ಶನಿವಾರ, ಜುಲೈ 24, 2021
22 °C
ಗುರುವಿನ ಪ್ರಸ್ತುತತೆಯನ್ನು ಪ್ರಶ್ನಿಸುವ ಆಲೋಚನೆಗಳು ಹುಟ್ಟಿಕೊಳ್ಳುತ್ತಿರುವ ಇಂದಿನ ಸಂದರ್ಭವು ಆತನ ಪಾಲಿಗೆ ಸವಾಲಿನ ಕಾಲಘಟ್ಟವೇ ಆಗಿದೆ

ಸಂಗತ | ಆಚಾರ್ಯ ಆಗುವುದೆಂದರೆ...

ದಾದಾಪೀರ್ ನವಿಲೇಹಾಳ್ Updated:

ಅಕ್ಷರ ಗಾತ್ರ : | |

prajavani

ಅಲ್ಲಮಪ್ರಭುವಿನ ವಚನವೊಂದು ಗುರು– ಶಿಷ್ಯರ ನಡುವಿನ ಬಾಂಧವ್ಯದ ಬೌದ್ಧಿಕ ಏರಿಳಿತ ಕುರಿತು ವಿಶಿಷ್ಟವಾಗಿ ಹೇಳುತ್ತದೆ. ನಾಲ್ಕು ಯುಗಗಳಲ್ಲಿ ಗುರುವು ಶಿಷ್ಯನಿಗೆ ಕ್ರಮವಾಗಿ ಬಡಿದು, ಬೈದು, ಝಂಕಿಸಿ ಕೊನೆಗೆ ವಂದಿಸಿ ಬುದ್ಧಿ ಹೇಳಿದರೆ, ಶಿಷ್ಯ ಎಲ್ಲ ಯುಗದಲ್ಲೂ ‘ಆಗಲಿ ಮಹಾಪ್ರಸಾದ’ ಎನ್ನುತ್ತಾನೆ. ಯಾವ ಯುಗದಲ್ಲೂ ಕಲಿಕಾರ್ಥಿಯ ಮನೋಧರ್ಮದಲ್ಲಿ ಬದಲಾಗಿಲ್ಲ. ಆದರೆ ಕಲಿಸುವ ಗುರುವಿನ ಭೌತಿಕ ವರ್ತನೆಯು ಆತನ ಬದಲಾದ ಬೌದ್ಧಿಕ ದಾರಿದ್ರ್ಯದ ಸ್ಥಿತಿಯನ್ನು ಸಂಕೇತಿಸುತ್ತದೆ.

ಈ ವಚನದ ವಿಶ್ಲೇಷಣೆ ಮಾಡುವಾಗ ಸಾಮಾನ್ಯವಾಗಿ ‘ಕಲಿಗಾಲ ಎಷ್ಟು ಕೆಟ್ಟುಹೋಗಿದೆ ನೋಡಿ, ಗುರುಗಳು ವಿದ್ಯಾರ್ಥಿಗಳಿಗೆ ನಮಸ್ಕರಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ಬಂದಿದೆ’ ಎಂದು ವಿದ್ಯಾರ್ಥಿ ಸಮುದಾಯದ ಮನೋಧರ್ಮವನ್ನು ಹೀಗಳೆದು ಮಾತನಾಡುವುದು ರೂಢಿಯಲ್ಲಿದೆ.

ಭಾರತವು ವಿಶ್ವಗುರುವಿನ ಸ್ಥಾನದಲ್ಲಿದೆ ಎಂದು ಹೆಮ್ಮೆ ಪಡುತ್ತಿರುವ ಸಂದರ್ಭವಿದು. ಆ ಗುರುವಿನ ಮಹತ್ವಾಕಾಂಕ್ಷೆ ಮತ್ತು ಕಾಳಜಿ ಹೆಚ್ಚು ಸೂಕ್ಷ್ಮವೂ ಸಂವೇದನಾಶೀಲವೂ ಜವಾಬ್ದಾರಿಯುತವೂ ಆಗಿರಬೇಕಾದ ಹೊತ್ತು ಕೂಡ ಹೌದು. ಕಂಪ್ಯೂಟರ್, ಇಂಟರ್ನೆಟ್ ಮತ್ತು ಮೊಬೈಲ್‌ಗಳನ್ನು ಮೀರಿದ ನೈತಿಕ ಅನುಸಂಧಾನವೊಂದು ದೇಶದ ಭಾವನಾತ್ಮಕ ಸಹಜೀವನವನ್ನು ಅದರೆಲ್ಲ ವೈವಿಧ್ಯಗಳೊಂದಿಗೆ ಕಾಪಾಡುವ ಸಂಜೀವಿನಿಯಾಗಬಲ್ಲದು ಎಂಬ ಹೊಣೆಯರಿತ ಗುರುವಿನ ಅಗತ್ಯ ಇಂದು ಹೆಚ್ಚಾಗಿದೆ.

ಬಹುಮಾಧ್ಯಮ ಯುಗದಲ್ಲಿ ಕಲಿಯುತ್ತಿರುವ ವಿವಿಧ ಹಂತದ ವಿದ್ಯಾರ್ಥಿಗಳ ಆಸಕ್ತಿ ಕೇಂದ್ರಗಳೂ ಬಹುಮುಖಿಯಾಗಿರುವುದು ಸಹಜ. ಇಂದಿನ ಅಪರಿಮಿತ ಮಾಹಿತಿಯ ಜಗತ್ತಿನಲ್ಲಿ ಗುರುವಿನ ಪ್ರಸ್ತುತತೆಯನ್ನು ಪ್ರಶ್ನಿಸುವ ಆಲೋಚನೆಗಳು ಹುಟ್ಟಿಕೊಳ್ಳುತ್ತಿವೆ. ಇದು ಗುರುವಿಗೆ ಸವಾಲಿನ ಕಾಲಘಟ್ಟ.

ಆನ್‌ಲೈನ್ ತರಗತಿಗಳ ಅಗತ್ಯವನ್ನು ತಂದೊಡ್ಡಿ ರುವ ಕೊರೊನಾದ ಆತಂಕದ ಸಮಯದಲ್ಲಿ ವಿದ್ಯಾರ್ಥಿ ಗಳನ್ನು ಮಾಹಿತಿಪೂರ್ಣವಾಗಿ ತಲುಪುವುದಷ್ಟೇ ಜರೂರಾಗಿದೆ. ಇಂಥ ಜರೂರುಗಳು ಚಿಂತನಶೀಲ ಅಧ್ಯಾಪಕರ ಕ್ರಿಯಾತ್ಮಕತೆಯನ್ನು ಅಣಕಿಸುವಂತೆ ಕಾಣುವುದು ನಿಜವಾದರೂ ತತ್ಕಾಲದ ಅನಿವಾರ್ಯವನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಆದರೆ ಗುರು– ಶಿಷ್ಯರ ನಡುವೆ ಕೇವಲ ಮಾಹಿತಿ ವಿನಿಮಯವಾಗುತ್ತಾ ಅಂಕ ಗಳಿಕೆಯಿಂದ ಮಾತ್ರ ವಿದ್ಯಾರ್ಥಿಗಳ ಪ್ರತಿಭಾಸಂಪನ್ನತೆಯನ್ನು ಅಳೆಯುವ ಅಪಾಯವನ್ನು ಕಳೆದ ಎರಡು ದಶಕಗಳಿಂದ ಎದುರಿ ಸುತ್ತಿದ್ದೇವೆ. ತೊಂಬತ್ತರ ದಶಕದ ಆರಂಭದಲ್ಲಿಯೇ ಹುಟ್ಟಿಕೊಂಡ, ಶೇ 55ಕ್ಕಿಂತ ಹೆಚ್ಚು ಅಂಕಗಳು ಬೇಕು ಎಂಬ ವಿದ್ಯಾರ್ಥಿ ಸಮುದಾಯದ ಅಘೋಷಿತ ಆಗ್ರಹವು ಉನ್ನತ ಶಿಕ್ಷಣದ ಏರುದಾರಿಯನ್ನು ಬದಲಾ ಯಿಸಿಬಿಟ್ಟಿತೋ ಏನೋ. ಸಾಮಾಜಿಕವಾದ ಏನೇನೋ ಕಾರಣಗಳು ರಾಜಕೀಯಕರಣಗೊಂಡು, ವಿಶ್ವವಿದ್ಯಾ ಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಸಮಾನ ಪ್ರತಿಭಾವಂತರಾಗಿ ಹೊರಬರುವುದು ಸಾಧ್ಯವಾಯಿತು. ಇದು ಅನಪೇಕ್ಷಿತ ಪೈಪೋಟಿಗೆ ಕಾರಣವಾದಂತೆ, ಡಿಸ್ಟಿಂಕ್ಷನ್‌ ಪಡೆದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲೂ ಕಾರಣವಾಗಿದೆ.

ಗುರುವಿನ ಉದ್ಬೋಧಕ ಶಕ್ತಿಯನ್ನು ತಾತ್ಸಾರದಿಂದ ಅನುಮಾನಿಸಿದ ಸಮಾಜ ಮತ್ತು ತನ್ನ ಸೃಜನಶೀಲತೆ ಯನ್ನು ಕಾಲದ ಅಪೇಕ್ಷೆಗಳಿಗೆ ಅನುಗುಣವಾಗಿ ಆತ್ಯಂತಿಕಗೊಳಿಸಿಕೊಳ್ಳದ ಗುರುವಿನ ಉಡಾಫೆ ಇದಕ್ಕೆ ಕಾರಣ. ಈ ಬಿಕ್ಕಟ್ಟನ್ನು ನಮ್ಮ ಭಾರತೀಯ ಗುರು ಪರಂಪರೆಯ ಒಳಗಿನಿಂದಲೇ ಪಡೆಯಬಹುದಾದ ಪರಿಹಾರಗಳಿಂದ ಎದುರಿಸಬಹುದು. ಪರಶುರಾಮ ಮತ್ತು ದ್ರೋಣರಂಥ ಗುರುಗಳ ವಿದ್ವತ್ತು ಹಾಗೂ ಶ್ರದ್ಧೆಯನ್ನು ರೂಪಕವಾಗಿ ನೋಡುವ ಕ್ಷಣವು, ಅವರ ಜ್ಞಾನನಿರಾಕೃತ ಸಾಮಾಜಿಕ ನಡೆಯು ಸಮಕಾಲೀನ ನಿರಾಕರಣೆಯ ಆಯುಧವಾಗಿ ಪ್ರಯೋಗವಾಗದಂತೆ ಕಾಯುವ ಕ್ಷಣವೂ ಆಗಿ ಬರಬೇಕು. ಭಾರತೀಯ ಪುರಾತನಾಚಾರ್ಯರ ಸಾಮಾಜಿಕ ನಡೆಗಳು ವರ್ತಮಾನದ ಆಶಯಗಳಾಗಿರಬೇಕೇ ಎಂಬ ಆತ್ಮಾವಲೋಕನ ಸಾಧ್ಯವಾಗುತ್ತ, ಅವರ ಜ್ಞಾನಶ್ರದ್ಧೆಗೆ ಮಿಗಿಲಾದ ಮಾದರಿಗಳನ್ನು ಹುಡುಕಿಕೊಳ್ಳಬೇಕಾಗಿದೆ.

ಗುರುವು ತರಗತಿಯ ಅಪೇಕ್ಷೆಗಳನ್ನು ಪೂರೈಸುತ್ತಲೇ ತರಗತಿಯ ಮಿತಿಗಳನ್ನು ದಾಟಿ ಬಹುಶ್ರುತ ಜ್ಞಾನದಾಹಿಯಾಗಿ ರೂಪುಗೊಳ್ಳುವ ಆಚಾರ್ಯನಾಗಲು ಪ್ರಯತ್ನಶೀಲನಾಗಬೇಕು. ವಿದ್ಯಾರ್ಥಿಗಳು ಇಂಥವರಿಂದ ಹೆಚ್ಚು ಅಪೇಕ್ಷಿಸುತ್ತಾರೆ. ಅಂಕಕಲಿತನವನ್ನು ಉತ್ಪಾದಿಸುವ ವಿಶ್ವವಿದ್ಯಾ ಲಯಗಳ ನೆಲೆಯು ಸಮಾಜಮುಖಿ ಆಲೋಚನೆ ಮತ್ತು ಮಾನವೀಯ ಕ್ರಿಯೆಗಳನ್ನು ಬಿತ್ತಿ ಬೆಳೆಯುವ ಫಲವತ್ತಾದ ನೆಲವಾಗಬೇಕು.

ಗುರುವಿನ ಗೆರೆ ದಾಟಿ ಆಚಾರ್ಯರಾದವರು ಹಲವರಿದ್ದಾರೆ. ಆಚಾರ್ಯರಾಗಿ ದಣಿಯದೆ ದುಡಿದು ಸಮಾಜಕ್ಕೆ, ದೇಶಕ್ಕೆ, ಜಗತ್ತಿಗೆ ಸುಂಟರಗಾಳಿಯ ನಡುವೆಯೂ ಹಣತೆ ಬೆಳಗಿದ ಋಷಿಸದೃಶ ಮಹಾಮಹಿಮರು ಕೆಲವರು ಮಾತ್ರ. ಬುದ್ಧ, ಸಾಕ್ರಟೀಸ್, ಬಸವಣ್ಣ, ಗೆಲಿಲಿಯೊ, ವಿವೇಕಾನಂದ, ಗಾಂಧಿ, ಐನ್‌ಸ್ಟೀನ್‌, ಅಂಬೇಡ್ಕರ್, ಕುವೆಂಪು ಅಂತಹವರು ಸತ್ಯಶೋಧನೆಯ ನಿಷ್ಠುರ ಹಾದಿಯಲ್ಲಿ ಮಾನವತೆಗೆ ಶ್ರೇಷ್ಠತೆ ತಂದವರು. ಜ್ಞಾನ ದರ್ಶನದ ಮಹಾಯಾನದಲ್ಲಿ ತೊಡಗಿಸಿಕೊಂಡ ಗುರು– ಶಿಷ್ಯರಿಬ್ಬರೂ ಅಂತಹವರ ಸಾಲಿನಲ್ಲಿ ನಿಲ್ಲುವುದಕ್ಕೆ ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ಅವರ ಶಾಲೆಗಾದರೂ ಸೇರುವ ಆಸಕ್ತಿ ತೋರಬೇಕಾಗಿದೆ.

ಅಲ್ಲಮನು ವಿದ್ಯಾರ್ಥಿಗಳಿಗೆ ವಂದಿಸಿ ಬುದ್ಧಿಯ ಹೇಳುವ ಗುರುವಿನ ಸ್ಥಿತಿ ಕಂಡು ಮರುಕಪಡುತ್ತಿದ್ದಾನೆ. ಅವನು ಹೇಳಿದ ಕಲಿಗಾಲ ಮುಗಿದಂತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು