ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಂಬೇಡ್ಕರ್ ಎಂಬ ಪತ್ರಕರ್ತ

ಇಂದು ಬಹುಪಾಲು ಮಾಧ್ಯಮರಂಗದಲ್ಲಿ ಏನೆಲ್ಲ ಕಾಣುತ್ತಿದ್ದೇವೆಯೋ ಅವೆಲ್ಲ ಅಂಬೇಡ್ಕರ್ ಹೊಂದಿದ್ದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿವೆ
Last Updated 16 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ಯಾಗಿ, ದಮನಿತ ವರ್ಗಗಳ ಸಬಲೀಕರಣದ ನೇತಾರನಾಗಿ ಕಂಡವರೇ ಹೆಚ್ಚು. ಅದು ಸಹಜವೇ ಆಗಿದೆ. ಆದರೆ ಅವರ ಒಟ್ಟಾರೆ ವ್ಯಕ್ತಿತ್ವದ ಬಹುಮುಖ್ಯ ಭಾಗವಾಗಿ ಪತ್ರಿಕಾವೃತ್ತಿ ಕೂಡ ಇತ್ತು ಎಂಬುದು ಗಮನಾರ್ಹ. ಶಿಕ್ಷಣ- ಸಂಘಟನೆ- ಪ್ರತಿಭಟನೆಗಳೆಂಬ ತಮ್ಮ ಪ್ರಧಾನ ಚಿಂತನೆಯು ಸಮಾಜದ ವಿವಿಧ ಸ್ತರಗಳಿಗೆ ಇಳಿಯುವಲ್ಲಿ ಅವರು ನಡೆಸುತ್ತಿದ್ದ ಪತ್ರಿಕೆಗಳ ಪಾತ್ರ ಮಹತ್ವದ್ದು.

ಮೂಕನಾಯಕ (1920), ಬಹಿಷ್ಕೃತ ಭಾರತ (1927), ಸಮತಾ (1928), ಜನತಾ (1930), ಪ್ರಬುದ್ಧ ಭಾರತ (1956)- ಇವು ಅಂಬೇಡ್ಕರ್ ಅವರು ತಮ್ಮ ಸಾಮಾಜಿಕ ಆಂದೋಲನದ ಬಲವರ್ಧನೆಗಾಗಿ ಆರಂಭಿಸಿದ ಐದು ಪತ್ರಿಕೆಗಳು. ‘ಮೂಕನಾಯಕ’ದಲ್ಲಿ ಅಂಬೇಡ್ಕರ್ ಅವರು ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳದಿದ್ದರೂ ಅದರ ಹಿಂದಿನ ಶಕ್ತಿ ಅವರೇ ಆಗಿದ್ದರು. ಮೂಕನಾಯಕ ಎಂಬ ಪದವೇ ಧ್ವನಿಯಿಲ್ಲದ ವರ್ಗಗಳ ಅಂತರಂಗದ ಒತ್ತಾಸೆಗಳ ಮಹಾಪ್ರತಿಮೆಯಂತೆ ಇತ್ತು. ರಾಜಕೀಯದಲ್ಲಿ ದಲಿತರ ಮುಖವಾಣಿಯಾಗಿ ಪ್ರಮುಖ ಪಾತ್ರ ವಹಿಸಿದ ‘ಮೂಕನಾಯಕ’, ಜಾತಿ ಪದ್ಧತಿಯ ಅರ್ಥಹೀನತೆ, ಮಹಿಳೆಯರು ಹಾಗೂ ಅಸ್ಪೃಶ್ಯರನ್ನು ಮುಖ್ಯವಾಹಿನಿಗೆ ಸೇರಿಸುವ ಅವಶ್ಯಕತೆಗಳ ಬಗ್ಗೆ ದಿಟ್ಟ ದನಿಯೆತ್ತಿತು.

‘ಬಹಿಷ್ಕೃತ ಭಾರತ’ದಲ್ಲಿ ಅಂಬೇಡ್ಕರ್ ಪ್ರತ್ಯಕ್ಷವಾಗಿಯೇ ಕಾಣಿಸಿಕೊಂಡರು. ಅಂದಿನ ಪ್ರಬಲ ಜಾತಿ ಹಿಂದೂಗಳ ನಡವಳಿಕೆಯನ್ನು ಪತ್ರಿಕೆ ಮೂಲಕ ತೀವ್ರ ಟೀಕೆಗೆ ಒಳಪಡಿಸಿದರು.ಮಹದ್ ಸತ್ಯಾಗ್ರಹದ ಬೆನ್ನಿಗೇ ಪತ್ರಿಕೆ ಆರಂಭವಾದ್ದರಿಂದ ಅದರ ಮೊದಲ ಮೂರು ಸಂಪಾದಕೀಯಗಳು ಪ್ರತಿಭಟನೆಯ ಕುರಿತಾಗಿಯೇ ಇದ್ದವು. ಸಾರ್ವಜನಿಕ ಕೆರೆಗಳು ದಲಿತರ ಬಳಕೆಗೂ ಮುಕ್ತವಾಗಿ ದೊರೆಯಬೇಕೆಂಬ ಹಕ್ಕೊತ್ತಾಯದ ನಂತರ ಸವರ್ಣೀಯ ಹಿಂದೂಗಳು, ಬ್ರಿಟಿಷ್ ಸರ್ಕಾರ ಹಾಗೂ ಅಸ್ಪೃಶ್ಯರ ಜವಾಬ್ದಾರಿ ಏನು ಎಂಬುದನ್ನೇ ಸಂಪಾದಕೀಯಗಳು ಪ್ರಮುಖವಾಗಿ ಚರ್ಚಿಸಿದ್ದವು.

1928ರಲ್ಲಿ ಆರಂಭವಾದ ‘ಸಮತಾ’, ಸಾಮಾಜಿಕ ಸುಧಾರಣೆಗಾಗಿ ಅಂಬೇಡ್ಕರ್ ಸ್ಥಾಪಿಸಿದ ಸಮತಾ ಸಂಘದ ಮುಖವಾಣಿಯಾಗಿದ್ದರೆ, ಅದರ ನಂತರ ಬಂದ ‘ಜನತಾ’ 26 ವರ್ಷಗಳ ಕಾಲ ಆ ಕೆಲಸವನ್ನು ಮುಂದುವರಿಸಿತು.

1956ರಲ್ಲಿ ಅದಕ್ಕೇ ‘ಪ್ರಬುದ್ಧ ಭಾರತ’ವೆಂದು ಮರುನಾಮಕರಣ ಮಾಡಲಾಯಿತು. ಇದಕ್ಕೆ ಅಂಬೇಡ್ಕರ್ ಅವರು ಬೌದ್ಧಮತವನ್ನು ಸ್ವೀಕರಿಸುವ ಹಿನ್ನೆಲೆಯೂ ಇತ್ತು. ಅವರ ನಿಧನಾನಂತರ ಪುತ್ರ ಯಶವಂತ ಅಂಬೇಡ್ಕರ್ ನೇತೃತ್ವದಲ್ಲಿ ಅದು ನಾಲ್ಕು ವರ್ಷ ನಡೆಯಿತು. ಕೆಲವು ಸಮಾನಮನಸ್ಕರು ಒಟ್ಟಾಗಿ 2017ರಲ್ಲಿ ‘ಪ್ರಬುದ್ಧ ಭಾರತ’ವನ್ನು ಮತ್ತೆ ಆರಂಭಿಸಿರುವುದೂ ಉಲ್ಲೇಖನೀಯ.

ಜನಜಾಗೃತಿಯೇ ಅವರ ಪತ್ರಿಕಾವೃತ್ತಿಯ ಮೂಲ ಆಶಯವಾಗಿದ್ದರಿಂದ ಅವರ ಯಾವ ಪತ್ರಿಕೆಗಳಿಗೂ ವಾಣಿಜ್ಯಕ ಉದ್ದೇಶ ಇರಲಿಲ್ಲ. ಸಹಜವಾಗಿಯೇ ಅವು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು. ಆದರೆ ಸುಮಾರು ಮೂರೂವರೆ ದಶಕಗಳ ಕಾಲ ಪ್ರತ್ಯಕ್ಷವಾಗಿ ಪತ್ರಿಕಾ ವ್ಯವಸಾಯದಲ್ಲಿ ತೊಡಗಿಕೊಂಡಿದ್ದ ಅಂಬೇಡ್ಕರ್ ಅವರಿಗೆ ಸಾಮಾಜಿಕ ನ್ಯಾಯದ ಕೀಲಿಕೈಗಳಾಗಿ ಪತ್ರಿಕೆಗಳ ಬಗ್ಗೆ ಅಪಾರ ವಿಶ್ವಾಸ ಇತ್ತು. ಶೋಷಿತರನ್ನು ಶಿಕ್ಷಿತರನ್ನಾಗಿಸದೆ ಯಾವ ಹೋರಾಟವೂ ಸಾಧ್ಯವಿಲ್ಲ, ಈ ಪ್ರಕ್ರಿಯೆಯಲ್ಲಿ ಪತ್ರಿಕಾ ಮಾಧ್ಯಮ ಒಂದು ಅವಿಭಾಜ್ಯ ಅಂಗ ಎಂದು ಅವರು ನಂಬಿದ್ದರು.

ಅಂಬೇಡ್ಕರ್ ಅವರು ಪತ್ರಿಕಾವೃತ್ತಿ ಬಗ್ಗೆ ಹೊಂದಿದ್ದ ಕೆಲವು ಪ್ರಮುಖ ನಿಲುವುಗಳನ್ನು ಇತಿಹಾಸಕಾರರು ಹೀಗೆ ಗುರುತಿಸಿದ್ದಾರೆ: ಪತ್ರಿಕಾವೃತ್ತಿಯು ನ್ಯಾಯೋಚಿತ ಹಾಗೂ ಪೂರ್ವಗ್ರಹರಹಿತವಾಗಿರಬೇಕು; ವಾಸ್ತವಾಂಶಗಳನ್ನು ಆಧರಿಸಿರಬೇಕು, ಪೂರ್ವಕಲ್ಪಿತ ವಿಚಾರಗಳನ್ನಲ್ಲ; ಪತ್ರಿಕಾವೃತ್ತಿಯು ಒಂದು ಉದಾತ್ತ ಧ್ಯೇಯವಾಗಿರಬೇಕೇ ಹೊರತು ವ್ಯಾಪಾರವಲ್ಲ; ಪತ್ರಿಕಾವೃತ್ತಿ ಹಾಗೂ ಪತ್ರಕರ್ತರು ನೈತಿಕ ಮೌಲ್ಯಗಳನ್ನು ಹೊಂದಿರಬೇಕು; ನಿರ್ಭಯವು ಪತ್ರಿಕಾವೃತ್ತಿ ಹಾಗೂ ಪತ್ರಕರ್ತರ ಪ್ರಧಾನ ಲಕ್ಷಣವಾಗಿರ ಬೇಕು; ಸಮಾಜಹಿತದ ಪರವಾಗಿರುವುದು ಪತ್ರಿಕಾವೃತ್ತಿಯ ಪ್ರಾಥಮಿಕ ಕರ್ತವ್ಯ; ವ್ಯಕ್ತಿಪೂಜೆಗೆ ಅವಕಾಶ ಇರಬಾರದು; ವಸ್ತುನಿಷ್ಠತೆಯೇ ಪತ್ರಿಕೆಗಳ ಆದರ್ಶವಾಗಿರಬೇಕು, ಅತಿರಂಜಕತೆಯಲ್ಲ.

ನಮ್ಮ ಮಾಧ್ಯಮರಂಗವನ್ನು ಕಟ್ಟಿ ಬೆಳೆಸಿದ ಹಿರಿಯರು ಈ ಕ್ಷೇತ್ರದ ಬಗ್ಗೆ ಏನೆಲ್ಲ ಆದರ್ಶ
ಗಳನ್ನು ಇಟ್ಟುಕೊಂಡಿದ್ದರೋ ಅವುಗಳ ಸಾರಸರ್ವಸ್ವ ಅಂಬೇಡ್ಕರ್ ಅವರ ಚಿಂತನೆಯಲ್ಲಿದೆ. ಮುಕ್ಕಾಲು ಶತಮಾನದ ನಂತರ ನಮ್ಮ ಮಾಧ್ಯಮರಂಗ ಸಾಗಿ ಬಂದಿರುವ ದಾರಿ ನೋಡಿದರೆ, ನಾವೊಂದು ಬೇರೆಯದೇ ಲೋಕದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗುತ್ತದೆ. ಪೂರ್ವಗ್ರಹ, ವ್ಯಕ್ತಿಪೂಜೆ, ಕಲ್ಪಿತ ಸುದ್ದಿಗಳು, ಅತಿರಂಜಕತೆ, ವ್ಯಾಪಾರಿ ಮನೋಭಾವ- ಇಂದು ಬಹುಪಾಲು ಮಾಧ್ಯಮರಂಗದಲ್ಲಿ ಏನೆಲ್ಲ ಕಾಣುತ್ತಿದ್ದೇವೆಯೋ ಅವೆಲ್ಲ ಅಂಬೇಡ್ಕರ್ ಹೊಂದಿದ್ದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿವೆ.

ಸ್ವತಃ ಅರ್ಥಶಾಸ್ತ್ರದ ಬಹುದೊಡ್ಡ ವಿದ್ವಾಂಸರಾಗಿದ್ದ ಅಂಬೇಡ್ಕರ್ ಅವರೂ ಮಾಧ್ಯಮಗಳಿಗೆ ಸೂಕ್ತವಾದ ಒಂದು ‘ರೆವಿನ್ಯೂ ಮಾಡೆಲ್’ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಅವರ ಕಾಲಕ್ಕೆ ಪತ್ರಿಕೆಗಳ ಉದ್ದೇಶವು ಮಾಹಿತಿ ಪ್ರಸಾರ, ಶಿಕ್ಷಣ ಹಾಗೂ ಜಾಗೃತಿಗಿಂತ ಆಚೆ ಬೇರೆ ಏನೂ ಇಲ್ಲದ್ದೇ ಇದಕ್ಕೆ ಪ್ರಮುಖ ಕಾರಣವಿರಬಹುದು. ಖುದ್ದು ಐದು ಪತ್ರಿಕೆಗಳನ್ನು ನಡೆಸಿಯೂ ಅವರು ಪತ್ರಕರ್ತ ಆಗಿದ್ದರೇ ಹೊರತು ಪತ್ರಿಕೋದ್ಯಮಿ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT