ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕತೆ ಮತ್ತು ದೆಹಲಿ ದರ್ಬಾರ್

Last Updated 28 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

‘ಕರ್ನಾಟಕದ ಆಳ್ವಿಕೆ, ಕರ್ನಾಟಕದಿಂದಲೇ ಹೊರತು ದೆಹಲಿಯಿಂದಲ್ಲ’. ಎಂಬತ್ತರ ದಶಕದ ಮಧ್ಯಭಾಗದಲ್ಲಿ ಈ ಘೋಷಣೆ ಕೇಳಿಬಂದಾಗ ಇಡೀ ಕನ್ನಡನಾಡು ಮೈನವಿರೇಳಿಸಿಕೊಂಡಿತ್ತು. ಎಚ್‌.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್.ಪಟೇಲರನ್ನೊಳಗೊಂಡು ಹೊರಹೊಮ್ಮಿದ್ದ ಈ ಪೋಸ್ಟರುಗಳ ಹಿಂದೆ, ಇಡೀ ಭಾರತದ ಪ್ರಜಾಸತ್ತೆ ನಡೆದು ಬಂದ ದಾರಿ, ಪ್ರಜಾಸತ್ತೆಗೆ ಒದಗಿದ್ದ ದುಃಸ್ಥಿತಿ, ವಂಶಾಡಳಿತ ಮತ್ತು ಕೇಂದ್ರೀಕೃತ ವ್ಯವಸ್ಥೆಯ ಹೇರಿಕೆಯ ಬಿಂಬ ಇತ್ತು. ಭಾಷೆ ಮತ್ತು ಸಂಸ್ಕೃತಿಗಳ ಮೇಲಿನ ದಾಳಿಯ ಚಿತ್ರಣ ಇತ್ತು. ಬಹುಪರಾಕಿನ ಗುಲಾಮಿತನವೂ ಕಾಣುತ್ತಿತ್ತು.

1980ರಲ್ಲಿ ಕರ್ನಾಟಕ ಮತ್ತು ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗ ಳಿದ್ದವು. ಕೇಂದ್ರದಲ್ಲಿ, ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ದೊರೆತಿರುವಂತೆ ಆಗ ಪ್ರಧಾನಿ ಇಂದಿರಾ ಗಾಂಧಿಯವರಿಗೂ ನಿಚ್ಚಳ ಬಹುಮತ ಇತ್ತು. ಮುಖ್ಯಮಂತ್ರಿಗಳ ಬದಲಾವಣೆಯು ಹೈಕಮಾಂಡಿನ ಕೃಪಾಕಟಾಕ್ಷದ ಮೇಲೆ ನಿಂತ ಭಿಕ್ಷಾಪಾತ್ರೆಯಾಗಿತ್ತು. ಆಂಧ್ರದಲ್ಲಿ ಹೈಕಮಾಂಡ್ ಅವಕೃಪೆಗೆ ಒಳಗಾಗಿ ಮುಖ್ಯಮಂತ್ರಿಗಳು ಬದಲಾಗುತ್ತಿದ್ದರು. ಟಿ. ಅಂಜಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲ. ಹೈದರಾಬಾದಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೀವ್ ಗಾಂಧಿ ಭಾಗವಹಿಸಿದ್ದರು. ಅವರ ಕೃಪಾಕಟಾಕ್ಷಕ್ಕಾಗಿ ನಾಯಕರ ದಂಡು ನಾಮುಂದು ತಾಮುಂದು ಎಂದು ವೇದಿಕೆಯೇರಲು ಮುಗಿಬಿದ್ದಿತು. ಆಗ ಅಂಜಯ್ಯ ವೇದಿಕೆ ಏರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾಗ ರಾಜೀವರ ಸಿಟ್ಟು ನೆತ್ತಿಗೇರಿತು. ಅವರಿಗೆ ಮುಖ್ಯಮಂತ್ರಿಯ ಗುರುತು ಹತ್ತಿತೋ ಇಲ್ಲವೋ ಗೊತ್ತಿಲ್ಲ, ಅಂಜಯ್ಯನವರ ಕುತ್ತಿಗೆ ಹಿಡಿದು ಕೆಳಗೆ ದಬ್ಬಿದರು ಎಂಬುದು ಆಗಿನ ಮುದ್ರಣ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ.

ಇದರಿಂದ ಇಡೀ ಆಂಧ್ರದ ಸ್ವಾಭಿಮಾನ ಕೆಣಕಿ ದಂತಾಯಿತು! ಕೃಷ್ಣ- ರಾಮನ ಪಾತ್ರಗಳಿಂದ ಮನೆ ಮಾತಾಗಿದ್ದ ಎನ್.ಟಿ.ರಾಮರಾವ್ ರಾಜಕಾರಣಕ್ಕೆ ಧುಮುಕಲು ಉತ್ಸುಕರಾಗಿದ್ದ ಕಾಲದಲ್ಲೇ, ಮುಖ್ಯಮಂತ್ರಿಯೊಂದಿಗೆ ರಾಜೀವ್‌ ನಡೆದುಕೊಂಡ ರೀತಿಯು ಆಂಧ್ರದ ಸ್ವಾಭಿಮಾನಕ್ಕೆ ಮಾಡಿದ ಅವಮಾನವೆಂದು ಮನಗಂಡು ಜನ ಕನಲಿ ಕೆಂಡವಾದರು. ಅವರ ಸ್ವಾಭಿ ಮಾನವು ತೆಲುಗುದೇಶಂನ ವಿಜಯಯಾತ್ರೆಯಾಗಿ ಹೊರಹೊಮ್ಮಿತು. ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಮುಳುವಾಗಿ ಪರಿಣಮಿಸಿತು ಅಂಜಯ್ಯನವರಿಗೆ ರಾಜೀವರು ಮಾಡಿದ್ದ ಅವಮಾನ.

ಅದೇ ಸಂದರ್ಭದಲ್ಲಿ, ಕರ್ನಾಟಕದಲ್ಲೂ 35 ವರ್ಷ ಆಳಿದ್ದ ಕಾಂಗ್ರೆಸ್‌ನ ಹೈಕಮಾಂಡ್‌ ಸಂಸ್ಕೃತಿಯ ವಿರುದ್ಧ ವಿರೋಧ ಪಕ್ಷಗಳು ಇನ್ನಿಲ್ಲದ ವಿಮರ್ಶೆಯಲ್ಲಿ ತೊಡಗಿದ್ದವು. ಅಂದಿನ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಸಂಜಯ್‌ ಗಾಂಧಿಯವರ ಆಯ್ಕೆಯಾಗಿದ್ದರೇ ವಿನಾ ಶಾಸಕರ ಆಯ್ಕೆಯಾಗಿರ ಲಿಲ್ಲ ಅಥವಾ ಜನರ ಆಯ್ಕೆಯೂ ಆಗಿರಲಿಲ್ಲ. ಅಂದು ಬಹುತೇಕರ ನಿರೀಕ್ಷೆಯಲ್ಲಿ ಬಂಗಾರಪ್ಪನವರಿದ್ದರು!

ಹೈಕಮಾಂಡಿನ ಅರಸೊತ್ತಿಗೆಯ ಆಳ್ವಿಕೆ, ಜನರ ಮತ್ತು ರಾಜ್ಯದ ನಿರೀಕ್ಷೆಗಳನ್ನು ಬುಡಮೇಲು ಮಾಡುವ ಹೇರಿಕೆಯ ವಿರುದ್ಧ ಜನ ಕೊಟ್ಟ ಉತ್ತರ ರೂಪವಾಗಿ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಆನಂತರ ಅಧಿಕಾರ ಕಳೆದುಕೊಂಡಿತು. ಬಳಿಕ ಎಲ್ಲ ಅವಧಿಗಳಲ್ಲೂ ಅಧಿಕಾರವನ್ನು ಕಾಂಗ್ರೆಸ್ ತಿಣುಕಾಡುತ್ತಲೇ ಪಡೆದಿರುವುದನ್ನು ಗಮನಿಸಬೇಕಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ನ ನೆಲಕಚ್ಚುವಿಕೆ ಇತ್ತೀಚೆಗೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಅಸ್ತಿತ್ವಕ್ಕಾಗಿ ಸೆಣಸಬೇಕಾದ ಸ್ಥಿತಿ ಇದೆ.

ಕರ್ನಾಟಕದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪನವರು ಎದುರಿಸುತ್ತಿರುವ ಸಂಕಟ ನೋಡಿ ಇಷ್ಟೆಲ್ಲ ಹೇಳಬೇಕಾಗಿದೆ! ಅಹಿರ್ನಿಶಿ ದುಡಿದು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಈ ಜನನಾಯಕನಿಗೆ ಹೈಕಮಾಂಡ್‌ ಅದಾವ ಪ್ರಮಾಣದಲ್ಲಿ ಉರಿ ಹತ್ತಿಸುತ್ತಿದೆ ಎಂದರೆ, ಮತ್ತೆ ಮತ್ತೆ ಮುಟ್ಟಿ ನೋಡಿಕೊಂಡರೂ ಇವರಿಗೆ ಕೆರೆದ ಗಾಯಗಳೇ ಕಾಣಸಿಗುತ್ತಿವೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು, ಮಂತ್ರಿಗಳನ್ನು ತೆಗೆದುಕೊಳ್ಳಲು, ಖಾತೆ ಹಂಚಲು ಮತ್ತೆ ಮತ್ತೆ ದೆಹಲಿಗೆ ಅಲೆಸಿದ್ದನ್ನು ನೋಡಿದರೆ ಅಯ್ಯೋ ಎನಿಸದಿರದು. ಮೂವರು ಉಪ ಮುಖ್ಯಮಂತ್ರಿಗಳನ್ನು ಅವರ ತಲೆ ಮೇಲೆ ಕೂರಿಸಿರುವು ದನ್ನು ನೋಡಿದರೆ, ಹೈಕಮಾಂಡ್ ಇನ್ನು ಮುಂದೆ ಯಾವ ಪ್ರಾದೇಶಿಕ ನಾಯಕತ್ವಕ್ಕೂ ಬೆಲೆ ಕೊಡದೆ ತನ್ನ ಬಹುಮತದ ಅಹಂಕಾರ ತೋರಲು ಹೊರಟಿರುವುದು ಮೇಲ್ನೋಟಕ್ಕೇ ಕಾಣಿಸುವಂತಿದೆ.

ಒಕ್ಕೂಟ ವ್ಯವಸ್ಥೆಯ ಗಟ್ಟಿತನಕ್ಕೆ ಕಾರಣವಾಗಿರುವ ಪ್ರಾದೇಶಿಕ ನಾಯಕತ್ವವನ್ನು ಪುಡಿ ಪುಡಿ ಮಾಡಬೇಕೆಂಬ ಹವಣಿಕೆಯತ್ತ ಹೈಕಮಾಂಡ್‌ ಹೋಗುತ್ತಿದೆ ಎನಿಸದಿರದು. 70– 80ರ ದಶಕಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಡಿದ ತಪ್ಪುಗಳನ್ನೇ ಈಗ ಬಿಜೆಪಿಯೂ ಮಾಡುತ್ತಿದೆಯೇ? ಇದೀಗ ಕಾಂಗ್ರೆಸ್‌ಗೆ ಆಗಿರುವ ಗತಿ ಮುಂದಿನ ದಿನಗಳಲ್ಲಿ ಬಿಜೆಪಿಗೂ ಆಗಲಿದೆಯೇ? ಜನಸಮುದಾಯದಿಂದ ಬಂದ ಒಬ್ಬೊಬ್ಬರೇ ನಾಯಕರನ್ನು ಕೇಂದ್ರೀಕೃತ ವ್ಯವಸ್ಥೆಯೊಂದು ಮಟ್ಟ ಹಾಕುತ್ತಿರುವುದನ್ನು ನೋಡಿದರೆ ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾಗಳಂತೆ ಕರ್ನಾಟಕದಲ್ಲೂ ಪ್ರಾದೇಶಿಕ ಶಕ್ತಿಗಳು ಒಗ್ಗೂಡಿ ಕನ್ನಡತನವನ್ನು ದೆಹಲಿಯ ಪಾರ್ಲಿಮೆಂಟ್ ಭವನಕ್ಕೆ ತೋರಿಸುವ ದಿನ ಬಂದರೂ ಬರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT