ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೇರ ಮಾರಾಟದ ‘ಸ್ಮಾರ್ಟ್‌’ ಉಪಾಯ

ಬಂಗಾರದ ಬೆಳೆಯ ಲಾಭ ಕೈಸೇರಲು ರೈತರು ಉಪಾಯ ಹೂಡಬೇಕಾಗಿದೆ
Last Updated 4 ಜುಲೈ 2021, 19:30 IST
ಅಕ್ಷರ ಗಾತ್ರ

ಕೋಲಾರದ ರೈತರೊಬ್ಬರು ಟೊಮ್ಯಾಟೊಗೆ ಬೆಲೆಯಿಲ್ಲ ಎಂಬ ಕಾರಣಕ್ಕೆ, ಟಿಪ್ಪರ್‌ನಲ್ಲಿ ಅದನ್ನು ತುಂಬಿಕೊಂಡು ಬಂದು ರಸ್ತೆಗೆ ಸುರಿದು ‘ಬೇಕೇ ಬೇಕು, ರೈತನಿಗೆ ಬೆಲೆ ಬೇಕು’ ಎಂದು ಕೂಗಿಕೊಳ್ಳುವ ದೃಶ್ಯವನ್ನು ಮಾಧ್ಯಮಗಳು ಪ್ರಸಾರ ಮಾಡಿದವು. ಹಾಗೆಯೇ ಕೋವಿಡ್ ಕಾರಣದಿಂದ ಸಾಗಣೆ ಸಾಧ್ಯವಾಗದೆ, ಕಲ್ಲಂಗಡಿ, ಹೂವಿನ ಬೆಳೆಗಳು, ತರಕಾರಿಗಳ ಮೇಲೆ ಗಿಡಸಹಿತವಾಗಿ ಟ್ರ್ಯಾಕ್ಟರ್ ಓಡಾಡಿಸಿ ನಾಶ ಮಾಡಿದ್ದನ್ನು ಕಂಡಿದ್ದೆವು.

ಕೋಟ್ಯಂತರ ಮಂದಿಗೆ ಆಹಾರ ಪದಾರ್ಥ ಬೆಳೆದುಕೊಟ್ಟು ಒಡಲು ತಂಪು ಮಾಡುವ ರೈತ, ತಾನೇ ಕಷ್ಟಪಟ್ಟು ಬೆಳೆದ ಫಸಲನ್ನು ಯಾವುದಕ್ಕೂ ಬಳಸದೆ ಹೀಗೆ ನಾಶ ಮಾಡಲು ಮುಂದಾದರೆ, ‘ಹರ ಕೊಲ್ಲಲ್ ಪರ ಕಾಯ್ವನೆ’ ಎಂದು ಕೇಳಬೇಕಾಗುತ್ತದೆ.

ಬೆಳೆದ ಫಸಲಿಗೆ ಬೆಲೆಯಿಲ್ಲ, ಮಾರುಕಟ್ಟೆಗೆ ಒಯ್ಯುವಂತಿಲ್ಲ ಎಂಬ ಹತಾಶೆ ಮೂಡಿದಾಗ ಅದು ಆಕ್ರೋಶವಾಗಿ ಪರಿವರ್ತನೆ
ಗೊಂಡರೆ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವಲ್ಲ. ಆದರೂ ಹತ್ತಾರು ಹೊಟ್ಟೆಗಳನ್ನು ತುಂಬಬೇಕಾದ ಆಹಾರ ಪದಾರ್ಥವನ್ನು ರೈತನ ಬೆವರಿಗೊಲಿದು ಭೂಮಿ ಕೊಟ್ಟಿರುವುದರ ಹಿಂದೆ ಒಂದು ಆಹಾರ ಸರಪಣಿಯ ಉದ್ದೇಶವೂ ಇದೆಯಲ್ಲವೇ?

ಬೆಲೆ ಇಲ್ಲದಾಗ ಸರ್ಕಾರ ಕಣ್ಮುಚ್ಚಿ ಕುಳಿತಿದೆ, ತರಕಾರಿಗಳನ್ನು ಕಾಪಿಡಲು ಸ್ಟೋರೇಜ್ ವ್ಯವಸ್ಥೆ ಕಲ್ಪಿಸಿಲ್ಲ... ಹೀಗೆ ಸರ್ಕಾರವನ್ನು ದೂಷಿಸುತ್ತ ಕುಳಿತುಕೊಳ್ಳುವ ಬದಲು, ಸಮಾನಮನಸ್ಕ ರೈತರು ಜೊತೆಗೂಡಿ, ಬೆಳೆದ ಫಸಲಿನ ಸದ್ಬಳಕೆಗೆ ಉಪಾಯ ಹುಡುಕಲು ಚಿಂತನೆ ಮಾಡಬೇಕಾಗಿದೆ.

ಅಡಿಕೆಗೆ ಬೆಲೆಯಿಲ್ಲದಾಗ ಅದರಿಂದ ಕಾಫಿಯಂತಹ ಪಾನೀಯದ ಹುಡಿ ತಯಾರಿಸಿದರು. ಕ್ಯಾಮ್ಕೋ ಸಂಸ್ಥೆ ಅಡಿಕೆ ಚೂರುಗಳನ್ನು ತುಪ್ಪದಲ್ಲಿ ಹುರಿದು ಗೋಡಂಬಿಯ ಜೊತೆಗೆ ಆಹಾರವಾಗಿ ತಿನ್ನುವ ಪ್ಯಾಕೆಟ್ಟುಗಳನ್ನು ಮಾರುಕಟ್ಟೆಗಿಳಿಸಿತು. ಕೋವಿಡ್ ಕಾರಣದಿಂದ ಹತ್ತಾರು ಎಕರೆಗಳಲ್ಲಿ ಕಲ್ಲಂಗಡಿ ಫಸಲು ಹಾಳಾಗುವ ಸ್ಥಿತಿ ಬಂದಾಗ ಶಿವಮೊಗ್ಗ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರೊಬ್ಬರು ವಿಶಿಷ್ಟ ಉಪಾಯ ಕೈಗೊಂಡರು. ಕಲ್ಲಂಗಡಿ ಹಣ್ಣುಗಳಿಂದ ಬೆಲ್ಲ ತಯಾರಿಸಿ, ಕಬ್ಬಿನ ರಸದ ಬೆಲ್ಲಕ್ಕಿಂತಲೂ ಇದು ಸ್ವಾದಿಷ್ಟವಾಗಿದೆ ಎಂದು ತೋರಿಸಿಕೊಟ್ಟರು. ಅವರ ಮಾತಿನ ಪ್ರಕಾರ, ಕಲ್ಲಂಗಡಿಯ ಬೆಲ್ಲಕ್ಕೆ ಬೆಲೆ ಕೊಂಚ ಹೆಚ್ಚಾದರೂ ಜನ ಗೊಣಗದೆ ಕೊಳ್ಳುತ್ತಿದ್ದಾರೆ.

ಟೊಮ್ಯಾಟೊ ಬೆಳೆದವರೆಲ್ಲರಿಗೂ ಕೆಚಪ್, ಜಾಮ್ ತಯಾರಿಸಿ ಮಾರುಕಟ್ಟೆ ಹುಡುಕುವುದು ಸುಲಭವಲ್ಲ ಎಂಬುದು ನಿಜ. ಆದರೆ ಬೆಳೆಗಾರನಿಂದ ಚಿಕ್ಕಾಸಿಗೆ ಖರೀದಿಸಿದ ಯಾವುದೇ ತರಕಾರಿ ಬಳಕೆದಾರನ ಬಟ್ಟಲಿನ ಬಳಿಗೆ ಬರುವಾಗ ಹತ್ತಾರು ಪಟ್ಟು ಹೆಚ್ಚು ಬೆಲೆ ಪಡೆಯುತ್ತದೆ. ಸಾಗಣೆ ವೆಚ್ಚ ಮತ್ತು ಕೈಯಿಂದ ಕೈಗೆ ಬದಲಾದಾಗ ಪ್ರತಿಯೊಬ್ಬನೂ ಪಡೆಯುವ ಲಾಭವನ್ನು ಒಟ್ಟುಗೂಡಿಸಿ ಅದನ್ನು ಉಪಯೋಗಿಸುವ ಕಟ್ಟಕಡೆಯ ವ್ಯಕ್ತಿ ಕೊಡಬೇಕಾಗುತ್ತದೆ. ಮಧ್ಯವರ್ತಿಗಳಿಲ್ಲದೆ ರೈತ ನೇರವಾಗಿ ಕಟ್ಟಕಡೆಯ ವ್ಯಕ್ತಿಯನ್ನು ಯಾಕೆ ತಲುಪಬಾರದು? ಕೋಲಾರದ ಮಾವಿನ ಹಣ್ಣಿರಲಿ, ಟೊಮ್ಯಾಟೊ ಇರಲಿ ಇವೆರಡನ್ನೂ ಬೆಳೆಯದ ಉಡುಪಿ, ದಕ್ಷಿಣ ಕನ್ನಡದಂತಹ ಜಿಲ್ಲೆಗಳಿಗೆ ತಲುಪುವಾಗ ಅದು ಎಷ್ಟು ಕೈಗಳನ್ನು ದಾಟಿ ಬಂದಿದೆಯೋ ಅವರೆಲ್ಲರಿಗೂ ಬೆಳೆದವನಿಗಿಂತ ಹೆಚ್ಚು ಲಾಭ ಬಂದಿರುವುದು ನಿಸ್ಸಂಶಯ. ಹೀಗಿರುವಾಗ ಕೆಲವು ರೈತರು ಜತೆಗೂಡಿ, ತಾವು ಬೆಳೆದ ವಸ್ತುಗಳು ವಿರಳವಾಗಿರುವ ಹತ್ತಾರು ಊರುಗಳಿಗೆ ಹೋಗಿ ನೇರ ಮಾರಾಟ ಮಾಡಬಹುದಲ್ಲವೇ? ಇದರಿಂದ ಬಳಕೆದಾರರಿಗೂ ತಾಜಾ ತರಕಾರಿ, ಹಣ್ಣುಗಳು ಒಂದಿಷ್ಟು ಕಡಿಮೆ ಬೆಲೆಗೂ ಸಿಗಬಹುದು ತಾನೆ!

ದೊಡ್ಡಬಳ್ಳಾಪುರದ ಲೋಕವಿಖ್ಯಾತ ತೂಬುಗೆರೆ ಹಲಸಿನ ಹಣ್ಣಿಗೆ ದಲ್ಲಾಳಿಗಳು ಕೊಡುತ್ತಿದ್ದ ಬೆಲೆ ನಾಮಕಾವಾಸ್ತೆಆಗಿತ್ತು. ಅಲ್ಲಿರುವ ರೈತರು ಬೆಂಗಳೂರಿಗೆ ಹೋದಾಗ ಗೊತ್ತಾದದ್ದು ಒಂದು ತೊಳೆ ಹತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ನಿಜ
ಸಂಗತಿ. ದಲ್ಲಾಳಿಯು ದೊಡ್ಡ ಹಣ್ಣಿಗೇ ಅಷ್ಟು ಬೆಲೆ ಕೊಡುತ್ತಿರಲಿಲ್ಲ. ರೈತರು ದೇಶದಲ್ಲೇ ಮೊದಲನೆಯದಾದ ಹಲಸು ಬೆಳೆಗಾರರ ಸಹಕಾರ ಸಂಘ ಕಟ್ಟಿದರು. ಇಡೀ ಊರಿನ ರೈತರು ಬೆಳೆದ ಹಲಸಿಗೆ ಬೆಲೆ ನಿರ್ಧರಿಸುವ ಹಕ್ಕು ಸಂಘದ ಕೈಗೆ ಬಂದಾಗ ದಲ್ಲಾಳಿಗಳು ಶರಣಾದರು. ಈಗ ಅಲ್ಲಿ ಹಲಸು ಬೆಳೆಯುವ ಯಾವ ರೈತನಿಗೂ ನಷ್ಟವಿಲ್ಲ.

ಕರ್ನಾಟಕಕ್ಕಿಂತ ಗಾತ್ರದಲ್ಲಿ ಇಸ್ರೇಲ್ ಚಿಕ್ಕದಾದರೂ ಕೃಷಿ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಅಲ್ಲಿ ಯಾವ ತರಕಾರಿಗೆ ಅಧಿಕ ಬೇಡಿಕೆಯಿದೆ ಎಂಬುದನ್ನು ಜಾಗತಿಕ ಮಾರುಕಟ್ಟೆಗಳ ಸ್ಥಿತಿಗತಿ ಅಧ್ಯಯನ ಮಾಡಿದ ಬಳಿಕ ಅಂತಹ ವ್ಯವಸಾಯಕ್ಕೆ ರೈತರನ್ನು ತೊಡಗಿಸುವ ವ್ಯವಸ್ಥೆಯಿದೆ. ಬೀಜ ಬಿತ್ತನೆ, ಗೊಬ್ಬರ ಪೂರೈಕೆ, ಕೀಟನಾಶಕ ಬಳಕೆ ಎಲ್ಲವೂ ವಿಜ್ಞಾನಿಗಳ ಮಾರ್ಗದರ್ಶನ ದಲ್ಲಿ ನಡೆಯುತ್ತವೆ. ಹೀಗಾಗಿ ಫಸಲು ಖಚಿತವಾಗಿ ಕೈಸೇರುತ್ತದೆ. ಕಳಪೆ ಬೀಜ, ಖೊಟ್ಟಿ ಗೊಬ್ಬರ ಕೊಟ್ಟು ಅನ್ನದಾತನನ್ನು ಶೋಷಿಸುವ ಕಥೆಗಳಿಗೆ ಅಲ್ಲಿ ಅವಕಾಶವಿಲ್ಲ.

ಭಾರತದಲ್ಲಿ ರೈತನ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ವೈಫಲ್ಯವೇ ರೈತನ ಹತಾಶೆಗೆ ಒಂದು ಕಾರಣವಾಗಿದೆ. ಶ್ರಮಪಟ್ಟು ಉಳುಮೆ ಮಾಡುವ ರೈತ ತನ್ನ ಬೆಳೆಯ ಮಾರಾಟಕ್ಕೆ ತಾನೇ ಉಪಾಯ ಹುಡುಕಬೇಕಾಗಿದೆ. ಅದು ಬಿಟ್ಟು, ಬಂಗಾರದಂತಹ ಬೆಳೆಯನ್ನು ರಸ್ತೆಗೆ ತಂದು ಸುರಿಯುವುದು ಅಕ್ಷಮ್ಯ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT