ಮಂಗಳವಾರ, ಆಗಸ್ಟ್ 20, 2019
26 °C

ಕುಟುಂಬ ರಾಜಕಾರಣ ಮತ್ತು ಪ್ರಜಾಪ್ರಭುತ್ವ

Published:
Updated:
Prajavani

ಪ್ರಜ್ವಲ್ ರೇವಣ್ಣನವರ ಪರವಾದ ಚುನಾವಣಾ ಪ್ರಚಾರಾಂಭದ ಸಮಾರಂಭದಲ್ಲಿ ದೇವೇಗೌಡರು ಕಣ್ಣೀರಿಟ್ಟರಂತೆ (ಪ್ರ.ವಾ., ಮಾರ್ಚ್ 14). ಅದನ್ನು ಅನುಸರಿಸಿ ಅವರ ಮಗ, ಸೊಸೆ, ಮೊಮ್ಮಗನೂ ಕಣ್ಣೀರು ಸುರಿಸಿದರಂತೆ. ಕಾರಣ, ತಮ್ಮ ಕುಟುಂಬದ ಮೇಲೆ ವಿನಾಕಾರಣ ಕುಟುಂಬ ರಾಜಕಾರಣದ ಆರೋಪ ಮಾಡಲಾಗುತ್ತಿದೆ ಎಂಬುದು!

ಈ ಸುದ್ದಿಯನ್ನು ಓದುತ್ತಿದ್ದಾಗ, ಈ ಕಣ್ಣೀರ ಕಥೆ ಕೇಳಿದ ಶಾಲಾ ಬಾಲಕನೊಬ್ಬ ‘ಏಕೆ, ದೇವೇಗೌಡರಿಗೆ ಕನ್ನಡ ಬರುವುದಿಲ್ಲವೇ? ಕುಟುಂಬ ರಾಜಕಾರಣವೆಂದರೆ ಏನು? ತಾವು ಮಾಡುತ್ತಿರುವುದು ಅದೇ ಎಂಬುದು ಅರ್ಥವಾಗದಷ್ಟು ಮುಗ್ಧರೇ ಅವರು?’ ಎಂದು ಕೇಳಿದ!

ದೇವೇಗೌಡರ ಕುಟುಂಬದ ಸರ್ವಸದಸ್ಯರೂ ಸಾರ್ವಜನಿಕವಾಗಿ ಅಳುವುದಕ್ಕೆ ಹೆಸರುವಾಸಿ ಎಂದು ಎಲ್ಲರಿಗೂ ಗೊತ್ತು. ಮನಃಶಾಸ್ತ್ರಜ್ಞರನ್ನು ಕೇಳಿದರೆ, ವಯಸ್ಕರು ಹೀಗೆ ಅಮಾಯಕವಾಗಿ ಸಾರ್ವಜನಿಕವಾಗಿ ಅಳುವುದು, ತಮಗೆದುರಾದ ಪ್ರಶ್ನೆಗೆ ತಾವು ಕೊಡಬಹುದಾದ ಉತ್ತರ ತಮ್ಮ ವರ್ತನೆಯನ್ನು ಇನ್ನಷ್ಟು ಬಯಲುಗೊಳಿಸುತ್ತದೆ ಎಂಬ ಅಸಹಾಯಕತೆ- ಆತಂಕಗಳ ಅರಿವಿನಿಂದ ಎಂದು ಹೇಳಿಯಾರು. ಆದರೆ ಹೊಳೆನರಸೀಪುರದ ಬಳಿಯ ಈ ಅಳುವಿನ ಕಾರ್ಯಕ್ರಮಕ್ಕೆ ಎರಡು ಕಾರಣಗಳಿದ್ದಂತೆ ಕಾಣುತ್ತದೆ.

ಒಂದು, ಮಾರನೆಯ ದಿನಕ್ಕೆ ನಿಗದಿಯಾಗಿದ್ದ, ವಂಶದ ಇನ್ನೊಂದು ಕುಡಿ ನಿಖಿಲ್ ಕುಮಾರಸ್ವಾಮಿಯವರ ಪಟ್ಟಾಭಿಷೇಕಕ್ಕೆ ಭೂಮಿಕೆ ಸಿದ್ಧಪಡಿಸುವುದು. ಇನ್ನೊಂದು, ನಿಜವಾಗಿಯೂ ಅವರ ಬಗೆಗಿನ ಸಹಾನುಭೂತಿಗೆ ಅರ್ಹವಾದುದು. ಅದೆಂದರೆ, ತಮ್ಮನ್ನು ಮಾತ್ರ ಏಕೆ ಕುಟುಂಬ ರಾಜಕಾರಣದ ಆರೋಪಕ್ಕೆ ಗುರಿ ಮಾಡಲಾಗುತ್ತಿದೆ ಎಂಬ ನೋವು!

ಸಿದ್ದರಾಮಯ್ಯ ಕುಟುಂಬ ರಾಜಕಾರಣ ಆರಂಭಿಸಿಲ್ಲವೆ? ಗುಂಡೂರಾವ್‍ರದ್ದು ಕುಟುಂಬ ರಾಜಕಾರಣವಲ್ಲವೆ? ಬಂಗಾರಪ್ಪ ಏನು ಕಡಿಮೆ? ಯಡಿಯೂರಪ್ಪ, ಖರ್ಗೆ, ಧರ್ಮಸಿಂಗ್, ಜಾರಕಿಹೊಳಿ, ಮುನಿಯಪ್ಪ, ಬೈರೇಗೌಡ, ರಾಮಲಿಂಗಾರೆಡ್ಡಿ, ಉದಾಸಿ, ಕತ್ತಿ ಹೀಗೆ ಪಕ್ಷಭೇದವಿಲ್ಲದೆ ಇವರದ್ದೆಲ್ಲವೂ ಕುಟುಂಬ ರಾಜಕಾರಣವಲ್ಲವೆ ಎಂಬುದೇ ದೇವೇಗೌಡರ ಪ್ರಶ್ನೆಯಾಗಿರಬಹುದು! ಹಾಗಾಗಿಯೇ, ಈ ಹಿಂದೆ ಇದೇ ಕಾರಣಕ್ಕೆ ಅವರನ್ನು ಟೀಕಿಸುತ್ತಿದ್ದ ಮತ್ತು ಅವರ ಪಕ್ಷವನ್ನು ಬಿಟ್ಟು ಬಂದ ವಿವಿಧ ಪಕ್ಷಗಳ ನಾಯಕರು ಈಗ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ! ಲಜ್ಜೆಗೆಟ್ಟ ಇಂದಿನ ಈ ರಾಜಕೀಯ ಚಿತ್ರದಲ್ಲಿ ತಮ್ಮನ್ನು ಮಾತ್ರ ಎತ್ತಿ ತೋರಿಸಲಾಗುತ್ತಿದೆ ಎಂಬುದು ದೇವೇಗೌಡರ ಅಳಲು ಇರಬಹುದು.

ಇದು, ನಮ್ಮ ರಾಜ್ಯದ ಚಿತ್ರ. ಇತರ ರಾಜ್ಯಗಳಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲೂ ಕುಟುಂಬ ರಾಜಕಾರಣದ ಹೆಬ್ಬಲೆಯೇ ಹರಡಿದೆ! ಆದರೆ ಈ ಎಲ್ಲ ಕುಟುಂಬ ರಾಜಕಾರಣಗಳಿಗೆ ಹೋಲಿಸಿದರೆ ದೇವೇಗೌಡರ ಕುಟುಂಬ ರಾಜಕಾರಣವೇ ಅವಕ್ಕೆ ಸಮಾನವಾಗಿ ಸವಾಲು ಹಾಕುವಷ್ಟು ಸುಪುಷ್ಟವಾಗಿರುವುದು! ಅಷ್ಟು ವಿಶಾಲವಾದದ್ದು, ಆಳಕ್ಕೆ ಬೇರುಬಿಟ್ಟಿದ್ದು. ಈ ವಿಷಯದಲ್ಲಿ ದೇವೇಗೌಡರದ್ದು ದೊಡ್ಡ ಸಾಧನೆಯೇ ಸರಿ! ಇನ್ನಾವ ಕಾರಣಕ್ಕಲ್ಲದಿದ್ದರೂ ರಾಜ್ಯದಲ್ಲಿನ ಕುಟುಂಬ ರಾಜಕಾರಣದ ಪ್ರಪಿತಾಮಹರೆಂಬ ಕಾರಣಕ್ಕಾದರೂ ಅವರ ಹೆಸರು ಕರ್ನಾಟಕದ ರಾಜಕೀಯ ಇತಿಹಾಸದ ಮಟ್ಟಿಗಾದರೂ ಅಜರಾಮರವಾಗಿರುತ್ತದೆ.

ದೇವೇಗೌಡರು ಕುಟುಂಬ ರಾಜಕಾರಣವನ್ನು ಪೋಷಿಸುವ ‘ಜಾಣ’ ರೀತಿ ಅನನ್ಯವಾದುದು. ಕೆಲ ತಿಂಗಳ ಹಿಂದೆ, ತಮಗೆ ಹಾಸನ ಲೋಕಸಭಾ ಕ್ಷೇತ್ರದ ಜವಾಬ್ದಾರಿಯಿಂದ ದಣಿವಾಗಿದ್ದು, ಬೇರೆ ಯಾರೂ ಮುಂದೆ ಬರದಿರುವುದರಿಂದ ನಿರ್ವಾಹವಿಲ್ಲದೆ ಮೊಮ್ಮಗ ಪ್ರಜ್ವಲ್‌ಗೆ ಆ ಜವಾಬ್ದಾರಿಯನ್ನು ಹಸ್ತಾಂತರಿಸಬೇಕಿದೆ ಎಂದು ಅಲವತ್ತುಕೊಂಡಿದ್ದರು. ಆಗ ಜನ ದೇವೇಗೌಡರಿಗೆ ನಿಜವಾಗಿ ವಯಸ್ಸಾಗಿದೆ; ಅಂತೂ ಅವರು ವಿಶ್ರಾಂತ ಬಯಸಿದ್ದಾರೆ ಎಂದು ತಿಳಿದು ಅವರ ವಿಶ್ರಾಂತ ಜೀವನಕ್ಕೆ ಶುಭ ಕೋರುವ ಸನ್ನಾಹದಲ್ಲಿದ್ದರು. ಆದರೆ ಅವರ ಈ ಯೋಜನೆ ತಮ್ಮ ಮೊಮ್ಮಗನ ರಾಜಕೀಯ ಪ್ರವೇಶಕ್ಕೆ ಒಂದು ಸುಕ್ಷೇಮ ಕ್ಷೇತ್ರವನ್ನು ಕಲ್ಪಿಸಿಕೊಡುವುದೇ ಆಗಿತ್ತು ಎಂಬುದು ಅವರು ಈಗ ಸ್ವಜಾತಿ ಪ್ರಧಾನವಾದ ಇನ್ನೊಂದು ಕ್ಷೇತ್ರದ ತಲಾಶಿನಲ್ಲಿರುವುದರಿಂದ ಗೊತ್ತಾಗುತ್ತಿದೆ. ಆದರೂ ಅವರು ಜಾತ್ಯತೀತರು ಮತ್ತು ಅವರದು ಜಾತ್ಯತೀತ ಪಕ್ಷ!

ದೇವೇಗೌಡರೂ ಸೇರಿದಂತೆ ಕುಟುಂಬ ರಾಜಕಾರಣ ಮಾಡುವವರೆಲ್ಲರೂ, ವೈದ್ಯನ ಮಗ ವೈದ್ಯ, ಅಧಿಕಾರಿಯ ಮಗ ಅಧಿಕಾರಿಯಾಗುವುದು ಸರಿಯಾದರೆ ರಾಜಕಾರಣಿಯ ಮಗ ರಾಜಕಾರಣಿಯಾದರೆ ತಪ್ಪೇನು ಎಂದು ಕೇಳುತ್ತಾರೆ. ಆದರೆ ಇತರರು ವರ್ಷಗಟ್ಟಲೆ ಆ ಉದ್ಯೋಗಕ್ಕಾಗಿ ಸಂಬಂಧಿತ ಜ್ಞಾನ ಕ್ಷೇತ್ರದಲ್ಲಿ ಕಷ್ಟಪಟ್ಟು ಅಭ್ಯಸಿಸಿ, ಸ್ಪರ್ಧಿಸಿ ಆ ಹುದ್ದೆಯನ್ನು ಗಳಿಸುತ್ತಾರೆ. ಆದರೆ ಇಂದು ರಾಜಕಾರಣ ಮುಟ್ಟಿರುವ ಪಾತಾಳ ಸ್ಥಿತಿಯಲ್ಲಿ ರಾಜಕಾರಣಿಗಳ ಮಕ್ಕಳಿಗೆ ಯಾವುದೇ ಪರಿಶ್ರಮ, ಅನುಭವವಿಲ್ಲದೆ ದೊರೆಯುವ ಕುಟುಂಬದ ಪ್ರಭಾವ ಜಾಲ, ಜಾತಿ, ಹಣ ಬಲಗಳೇ ಸಾಕು ಸ್ಪರ್ಧೆಗೆ ಮತ್ತು ಯಶಸ್ಸಿಗೆ. ಉದಾಹರಣೆಗೆ, ಪ್ರಜ್ವಲ್ ಮತ್ತು ನಿಖಿಲ್‍ರನ್ನೇ ನೋಡಿ. ಈ ಹುಡುಗರು ಯಾವ ಸಂಸದೀಯ ಅನುಭವವೂ ಇಲ್ಲದೆ ನೇರವಾಗಿ ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆ ಎನಿಸಿರುವ ಸಂಸತ್ತಿಗೇ ಹೋಗಬಯಸಿದ್ದಾರೆ. ಅವರ ಪಕ್ಷದಲ್ಲೇ ಏಕೆ ಇದಕ್ಕೆ ಅರ್ಹರಾದವರು ಬೆಳೆಯಲಿಲ್ಲ ಅಥವಾ ದೇವೇಗೌಡರು ಬೆಳೆಸಲಿಲ್ಲ? ಪ್ರಜಾಪ್ರಭುತ್ವವನ್ನು ಬೆಳೆಸಬೇಕಾದದ್ದು ಹೀಗೆಯೇ? ದೇವೇಗೌಡರಂತಹ ಹಿರಿಯ ರಾಜಕಾರಣಿಗಳು ಇದನ್ನೆಲ್ಲ ಯೋಚಿಸಬಲ್ಲವರಾಗಿದ್ದರೆ ಅವರು ಕುಟುಂಬ ರಾಜಕಾರಣದ ಆರೋಪಕ್ಕೆ ಸಿಕ್ಕಿ ಸಾರ್ವಜನಿಕವಾಗಿ ಅಳುವ ಕರುಣಾಜನಕ ಸ್ಥಿತಿ ಉಂಟಾಗುತ್ತಿರಲಿಲ್ಲ.

Post Comments (+)