ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮರ್ಯಾದೆಗೇಡು ಹತ್ಯೆ– ಬೇಕು ‘ಕರ್ನಾಟಕ ಮಾದರಿ’ ಕಾನೂನು

ಮರ್ಯಾದೆಗೇಡು ಹತ್ಯೆ ವಿರುದ್ಧ ಜನಾಂದೋಲನವೊಂದು ಪುಟಿದೇಳಬೇಕಾಗಿದೆ. ಕನ್ನಡ ನಾಡಿನ ಹೆಣ್ಣುಮಕ್ಕಳನ್ನು, ದುರ್ಬಲ ಜಾತಿಗಳ ಗಂಡುಮಕ್ಕಳನ್ನು ರಕ್ಷಿಸಬೇಕಿದೆ
Published 15 ಅಕ್ಟೋಬರ್ 2023, 23:43 IST
Last Updated 15 ಅಕ್ಟೋಬರ್ 2023, 23:43 IST
ಅಕ್ಷರ ಗಾತ್ರ

ಮಗಳು ಜನಿಸಿದಾಗ ತಂದೆ–ತಾಯಿಯಲ್ಲಿ ಹೊಸ ಕನಸು ಹುಟ್ಟುತ್ತದೆ. ಅವಳನ್ನು ಎದೆಯ ಮೇಲೆ ಮಲಗಿಸಿಕೊಂಡೇ ರಾತ್ರಿಯಿಡೀ ನಿದ್ದೆ ಮಾಡದೆ, ಹೆಸರಿಗಾಗಿ ಹುಡುಕಾಡಿ, ನಾಮಕರಣಕ್ಕೆ ಸಂಬಂಧಿಕರನ್ನು ಆಹ್ವಾನಿಸಿ, ಅವಳನ್ನು ಶಾಲೆಗೆ ಕಳುಹಿಸಿ, ಪ್ರತಿವರ್ಷ ಹುಟ್ಟುಹಬ್ಬದಂದು ಹೊಸ ಬಟ್ಟೆ ತೊಡಿಸಿ, ಕೇಕ್ ಕತ್ತರಿಸಿ, ದೊಡ್ಡವಳಾದಾಗ ಸಂಭ್ರಮಿಸಿ, ಪರೀಕ್ಷೆಯಲ್ಲಿ ಪಾಸಾದಾಗ ಸಿಹಿ ಹಂಚಿ ಜಾತ್ರೆ ಮಾಡುವ ತಂದೆ–ತಾಯಿ, ವಯೋಸಹಜ ಪ್ರೀತಿಯೆಂಬ ಭಾವಕ್ಕೆ ಅವಳು ಸ್ಪಂದಿಸಿದೊಡನೆ
ವ್ಯಘ್ರರಾಗಿಬಿಡುತ್ತಾರೆ!

ಆಕೆ ಪ್ರೀತಿಸಿದ ಹುಡುಗ ದುರ್ಬಲ ಜಾತಿಯವ ನಾಗಿದ್ದರೆ, ಅದರಲ್ಲೂ ದಲಿತನಾಗಿದ್ದರಂತೂ ಸ್ವಂತ ಮಗಳನ್ನೇ ವಿಷವುಣಿಸಿ, ನೇಣು ಹಾಕಿ, ಕತ್ತು ಕೊಯ್ದು, ಬೆಂಕಿ ಹಚ್ಚಿ ಕೊಂದು ಹಾಕುತ್ತಾರಲ್ಲ! ಇಂತಹ ಭೀಕರ ಹತ್ಯೆಗಳು ‘ಮರ್ಯಾದಾ ಹತ್ಯೆ’ಗಳಲ್ಲ, ‘ಮರ್ಯಾದೆಗೇಡು ಹತ್ಯೆ’ಗಳು.

ಸ್ವತಃ ಪ್ರೇಮದ ಭಾವದಲ್ಲಿ ಮಿಂದೇಳುವ, ಪ್ರೇಮಕಥೆಯ ಸಿನಿಮಾಗಳನ್ನು ಮೊದಲ ದಿನವೇ ನೋಡಲು ಟಿಕೆಟ್‍ಗಾಗಿ ಹರಸಾಹಸಪಡುವ ಯುವಕರು ತಮ್ಮ ಅಕ್ಕ-ತಂಗಿಯರಿಗೂ ತಮ್ಮಂತೆಯೇ ಹೃದಯವಿದೆ ಎಂಬುದನ್ನು ಮರೆತು, ಜಾತಿ ವಿಕೃತಿ ಮೆರೆಯುವುದನ್ನು ಕಾಣುತ್ತೇವೆ. ಯಾರೇ ಆಗಲಿ, ಜಾತಿಯ ಪ್ರಮಾಣಪತ್ರ ತೋರಿಸಿ ಪ್ರೀತಿ ಮಾಡಲು ಸಾಧ್ಯವೇ?

ಮರ್ಯಾದೆಗೇಡು ಹತ್ಯೆಗಳಿಗೆ ಜಾತಿಪದ್ಧತಿಯೇ ಮೂಲ ಕಾರಣ. ಇಂತಹ ಭೀಕರ-ಅಸಹ್ಯಕರ ಕೃತ್ಯವನ್ನು ತಮ್ಮ ‘ಜಾತಿ ಮರ್ಯಾದೆ’ ಉಳಿಸಿಕೊಳ್ಳಲು ಮಾಡುತ್ತಿ ರುವುದಾಗಿ ಹೇಳಿಕೊಳ್ಳುವುದು ಆತಂಕವನ್ನುಂಟು ಮಾಡುತ್ತದೆ. ಇಂತಹ ಹತ್ಯೆಗಳ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕಿರುವ ನಾಗರಿಕ ಸಮಾಜವು ಮೌನ ವಹಿಸಿ
ರುವುದನ್ನು ಕಂಡರೆ, ಭವಿಷ್ಯದ ಭಾರತದ ಬಗ್ಗೆ ಆತಂಕ ಉಂಟಾಗುತ್ತದೆ.

ಹೆತ್ತ ಮಕ್ಕಳನ್ನೇ ಕೊಲೆ ಮಾಡುವ ಪೋಷಕರ ಜಾತಿಯ ಮುಖಂಡರು ಇಂತಹ ‘ಮರ್ಯಾದೆಗೇಡು’ ಹತ್ಯೆಗಳನ್ನು ಖಂಡಿಸಿ ಛೀಮಾರಿ ಹಾಕಿದರೆ, ಜಾತಿಪ್ರತಿಷ್ಠೆಗೆ ಅಂಟಿಕೊಂಡಿರುವ ‘ಮರ್ಯಾದೆ’ಯು ಮುರಿದುಬೀಳುತ್ತದೆ. ಕೋಲಾರ ಜಿಲ್ಲೆಯ ಚಲ್ದಿಗಾನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಕೃತ್ಯದಲ್ಲಿ ಹೀಗೆ ಛೀಮಾರಿ ಹಾಕುವ ಪ್ರತಿಭಟನೆ ನಡೆಯಿತು. ಎರಡೂ ಸಮುದಾಯಗಳು ಜಾತಿಯನ್ನು ಮೀರಿ ‘ಮಾನವೀಯತೆ’ ಪರ ನಿಲ್ಲುವ ಮೂಲಕ ಸಮಾಜಕ್ಕೆ ಮಾದರಿಯಾದವು.

ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆಯು ಹಿಂದೂ ಸಮಾಜಕ್ಕೆ ಅಂಟಿಕೊಂಡಿರುವ ಅಪಾಯಕಾರಿ ವೈರಸ್. ಸಾಂಕ್ರಾಮಿಕ ರೋಗಗಳು ಬಲಿ ಪಡೆದಿರುವು ದಕ್ಕಿಂತಲೂ ಹೆಚ್ಚು ಜೀವಗಳನ್ನು ‘ಜಾತಿ ವೈರಸ್’ ಬಲಿ ಪಡೆದಿದೆ. ಹಿಂದೂ ಧರ್ಮದ ಸುಧಾರಣೆ ಬಯಸುವವರು ‘ಮರ್ಯಾದೆಗೇಡು ಹತ್ಯೆ’ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ. ಪ್ರಬಲ ಜಾತಿಗಳಲ್ಲಿ ಬಹುತೇಕರು ಅಂಬೇಡ್ಕರ್ ಅವರು ಕನಸಿದ ‘ಜಾತಿವಿನಾಶ’ಕ್ಕೆ ಬೆನ್ನು ತೋರಿಸಿರುವುದು ಸ್ಪಷ್ಟ. ಜಾತಿವಿನಾಶ ಆಗದೇ ಭಾರತ ಪ್ರಗತಿ ಹೊಂದಲಾರದು ಎಂಬುದನ್ನು ಅವರು ಆದಷ್ಟು ಬೇಗ ತಿಳಿದುಕೊಳ್ಳಬೇಕು. ಕನಿಷ್ಠ ತಮ್ಮ ಜಾತಿ ಸಂಘಟನೆಗಳ ಸಭೆಗಳಲ್ಲಿ ‘ಮರ್ಯಾದೆಗೇಡು ಹತ್ಯೆ’ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಹಿಂದೂ ಧರ್ಮದ ಜಾತಿವಾರು ಸ್ವಾಮೀಜಿಗಳು ತಮ್ಮ ಜನರಲ್ಲಿಗೆ ತೆರಳಿ ಜಾಗೃತಿ ಮೂಡಿಸಬೇಕಿದೆ. ಹೆತ್ತ ಮಕ್ಕಳನ್ನು ಕೊಂದು ಉಳಿಸಿಕೊಳ್ಳುವುದನ್ನು ಧರ್ಮವೆಂದು ಭಾವಿಸಿರುವವರಿಗೆ ಬುದ್ಧಿ ಹೇಳಬೇಕಿದೆ.

ಇಂತಹ ಹತ್ಯೆಗಳು ಮುಸ್ಲಿಂ ಸಮುದಾಯ ಮತ್ತು ದಲಿತ ಸಮುದಾಯದೊಳಗೂ ಕಂಡುಬಂದಿವೆ. ಕೋಮುವಾದ ಮತ್ತು ಅಸ್ಪೃಶ್ಯತೆಯಿಂದ ತಾರತಮ್ಯಕ್ಕೆ ಒಳಗಾಗುತ್ತಿರುವ ಈ ಸಮುದಾಯಗಳು ಇಂತಹ ಜೀವವಿರೋಧಿ ಕಳೆಗಳನ್ನು ಆರಂಭದಲ್ಲಿಯೇ ಕಿತ್ತು ಬಿಸಾಕದಿದ್ದರೆ, ತಮ್ಮ ಹಳ್ಳವನ್ನು ತಾವೇ ತೋಡಿಕೊಂಡಂತೆ ಆಗುತ್ತದೆ.

ಕರ್ನಾಟಕದಲ್ಲಿ ಈ ಐದು ತಿಂಗಳಿನಲ್ಲಿ ಐದು ಮರ್ಯಾದೆಗೇಡು ಹತ್ಯೆಗಳು ಸಂಭವಿಸಿವೆ. ಕೋಲಾರ ಜಿಲ್ಲೆಯಲ್ಲಿಯೇ ಮೂರು ಪ್ರಕರಣಗಳು ನಡೆದಿವೆ. ಹೆತ್ತ ಮಗಳನ್ನು ಕೊಲೆ ಮಾಡಿದ ಕುಟುಂಬಗಳಲ್ಲಿ ಕಿಂಚಿತ್ತೂ ಪಶ್ಚಾತ್ತಾಪದ ಭಾವ ಕಂಡುಬಾರದಿರುವುದು ಮತ್ತಷ್ಟು ಆತಂಕವನ್ನು ಉಂಟುಮಾಡುತ್ತದೆ. ಸರ್ವ ಜನಾಂಗದ ಶಾಂತಿಯ ತೋಟವೆಂದು ಬೆನ್ನು ತಟ್ಟಿಕೊಳ್ಳುವ ಕನ್ನಡಿಗರಾದ ನಾವು, ಈ ನಕಾರಾತ್ಮಕ ಬೆಳವಣಿಗೆಯನ್ನು ಬುಡಸಮೇತ ಕಿತ್ತುಹಾಕಲು ಮುಂದಾಗ ಬೇಕಿದೆ. ಮರ್ಯಾದೆಗೇಡು ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರತ್ಯೇಕ ಕಾನೂನಿಗಾಗಿ ಸರ್ಕಾರವನ್ನು ಆಗ್ರಹಿಸಬೇಕಿದೆ.

ಇದು ಜಾತಿ ವೈರಸ್‍ಗಳಲ್ಲಿ ಸ್ವಲ್ಪಮಟ್ಟಿಗೆ ಭಯ ಹುಟ್ಟಿಸುತ್ತದಾದರೂ ಸಾಮಾಜಿಕ ಜಾಗೃತಿಗಾಗಿ ಜನಾಂದೋಲನವೊಂದು ಪುಟಿದೆದ್ದು, ಕನ್ನಡ ನಾಡಿನ ಹೆಣ್ಣುಮಕ್ಕಳನ್ನು ಹಾಗೂ ದುರ್ಬಲ ಜಾತಿಗಳ ಗಂಡುಮಕ್ಕಳನ್ನು ರಕ್ಷಿಸಲು ಪಣ ತೊಡಬೇಕಿದೆ. ಅಂತರ್ಜಾತಿ ವಿವಾಹಿತರಿಗೆ ಆಶ್ರಯ, ಆರ್ಥಿಕ ಸಬಲೀಕರಣ, ಭದ್ರತೆಯಂತಹವನ್ನು ಒದಗಿಸುವ ಯೋಜನೆಗಳನ್ನು ರೂಪಿಸಲು ಸ್ವತಃ ಕೈಹಾಕಬೇಕಿದೆ ಹಾಗೂ ಸರ್ಕಾರವನ್ನು ಒತ್ತಾಯಿಸಬೇಕಿದೆ.

‘ಕರ್ನಾಟಕ ಮಾದರಿ’ಗಳಿಂದ ಹೆಸರಾಗಿರುವ ಸರ್ಕಾರವು ಮರ್ಯಾದೆಗೇಡು ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಮತ್ತೊಂದು ಮಾದರಿಯನ್ನು ಹಾಕಿಕೊಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT