ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಾಮೂಹಿಕ ಊಟ– ಸೊಗಸು, ಸಂಭ್ರಮ

ಕುಟುಂಬದ ಸದಸ್ಯರೆಲ್ಲರೂ ದಿನದಲ್ಲಿ ಒಂದು ಬಾರಿಯಾದರೂ ಕೂಡಿ ಊಟ ಮಾಡುವ ಪದ್ಧತಿ ರೂಢಿಸಿಕೊಳ್ಳುವುದು ಉತ್ತಮ
Published 9 ಜನವರಿ 2024, 19:26 IST
Last Updated 9 ಜನವರಿ 2024, 19:26 IST
ಅಕ್ಷರ ಗಾತ್ರ

ಸ್ನೇಹಿತರೊಬ್ಬರ ಹೊಲಕ್ಕೆ ಹೋಗಿದ್ದೆ. ಕೃಷಿ ಕಾರ್ಮಿ ಕರು ಹೊಸ ಬೆಳೆಗೆ ಭೂಮಿ ಹದಗೊಳಿಸುತ್ತಿದ್ದರು. ಐವರು ಗಂಡಸರು, ಆರು ಮಂದಿ ಮಹಿಳೆಯರು ಇದ್ದರು. ಊಟದ ಸಮಯವಾದ್ದರಿಂದ ಕಾರ್ಮಿಕರೆಲ್ಲ ಮರದ ನೆರಳಿನಲ್ಲಿ ಕುಳಿತುಕೊಂಡರು. ಒಬ್ಬ ಮಹಿಳೆ ಹೊಲದ ಬದುವಿಗೆ ಹೋಗಿ ಮೆಣಸಿನಕಾಯಿ, ಟೊಮೆಟೊ, ಹತ್ತರಿಕಿ ಸೊಪ್ಪು ಕಿತ್ತು ತಂದು ನೀರಿನಲ್ಲಿ ತೊಳೆದು ಮಧ್ಯದಲ್ಲಿ ಇಟ್ಟಳು. ಮನೆಯಿಂದ ತಂದಿದ್ದ ಬುತ್ತಿ ಬಿಚ್ಚಿ ತಮ್ಮೊಳಗೆ ಹಂಚಿಕೊಂಡು ಹಾಸ್ಯ ಚಟಾಕಿ ಹಾರಿಸುತ್ತಾ, ನಗುನಗುತ್ತಾ ಊಟ ಮಾಡಿದರು. ಅವರ ಮುಖದ ಮೇಲೆ ಊಟ ಮಾಡಿದ ತೃಪ್ತ ಭಾವ ಕಾಣತೊಡಗಿತು. ಅದು ಊಟದಿಂದ ಸಂತುಷ್ಟ
ರಾಗಿದ್ದರ ಸಂಕೇತವಾಗಿತ್ತು.

ಜಾತಿ, ಧರ್ಮ, ಲಿಂಗ, ವಯಸ್ಸು, ಅಂತಸ್ತಿನ ಸಂಕೋಲೆ ಇಲ್ಲದೆ ಉಲ್ಲಾಸದಿಂದ ಊಟ ಮಾಡಿದ್ದನ್ನು ಕಂಡು ಬೆರಗಾದೆ. ಊಟ ಮಾಡುವುದು ಒಂದು ಕ್ರಿಯೆ ಅಲ್ಲ, ಅದೊಂದು ಅಪರೂಪದ ಅನುಭೂತಿ.

ಕೃಷಿ, ಕಟ್ಟಡ ನಿರ್ಮಾಣ, ಕೈಗಾರಿಕೆಗಳಲ್ಲಿ ದುಡಿಯುವವರು, ಸಂಘ– ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಒಂದೆಡೆ ಕುಳಿತು ಬುತ್ತಿ ಹಂಚಿಕೊಂಡು ಸಂತೋಷದಿಂದ ಊಟ ಮಾಡುತ್ತಾರೆ. ಸಾಮೂಹಿಕ ಊಟವು ಸಂತೋಷವನ್ನು ಸಮಷ್ಟಿಗೆ ವಿಸ್ತರಿಸುವ ಕ್ರಿಯೆ.

ವಿವಾಹದಂತಹ ಕೌಟುಂಬಿಕ ಸಮಾರಂಭಗಳು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾತ್ರೆ, ಹಬ್ಬದ ಉತ್ಸವಗಳಲ್ಲಿ ಏರ್ಪಡಿಸುವ ಸಾಮೂಹಿಕ ಊಟದ ಸಮಾರಂಭಗಳಲ್ಲಿ ಸಂಭ್ರಮಕ್ಕೆ ಬದಲಾಗಿ ಗದ್ದಲ, ತಿಕ್ಕಾಟ, ಕಲಹ ಹೆಚ್ಚಾಗುತ್ತಿವೆ. ಅದೇ ರೀತಿ, ಕುಟುಂಬಗಳಲ್ಲಿ ಕೂಡಿ ಊಟ ಮಾಡುವ ಸಂಸ್ಕೃತಿ ಸಹ ಮಾಯವಾಗುತ್ತಿದೆ. ಕುಟುಂಬದವರು ಕೂಡಿ ಊಟ ಮಾಡುವುದು ಭಾವ ಬಾಂಧವ್ಯದ ಬೆಸುಗೆ. ಆದರೆ ಊಟ ಈಗ ಹೊಟ್ಟೆಗೆ ಹಾಕಿಕೊಳ್ಳುವ ಕ್ರಿಯೆಯಷ್ಟೇ ಆಗುತ್ತಿರುವುದು ನೋವಿನ ಸಂಗತಿ.

ಪೌಷ್ಟಿಕತೆ, ಗುಣಮಟ್ಟದ ಆಹಾರದ ಬಗ್ಗೆ ಬಹಳಷ್ಟು ಮಾತುಗಳು ಕೇಳಿಬರುತ್ತವೆ. ಆದರೆ ಸಮಾಧಾನದಿಂದ ಎಲ್ಲರೂ ಕೂಡಿ ಕುಳಿತು ನೆಮ್ಮದಿಯಿಂದ ಊಟ ಸವಿಯುವ ಸಂಭ್ರಮದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಅದು ತೀರಾ ಅವಶ್ಯ ಎಂಬುದರ ಅರಿವು ಎಲ್ಲರಲ್ಲೂ ಮೂಡಬೇಕು.

ಉದ್ಯಮಿಯೊಬ್ಬರು ಈಚೆಗೆ ಮಗಳ ಮದುವೆ ಮಾಡಿದರು. ಊಟದಲ್ಲಿ 32 ಬಗೆಯ ಖಾದ್ಯಗಳಿ
ದ್ದವು. ಊಟದ ತಟ್ಟೆ ಪಡೆಯುವುದಕ್ಕೆ ದೊಡ್ಡ ಗಲಾಟೆ ನಡೆಯಿತು. ಪ್ರೀತಿಯ ಭೋಜನಕ್ಕಿಂತ ಶ್ರೀಮಂತಿಕೆಯ ವಿಪರೀತ ಪ್ರದರ್ಶನ ಮುಜುಗರವನ್ನು ಉಂಟುಮಾಡು ತ್ತಿತ್ತು. ಅನೇಕರ ತಟ್ಟೆಗಳಲ್ಲಿ ಬಹಳಷ್ಟು ಖಾದ್ಯಗಳು ತಿನ್ನದೇ ಉಳಿದಿದ್ದವು. ಸಮಾರಂಭಗಳಲ್ಲಿ ಆಹಾರ ಪೋಲಾಗುವುದು ಒಂದು ದೊಡ್ಡ ಸಮಸ್ಯೆ. ಇದನ್ನು ವಿಶೇಷ ಕಾಳಜಿ ಮತ್ತು ದಕ್ಷತೆಯಿಂದ ತಡೆಯಬೇಕು.

ನಮ್ಮ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುವ ಯುವಕ ನಮ್ಮೊಂದಿಗೆ ಊಟ ಮಾಡುತ್ತಿರಲಿಲ್ಲ. ಕಾರಣ ಕೇಳಿದರೆ, ‘ಸರ್ ನಾನು, ನನ್ನ ಹೆಂಡತಿ ಮತ್ತು ತಾಯಿ ಮೂವರೂ ಕೂಡಿ ಊಟ ಮಾಡುತ್ತೇವೆ. ನಾನು ಎಷ್ಟೇ ತಡಮಾಡಿ ಹೋದರೂ ಅವರಿಬ್ಬರೂ ಊಟ ಮಾಡದೆ ನನಗಾಗಿ ಕಾಯುತ್ತಿರುತ್ತಾರೆ’ ಎಂದು ಹೇಳಿದ. ಇಂಥ ಪ್ರೀತಿಯ ಬಂಧನ ಕುಟುಂಬದಲ್ಲಿ ಬೆಳೆಯಬೇಕು. ಇದರಿಂದ ಸಂಬಂಧಗಳು ಗಟ್ಟಿಯಾಗು ತ್ತವೆ ಮಾತ್ರವಲ್ಲ ಮಾನಸಿಕ ಆರೋಗ್ಯ ಕೂಡ ವೃದ್ಧಿಸುತ್ತದೆ. ಬಹಳಷ್ಟು ಕುಟುಂಬಗಳಲ್ಲಿ ಅವಸರದಲ್ಲಿ ಒಬ್ಬರೇ ಊಟ ಅಥವಾ ಉಪಾಹಾರ ಸೇವಿಸಿ ಕೆಲಸಕ್ಕೆ ಧಾವಿಸುತ್ತಾರೆ. ಇವರು ಮಾಡುವ ಗಡಿಬಿಡಿ ಮತ್ತು ಅವರು ಮೌನದಲ್ಲಿ ಒಳಗೆ ತುಂಬಿಕೊಂಡ ಸಿಟ್ಟು ಕುಟುಂಬದ ಸದಸ್ಯರ ನೆಮ್ಮದಿಯನ್ನು ಹಾಳು ಮಾಡುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಪ್ರತಿದಿನ ಸಂಜೆ ಕುಟುಂಬದವರೆಲ್ಲ ಸೇರಿ ಪ್ರಾರ್ಥನೆ, ಭಜನೆ ಮಾಡಿ ನಂತರ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಪರಿಪಾಟ ಇತ್ತು. ಅದನ್ನು ಕೆಲವು ಮನೆಗಳಲ್ಲಿ ಈಗಲೂ ಕಾಣಬಹುದು. ಮುಧೋಳದಲ್ಲಿ ಬಂದು ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳು ಈ ಪದ್ಧತಿ ಅನುಸರಿಸುವುದನ್ನು ಕಂಡಿದ್ದೇನೆ. ‘ನಮ್ಮ ಆರೋಗ್ಯ, ಸಂತೋಷಕ್ಕೆ ಕುಟುಂಬ ದವರೆಲ್ಲ ಸೇರಿ ಊಟ ಮಾಡುವುದು ಕಾರಣ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ರಾಜಸ್ಥಾನದ ಮಾದರಿ ಅತ್ಯಂತ ವಿಶೇಷವಾಗಿದೆ. ಕುಟುಂಬದ ಸದಸ್ಯರೆಲ್ಲ ಒಂದೇ  ತಟ್ಟೆಯಲ್ಲಿ ಊಟ ಮಾಡುವ ಸಂಪ್ರದಾಯ ಅಲ್ಲಿ ಇದೆ. ಇಸ್ರೇಲ್‌ನಲ್ಲಿ ಹೊಲಗಳಲ್ಲಿ ನೆಲೆಸಿರುವ ಕೃಷಿ ಕಾರ್ಮಿಕರು ಒಟ್ಟಾಗಿ ಅಡುಗೆ ಮಾಡಿ ಕುಟುಂಬದ ಸದಸ್ಯರನ್ನು ಒಳಗೊಂಡು ಊಟ ಮಾಡುತ್ತಾರೆ. ಇದಕ್ಕೆ ಕಿಬೂತ್ ಎಂದು ಕರೆಯುತ್ತಾರೆ. ಇಸ್ರೇಲ್‌ನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ನಿವೃತ್ತಿಯ ಕಾಲದಲ್ಲಿ ಕಿಬೂತ್‌ಗಳಲ್ಲಿ ನೆಲೆಸಿ ಸಾಮೂಹಿಕ ಊಟ, ಸಾಮೂಹಿಕ ಕೃಷಿ, ಸಾಮೂಹಿಕ ಹೈನುಗಾರಿಕೆಯ ಮೂಲಕ ಇಸ್ರೇಲ್ ಸಶಕ್ತವಾಗಿ ಬೆಳೆಯುವಂತೆ ಮಾಡಿದರು. ಅದು ದೇಶದ ಜನರಲ್ಲಿ ಏಕತೆಯ ಪ್ರಜ್ಞೆ ಬೆಳೆಯುವುದಕ್ಕೆ ಕಾರಣವಾಗಿದೆ.

ಈಗ ಕುಟುಂಬಗಳು ಚಿಕ್ಕದಾಗುತ್ತಿವೆ. ಮನೆಯಲ್ಲಿ ಸಾಮಾನ್ಯವಾಗಿ ಇಬ್ಬರು, ಮೂವರು ಮಾತ್ರ ಇರುತ್ತಾರೆ. ದಿನದಲ್ಲಿ ಒಂದು ಬಾರಿಯಾದರೂ ಎಲ್ಲರೂ ಕೂಡಿ ಊಟ ಮಾಡಬೇಕು. ಹೀಗೆ ಕೂಡಿ ಊಟ ಮಾಡುವ ಪದ್ಧತಿ ಅನುಸರಿಸಿಕೊಂಡು ಬಂದಿರುವ ಮನೆಯಲ್ಲಿ ಸಂತಸ ಹರಡಿರುತ್ತದೆ. ಕುಟುಂಬದ ವಿಘಟನೆಗಳನ್ನು ತಡೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT