ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಬಂಗಾಳ: ಮೇಲೆದ್ದ ದಲಿತ ರಾಜಕಾರಣ

ರಾಜ್ಯದಲ್ಲಿ ಬಿಜೆಪಿ ಮತ್ತು ದಲಿತ ರಾಜಕಾರಣ ಎರಡೂ ಒಟ್ಟೊಟ್ಟಿಗೆ ಗಟ್ಟಿಗೊಳ್ಳುತ್ತಿರುವುದು ಹೆಚ್ಚು ಚರ್ಚೆಗೆ ಒಳಪಡಬೇಕಾದ ಸಂಗತಿಯಾಗಿದೆ
Last Updated 10 ಮೇ 2021, 19:31 IST
ಅಕ್ಷರ ಗಾತ್ರ

ಜಿದ್ದಾಜಿದ್ದಿನ ಚುನಾವಣಾ ಕಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸಿದೆ. ಮಮತಾ ಬ್ಯಾನರ್ಜಿ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ದೊಡ್ಡ ಇತಿಹಾಸವಿರುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ನೆಲಕಚ್ಚಿವೆ. ಲೆಕ್ಕಕ್ಕೆ ಇಲ್ಲದಂತೆ ಇದ್ದ ಬಿಜೆಪಿ, 77 ಶಾಸಕರೊಂದಿಗೆ ಪ್ರಬಲ ವಿರೋಧ ಪಕ್ಷವಾಗಿ ಎದ್ದು ನಿಂತಿದೆ.

ಈ ಚುನಾವಣೆಯು ಪಶ್ಚಿಮ ಬಂಗಾಳದಲ್ಲಿ ‘ಭದ್ರಲೋಕ’ ಎಂದೇ ಗುರುತಿಸಲಾಗುವ ಮುಂದು ವರಿದ ಜಾತಿಗಳ ಪ್ರಾಬಲ್ಯಕ್ಕೆ ಏಟು ಕೊಟ್ಟಿದೆ. ಮಾತ್ರ ವಲ್ಲ, ದಲಿತ ರಾಜಕಾರಣದ ಹೊಸ ಅಲೆ ಮೇಲೇಳಲು ಕಾರಣವಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ದಲಿತ ರಾಜಕಾರಣ ಎರಡೂ ಒಟ್ಟೊಟ್ಟಿಗೆ ಗಟ್ಟಿಗೊಳ್ಳುತ್ತಿರುವುದು ಹೆಚ್ಚು ಚರ್ಚೆಗೆ ಒಳಪಡಬೇಕಾದ ಸಂಗತಿ ಯಾಗಿದೆ.

ಶೇ 23ರಷ್ಟು ಎಸ್‌ಸಿ, ಶೇ 6ರಷ್ಟು ಎಸ್‌ಟಿ ಜನಸಂಖ್ಯೆ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ನಾಮಶೂದ್ರ, ರಾಜಬಂಶಿ, ಬೌರಿ, ಪೌಂಡ್ರ, ಬಾಗಡಿ, ಚಮ್ಮಾರ ಪ್ರಮುಖ ದಲಿತ ಜಾತಿಗಳು. ಇಲ್ಲಿ 68 ಎಸ್‌ಸಿ, 16 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಅತಿಹೆಚ್ಚು ಪರಿಶಿಷ್ಟ ಜಾತಿಯವರಿರುವ ದೇಶದ ಮೂರನೇ ರಾಜ್ಯವಾದರೂ ದಲಿತ ರಾಜಕಾರಣ, ದಲಿತ ನಾಯಕತ್ವ ಮುನ್ನೆಲೆಗೆ ಬಂದಿರಲಿಲ್ಲ. 2019ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ 10 ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ 5 ಹಾಗೂ ಎರಡೂ ಎಸ್‌ಟಿ ಮೀಸಲು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತು.

ಈ ಬೆಳವಣಿಗೆ ಟಿಎಂಸಿಯ ರಣನೀತಿ ನಿರೂಪಕ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಚುನಾವಣೆಯ ದಿನಾಂಕ ಘೋಷಣೆಯಾದ ಮರುದಿನವೇ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದ ಟಿಎಂಸಿ, 68 ಎಸ್‌ಸಿ ಮೀಸಲು ಕ್ಷೇತ್ರವಲ್ಲದೇ 11 ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೆಟ್ ನೀಡಿತು. ಹಾಗೆಯೇ ಮುಸ್ಲಿಮರಿಗೆ ಕೊಡುತ್ತಿದ್ದ 60 ಸ್ಥಾನಗಳನ್ನು 44ಕ್ಕೆ ಇಳಿಸಿತು.

ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೆಟ್ ಕೊಡುವ ಪ್ರಯೋಗವನ್ನು ಬಿಜೆಪಿ 2016ರಲ್ಲೇ ಮಾಡಿತ್ತು. ಈ ಸಲ ಬಿಜೆಪಿ, ಟಿಎಂಸಿಗಿಂತಲೂ ಮುಂದೆ ಹೋಯಿತು. 68 ಎಸ್‌ಸಿ ಮೀಸಲು ಕ್ಷೇತ್ರಗಳ ಜೊತೆಗೆ 27 ಸಾಮಾನ್ಯ ಕ್ಷೇತ್ರಗಳಲ್ಲಿಯೂ ದಲಿತರಿಗೆ ಟಿಕೆಟ್ ನೀಡಿತು. ಇದು ದಲಿತ ರಾಜಕಾರಣದಲ್ಲಾದ ದೊಡ್ಡ ಬೆಳವಣಿಗೆ.

ಈ ಸಲದ ಚುನಾವಣೆಯ ಫಲಿತಾಂಶದಲ್ಲಿ ಟಿಎಂಸಿ 213 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ನಿರ್ಮಿಸಿತಾದರೂ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿನ ಗೆಲುವು 50ರಿಂದ 36ಕ್ಕೆ ಕುಸಿದಿದೆ. ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 8 ದಲಿತ ಅಭ್ಯರ್ಥಿಗಳು ಗೆದ್ದು ಟಿಎಂಸಿ ಹೆಮ್ಮೆಪಡುವಂತೆ ಮಾಡಿದ್ದಾರೆ. ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯಿಂದ 32 ಅಭ್ಯರ್ಥಿಗಳು ಗೆದ್ದರೆ, ‘ಹೊಸ ಪ್ರಯೋಗ’ದಿಂದ ಬಿಜೆಪಿಗೆ ಮೂವರು ಹೆಚ್ಚುವರಿ ದಲಿತ ಶಾಸಕರು ಸಿಕ್ಕಿದ್ದಾರೆ.

ಎಸ್‌ಟಿ ಸಮುದಾಯದಿಂದ ಟಿಎಂಸಿಯಿಂದ 10, ಬಿಜೆಪಿಯಿಂದ 9 ಅಭ್ಯರ್ಥಿಗಳು ಗೆದ್ದಿದ್ದಾರೆ. ಇವರಲ್ಲಿ ಟಿಎಂಸಿಯ ಒಬ್ಬರು, ಬಿಜೆಪಿಯ ಇಬ್ಬರು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದವರು. ರಾಜ್ಯದಲ್ಲಿ ಶೇ 27ರಷ್ಟಿರುವ ಮುಸ್ಲಿಮರ ಸಗಟು ಮತಗಳು ಟಿಎಂಸಿಗೆ ಒಲಿದಿದ್ದು ಮೀಸಲು ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ಒಟ್ಟಾರೆ ಬಿಜೆಪಿಯಿಂದ ಗೆದ್ದ 77 ಶಾಸಕರಲ್ಲಿ 44, ಅಂದರೆ ಶೇ 57ರಷ್ಟು ಮಂದಿ ಪರಿಶಿಷ್ಟ ಜಾತಿ, ಪಂಗಡದವರಾಗಿದ್ದಾರೆ. ಬ್ರಾಹ್ಮಣ, ಕ್ಷತ್ರಿಯ ಇತ್ಯಾದಿ ಪ್ರಬಲ ಜಾತಿಗಳಿಂದ ಟಿಎಂಸಿಗೆ 102 ಶಾಸಕರು ದಕ್ಕಿದರೆ ಬಿಜೆಪಿಯಿಂದ ಗೆದ್ದವರು 25. ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಬಲು ಕಡಿಮೆ. ಈ ಸಲ ಟಿಎಂಸಿಯಿಂದ 15, ಬಿಜೆಪಿಯಿಂದ 8 ಒಬಿಸಿ ಶಾಸಕರು ಆಯ್ಕೆಯಾಗಿದ್ದಾರೆ.

ಅಬ್ಬರದ ಪ್ರಚಾರದಿಂದ ಗಮನ ಸೆಳೆದಿದ್ದ ಬಿಜೆಪಿಗಿದ್ದದ್ದು ಏರು ಹಾದಿ. ಶೇ 70.54ರಷ್ಟಿರುವ ಹಿಂದೂಗಳ ಮತಗಳಲ್ಲೇ ಅದು ಬಹುಮತ ಸಾಧಿಸ ಬೇಕಿತ್ತು. ಬಿಜೆಪಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿತ್ತಾದರೂ ಹೆಚ್ಚಿನ ಮತಗಳಿಕೆ ಸಾಧ್ಯ ವಾಗಿಲ್ಲ. ಒಟ್ಟು ಮತದಾನದಲ್ಲಿ ಬಿಜೆಪಿ ಶೇ 38.1ರಷ್ಟು ಮತ ಗಳಿಸಿದೆಯಾದರೂ ಹಿಂದೂಗಳಲ್ಲಿ ಶೇ 54ರಷ್ಟು ಮತ ಪಡೆದಿದೆ. ಅದೇ ಟಿಎಂಸಿಗೆ ಮುಸ್ಲಿಂ ಮತಗಳು ಸಗಟಾಗಿ ಬಂದಿವೆಯಾದರೂ ಹಿಂದೂಗಳ ಮತ ಬಂದಿರುವುದು ಶೇ 31ರಷ್ಟು ಮಾತ್ರ.

ದೇಶದಲ್ಲಿ ಪರಿಶಿಷ್ಟ ಜಾತಿಯವರ ಅತಿ ಹೆಚ್ಚು ಜನಸಾಂದ್ರತೆ ಇರುವ ಕೂಚ್‌ಬಿಹಾರ್ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 7ರಲ್ಲಿ, ಟಿಎಂಸಿ 2ರಲ್ಲಿ ಗೆದ್ದಿವೆ. ಅರವತ್ತರ ದಶಕದಲ್ಲಿ ನಕ್ಸಲ್ ಚಳವಳಿಯ ಬೀಜ ಬಿತ್ತಿದ ನಕ್ಸಲ್‌ಬಾರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಆನಂದಮಯ ಬರ್ಮನ್ ಗೆದ್ದಿದ್ದಾರೆ.

ತಮ್ಮ ಆತ್ಮಕಥೆ ‘ಇಂಟರಾಗೇಟಿಂಗ್‌ ಮೈ ಚಾಂಡಾಲ್‌ ಲೈಫ್‌’ ಮೂಲಕ ದೇಶದ ಗಮನ ಸೆಳೆದಿದ್ದ, ಶಾಲೆಯ ಮುಖ ನೋಡದ ರಿಕ್ಷಾ ಚಾಲಕ, ಲೇಖಕ ಮನೋರಂಜನ್ ಬ್ಯಾಪಾರಿ ಅವರು ಬಾಲಗಡ ಮೀಸಲು ಕ್ಷೇತ್ರದಿಂದ ಟಿಎಂಸಿ ಟಿಕೆಟ್ ಪಡೆದು ವಿಧಾನ ಸಭೆ ಪ್ರವೇಶಿಸಿದ್ದಾರೆ. ಪುಟ್ಟ ಗುಡಿಸಲಲ್ಲಿ ವಾಸಿಸುವ ಬಿಜೆಪಿ ಕಾರ್ಯಕರ್ತೆ ಚಂದನಾ ಬೌರಿ ಸಲ್ತೋರಾ ಮೀಸಲು ಕ್ಷೇತ್ರದಿಂದ ಗೆದ್ದಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ಬಂಗಾಳದಲ್ಲಿ ಹಿಂಸಾಚಾರ ಮುಂದುವರಿದಿದೆ. ಈಗ ಏಟು ತಿನ್ನುತ್ತಿರು ವವರಲ್ಲಿ ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸಿದ ದಲಿತರು. ಪಾಠ ಕಲಿತಿರುವ ಮಮತಾ ಇದೆಲ್ಲವನ್ನೂ ನಿಭಾಯಿಸಿಯಾರು. ಆದರೆ ಬಂಗಾಳದಲ್ಲಿ ಮೇಲೆದ್ದಿ ರುವ ದಲಿತ ರಾಜಕಾರಣ ಇಲ್ಲಿಗೇ ನಿಲ್ಲುವುದಿಲ್ಲ.

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT