ಬುಧವಾರ, ಜುಲೈ 6, 2022
23 °C
ನದಿಗಳ ಆರೋಗ್ಯ ಕಾಪಾಡುವ ದಿಸೆಯಲ್ಲಿ ಒಡಂಬಡಿಕೆಗಳಾಗಿವೆ, ಪ್ರಯತ್ನಗಳಾಗಿವೆ. ಆದರೆ ಅಂದುಕೊಂಡ ಗುರಿ ತಲುಪಲು ಸಾಧ್ಯವಾಗಿಲ್ಲ

ಸಂಗತ | ಅಣೆಕಟ್ಟಿನಿಂದ ನದಿ ರಕ್ಷಿಸಬೇಕಿದೆ!

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಭೂಮಿಯ ಮೇಲೆ ವಾಸವಿರುವ ನಾವೆಲ್ಲ ಪ್ರತಿದಿನ ನಮ್ಮೆಲ್ಲರ ಒಟ್ಟು ತೂಕದಷ್ಟು ತ್ಯಾಜ್ಯವನ್ನು ನದಿ, ಸರೋವರ, ಸಾಗರಗಳಿಗೆ ಸೇರಿಸುತ್ತಿದ್ದೇವೆ! ಬದುಕು, ಕೃಷಿ, ನಾಗರಿಕತೆ ಕಲಿಸಿದ ನದಿಗಳು ಮಾಲಿನ್ಯದ ಮಡುಗಳಾಗಿವೆ. ವಿದ್ಯುತ್, ನೀರಾವರಿ, ಮೀನುಗಾರಿಕೆ, ವ್ಯವಸಾಯಗಳಿಗಾಗಿ ಡ್ಯಾಮು ಕಟ್ಟಿ, ನಾಲೆ ಕೊರೆದು ನದಿಗಳ ಕತ್ತು ಹಿಸುಕಲಾಗುತ್ತಿದೆ. ನದಿಗಳಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟು ನಿರ್ಮಾಣದ ವಿರುದ್ಧ ಜಾಗೃತಿ ಮೂಡಿಸುವ ‘ಇಂಟರ್‌ನ್ಯಾಷನಲ್ ಡೇ ಫಾರ್ ಆ್ಯಕ್ಷನ್ ಆನ್ ರಿವರ್ಸ್’ ಇತ್ತೀಚೆಗಷ್ಟೇ ಬಂದುಹೋಗಿದೆ.

ನದಿ ಎಂದರೆ ಕೇವಲ ನೀರ ಹರಿವಿನ ತಾಣವಲ್ಲ. ಅದು ಜೀವನದಿ. ಆರೋಗ್ಯವಂತ ನದಿಗಳಿಲ್ಲದ ಭೂಮಿಯನ್ನು ಊಹಿಸಿಕೊಳ್ಳಲು ಅಸಾಧ್ಯ.

ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ಬ್ರೆಜಿಲ್‍ನ ಕುರಿಟಿಬಾದಲ್ಲಿ ಸಭೆ ಸೇರಿದ್ದ ವಿಶ್ವದ 20 ದೇಶಗಳು, ಅಣೆಕಟ್ಟುಗಳಿಂದ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ ಎಂದು ವಾದಿಸಿ, ವಿಶ್ವದಾದ್ಯಂತ ಅಣೆಕಟ್ಟುಗಳಿಂದ ನದಿಗಳನ್ನು ರಕ್ಷಿಸಬೇಕು ಎಂದು ಒತ್ತಾಯದ ನಿಲುವು ತಳೆದವು. ಅಷ್ಟೊತ್ತಿಗಾಗಲೇ ಅಭಿವೃದ್ಧಿಯ ದಾರಿ ತುಳಿದಿದ್ದ ಬಹುತೇಕ ದೇಶಗಳು, ಏರುತ್ತಿದ್ದ ಜನಸಂಖ್ಯೆಯ ಹಸಿವು ನೀಗಿಸಲು ಬೃಹತ್ ಕೃಷಿ ಯೋಜನೆಗಳನ್ನು ಹಮ್ಮಿಕೊಂಡು, ಜಮೀನುಗಳಿಗೆ ನೀರುಣಿಸಲು ಅಣೆಕಟ್ಟು ನಿರ್ಮಿಸಿ ಜಲ ವಿದ್ಯುತ್ ಉತ್ಪಾದನೆಗೂ ಕೈ ಹಾಕಿದ್ದವು. ಅಣೆಕಟ್ಟುಗಳ ನೀರಿನಲ್ಲಿ ಕೋಟ್ಯಂತರ ಹೆಕ್ಟೇರ್ ಅರಣ್ಯ ಮುಳುಗಡೆಯಾಯಿತು. ಲಕ್ಷಾಂತರ ಜನ ನಿರಾಶ್ರಿತರಾದರು. ಪುನರ್ವಸತಿ ಯೋಜನೆಗಳು ಜನರ ಜೀವನವನ್ನು ಮತ್ತಷ್ಟು ಅತಂತ್ರಗೊಳಿಸಿದವು. ಜನ ಗ್ರಾಮ ತೊರೆದು ನಗರಗಳೆಡೆ ವಲಸೆ ಹೊರಟರು. ಸ್ಥಳ, ನೀರು, ಶುದ್ಧ ಗಾಳಿಗೆ ಪರದಾಡುತ್ತಿದ್ದ ಬೃಹತ್ ನಗರಗಳು ಮತ್ತಷ್ಟು ಕಂಗಾಲಾದವು.

ಬೃಹತ್ ಅಣೆಕಟ್ಟುಗಳು ಪರಿಸರಕ್ಕೆ ಪೂರಕವಲ್ಲ ಎಂದು ಬಲವಾಗಿ ಗೊತ್ತಿದ್ದರೂ ಹೊಸ ಯೋಜನೆಗಳು ತಲೆ ಎತ್ತುತ್ತಲೇ ಇವೆ. ಮಣಿಪುರ ರಾಜ್ಯದ ಬರಾಕ್ ನದಿಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಮೂರು ಬೃಹತ್ ಅಣೆಕಟ್ಟುಗಳಿಗೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. 193 ಮೆ.ವಾ. ವಿದ್ಯುತ್‍ಗಾಗಿ ಪಬ್ರಮ್, 67 ಮೆ.ವಾ.ಗಾಗಿ ಖೋನ್‍ಜೆಮ್ ಮತ್ತು 1500 ಮೆ.ವಾ. ವಿದ್ಯುತ್‍ಗಾಗಿ ಟಿಪಾಯ್‍ಮುಖ್ ಡ್ಯಾಂಗಳ ನಿರ್ಮಾಣ ಪ್ರಗತಿಯಲ್ಲಿದೆ. ಸಿಡಿಮದ್ದಿನ ಬಳಕೆ, ಮರಳು ತೆಗೆಯುವುದು, ಬಂಡೆಗಳನ್ನು ಸಿಡಿಸುವುದು ಮತ್ತು ಅರಣ್ಯ ಮುಳುಗಡೆಯಿಂದಾಗಿ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳು ಒತ್ತಡಕ್ಕೆ ಸಿಲುಕಿದ್ದರಿಂದ ನದಿಗಳ ಸ್ವಾಭಾವಿಕ ಹರಿವಿಗೆ ಅಡ್ಡಿಯಾಗಿದೆ.

ನದಿಯ ಆರೋಗ್ಯ ಕಾಪಾಡಬೇಕೆಂಬ ದಿಸೆಯಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಹಲವು ಒಡಂಬಡಿಕೆಗಳಾಗಿವೆ. ನದಿಗಳ ಶುದ್ಧೀಕರಣ, ನದಿ ಜೋಡಣೆ, ಅಣೆಕಟ್ಟು ನಿರ್ಮಾಣದಂಥ ಯೋಜನೆಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಸರ್ಕಾರಗಳು ಅಂದುಕೊಂಡ ಗುರಿ ತಲುಪಲಾಗದೆ ಒದ್ದಾಡುತ್ತಿವೆ. ಸುಧಾರಣೆ ಬಯಸುವ ದೇಶಗಳ ಶೇ 80ರಷ್ಟು ತ್ಯಾಜ್ಯ ಯಾವ ಸಂಸ್ಕರಣೆಗೂ ಒಳಗಾಗದೆ ನೇರವಾಗಿ ನದಿಗಳನ್ನೇ ಸೇರುತ್ತದೆ.

ಭಾರತದ ನಾಲ್ಕು ಸಾವಿರ ನದಿಗಳಲ್ಲಿ ಅರ್ಧದಷ್ಟು ಸುಸ್ಥಿತಿಯಲ್ಲಿಲ್ಲ. ಪ್ರಮುಖ ನದಿಗಳ ದಡದ ಮೇಲೆ ಬೃಹತ್ ನಗರಗಳು ತಲೆಯೆತ್ತಿವೆ. ಅಲ್ಲಿನ ಉದ್ಯಮ, ಮನೆ, ಮತ್ತಿತರ ರಚನೆಗಳಿಂದ ಹರಿಯುವ ತ್ಯಾಜ್ಯ ನೇರ ನದಿಗೇ ಸೇರಿ, ಶುದ್ಧ ಕುಡಿಯುವ ನೀರು, ಬಳಕೆಯ ನೀರಿನ ಅಭಾವ ತಲೆದೋರಿದೆ. ಕೆಲವು ನದಿಗಳ ನೀರಿನ ಬಿಒಡಿ (biological oxygen demand- ನೀರು ಕುಡಿಯಲು, ಬಳಸಲು ಯೋಗ್ಯವೋ ಅಲ್ಲವೋ ಎಂದು ನಿರ್ಧರಿಸುವ ಗುಣಾಂಕ) ಐದನ್ನು ದಾಟಿದೆ. ಕರ್ನಾಟಕದ ಪ್ರಮುಖ ನದಿಗಳ ಅತ್ಯಂತ ಕಲುಷಿತವಾದ 17 ತಾಣಗಳನ್ನು ಗುರುತಿಸಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ಹೀಗೇ ಮುಂದುವರಿದರೆ ನದಿಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಇಂಟರ್‌ನ್ಯಾಷನಲ್ ರಿವರ್ಸ್ ನೆಟ್‍ವರ್ಕ್, ನರ್ಮದಾ ಬಚಾವೋ ಆಂದೋಲನ, ಯುರೋಪಿಯನ್ ರಿವರ್ಸ್ ನೆಟ್‍ವರ್ಕ್, ಚಿಲಿಯ ಬಯೊಬಯೊ ಆ್ಯಕ್ಷನ್ ಗ್ರೂಪ್‌ಗಳು 25 ವರ್ಷಗಳಿಂದ ವಿಶ್ವದ ಎಲ್ಲ ನದಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿವೆ. ಕಳೆದ ವರ್ಷ ‘ನದಿಗಳ ಹಕ್ಕು’ ಎಂಬ ಧ್ಯೇಯದೊಂದಿಗೆ, ನದಿಗಳಿಗಾಗಿ ದುಡಿಯುವ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ, ನದಿಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಲಾಗಿತ್ತು. ನಾಗರಿಕರಿಗೆ ಹಕ್ಕುಗಳು ಇರುವಂತೆ ನದಿಗಳಿಗೂ ತಮ್ಮನ್ನು ತ್ಯಾಜ್ಯ ಮತ್ತು ಮಾಲಿನ್ಯಗಳಿಂದ ರಕ್ಷಿಸಿಕೊಳ್ಳುವ ಹಕ್ಕಿದೆ ಎಂಬುದು ನದಿ ತಜ್ಞರ ವಾದ. ವಿಚಾರ ಸಂಕಿರಣ, ಸಭೆ, ಕಾಲ್ನಡಿಗೆ ಜಾಥಾದ ಮೂಲಕ ಅರಿವು ಮೂಡಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆದವಾದರೂ ಕೋವಿಡ್ ಉಪಟಳದಿಂದಾಗಿ ಪೂರ್ಣ ಪ್ರಮಾಣದ ಚಟುವಟಿಕೆಗಳು ನಡೆಯಲಿಲ್ಲ. ಮಾನವನ ಅಟ್ಟಹಾಸ ಎಷ್ಟಿದೆಯೆಂದರೆ, ಅಮೆರಿಕದ ಮೊಂಟಾನಾ ರಾಜ್ಯದ 201 ಅಡಿ ಉದ್ದದ ಅತ್ಯಂತ ಸಣ್ಣ ನದಿ ರೋ ಕೂಡಾ ಕಲುಷಿತಗೊಂಡಿದೆ. ಕಳೆದ ವರ್ಷ ಸಮೀಪದ ಕಾರ್ಖಾನೆಯ ವಿಷದಿಂದಾಗಿ ನದಿಯ ತುಂಬ ಸಾಲ್ಮನ್ ಮೀನುಗಳು ಸತ್ತು ಬಿದ್ದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು