ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಾಳಜಿಯ ಹೆಸರಿನಲ್ಲಿ ‘ಗೃಹಬಂಧನ’!

ಮನೆಯಿಂದ ಹೊರಗೆ ಹೋದರೆ ಹೇಗೋ ಏನೋ ಎಂಬ ಭೀತಿಯಿಂದ ಹಿರಿಯರ ಚಲನವಲನಗಳ ಮೇಲೆ ನಿರ್ಬಂಧ ಹೇರುವುದು ತರವಲ್ಲ
Published 2 ನವೆಂಬರ್ 2023, 19:30 IST
Last Updated 2 ನವೆಂಬರ್ 2023, 19:30 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯವೊಂದರಲ್ಲಿ ಒಳ್ಳೆಯ ಪ್ರಾಧ್ಯಾಪಕ ಎಂದು ಹೆಸರು ಪಡೆದು ನಿವೃತ್ತಿ ಹೊಂದಿರುವ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ, ‘ಬಹಳ ದಿನಗಳಿಂದ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿಲ್ಲ ವಲ್ಲ, ಯಾಕೆ?’ ಎಂದೆ. ಗೆಳೆಯ ನಿಟ್ಟುಸಿರುಬಿಡುತ್ತಿರುವುದು ಫೋನಿನಲ್ಲಿಯೇ ಗೊತ್ತಾಯಿತು.

ನಿಧಾನಕ್ಕೆ ಹೇಳತೊಡಗಿದರು, ‘ನಾನು ಡ್ರೈವ್ ಮಾಡುತ್ತಿದ್ದ ಕಾರು ರಸ್ತೆಬದಿ ನಿಂತಿದ್ದ ಆಕಳಿಗೆ ತಾಗಿತು. ಯಾವುದೇ ಅಪಾಯ ಆಗಲಿಲ್ಲ. ಕಾರಿನ ಮುಂಭಾಗದಲ್ಲಿ ಕೊಂಬು ತಾಕಿದ್ದ ಕುರುಹನ್ನು ಗಮನಿಸಿದ ನನ್ನ ಮಗ, ಕಾರಿನ ಕೀಲಿಕೈ ಕಿತ್ತುಕೊಂಡು, ಹೊರಗೆ ಹೋಗುವುದು ಬೇಡ ಎಂದಿದ್ದಾನೆ. ಸ್ಕೂಟರ್ ಕೀಲಿಕೈಯನ್ನು ಹೆಂಡತಿ ಅಡಗಿಸಿ ಇಟ್ಟಿದ್ದಾಳೆ. ಒಂದು ರೀತಿ ಗೃಹಬಂಧನದಲ್ಲಿ ಇದ್ದೇನೆ. ಮೇಲಂತಸ್ತಿನ ರೂಮಿನಲ್ಲಿ ಇದ್ದುಬಿಟ್ಟಿದ್ದೇನೆ. ಕುಟುಂಬದವರೇ ನನ್ನ ಮೇಲೆ ಹೇರಿದ ಲಾಕ್‌ಡೌನ್ ಇದು...’ ಎಂದರು. ಅವರ ಮಾತು ಕೇಳಿ ನಲುಗಿಹೋದೆ.

ಇದು, ಅವರೊಬ್ಬರದೇ ಕಥೆಯಲ್ಲ, ಬಹಳಷ್ಟು ಹಿರಿಯ ನಾಗರಿಕರ ಬದುಕು ಇದೇ ರೀತಿ ಸಾಗುತ್ತಿದೆ. ಬಿದ್ದುಬಿಡಬಹುದು, ವಾಹನ ಡಿಕ್ಕಿ ಹೊಡೆಯಬಹುದು, ವಯಸ್ಸಾದವರಿಗೆ ಅಪಾಯ ಸಂಭವಿಸುವುದು ಜಾಸ್ತಿಯಾದ್ದರಿಂದ ರಿಸ್ಕ್ ಬೇಡ, ಪ್ರತ್ಯೇಕವಾದ ವಿಶಾಲ ರೂಮ್ ಇದೆ, ಟಿ.ವಿ. ಇದೆ, ದಿನಪತ್ರಿಕೆ ಅಥವಾ ಪುಸ್ತಕ ಓದುತ್ತಾ ಕುಳಿತುಕೊಳ್ಳಿ ಎಂದೆಲ್ಲ ಮಕ್ಕಳು, ಕುಟುಂಬ ವರ್ಗದವರು ಹಿರಿಯ ನಾಗರಿಕರಿಗೆ ‘ಸುರಕ್ಷಿತ ಗೃಹಬಂಧನದ ಶಿಕ್ಷೆ’ ವಿಧಿಸುತ್ತಿರುವುದು ಎಲ್ಲೆಡೆ ಕಾಣಿಸುತ್ತಿದೆ. ಈ ಪ್ರವೃತ್ತಿ ನಗರಗಳಲ್ಲಿ ಹೆಚ್ಚಾಗಿದೆ.

ಹಿರಿಯರು ಅಪಾಯಕ್ಕೆ ಸಿಲುಕಬಾರದು ಎಂದು ಕಾಳಜಿ ವಹಿಸುವುದು ಸರಿ ಇರಬಹುದು. ಆದರೆ, ಅವರ ಚಲನವಲನಗಳ ಮೇಲೆ ನಿರ್ಬಂಧ ಹೇರುವುದರ ಪರಿಣಾಮವಾಗಿ ಅವರು ಅನುಭವಿಸುವ ಏಕಾಂಗಿತನ, ಹತಾಶೆ, ನೋವು, ಸಂಕಟ, ನಿಷ್ಕ್ರಿಯತೆಯ ಬಾಧೆ ಅಷ್ಟಿಷ್ಟಲ್ಲ. ಹಿರಿಯರು ಯಾವುದೇ ಕೆಲಸ ಮಾಡಲು ಮುಂದಾದರೆ ‘ಇದೆಲ್ಲ ಉಸಾಬರಿ ನಿಮಗೇಕೆ? ಹಾಯಾಗಿ ಕುಳಿತುಕೊಳ್ಳಿ, ಹಿಂದೆ ಬಹಳಷ್ಟು ದುಡಿದಿ ದ್ದೀರಲ್ಲ’ ಎಂದು ತಡೆಯುತ್ತಾರೆ. ಹೊರಗೆ ಹೋಗಿ ಸ್ವತಂತ್ರವಾಗಿ ವ್ಯವಹರಿಸುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಇಂಥ ದಿಗ್ಬಂಧನವು ಹಿರಿಯರಲ್ಲಿ ಇನ್ನಿಲ್ಲದ ಕಿರಿಕಿರಿ ಉಂಟುಮಾಡುತ್ತದೆ. ತಾನು ನಿರುಪಯುಕ್ತ, ತನ್ನಿಂದ ಇನ್ನು ಯಾವುದೇ ಪ್ರಯೋಜನ ವಿಲ್ಲ ಎನ್ನುವ ಭಾವನೆಯಿಂದ ಆರೋಗ್ಯ  ಕ್ಷೀಣಿಸುವ ಸಾಧ್ಯತೆ ಇರುತ್ತದೆ. ವ್ಯಕ್ತಿ ಸಮಾಜದಲ್ಲಿ ತನ್ನ ಹಾಜರಿ ಮತ್ತು ಅಸ್ತಿತ್ವ ಕಾಯ್ದುಕೊಳ್ಳುವುದು ಬಹಳ ಅವಶ್ಯ. ಮನೆಯಿಂದ ಹೊರಗೆ ಹೋಗುವುದು ನಿಂತ ಮೇಲೆ ಭೇಟಿಯಾಗಲು ಬರುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಹಾಗೆಯೇ ಕಾರ್ಯಕ್ರಮಕ್ಕೆ, ಸಮಾರಂಭಗಳಿಗೆ ಆಮಂತ್ರಿಸುವುದು ನಿಂತುಹೋಗುತ್ತದೆ.

ಅಂಚೆ ಇಲಾಖೆಯಿಂದ ನಿವೃತ್ತರಾದ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದೆ. ‘ಮನೆಯಿಂದ ಹೊರಗೆ ಬಿಡುತ್ತಿಲ್ಲ. ಪ್ರೀತಿಯಿಂದ ನಾನು ಬೆಳೆಸಿದ ನಮ್ಮ ಹೊಲದ ಗಿಡಮರಗಳನ್ನು ನೋಡುವ ಸಂತೋಷವೂ ಕಳೆದುಹೋಗಿದೆ. ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ನನ್ನನ್ನು ಅಲ್ಲ, ನನಗೆ ಬರುವ ಪಿಂಚಣಿಯನ್ನು’ ಎಂದರು. ಅವರ ಮಾತಿನಲ್ಲಿ ವ್ಯಂಗ್ಯ ಮತ್ತು ಸಿಟ್ಟು ತುಂಬಿತ್ತು.

ಇನ್ನೊಂದು ಗುಂಪಿನ ಹಿರಿಯ ನಾಗರಿಕರಿ ದ್ದಾರೆ. ಅವರು ತಮ್ಮಷ್ಟಕ್ಕೆ ತಾವೇ ನಿರ್ಬಂಧ ಹೇರಿಕೊಂಡು ಮನೆ ಬಿಟ್ಟು ಹೊರಗೆ ಹೋಗುವುದಿಲ್ಲ. ವಯಸ್ಸಾದವರು, ನಿವೃತ್ತರು ಕೆಲಸ ಮಾಡಬಾರದು, ಸುಖವಾಗಿ ಉಂಡು, ಹಾಯಾಗಿ ಮಲಗಿ ದಿನ ಕಳೆಯಬೇಕು ಎಂದು ಇವರು ಭಾವಿಸುತ್ತಾರೆ. ಇದು ಕುಟುಂಬದವರಿಗೂ ಇಷ್ಟವಾಗುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ ನಡೆ ಅಲ್ಲ.

ಮನುಷ್ಯ ಸಮಾಜಜೀವಿ ಮತ್ತು ಸ್ವಭಾವದಿಂದ ಅಲೆಮಾರಿ. ಅವನು ಬಯಲಿನಲ್ಲಿದ್ದರೆ ಮಾತ್ರ ಚೆನ್ನಾಗಿ ಬದುಕಬಲ್ಲ. ಮನೆಯಿಂದ ಆಚೆ ಗೆಳೆಯರನ್ನು ಭೇಟಿಯಾಗಲು, ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಹೋಟೆಲ್‌ಗೆ ಹೋಗಿ ಗೆಳೆಯರೊಂದಿಗೆ ಚಹಾ ಕುಡಿಯಲು, ವಾಚನಾಲಯಕ್ಕೆ ಹೋಗಿ ಇಷ್ಟವಾದ ಪುಸ್ತಕ ತರುವಂತಹ ಕೆಲಸಗಳಿಗೆ ಹಿರಿಯ ನಾಗರಿಕರು ಸುತ್ತುತ್ತಲೇ ಇದ್ದರೆ ಒಳಿತು. ಇದರಿಂದ ಅವರ ಆರೋಗ್ಯ, ಆಯುಷ್ಯ ಹೆಚ್ಚುತ್ತದೆ ಮಾತ್ರವಲ್ಲ, ಕುಟುಂಬದ ಸಂತೋಷವೂ ಹೆಚ್ಚುತ್ತದೆ.

ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿನ ಉಕ್ಕು ಕಾರ್ಖಾನೆಯ ಉದ್ಯೋಗಿಗಳ ಪಾಲಕರು ಕಟ್ಟಿಕೊಂಡ ಹಿರಿಯ ನಾಗರಿಕರ ವೇದಿಕೆ ಮಾದರಿಯಾಗಿದೆ. ಅತ್ಯಂತ ಹೆಚ್ಚು ವಯಸ್ಸಾದ ವ್ಯಕ್ತಿ ಅಧ್ಯಕ್ಷ, ಕಿರಿಯನಾದ ವ್ಯಕ್ತಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕಾರ್ಖಾನೆಯ ಉದ್ಯೋಗಿಗಳ ಕಾಲೊನಿಯಲ್ಲಿರುವ ಉಪವನದಲ್ಲಿ ಇವರು ಪ್ರತಿದಿನ ಸೇರುತ್ತಾರೆ. ತಾವು ಮೆಚ್ಚಿದ ಪುಸ್ತಕ, ಅಂದಿನ ಮಹತ್ವದ ಸುದ್ದಿ, ದೇಶದ ವಿಷಯಗಳನ್ನು ಚರ್ಚಿಸಿ ನಕ್ಕು ಸಂಭ್ರಮಿಸುತ್ತಾರೆ. ಸಂಜೆ ವಾಕಿಂಗ್, ವ್ಯಾಯಾಮ, ಯೋಗ ಮಾಡುತ್ತಾರೆ. ಹುಟ್ಟುಹಬ್ಬಗಳನ್ನು ಎಲ್ಲರೂ ಕೂಡಿ ಆಚರಿಸುತ್ತಾರೆ. ಪ್ರವಾಸಕ್ಕೆ ಹೋಗುತ್ತಾರೆ. ಇದರಿಂದಾಗಿ ಅವರು ಮುಪ್ಪು ಗೆದ್ದಿದ್ದಾರೆ.

ಮನೆಯಲ್ಲಿ ಏಕಾಂಗಿಯಾಗಿ ಕುಳಿತುಕೊಳ್ಳುವುದ ರಿಂದ ಮರೆವು, ಕಿವಿ, ದೃಷ್ಟಿ ಮಂದವಾಗುವಂತಹ ವಯೋಸಹಜ ತೊಂದರೆಗಳು ಬೇಗ ಕಾಣಿಸಿಕೊಳ್ಳುತ್ತವೆ. ಸಮಾಜದ ಕಣ್ಣೆದುರಿನಿಂದ ದೂರವಾದವರು ಕ್ರಮೇಣ ಜನರ ಮನಸ್ಸಿನಿಂದಲೂ ದೂರವಾಗುತ್ತಾರೆ ಎನ್ನುವ ಮಾತು ಇದೆ. ಹಿರಿಯರನ್ನು ಮನೆಯಲ್ಲಿ ಕಟ್ಟಿ ಹಾಕುವವರು ಈ ನುಡಿಯ ಸೂಕ್ಷ್ಮತೆ ಅರಿತುಕೊಳ್ಳುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT