ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕರ್ಕಶ ಸದ್ದು ಮಾಡುವ ಮುನ್ನ...

Published 31 ಮೇ 2023, 19:51 IST
Last Updated 31 ಮೇ 2023, 19:51 IST
ಅಕ್ಷರ ಗಾತ್ರ

ಎಪ್ಪತ್ತರ ಹಿರಿಯರು ಉದ್ಯಾನಕ್ಕೆ ಕುಂಟುತ್ತಾ ಬರುತ್ತಿದ್ದರು. ಏನಾಯಿತು ಎಂದು ವಿಚಾರಿಸಿದ್ದಕ್ಕೆ ‘ಮೊನ್ನೆ ಸಂಜೆ ವಾಕಿಂಗ್‍ಗೆ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ದೊಡ್ಡ ಸದ್ದು. ಅದಕ್ಕೆ ಸರಿಯಾಗಿ ದಾರಿಬದಿಯಲ್ಲಿದ್ದ ನಾಯಿಗಳು ಸಿಕ್ಕಾಪಟ್ಟೆ ಬೊಗಳಲು ಆರಂಭಿಸಿದವು. ಭೂಕಂಪವಾಗುತ್ತಿದೆಯೇನೋ ಅನಿಸಿ ಒಂದು ಕ್ಷಣ ಹೆದರಿಕೆಯಾಯಿತು. ಕೈಕಾಲು ನಡುಗಿ ಓಡಲು ಹೋದಾಗ ಮೋರಿಗೆ ಬಿದ್ದೆ. ಗುಂಡಿಗೆ ಗಟ್ಟಿ ಇರದಿದ್ದರೆ ಮೇಲೆಯೇ ಹೋಗಬೇಕಿತ್ತು’ ಎಂದು ನಕ್ಕರು. ಬೆಂಗಳೂರಿನಲ್ಲಿ ಭೂಕಂಪವೇ ಎಂದು ಬೆರಗಾದವರಿಗೆ ಆಮೇಲೆ ಗೊತ್ತಾದದ್ದು, ಕಾಲೇಜು ಹುಡುಗರು ತಮ್ಮ ಬೈಕ್‍ಗಳನ್ನು ಸೈಲೆನ್ಸರ್ ಇಲ್ಲದೆ ಓಡಿಸಿಕೊಂಡು ಹೋದಾಗ ಸೃಷ್ಟಿಯಾದ ಶಬ್ದಪ್ರಳಯ ಈ ಅಪಘಾತಕ್ಕೆ ಕಾರಣವಾಯಿತು ಎಂಬುದು.

ಅವರು ಹೀಗೆಂದ ಕೂಡಲೆ ಪ್ರತಿಯೊಬ್ಬರೂ ತಮ್ಮ ದನಿಗೂಡಿಸಿದರು. ರಾತ್ರಿ ಹನ್ನೊಂದಾದರೂ ಆಗಾಗ್ಗೆ ಕೇಳಿಬರುವ ಈ ಕರ್ಕಶವಾದ ಸದ್ದು ನಿದ್ದೆಗೆ ತೊಂದರೆ ಉಂಟು ಮಾಡುತ್ತದೆ ಎಂಬುದು ಕೆಲವರ ಅಳಲು. ಹಸುಗೂಸುಗಳು ಬೆಚ್ಚಿ ಬೀಳುವಷ್ಟು ಭೀಕರ ಈ ಸದ್ದು ಎಂದು ಪುಟ್ಟ ಮಕ್ಕಳ ತಂದೆ ತಾಯಿ ಬೇಸರಿಸಿದರೆ, ಆಸ್ಪತ್ರೆಗಳಲ್ಲೂ ರೋಗಿಗಳ ವಿಶ್ರಾಂತಿಗೆ ಭಂಗವನ್ನುಂಟು ಮಾಡುತ್ತದೆ ಎನ್ನುವುದು ಅನೇಕರ ದೂರು. ನಗರ ಪ್ರದೇಶಗಳಲ್ಲಿ ಶಬ್ದಮಾಲಿನ್ಯವು ಈಗಾಗಲೇ ದೊಡ್ಡ ಪಿಡುಗಾಗಿರುವ ಸಂದರ್ಭದಲ್ಲಿ, ಸೈಲೆನ್ಸರ್‌ಗಳನ್ನು ಮಾರ್ಪಡಿಸಿಕೊಂಡು ಓಡಿಸುವ ದ್ವಿಚಕ್ರ ವಾಹನಗಳು, ವಿಶೇಷವಾಗಿ ಬೈಕ್‍ಗಳು ನಿಜಕ್ಕೂ ಜನರಿಗೆ ದೊಡ್ಡ ಸಮಸ್ಯೆಯಾಗಿವೆ.

ಕೆಲಸ, ಶಿಕ್ಷಣ, ಉದ್ಯೋಗದ ನಿಮಿತ್ತ ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಬಹಳಷ್ಟಿದೆ. ಅದರಲ್ಲಿಯೂ ವೇಗವಾಗಿ ಚಲಿಸಬಲ್ಲ, ಕಡಿಮೆ ಜಾಗ ಸಾಕಾಗುವ, ಕೈಗೆಟುಕುವ ದರದ ದ್ವಿಚಕ್ರ ವಾಹನಗಳು ಯುವಕ, ಯುವತಿಯರಿಗೆ ಅಚ್ಚುಮೆಚ್ಚು. ಇವುಗಳಲ್ಲಿ ಅಳವಡಿಸಲಾದ ಸೈಲೆನ್ಸರ್‌ನಿಂದ ಸುಮಾರು ಎಪ್ಪತ್ತರಿಂದ ಎಂಬತ್ತು ಡೆಸಿಬಲ್‍ನಷ್ಟು ಶಬ್ದ ಉಂಟಾಗುತ್ತದೆ. ಆದರೆ ಇತರರ ಗಮನ ಸೆಳೆಯಲು, ಶೋಕಿಗಾಗಿ, ಈ ಬೈಕ್‍ಗಳ ಸೈಲೆನ್ಸರ್ ಒಳಗೆ ಇರುವ ಮಫ್ಲರ್‌ ಎಂಬ ಉಪಕರಣವನ್ನು ಹೊರತೆಗೆಸುತ್ತಾರೆ. ಆಗ ಹೊರಬರುವ ಶಬ್ದ ನೂರಾಮೂವತ್ತಕ್ಕೂ ಹೆಚ್ಚು ಅಂದರೆ ದುಪ್ಪಟ್ಟು! ಕಿವಿಗೆ ಕರ್ಕಶವೆನಿಸುವ ಇಂತಹ ಸದ್ದು ಶಬ್ದಮಾಲಿನ್ಯಕ್ಕೆ ಕಾರಣವೂ ಹೌದು.

2022ರಲ್ಲಿ ಈ ರೀತಿ ಮಾರ್ಪಡಿಸಲಾದ ಸೈಲೆನ್ಸರ್ ಇರುವ ಬೈಕ್‍ಗಳು ಸುಮಾರು ಸಾವಿರಕ್ಕೂ ಮೀರಿ ಇವೆ. ಈ ರೀತಿ ಸೈಲೆನ್ಸರ್‌ ಅನ್ನು ಬದಲಿಸಲು ಅವಕಾಶವನ್ನೇ ನೀಡಬಾರದು ಮತ್ತು ಹಾಗೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಇದಲ್ಲದೆ ಪ್ರತಿಯೊಂದು ವಾಹನಕ್ಕೂ ಹಾರ್ನ್‌ ಇರುತ್ತದೆ. ವಾಹನವನ್ನು ಚಲಾಯಿಸುವಾಗ ಇತರರಿಗೆ ತಮ್ಮ ಇರುವಿಕೆಯನ್ನು ತಿಳಿಸಲು ಅಥವಾ ಎಚ್ಚರಿಕೆ ನೀಡಲು ಉಪಯೋಗಿಸುವ ಸಾಧನವಿದು. ಆದರೆ ತಮಗಿಷ್ಟ ಬಂದಂತೆ ಚಿತ್ರ ವಿಚಿತ್ರ ಸದ್ದು ಮಾಡುವ ಕರ್ಕಶವಾದ ದನಿಯ ಹಾರ್ನ್‌ಗಳನ್ನು ಅಳವಡಿಸಿಕೊಳ್ಳುವುದು ಯುವಜನರ ಟ್ರೆಂಡ್. ದನಿ ಜೋರಿದ್ದಷ್ಟೂ ಹೆಚ್ಚು ಗಮನ ಸೆಳೆಯಬಹುದೆಂಬ ಇರಾದೆ!

ಬೈಕಿನ ಮುಂದಿನ ಚಕ್ರವನ್ನು ಗಾಳಿಯಲ್ಲಿ ಎತ್ತಿ ಬರೀ ಹಿಂದಿನ ಚಕ್ರದಲ್ಲಿ ಕರ್ಕಶ ಸದ್ದಿನೊಂದಿಗೆ ಗಾಡಿ ಓಡಿಸುವ ವ್ಹೀಲಿಂಗ್ ಕೂಡಾ ಯುವಜನರಿಗೆ ಸಾಹಸ ಕ್ರಿಯೆ. ಹರೆಯದ ಬಿಸಿರಕ್ತ, ಉನ್ಮಾದದಲ್ಲಿ ಮಾಡುವ ಈ ಎಲ್ಲಾ ಹುಚ್ಚಾಟಗಳು ಜನರಿಗೆ ಬಹಳಷ್ಟು ಕಿರಿಕಿರಿ ಉಂಟುಮಾಡುವುದು ಮಾತ್ರವಲ್ಲ ಅಪಘಾತಗಳಿಗೆ ಕಾರಣವಾಗುತ್ತಿವೆ.

ವಿಶ್ವಸಂಸ್ಥೆಯು ದ್ವಿಚಕ್ರ ವಾಹನಗಳ ಸವಾರಿಯನ್ನು ಅತ್ಯಂತ ಅಸುರಕ್ಷಿತ ಸಾರಿಗೆ ಸಂಚಾರ ಎಂದು ಗುರುತಿಸಿದೆ. ಅಂದರೆ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಪ್ರಮಾಣ ಅತ್ಯಂತ ಹೆಚ್ಚು. ಬೆಂಗಳೂರಿನಲ್ಲಿ ವಾಹನ ಅಪಘಾತದಿಂದ ಸಾವಿಗೀಡಾಗುವವರಲ್ಲಿ ಶೇಕಡ ಎಪ್ಪತ್ತರಷ್ಟು ಮಂದಿಯ ತಲೆಗೆ ಪೆಟ್ಟು ಬಿದ್ದಿರುತ್ತದೆ ಎನ್ನುವುದು ದೃಢಪಟ್ಟಿದೆ. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿದರೆ ಇಂತಹ ಬಹಳಷ್ಟು ಅಪಘಾತಗಳನ್ನು ತಡೆಗಟ್ಟಬಹುದು. ಬೆಂಗಳೂರು ನಗರದ ಮೂರು ಪ್ರಮುಖ ಸಿಗ್ನಲ್‍ಗಳಲ್ಲಿ ವೈದ್ಯರು ಮತ್ತು ಸಂಚಾರ ಪೊಲೀಸರನ್ನು ಒಳಗೊಂಡ ತಂಡದಿಂದ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಲಾಯಿತು. ಶೇಕಡ 77ರಷ್ಟು ಜನ ಹೆಲ್ಮೆಟ್ ಧರಿಸಿದ್ದರು. ಅಂದರೆ ಹೆಚ್ಚಿನವರು ಹೆಲ್ಮೆಟ್ ಧರಿಸುತ್ತಿದ್ದಾರೆ ಎಂದು ಸಮಾಧಾನಪಡುವ ಹಾಗಿಲ್ಲ. ಏಕೆಂದರೆ ಇವರಲ್ಲಿ ಶೇಕಡ 52ರಷ್ಟು ಜನ ಅದನ್ನು ಸರಿಯಾಗಿ ಧರಿಸಿರಲಿಲ್ಲ, ಅಂದರೆ ಅದರ ಬಕಲ್ ಹಾಕಿಕೊಂಡಿರಲಿಲ್ಲ.

ಹೆಲ್ಮೆಟ್ ಬರೀ ತಲೆಯ ಮೇಲಿಡುವ ಆಲಂಕಾರಿಕ ವಸ್ತುವಲ್ಲ. ಅದನ್ನು ಸರಿಯಾಗಿ ಧರಿಸುವುದು ಮುಖ್ಯ. ಕಳಪೆ ಗುಣಮಟ್ಟದ, ಅಸಮರ್ಪಕ ಹೆಲ್ಮೆಟ್ ಬಳಕೆಯಿಂದ ಅಪಘಾತವಾದಾಗ ತಲೆಯಿಂದ ರಕ್ತಸ್ರಾವ ಆಗದೇ ಇದ್ದರೂ, ಆಂತರಿಕ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಸಂಚಾರ ಪೋಲಿಸರು ದಂಡ ಹಾಕುತ್ತಾರೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವವರೇ ಹೆಚ್ಚು ಜನ. ಹಿಂಬದಿ ಸವಾರರಂತೂ ಕೈಯಲ್ಲಿ ಹೆಲ್ಮೆಟ್ ಹಿಡಿದು, ಪೊಲೀಸರನ್ನು ಕಂಡೊಡನೆ ತಲೆಗೇರಿಸುವ ಸಾಹಸ ಮಾಡುತ್ತಾರೆ. ಇದರೊಂದಿಗೆ, ಬೇಸಿಗೆ ಕಾಲದಲ್ಲಿ ಸೆಖೆ ಹೆಚ್ಚು, ಉಸಿರು ಕಟ್ಟಿದಂತೆ ಆಗುತ್ತದೆ, ಭಾರಕ್ಕೆ ತಲೆನೋವು, ಕಡಿಮೆ ದೂರಕ್ಕೆ ಅಗತ್ಯವಿಲ್ಲ, ಬೆವರು ಜಾಸ್ತಿಯಾಗಿ ಅಂಟಾಗುತ್ತದೆ, ಕೂದಲು ಉದುರುತ್ತದೆ, ಮುಖ ಕಾಣುವುದಿಲ್ಲ ಎನ್ನುವಂತಹ ನೆಪಗಳು ಹೆಲ್ಮೆಟ್ ಅನ್ನು ಪೊಲೀಸರನ್ನು ಕಂಡಾಗಲಷ್ಟೇ ಧರಿಸಿಕೊಳ್ಳುವುದಕ್ಕೆ ಸೀಮಿತಗೊಳಿಸಿವೆ.

ಹೆಲ್ಮೆಟ್ ಧರಿಸದವರಿಗೆ ಮಾತ್ರವಲ್ಲ, ಈ ಕರ್ಕಶ ಸದ್ದು ಮಾಡುವವರು, ಬಕಲ್ ಹಾಕದವರು, ಸಂಪೂರ್ಣ ತಲೆ ಮುಚ್ಚದ ಅರೆ ಹೆಲ್ಮೆಟ್ ಧರಿಸಿದವರ ವಿರುದ್ಧವೂ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುವುದೇನೋ ಸರಿ. ಅದರೊಂದಿಗೇ ಸರಿಯಾಗಿ ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗಾಗಿ ಎನ್ನುವ ಅರಿವು, ಕರ್ಕಶ ಶಬ್ದ ಇತರರಿಗೆ ಉಂಟುಮಾಡುವ ಶಬ್ದಮಾಲಿನ್ಯದ ಕುರಿತಾಗಿ ತಿಳಿವಳಿಕೆ, ಸಂಚಾರ ನಿಯಮಗಳ ಕುರಿತು ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ, ಶಿಬಿರಗಳು ನಡೆಯಬೇಕು. ಏಕೆಂದರೆ ದಂಡನೆಗಿಂತ ಅರಿವಿದ್ದಾಗ ಪಾಲನೆ ಸುಲಭ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT