು ವರ್ಷಗಳ ಹಿಂದೆ ಆರಂಭವಾಗಿದ್ದು, ಮಾಹಿತಿ ಕೊರತೆಯಿಂದಾಗಿ ಹೆಚ್ಚಿನ ಮಂದಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ದಲಿತ ಸಮೂಹಕ್ಕೆ ದಲಿತರಿಂದ ವಂಚನೆ: ಪ್ರೋತ್ಸಾಹಧನಕ್ಕೆ ಅಮಾಯಕರಿಗೆ ‘ವಿಧವೆ’ ಪಟ್ಟ!

ಹಿನ್ನೆಲೆ: ಅನಿವಾರ್ಯ ಸಂದರ್ಭಗಳಲ್ಲಿ ಗಂಡ ಸಾವನ್ನಪ್ಪಿದರೆ ಪರಿಶಿಷ್ಟ ಜಾತಿಯ ಮಹಿಳೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತದೆ. ಕೆಲ ಸಮಯ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಗಂಡನ ಮನೆಯವರೂ ನೆರವಿಗೆ ಬರುವುದಿಲ್ಲ. ತವರು ಮನೆಯ ಪರಿಸ್ಥಿತಿ ಇದೇ ರೀತಿ ಇದ್ದರೆ, ಅತ್ತ ಕಡೆಯಿಂದಲೂ ಸಹಕಾರ ಸಿಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಜೀವನವಿಡಿ ಒಬ್ಬಂಟಿ ಯಾಗಿ ಬದುಕಬೇಕು. ಇಂತಹ ಸಮಯದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ. ಒಂದು ರೀತಿಯಲ್ಲಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿಯಲ್ಲಿದ್ದಾಗ ಸರ್ಕಾರ ನೆರವಿಗೆ ಬರುವ ಸಲುವಾಗಿ ಈ ಯೋಜನೆ ರೂಪಿಸಿದೆ.

ವಿಧವೆಯರನ್ನು ಮದುವೆಯಾದರೆ ಸರ್ಕಾರದ ಕಡೆಯಿಂದ ₹3 ಲಕ್ಷ ಪ್ರೋತ್ಸಾಹ ಧನ ಸಿಗುತ್ತದೆ. ಸ್ವಲ್ಪ ಮಟ್ಟಿಗೆ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಬಂದ ಹಣ ಇಟ್ಟುಕೊಂಡು ಸಣ್ಣಪುಟ್ಟ ಕೆಲಸಮಾಡಿ ಬದುಕಬಹುದು. ಕೊನೆಗೆ ಒಂದು ಚಿಲ್ಲರೆ ಅಂಗಡಿ ಇಟ್ಟುಕೊಂಡಾದರೂ ಜೀವನ ಸಾಗಿಸಬಹುದು ಎಂಬ ಕಾರಣಕ್ಕೆ ಕೆಲ ಯುವಕರು ವಿವಾಹವಾಗಲು ಮುಂದೆ ಬರುತ್ತಾರೆ. ಇಂತಹ ಸದುದ್ದೇಶದಿಂದ ವಿಧವಾ ನೆರವು ಯೋಜನೆಯನ್ನು ಜಾರಿಗೊಳಿಸಿದೆ.

ಇದನ್ನೂ ಓದಿ:  ಕಬಳಿಕೆಗಾಗಿ ನಾಟಕ...

ಯೋಜನೆಯ ನಿಯಮಗಳು

l ಈ ಸೌಲಭ್ಯ ಪಡೆಯುವ ವಿಧವೆಯ ವಯೋಮಿತಿ ಕನಿಷ್ಠ 18ರಿಂದ ಗರಿಷ್ಠ 42 ವರ್ಷ. ವರನಿಗೆ 21ರಿಂದ 45 ವರ್ಷಗಳಾಗಿರಬೇಕು.

l ವಿವಾಹದ ನಂತರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕು.

l ಮದುವೆಯಾದ ಒಂದು ವರ್ಷದ ಒಳಗೆ ಆನ್‌ಲೈನ್ ಮೂಲಕ ಮಹಿಳೆ ಅರ್ಜಿ ಸಲ್ಲಿಸಬೇಕು.

l ಅಂತರ್ಜಾತಿ ವಿವಾಹವಾಗಿ, ಈ ಯೋಜನೆಯಿಂದ ಪ್ರೋತ್ಸಾಹ ಧನ ಪಡೆದಿದ್ದರೆ ಈ ಯೋಜನೆಯಲ್ಲಿ ನೆರವು ಪಡೆಯಲು ಅರ್ಹರಾಗಿರುವುದಿಲ್ಲ.

l ಸರಳ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದರೆ, ಅಂತಹವರು ₹2.50 ಲಕ್ಷ ಮಾತ್ರ ಪ್ರೋತ್ಸಾಹ ಧನ ಪಡೆಯಬಹುದು.

l ಮಂಜೂರಾದ ಪ್ರೋತ್ಸಾಹ ಧನವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಜಮಾ ಮಾಡಲಾಗುವುದು.

ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ: ಮೋಸದ ‘ಮರುಮದುವೆ’, ಪ್ರೋತ್ಸಾಹಧನ ಲೂಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು