ಬುಧವಾರ, ಡಿಸೆಂಬರ್ 11, 2019
27 °C
ದಾರುಣ ಸ್ಥಿತಿಯತ್ತ ರೈತ ತಲುಪಿರುವುದಕ್ಕೆ ರಾಜಕೀಯ ಪಕ್ಷಗಳು, ಅವುಗಳ ನೀತಿಗಳೇ ಕಾರಣ

ಕೃಷಿ ಬಿಕ್ಕಟ್ಟು: ರಾಜಕೀಯ ಕಸರತ್ತು

Published:
Updated:
Deccan Herald

ರೈತರು ಮೊನ್ನೆ ದೆಹಲಿಯಲ್ಲಿ ಮೆರವಣಿಗೆ ನಡೆಸಿದ್ದು ಈಗ ಇತಿಹಾಸ.  ಸೂಕ್ತ ಕನಿಷ್ಠ ಬೆಂಬಲ ಬೆಲೆ, ಸಾಲಮನ್ನಾ, ತಾವೇ ತಯಾರಿಸಿದ ಕೃಷಿಗೆ ಸಂಬಂಧಿಸಿದ ಎರಡು ಕರಡು ಮಸೂದೆ ಕುರಿತು ಸಂಸತ್ ಅಧಿವೇಶನ ಕರೆದು ಚರ್ಚಿಸಬೇಕೆಂಬುದು  ಪ್ರಮುಖ ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರ ಯಾರೊಬ್ಬ ಪ್ರತಿನಿಧಿಯನ್ನೂ ಹೋರಾಟದ ಸ್ಥಳಕ್ಕೆ ಕಳಿಸದೆ, ಇದೊಂದು ರಾಜಕೀಯ ಪ್ರೇರಿತ ಹೋರಾಟವೆಂದು ಬಗೆದಿರುವುದು ರೈತ ಸಮುದಾಯದಲ್ಲಿ ಜುಗುಪ್ಸೆ ಮೂಡಿಸಿದೆ.

ಕೆಲವೊಂದು ಪ್ರಶ್ನೆಗಳನ್ನು ಇಲ್ಲಿ ವಿಶ್ಲೇಷಿಸಬಹುದು. ಕೃಷಿಯಲ್ಲಿನ ಎಲ್ಲಾ ಸಮಸ್ಯೆಗಳು 2014ರಿಂದ ಈಚೆಗೆ ಪ್ರಾರಂಭವಾಗಿವೆ ಎಂಬ ವಿರೋಧ ಪಕ್ಷಗಳ ವಾದ ಡಾಂಬಿಕತನದಿಂದ ಕೂಡಿದೆ. ಸ್ವಾಮಿನಾಥನ್ ವರದಿ 2007ರಲ್ಲೇ ಹೊರಬಿದ್ದಿತ್ತು. ಏಳು ವರ್ಷ ಸುಮ್ಮನೆ ಕುಳಿತಿತ್ತು ಯುಪಿಎ ಸರ್ಕಾರ. ಈಗ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇನ್ನೊಂದೆಡೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ, ಬಜೆಟ್‌ನಲ್ಲಿ ಅತಿಹೆಚ್ಚು ಹಣ ಕೃಷಿಗೆ ನಿಗದಿಪಡಿಸಿರುವುದು, ಐತಿಹಾಸಿಕ ಕ್ರಮಗಳು; ಹೀಗಾಗಿ ರೈತರ ಬಾಳು ಹಸನಾಗುತ್ತಿದ್ದು 2020ರೊಳಗೆ ಅವರ ಆದಾಯ ದ್ವಿಗುಣಗೊಳ್ಳಲಿದೆ ಎಂಬುದು ಎನ್‌ಡಿಎ ಸರ್ಕಾರದ ವಾದ. ಆದರೆ ವಾಸ್ತವ ಏನು?

ಕನಿಷ್ಠ ಬೆಂಬಲ ಬೆಲೆ ವಿಚಾರವನ್ನೇ ತೆಗೆದುಕೊಳ್ಳೋಣ... ಬೆಂಬಲ ಬೆಲೆ ಏರಿಕೆ ಐತಿಹಾಸಿಕ ಎಂಬುದು ಸರ್ಕಾರದ ಪ್ರಚಾರ. ಆದರೆ ಯುಪಿಎ-1 ಮತ್ತು 2ರ ಸರಾಸರಿ ಐದು ವರ್ಷಗಳ ಆಳ್ವಿಕೆ ಕಾಲದಲ್ಲಿ ಕನಿಷ್ಠ ಬೆಂಬಲ ಬೆಲೆಯ ಏರಿಕೆ, ಮೋದಿ ಸರ್ಕಾರದ ಬೆಂಬಲ ಬೆಲೆ ಏರಿಕೆಗಿಂತ ಶೇಕಡಾವಾರು ಹೆಚ್ಚಿರುವುದು ಕಾಣುತ್ತದೆ. 2017ರ ಅಂಕಿಅಂಶದ ಪ್ರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇಕಡಾವಾರು ಏರಿಕೆ ಹೆಚ್ಚಿದೆ. ಆದರೆ ಇದಕ್ಕೆ ಕಾರಣ ಬೇರೆ. ಸ್ವಾಮಿನಾಥನ್ ವರದಿಯಂತೆ ಕೃಷಿಯಲ್ಲಿನ ‘ಉತ್ಪಾದನಾ ವೆಚ್ಚ’ದ ಮೇಲೆ ಶೇ 50ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಇದು ಭಾಗಶಃ ಸತ್ಯ, ಭಾಗಶಃ ಸುಳ್ಳು. ಸ್ವಾಮಿನಾಥನ್ ವರದಿ ಪ್ರಕಾರ ಉತ್ಪಾದನೆಯ ವೆಚ್ಚ ಸಮಗ್ರ ವೆಚ್ಚವನ್ನು (comprehensive cost) ಒಳಗೊಂಡಿರಬೇಕು. ಆದರೆ ಸರ್ಕಾರವು ‘ಉತ್ಪಾದನ ವೆಚ್ಚ’ದ ವ್ಯಾಖ್ಯಾನವನ್ನೇ ಬದಲಿಸಿ, ಅದರ ವೆಚ್ಚವನ್ನು ಲೆಕ್ಕ ಹಾಕುವಾಗ,  ‘A2+FL’ ಎಂಬ ಹೊಸ ಸೂತ್ರವನ್ನು ಅಳವಡಿಸಿದೆ. ಹೊಸ ಸೂತ್ರದ ಪ್ರಕಾರ ಅಕ್ಕಿಯ ಕ್ವಿಂಟಲ್ ಒಂದರ ಕನಿಷ್ಠ ಬೆಂಬಲ ಬೆಲೆಯು 600 ರೂಪಾಯಿಯಷ್ಟು ಕುಂದುತ್ತದೆ! ಅನ್ನದಾತನನ್ನು ವಂಚಿಸುವ ಸರ್ಕಾರದ ಈ ‘ಜಾಣ್ಮೆ’, ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಎಂಬ ಗಾದೆ ನೆನಪಿಸುತ್ತದೆ.

ಹೋಗಲಿ, ದೋಷಪೂರಿತ ಹೊಸ ಸೂತ್ರದ ಬೆಂಬಲ ಬೆಲೆಯಾದರೂ ರೈತರಿಗೆ ದೊರಕುತ್ತಿದೆಯೇ ಎಂದು ನೋಡಿದರೆ, ಅಧ್ಯಯನಗಳ ಪ್ರಕಾರ ದೇಶದಲ್ಲಿ ಶೇ 6ರಷ್ಟು ಕೃಷಿ ಉತ್ಪನ್ನಗಳಿಗೆ ಮಾತ್ರ ಬೆಂಬಲ ಬೆಲೆ ಸಿಗುತ್ತಿದೆ! ಏಕೆ? ದೇಶದ ಹಲವೆಡೆ ಮಂಡಿಗಳೇ ಇಲ್ಲ! ಹಾಗಾಗಿ ಶೇ 94ರಷ್ಟು ಕೃಷಿ ಉತ್ಪನ್ನಗಳನ್ನು ಸಗಟು ಮಾರುಕಟ್ಟೆಯಲ್ಲಿ ಪುಡಿಗಾಸಿಗೆ ರೈತರು ಕಂಗಾಲಾಗಿ ಮಾರುವ ಪರಿಸ್ಥಿತಿ ಇದೆ.

‘ಆಗ್‌ಮಾರ್ಕ್‌ನೆಟ್’ ಎಂಬುದು ಎಲ್ಲಾ ಸರಕುಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯ ದೈನಂದಿನ ಮಾಹಿತಿಯನ್ನು ನೀಡುವ ಸರ್ಕಾರದ ಜಾಲತಾಣ. ವಿಪರ್ಯಾಸವೆಂದರೆ ಯಾವ ಕೃಷಿ ಉತ್ಪನ್ನಕ್ಕೂ, ಸರ್ಕಾರ ‘ಜಾಣ್ಮೆ’ಯ ಪ್ರದರ್ಶನದಿಂದ ಇಳಿಸಿದ ಆ ಕನಿಷ್ಠ ಬೆಂಬಲ ಬೆಲೆಯ ಮೊತ್ತವು ದೊರಕುತ್ತಿಲ್ಲ ಎಂಬ ಮಾಹಿತಿ ಈ ಜಾಲತಾಣದಿಂದಲೇ ಬಹಿರಂಗಗೊಂಡಿದೆ!

ಇನ್ನು ಫಸಲ್ ಬೀಮಾ ಯೋಜನೆ. ಇದರಲ್ಲಿ ಎಸ್ಸಾರ್, ರಿಲಯನ್ಸ್‌ನಂಥ ಕಂಪನಿಗಳು ಬೆಳೆ ವಿಮೆಯ ವಹಿವಾಟಿನಲ್ಲಿ ತೊಡಗಿವೆ. ಮಹಾರಾಷ್ಟ್ರದ ಒಂದು ಜಿಲ್ಲೆಯಲ್ಲಿ ನಡೆದ ಅಧ್ಯಯನವನ್ನು ಗಮನಿಸಿ. 2.80 ಲಕ್ಷ ರೈತರು ಸೋಯಾ ಬೆಳೆಯನ್ನು ಬೆಳೆದರು. ₹19.2 ಕೋಟಿ ವಿಮೆಯ ಕಂತು ಪಾವತಿಸಿದರು; ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ₹ 77 ಕೋಟಿ ಕಟ್ಟಿತು; ರಿಲಯನ್ಸ್ ಕಂಪನಿಗೆ ಒಟ್ಟು ₹ 173 ಕೋಟಿ ತಲುಪಿದೆ. ಆ ವರ್ಷ ಸೋಯಾ ಬೆಳೆ ನಾಶವಾಗಿದೆ. ಆ ಜಿಲ್ಲೆಯಲ್ಲಿ ₹30 ಕೋಟಿಯಷ್ಟು ಕ್ಲೈಮ್‌ಅನ್ನು ಪೂರೈಸಿ, ಉಳಿದ ₹143 ಕೋಟಿಯಷ್ಟು ಲಾಭವನ್ನು ಒಂದು ಪೈಸೆ ಖರ್ಚು ಮಾಡದೆ ಈ ಕಂಪನಿಗಳು ತಮ್ಮದಾಗಿಸಿಕೊಂಡಿವೆ!  ಅನ್ನದಾತನನ್ನು ದೋಚಿ ಕಾರ್ಪೊರೇಟ್ ಕಂಪನಿಗಳ ಜೇಬು ತುಂಬಿಸುವ ಯೋಜನೆ ಇದಾಗಿದೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.

ಕೃಷಿ ಬಿಕ್ಕಟ್ಟು ಇದೆ ಎಂಬುದನ್ನೇ ಸರ್ಕಾರ ಗುರುತಿಸಲು ಒಪ್ಪುತ್ತಿಲ್ಲ. ಎಲ್ಲಾ ಸರ್ಕಾರಗಳ ತಪ್ಪು ನೀತಿಗಳಿಂದ ಬಿತ್ತನೆ ಬೀಜ, ರಸಗೊಬ್ಬರ, ಡೀಸೆಲ್, ಕೀಟನಾಶಕ ಮುಂತಾದವುಗಳ ವೆಚ್ಚ ವಿಪರೀತ (ಜಿಎಸ್‌ಟಿ ಹೊಸ ಸೇರ್ಪಡೆ) ಹೆಚ್ಚಾಗಿದ್ದು, ಉತ್ಪನ್ನಗಳ ಬೆಲೆ ಕುಸಿದಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಕಳೆದ 20 ವರ್ಷಗಳಿಂದ ರೈತರ ಆತ್ಮಹತ್ಯೆಗಳನ್ನು ದಾಖಲಿಸಿದೆ. ಈ ಅವಧಿಯಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಕೇಂದ್ರ ಸರ್ಕಾರವು ಎರಡು ವರ್ಷದಿಂದ ಇದನ್ನು ದಾಖಲಿಸುವುದೇ ಕೈ ಬಿಟ್ಟಿದೆ!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು