ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಚಿಕಿತ್ಸೆಗೆ ಬೇಕು ನಂಬಿಕೆಯ ಅಡಿಪಾಯ

Published : 31 ಜನವರಿ 2024, 23:30 IST
Last Updated : 31 ಜನವರಿ 2024, 23:30 IST
ಫಾಲೋ ಮಾಡಿ
Comments

ಲಿವರ್ ಕ್ಯಾನ್ಸರ್‌ನಿಂದ ತಂದೆಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಖಿನ್ನತೆಗೊಳಗಾಗಿ ಚಿಕಿತ್ಸೆಗೆಂದು ಬಂದಿದ್ದರು. ಆಗ ಅವರು ಹೇಳಿದ ಮಾತು- ‘ನಮ್ಮ ತಂದೆಗೆ ಕ್ಯಾನ್ಸರ್ ಅಂತ ಗೊತ್ತಾದ ತಕ್ಷಣ ಪರಿಣತ ವೈದ್ಯರಿಂದ ಚಿಕಿತ್ಸೆ ಕೊಡಿಸಿದೆವು. ಔಷಧಿ ಕೊಟ್ಟಿದ್ದೇ ಸ್ಥಿತಿ ಗಂಭೀರವಾಗಿ ಇಪ್ಪತ್ತೇ ದಿನಗಳಲ್ಲಿ ತೀರಿಕೊಂಡರು. ಆ ಡಾಕ್ಟರ ಹತ್ತಿರ ಕರೆದುಕೊಂಡು ಹೋಗದಿದ್ದರೆ, ಅವರು ಕೆಲವು ತಿಂಗಳುಗಳಾದರೂ ಬದುಕಿರುತ್ತಿದ್ದರೇನೋ ಅನ್ನಿಸುತ್ತಿದೆ. ಔಷಧಿಯಿಂದ ಹೀಗಾಗಬಹುದು ಅಂತ ಆ ಡಾಕ್ಟರ್‌ ನಮಗೆ ಮೊದಲೇ ಹೇಳಬೇಕಿತ್ತು’.

ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ದೂರುಗಳು, ದೂಷಣೆ, ಅನುಮಾನ ದಿನೇದಿನೇ ಹೆಚ್ಚಾಗುತ್ತಿವೆ. ವಿಶ್ವಾಸ, ನಂಬಿಕೆ, ಭರವಸೆಯ ಆಧಾರದ ಮೇಲೆ ರೋಗಿ- ವೈದ್ಯನ ಸಂಬಂಧ ನಿರ್ಧಾರವಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದ ಅಧ್ಯಯನಗಳನ್ನು ಕೇಳುವವರೇ ಇಲ್ಲದಂತಾಗಿದೆ. ಅಪನಂಬಿಕೆಯ ಅಡ್ಡಗೋಡೆ ವೈದ್ಯ-ರೋಗಿಯ ನಡುವೆ ಅಡ್ಡಾದಿಡ್ಡಿ ಬೆಳೆದು ನಿಂತು ಚಿಕಿತ್ಸೆಯ ಅಡಿಪಾಯವನ್ನು ಅಲ್ಲಾಡಿಸುತ್ತಿದೆ.

ವೈದ್ಯರು ನೀಡುವ ಔಷಧಿ, ಸೂಚಿಸುವ ಶಸ್ತ್ರಚಿಕಿತ್ಸೆ, ಸಾವು, ಅಂಗವೈಕಲ್ಯದಂತಹ ಅಪಾಯದ ಸೂಚನೆ, ಕಾಯಿಲೆಯ ಮಾಹಿತಿಯ ಬಗೆಗೆ ಜನರಿಗೆ ಇಂದು ಭರವಸೆಯೇ ಕಡಿಮೆ. ಎಂತಹ ಪರಿಣತ, ಅನುಭವಿ ವೈದ್ಯ ನೀಡುವ ಮಾಹಿತಿಯನ್ನೂ ಅರ್ಧ ಮಾತ್ರ ನಂಬುವ ಜನ ಅಪಾರ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ತತ್‍ಕ್ಷಣ ಮೊರೆ ಹೋಗುವುದು ‘ಗೂಗಲ್ ಡಾಕ್ಟರ್’ ಅನ್ನೇ. ಇದರ ನೇರ ಪರಿಣಾಮವೆಂದರೆ, ಅತಿ ಅವಶ್ಯವಾದ, ಕಡಿಮೆ ಖರ್ಚಿನಲ್ಲಿ ಮಾಡುವ ರಕ್ತದಲ್ಲಿನ ಸಕ್ಕರೆಯ ಅಂಶದ ಪರೀಕ್ಷೆಗೆ ಸೂಚಿಸಿದ್ದಾಗ್ಯೂ, 6 ತಿಂಗಳ ಹಿಂದಿನ ಪರೀಕ್ಷೆಯ ಚೀಟಿಯನ್ನು ಎದುರು ಹಿಡಿದು ‘ಇದೇ ಸಾಕಾಗದೇ?’ ಎನ್ನುವವರೇ ಹೆಚ್ಚು. ಅವರಿಗೆ ‘ಕೆಲವೇ ದಿನಗಳ ಹಿಂದಿನ ರಕ್ತ ಪರೀಕ್ಷೆ ‘ನಾರ್ಮಲ್’ ಇದ್ದಾಗ್ಯೂ ಇಂದು ಈ ಸಮಸ್ಯೆ ರಕ್ತದಲ್ಲಿ ಕಾಣಿಸಲು ಸಾಧ್ಯವಿದೆ. ನಿಮ್ಮ ದೇಹಾರೋಗ್ಯದ ಲಕ್ಷಣಗಳು ಇಂತಹ ನಿರ್ದಿಷ್ಟ ಕಾಯಿಲೆಯನ್ನು ಸೂಚಿಸುತ್ತಿವೆ, ಅದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆ ಬೇಕೇ ಬೇಕು’ ಎಂದು ಒಪ್ಪಿಸಬೇಕಾಗುತ್ತದೆ. ಆಗ ತಲೆಯಲ್ಲಾಡಿಸಿದರೂ ಮುಖದಲ್ಲಿ ಅಪನಂಬಿಕೆಯ ಭಾವ ಒಡೆದು ಕಾಣುತ್ತಿರುತ್ತದೆ! ಅಂದರೆ, ವೈದ್ಯರೆಂದರೆ ಲಾಭಕ್ಕಾಗಿ ಏನೂ ಮಾಡಬಲ್ಲವರು, ವಿನಾಕಾರಣ ಔಷಧಿ, ಪರೀಕ್ಷೆ ಎಂದು ದುಡ್ಡು ವಸೂಲು ಮಾಡುವವರು ಎಂಬ ಭಾವನೆ ಜನರಲ್ಲಿ ಬೆಳೆಯತೊಡಗಿದೆ.

ಸಮಾಜದ ಇಂತಹ ಭಾವನೆಗಳು ವೈದ್ಯ ಕ್ಷೇತ್ರದ ಒಟ್ಟು ನಡವಳಿಕೆಯನ್ನೂ ಕ್ರಮೇಣ ಬದಲಿಸಿದೆ. ಹಿಂದೆ ರೋಗಿಯ ಹಿತದೃಷ್ಟಿಯಿಂದ, ಅದು ತನ್ನ ಸ್ವಂತ ಜವಾಬ್ದಾರಿ ಎಂಬಂತೆ ರೋಗಿಯನ್ನು, ಆತನ ಮನೆಯವರನ್ನು ಕುಳ್ಳಿರಿಸಿ, ಅವರ ಮನವೊಲಿಸಿ ಚಿಕಿತ್ಸೆ ನೀಡುವುದು ವೈದ್ಯರ ನಿತ್ಯದ ಕಾಯಕವಾಗಿತ್ತು. ಆದರೆ ಇಂದು ಇದ್ದದ್ದನ್ನು ಇದ್ದ ಹಾಗೆ ಸ್ಪಷ್ಟವಾಗಿ ಹೇಳುವುದು, ನಿರ್ಧಾರವನ್ನು ಪೂರ್ತಿಯಾಗಿ ರೋಗಿ ಮತ್ತು ಆತನ ಮನೆಯವರಿಗೇ ಬಿಟ್ಟುಬಿಡುವುದು ವೈದ್ಯರ ಸ್ವಹಿತ ಚಿಂತನೆಯ ಪ್ರವೃತ್ತಿಯಾಗಿ ಬದಲಾಗಿದೆ.

ರೋಗಿಗಳು, ಅವರ ಮನೆಯವರು ತಮ್ಮನ್ನು ನಂಬುವುದಿಲ್ಲ, ಏನಾದರೂ ಹೆಚ್ಚುಕಡಿಮೆಯಾದರೆ ಗಲಾಟೆ ಮಾಡಿಯೇ ಮಾಡುತ್ತಾರೆ, ಇರುವ ಅಪಾಯವನ್ನು ಎಷ್ಟು ವಿವರಿಸಿದರೂ ‘ಮತ್ತೆ ಇನ್ನೇನೂ ತೊಂದರೆ ಇಲ್ವಲ್ಲಾ ಡಾಕ್ಟ್ರೇ?’ ಎಂದೇ ಕೇಳುತ್ತಾರೆ, ಒಬ್ಬರಿಗೆ ಪೂರ್ತಿ ವಿವರಿಸಿಯಾಗಿದ್ದರೂ ಮತ್ತೊಬ್ಬರು ಸಂಬಂಧಿ ಮತ್ತೆ ಮೊದಲಿನಿಂದ ಕೇಳುತ್ತಾರೆ, ತಮ್ಮ ಕಡೆಯ ಯಾವುದೋ ಊರು ಅಥವಾ ದೇಶದಲ್ಲಿರುವ ವೈದ್ಯರಿಂದ ಕರೆ ಮಾಡಿಸಿ ವಿವರ ಕೇಳುತ್ತಾರೆ ಎಂಬುವು ಇಂದು ವೈದ್ಯಕೀಯ ವಲಯದಲ್ಲಿ ಆಗಾಗ್ಗೆ ಕೇಳಿಬರುವ ಅಳಲುಗಳು.

ಆಧುನಿಕ ತಂತ್ರಜ್ಞಾನದಲ್ಲಿ ಪರಿಣತರಾದ ಇಂದಿನ ಯುವಜನರಂತೂ ಬಹುಬಾರಿ ‘ಯಾವ ವೈದ್ಯರನ್ನು ನೋಡಬೇಕು?’ ಎಂಬ ನಿರ್ಧಾರಕ್ಕೆ ‘ಗೂಗಲ್ ರಿವ್ಯೂ’ಗಳ ಮೊರೆ ಹೋಗುತ್ತಾರೆ. ಅವರ ಇಂತಹ ರೂಢಿಯನ್ನು ಅನುಸರಿಸಿ ಆಸ್ಪತ್ರೆಗಳು, ಇಂದು ತಮ್ಮ ಗೂಗಲ್ ರೇಟಿಂಗ್ ಕಾಯ್ದುಕೊಳ್ಳುವುದನ್ನು ಕಲಿಯುತ್ತಿವೆ. ಯಾರೂ, ಏನನ್ನೂ ಬರೆಯಬಹುದಾದ ತಾಂತ್ರಿಕ ಸ್ವಾತಂತ್ರ್ಯದ ಈ ಯುಗದಲ್ಲಿ ಆರೋಗ್ಯ, ಆಹಾರ ಯಾವುದಕ್ಕೂ ಗೂಗಲ್ ರಿವ್ಯೂಗಳ ಅಧಿಕೃತತೆ ಕೆಲವು ಬಾರಿ ಪ್ರಶ್ನಾರ್ಹ ಎಂಬುದನ್ನು ಜನ ಗಮನಿಸುವ ಸಾಧ್ಯತೆ ಕಡಿಮೆ.

ಶಿಕ್ಷಕನಿಗೆ ಹೆದರುವ ವಿದ್ಯಾರ್ಥಿಯು ಶಿಕ್ಷಣವನ್ನು ಪ್ರೀತಿಸಲಾರ, ಸಮರ್ಥವಾಗಿ ಕಲಿಯಲಾರ. ಅದೇ ರೀತಿ ವೈದ್ಯನಿಗೆ ಹೆದರುವ, ಆತನನ್ನು ನಂಬದ ರೋಗಿ ತನ್ನ ಆರೋಗ್ಯವನ್ನು ಪಡೆದುಕೊಳ್ಳುವುದು ಕಷ್ಟವೆನಿಸಬಹುದು. ರೋಗಿಗೆ ಹೆದರುವ, ಆತನಿಂದ ದೂರ ಓಡುವ ವೈದ್ಯ ಪರಿಣತನೇ ಆಗಿದ್ದರೂ, ತನ್ನ ಪರಿಣತಿಯನ್ನು ಪೂರ್ಣ ಪ್ರಮಾಣದಲ್ಲಿ ರೋಗಿಗಾಗಿ ಬಳಸುವುದು ಕಷ್ಟಸಾಧ್ಯ. ಇಂದು ನಾವಿರುವುದು ದೀರ್ಘಕಾಲಿಕ ಕಾಯಿಲೆಗಳ ಕಾಲ. ಇಂತಲ್ಲಿ, ಅಪನಂಬಿಕೆ, ಹೆದರಿಕೆ ಎರಡೂ ಚಿಕಿತ್ಸೆಯ ಎಲ್ಲ ಹಂತಗಳಲ್ಲಿ ತಡೆಯೊಡ್ಡುವ ಸಾಧ್ಯತೆ ಇದೆ ಎಂಬ ಅರಿವು ವೈದ್ಯ- ರೋಗಿ ಇಬ್ಬರಿಗೂ ಅಗತ್ಯ.

ರೋಗಿಗೆ ‘ವೈದ್ಯನೂ ಮನುಷ್ಯ, ವಿಶ್ವಾಸಕ್ಕೆ ಅರ್ಹ’ ಎಂಬ ಭಾವ, ವೈದ್ಯನಿಗೆ ತನ್ನ ಆತ್ಮಸಾಕ್ಷಿಯಿಂದ ಸರಿಯಾದ ಕ್ರಮ ತೆಗೆದುಕೊಳ್ಳುವ, ಅದನ್ನು ಸ್ಪಷ್ಟವಾಗಿ ರೋಗಿಗೆ ವಿವರಿಸುವ, ಬರಹದಲ್ಲಿ ದಾಖಲಿಸುವ ಕೌಶಲಗಳು ಮಾತ್ರ ಈ ಅಡ್ಡಗೋಡೆಯನ್ನು ನಿವಾರಿಸಿ ಆರೋಗ್ಯದ ದಾರಿಯನ್ನು ಸುಗಮವಾಗಿಸಬಲ್ಲವು.

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT