ಶನಿವಾರ, ಜುಲೈ 2, 2022
22 °C

ಒಳನೋಟ | ಅನರ್ಹರಿಗೂ ಜಾಗ ಮಂಜೂರಾತಿ

ಬಿ.ಜೆ.ಧನ್ಯಪ್ರಸಾದ್ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಮೂನೆ ‘50’ ಮತ್ತು ‘53’ರ ಅಡಿ ಕೆಲವೆಡೆ ಅರ್ಹರಲ್ಲದವರಿಗೂ ಜಾಗ ಮಂಜೂರಾಗಿದೆ. ಇದಕ್ಕೆ ಬಗರ್‌ಹುಕುಂ ಸಮಿತಿಯ ನಿಗಾ ಕೊರತೆಯು ಪ್ರಮುಖ ಕಾರಣವಾಗಿದೆ.

ಬಗರ್‌ಹುಕುಂ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಪಟ್ಟಿ ಸಿದ್ಧಪಡಿಸುತ್ತದೆ. ಒಂದೇ ಕುಟುಂಬದ ಹಲವರು, ಉಳ್ಳವರಿಗೂ ಮಂಜೂರಾತಿ ನೀಡಲಾಗಿದೆ. ಸಮಿತಿಯು ಅರ್ಜಿ ತಿರಸ್ಕರಿದವರಿಗೂ ಜಾಗ ಮಂಜೂರು ಮಾಡಿರುವ, ಅರ್ಹರಿಗೆ ವಂಚಿಸಿರುವ ಉದಾಹರಣೆಗಳು ಸಾಕಷ್ಟಿವೆ.

‘ಸಮಿತಿಯವರ ಒತ್ತಡದಿಂದಾಗಿ ಕೆಲವು ಅನರ್ಹರಿಗೂ ಮಂಜೂರಾತಿ ಸಿಕ್ಕುತ್ತದೆ. ಪ್ರಭಾವಿಗಳ ಕೈವಾಡ ಇರುತ್ತದೆ. ನಿಬಂಧನೆಗಳನ್ನು ಗಾಳಿಗೆ ತೂರುವಂತೆ ಅಧಿಕಾರಿಗಳಿಗೆ ಒತ್ತಡ ಹೇರುತ್ತಾರೆ. ಸ್ವಜನ ಪಕ್ಷಪಾತ, ದುಡ್ಡು, ಓಟಿಗಾಗಿ ಇಂಥ ಕೆಲಸ ಮಾಡಿಸುತ್ತಾರೆ’ ಎಂದು ಹೆಸರು ಹೇಳಲು ಬಯಸದ ತಹಶೀಲ್ದಾರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಕಚೇರಿಯಲ್ಲಿದ್ದ ನಮೂನೆ ‘50’, ‘53’ಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಕಡತಗಳು ನಾಪತ್ತೆಯಾಗಿವೆ. ಶೃಂಗೇರಿ ತಾಲ್ಲೂಕಿನಲ್ಲಿ 94 ‘ಸಿ’, 94 ‘ಸಿಸಿ’ ಹಕ್ಕುಪತ್ರ ಅಕ್ರಮವಾಗಿ ವಿತರಿಸಲಾಗಿದೆ ಎಂದು ದೂರು ದಾಖಲಾಗಿದೆ. 670ಕ್ಕೂ ಹೆಚ್ಚು ಮಂದಿಗೆ ಶೃಂಗೇರಿ ಭಾಗದಲ್ಲಿ ಹಕ್ಕುಪತ್ರ ವಿತರಿಸಲಾಗಿದೆ.

‘ಸೊಪ್ಪಿನ ಬೆಟ್ಟ, ಅರಣ್ಯ ಪ್ರದೇಶ, ಕುಮ್ಕಿ, ಪಟ್ಟಣ ಜಾಗ ಮಂಜೂರು ಮಾಡಿರುವುದು, ಹಕ್ಕುಪತ್ರ ಅಕ್ರಮವಾಗಿ ನೀಡಿರುವುದು ಈ ಎರಡೂ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಕ್ರಮಗಳಲ್ಲಿ ತಾಲ್ಲೂಕು ಕಚೇರಿಯ ಕೆಲವು ಅಧಿಕಾರಿಗಳು, ನೌಕರರ ಕೈಚಳಕದ ಪಾಲು ಇರುವುದು, ಸಮಿತಿಯ ಕೆಲವರು, ನೌಕರರ ನೆರವಿನಲ್ಲಿ ದಲ್ಲಾಳಿಗಳು ಪಾತ್ರ ವಹಿಸಿರುವುದು ಪತ್ತೆಯಾಗಿದೆ. ಶೃಂಗೇರಿ ತಾಲ್ಲೂಕಿನಲ್ಲಿ ವಿತರಿಸಿರುವ ಹಕ್ಕುಪತ್ರ, ದಾಖಲೆಗಳ ಅಸಲಿಯತ್ತು ಪರಿಶೀಲನೆ ಶುರುವಾಗಿದೆ. ಕಚೇರಿಯಿಂದ ಹೊರಗೆ ಅಂಗಡಿಯೊಂದರಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.
 

‘ಸಮಿತಿ ಹೊಣೆ ಎನ್ನಲಾಗದು’

‘ನಮೂನೆ ‘50’,‘53’ ರಲ್ಲಿ ಲೋಪಗಳಾಗಿವೆ ಎಂಬ ದೂರುಗಳು ಇವೆ. ಅದಕ್ಕೆ ಸಮಿತಿ ಹೊಣೆ ಎಂದು ಹೇಳಲಾಗದು’ ಎಂದು ಶೃಂಗೇರಿ ತಾಲ್ಲೂಕಿನ ನಾಲ್ಕು ಹೋಬಳಿ ಬಗರ್‌ ಹುಕುಂ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌ ಹೇಳಿದರು.

‘ಬಗರ್‌ಹುಕುಂ ಜಾಗ ಎಂದು ನಿರ್ಧರಿಸಿದಾಗ ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳಿಸಲಾಗುತ್ತದೆ. ಅರಣ್ಯ ಇಲಾಖೆಯವರು ಅದನ್ನು ಒಪ್ಪಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಮೋಜಣಿ ನಡೆಸಿ ಕಂದಾಯ ಮತ್ತು ಅರಣ್ಯ ಜಾಗ ಗುರುತು ಮಾಡಲು ಕ್ರಮ ವಹಿಸಬೇಕು. ಜಂಟಿ ಮೋಜಣಿ ಮಾಡಿಸಿದರೆ ನಿರ್ಧಾರ ಕೈಗೊಳ್ಳಲು ಸಮಿತಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ಕಂದಾಯ, ಅರಣ್ಯ ಸಚಿವರು, ಇಲಾಖೆ ಅಧಿಕಾರಿಗಳ ಸಭೆ ಏರ್ಪಡಿಸಿ ಅರಣ್ಯ ಮತ್ತು ಗೋಮಾಳ ಜಾಗ ಇತ್ಯರ್ಥಕ್ಕೆ ಕ್ರಮ ವಹಿಸುವಂತೆ ಕೋರಲು ನಿರ್ಧರಿಸಲಾಗಿದೆ. ಅದು ಇತ್ಯರ್ಥವಾದರೆ ಸಮಸ್ಯೆ‌ ಪರಿಹಾರವಾಗುತ್ತದೆ’ ಎಂದರು.

 

ಸಮಿತಿಯ ತಪ್ಪುಗಳೂ ಇವೆ

ಅನರ್ಹರಿಗೆ ಜಾಗ ಮಂಜೂರಾತಿಯಲ್ಲಿ ಬಗರ್‌ಹುಕುಂ ಸಮಿತಿಯ ತಪ್ಪುಗಳೂ ಇವೆ. ರಾಜಕಾರಣಿಗಳು, ಅಧಿಕಾರಿಗಳು ತಮಗೆ ಬೇಕಾದವರಿಗೆ ಮಂಜೂರಾತಿ ನೀಡಿದ್ದಾರೆ. 2014ರಲ್ಲಿ ಶೃಂಗೇರಿಯ ತಹಶೀಲ್ದಾರ್‌ ಅವರು ಮಂಜೂರಾತಿಯೇ ಆಗದವರಿಗೆ ಖಾತೆ ಮಾಡಿಕೊಟ್ಟಿರುವ ದೂರುಗಳು ಇವೆ. ಶೃಂಗೇರಿಯಲ್ಲಿ ಪತಿ ಎರಡು, ಪತ್ನಿ ಒಂದು ಸಾಗುವಳಿ ಚೀಟಿ ಪಡೆದಿರುವುದು, 50 ಎಕರೆ ಜಮೀನು ಇರುವವ ಅಪ್ಪನ ಹೆಸರಿನಲ್ಲಿ ಜಾಗ ಮಂಜೂರಾತಿ ಮಾಡಿಸಿಕೊಂಡಿರುವುದೂ ಇದೆ. ಅಕ್ರಮಗಳಿಗೆ ರಾಜಕಾರಣಿಗಳ ಕೃಪಾಕಟಾಕ್ಷವೂ ಉಂಟು. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದವರು ಇಂಥವರಲ್ಲಿ ಇದ್ದಾರೆ.

-ಕಲ್ಕುಳಿ ವಿಠಲ ಹೆಗ್ಡೆ, ಹೋರಾಟಗಾರ, ಶೃಂಗೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು