ಶನಿವಾರ, ಜೂನ್ 25, 2022
25 °C
ಬೆಂಗಳೂರಿನ ಶಾಲೆಯೊಂದರ ಬಾಲಕಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡದ್ದನ್ನು ನೋಡಿದರೆ, ನಮ್ಮ ಸಮಾಜ ಮಕ್ಕಳಿಗೆ ಎಂತಹ ಮಾರ್ಗದರ್ಶನ ನೀಡುತ್ತಿದೆ ಎಂಬುದು ಅರಿವಾಗುತ್ತದೆ

ಸಂಗತ: ಅರಳುವ ಕುಸುಮಕ್ಕೇಕೆ ಈ ಪರಿ ಕ್ರೋಧ?

ನಾ. ದಿವಾಕರ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಬೆಂಗಳೂರಿನ ಶಾಲೆಯೊಂದರ ಬಾಲಕಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡದ್ದನ್ನು ನೋಡಿದರೆ, ನಮ್ಮ ಸಮಾಜ ಮಕ್ಕಳಿಗೆ ಎಂತಹ ಮಾರ್ಗದರ್ಶನ ನೀಡುತ್ತಿದೆ ಎಂಬುದು ಅರಿವಾಗುತ್ತದೆ

ಬೆಂಗಳೂರಿನ ಬಹುಪ್ರತಿಷ್ಠಿತ ಬಿಷಪ್ ಕಾಟನ್ ಹೆಣ್ಣು ಮಕ್ಕಳ ಶಾಲೆಯ ಕೆಲವು ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಹೊಡೆದಾಡಿಕೊಂಡಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳ ಮೂಲಕ ರಾಜ್ಯವ್ಯಾಪಿ ಸುದ್ದಿಯಾಗಿದೆ. ಸಮವಸ್ತ್ರ ಧರಿಸದಿರುವ ಕೆಲವು ವಿದ್ಯಾರ್ಥಿನಿಯರೂ ಈ ಹೊಡೆದಾಟದಲ್ಲಿ ಸೇರಿದ್ದಾರೆ. ಪರಸ್ಪರ ತಳ್ಳಾಡಿಕೊಂಡು, ಜುಟ್ಟು ಹಿಡಿದು ಕೆಳಗೆ ಬೀಳಿಸಿ, ರಸ್ತೆಗೆ ಬೀಳಿಸಿ ಹೊಡೆಯುವ ದೃಶ್ಯಗಳನ್ನು ನೋಡಿದರೆ, ನಮ್ಮ ಸಮಾಜ ಎತ್ತ ಸಾಗುತ್ತಿದೆ, ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಆತಂಕ ಮೂಡುವುದು ಸಹಜ.

ಬಿಷಪ್ ಕಾಟನ್, ರಾಜಧಾನಿಯ ಪ್ರಮುಖ ಶಾಲೆಗಳಲ್ಲಿ ಒಂದು. ಅಲ್ಲಿ ಶ್ರೀಮಂತ, ಮಧ್ಯಮ ವರ್ಗದ ಮಕ್ಕಳೇ ಹೆಚ್ಚಾಗಿ ಓದುತ್ತಾರೆ, ಅವರೂ ಹೀಗೆ ಮಾಡಲು ಸಾಧ್ಯವೇ ಎಂಬ ಅಪ್ರಬುದ್ಧ ಪ್ರಶ್ನೆಗೆ ಅವಕಾಶ ಕೊಡದೆ ಅಥವಾ ಹೆಣ್ಣು ಮಕ್ಕಳೂ ಹೀಗೆ ಮಾಡುತ್ತಾರೆಯೇ ಎಂಬ ಸಾಂಪ್ರದಾಯಿಕ ಪ್ರಶ್ನೆಗೆ ಗಮನಕೊಡದೆ, ಏಕೆ ಹೀಗಾಗುತ್ತಿದೆ ಎಂದು ಯೋಚಿಸಿದರೆ, ನಾವು ಸಾಗುತ್ತಿರುವ ದಿಕ್ಕು ದೆಸೆಯನ್ನು ಪರಾಮರ್ಶಿಸಲು ಸಾಧ್ಯ.

ಬಹುಶಃ ಹೈಸ್ಕೂಲು ಮಕ್ಕಳಿರಬಹುದಾದ ಈ ಬಾಲಕಿಯರು ಹೊಡೆದಾಡಿಕೊಳ್ಳುವ ರೀತಿಯನ್ನು ನೋಡಿದರೆ, ನಮ್ಮ ಸಮಾಜ ವಿದ್ಯುನ್ಮಾನ ಮಾಧ್ಯಮ ಗಳ ಮೂಲಕ, ಅಂತರ್ಜಾಲ ಮತ್ತಿತರ ತಂತ್ರಜ್ಞಾನ ಗಳ ಮೂಲಕ ಮಕ್ಕಳಿಗೆ ಎಂತಹ ಮಾರ್ಗದರ್ಶನ ನೀಡುತ್ತಿದೆ ಎಂಬುದು ಅರಿವಾಗುತ್ತದೆ.

ಕಾರಣ ಏನೇ ಇರಲಿ, ಹರೆಯದ ಮಕ್ಕಳಲ್ಲಿ ಈ ಪರಿಯ ಕ್ರೋಧ, ಆಕ್ರೋಶ ತಂತಾನೇ ಸಾರ್ವಜನಿಕ ಸ್ವರೂಪ ಪಡೆದುಕೊಳ್ಳುವುದಿಲ್ಲ. ಇದಕ್ಕೆ ನಾವೇ ಸೃಷ್ಟಿಸಿದ ಸಾಮಾಜಿಕ ಪರಿಸರ ಮತ್ತು ಸಾಂಸ್ಕೃತಿಕ ವಾತಾವರಣವೂ ಕಾರಣವಾಗಿರುತ್ತವೆ. ಶಾಲೆಯ ಆವರಣದಲ್ಲಿ ‘ಆತ್ಮರಕ್ಷಣೆ’ಯ ನೆಪದಲ್ಲಿ ನಡೆಯುವ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುವ ಸಚಿವರು, ರಾಜಕೀಯ ನಾಯಕರು ಇತ್ತ ಗಮನಿಸಬೇಕಿದೆ.

ಮತ್ತೊಬ್ಬರನ್ನು ಹೊಡೆಯುವ ಹಕ್ಕು ತನಗಿದೆ ಎನ್ನುವ ಮನೋಭಾವವೇ ಮನುಷ್ಯನನ್ನು ಕ್ರೌರ್ಯ ದೆಡೆಗೆ, ಅಮಾನುಷತೆಯೆಡೆಗೆ ಸೆಳೆಯುತ್ತದೆ. ದುರಂತ ಎಂದರೆ ಟೀವಿ ಧಾರಾವಾಹಿಗಳು, ಚಲನಚಿತ್ರಗಳು ಇಂತಹ ಮನೋಭಾವವನ್ನು ಸೃಷ್ಟಿಸುವುದೇ ಅಲ್ಲದೆ, ಕೇಡುಗತನದ ವಿವಿಧ ಮಾದರಿಗಳನ್ನೂ ಯುವ ಪೀಳಿಗೆಗೆ ಪರಿಚಯಿಸುತ್ತಿವೆ.

ಸಮಾಜವನ್ನು ಸರಿದಿಕ್ಕಿನಲ್ಲಿ ಕೊಂಡೊಯ್ಯುವ ನೈತಿಕ ಹೊಣೆ ಇರುವ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ತಮ್ಮ ಸ್ವಾರ್ಥ ರಾಜಕಾರಣ ಕ್ಕಾಗಿ ಸಾರ್ವಜನಿಕ ವಲಯದಲ್ಲೂ ಹಿಂಸೆಯನ್ನು ಸಾರ್ವತ್ರೀಕರಿಸುತ್ತಿದ್ದಾರೆ. ಮನುಷ್ಯನಲ್ಲಿ ಅಮಾನುಷತೆ ಯನ್ನು ಹೆಚ್ಚಿಸುವ ಮಾರ್ಗಗಳಿಗೆ ಧರ್ಮರಕ್ಷಣೆ, ಆತ್ಮರಕ್ಷಣೆ ಎಂಬಂಥ ವಿಶೇಷಣಗಳನ್ನು ಪೋಣಿಸಲಾಗುತ್ತಿದೆ.

ನ್ಯಾಯಾಲಯದ ಅಂಗಳದಲ್ಲಿ ವಕೀಲರೇ ಹಲ್ಲೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮಹಿಳಾ ವಕೀಲ
ರೊಬ್ಬರಿಗೆ ವ್ಯಕ್ತಿಯೊಬ್ಬ ಸಾರ್ವಜನಿಕರ ಎದುರಲ್ಲೇ ಕಾಲಿನಲ್ಲಿ ಒದೆಯುತ್ತಾನೆ. ಸರ್ಕಾರಿ ಅಧಿಕಾರಿಗಳ ಮೇಲೆ, ಪೊಲೀಸರ ಮೇಲೆ ಹಲ್ಲೆಗಳು ನಡೆಯುತ್ತವೆ. ಇವೆಲ್ಲವನ್ನೂ ತಡೆಗಟ್ಟುವ ಜವಾಬ್ದಾರಿ ಇರುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಪ್ರತಿಕ್ರಿಯಿಸುತ್ತಿರುವುದು ದುರಂತ.

ಈ ಮಕ್ಕಳಲ್ಲಿ ಅಷ್ಟೊಂದು ಕ್ರೋಧ, ಆಕ್ರೋಶ ಮೂಡಲು ವೈಯಕ್ತಿಕ, ವ್ಯಕ್ತಿಗತ ಕಾರಣಗಳು ಏನೇ ಇರಲಿ, ಹರೆಯದ ವಯಸ್ಸಿಗೇ ಈ ಮಟ್ಟಿಗೆ ಅಸಹಿಷ್ಣುತೆ ಯನ್ನು ರೂಢಿಸಿಕೊಳ್ಳಲು ಕಾರಣಗಳೇನು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳನ್ನು ಅರಳುವ ಕುಸುಮಗಳೆಂದೇ ಪರಿಭಾವಿಸಲಾಗುತ್ತದೆ. ಈ ಕುಸುಮಗಳೇ ಭವಿಷ್ಯದ ಸುಂದರ ಉದ್ಯಾನದಲ್ಲಿ ನಳನಳಿಸುತ್ತಾ ಶಾಂತಿಯ ತೋಟದ ವಾರಸುದಾರ
ರಾಗುತ್ತಾರೆ. ಆದರೆ ನಾವು ಈ ಮಕ್ಕಳ ಮುಂದೆ ಎಂತಹ ಪ್ರಾತ್ಯಕ್ಷಿಕೆ ಇಡುತ್ತಿದ್ದೇವೆ? ಇವರು ನಡೆವ ಹಾದಿಯಲ್ಲಿ ಎಂತಹ ದೀಪ್ತಿಗಳನ್ನು ನಿಲ್ಲಿಸುತ್ತಿದ್ದೇವೆ? ಇವರಿಗೆ ಪಠ್ಯಗಳ ಮುಖೇನ, ಪಠ್ಯೇತರ ಚಟುವಟಿಕೆಗಳ ಮೂಲಕ ಎಂತಹ ಜಗತ್ತನ್ನು ತೋರಿಸಲು ಯತ್ನಿಸುತ್ತಿದ್ದೇವೆ? ಇವರ ಭವಿಷ್ಯಕ್ಕಾಗಿ ಯಾವ ಬಗೆಯ ಮಾದರಿ ನೇತಾರರನ್ನು ಸೃಷ್ಟಿಸುತ್ತಿದ್ದೇವೆ? ಇತಿಹಾಸದಿಂದ ಹೆಕ್ಕಿ ತೆಗೆಯುವ ಯಾವ ಸಂಸ್ಕೃತಿಯನ್ನು ಇವರಿಗೆ ಉಣ ಬಡಿಸುತ್ತಿದ್ದೇವೆ?

ಇಷ್ಟು ಎಳೆಯ ವಯಸ್ಸಿಗೇ ಹೀಗೆ ವರ್ತಿಸಲು ಏನು ಕಾರಣ ಎನ್ನುವುದಕ್ಕಿಂತಲೂ ಈ ವರ್ತನೆಗೆ ಯಾರು ಕಾರಣ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಮಕ್ಕಳನ್ನು ಹಿತವಲಯದ ಐಷಾರಾಮಿ ಬದುಕಿನಲ್ಲೇ ಬೆಳೆಸುವ ಪೋಷಕರು ಸಹ ತಾವು ತಂತ್ರಜ್ಞಾನದ ಹೆಸರಿನಲ್ಲಿ ಮಕ್ಕಳಿಗೆ ನೀಡುತ್ತಿರುವ ಪರಿಕರಗಳು ಮತ್ತು ಉಪಕರಣಗಳ ಹಿಂದಿನ ಸಾಂಸ್ಕೃತಿಕ ಕ್ರೌರ್ಯ ಹಾಗೂ ವಿಕೃತಿಗಳನ್ನೂ ಪರಿಚಯಿಸಬೇಕಲ್ಲವೇ? ಶಾಲೆಯ ಅಂಗಳವನ್ನು ಇನ್ನೂ ವಿಕಸಿಸಬೇಕಾದ ಕುಸುಮಗಳ ಸುಂದರ ತಾಣವನ್ನಾಗಿ ಕಾಪಾಡಿಕೊಳ್ಳಬೇಕಾದ ನೈತಿಕ ಹೊಣೆ ಈ ಸಮಾಜವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯದೂ ಆಗಿದೆ.

ಒಂದು ಸಮಾಜವಾಗಿ ನಾವೆಲ್ಲೋ ಎಡವುತ್ತಿದ್ದೇವೆ. ಬಿಷಪ್ ಕಾಟನ್ ಶಾಲೆಯ ಕೆಲ ಮಕ್ಕಳ ಈ ಪ್ರಕರಣ ಒಂದು ಅಪಭ್ರಂಶ ಅಥವಾ ಅಪವಾದ ಅಲ್ಲ, ಅದು ನಾವು ಸಾಗುತ್ತಿರುವ ಹಾದಿಯ ಒಂದು ದೃಶ್ಯರೂಪಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು