ಬುಧವಾರ, ಡಿಸೆಂಬರ್ 8, 2021
18 °C
ಶಿಕ್ಷಣದೊಂದಿಗೆ ಆಧುನಿಕತೆ ಜೊತೆಗೂಡಿ ಭಾವನೆಗಳು ಜಡವಾಗುತ್ತಿವೆ

ಸಂಗತ: ಪ್ರತಿಮನೆಗೂ ಬೇಕು ಹಿರಿಯ ಜೀವ

ರಾಜಕುಮಾರ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ನನ್ನ ಬಂಧುವೊಬ್ಬರು ತುಂಬ ಶಿಸ್ತಿನ ಮನುಷ್ಯ. ಇತ್ತೀಚೆಗೆ ಎರಡು ದಿನಗಳ ಕಾಲ ಹೆಂಡತಿ ಮತ್ತು ಮಗಳೊಂದಿಗೆ ಅವರ ಮನೆಯಲ್ಲಿ ತಂಗಬೇಕಾಯಿತು. ಆ ಎರಡು ದಿನಗಳು ನಮಗೆ ಅಕ್ಷರಶಃ ಜೈಲಿನಲ್ಲಿದ್ದ ಅನುಭವವಾಯಿತು. ಅವರ ಮನೆಯಲ್ಲಿ ಧ್ವನಿ ಎತ್ತರಿಸಿ ಮಾತನಾಡುವಂತಿಲ್ಲ, ಜೋರಾಗಿ ನಗುವಂತಿಲ್ಲ, ಸೀನು, ಕೆಮ್ಮುಗಳಿಗೆ ಅವಕಾಶವೇ ಇಲ್ಲ, ಅಪಾನುವಾಯುವನ್ನು ಕೂಡ ಜಠರದೊಳಗೇ ಇಂಗಿಸಿಕೊಳ್ಳಬೇಕು. ನನಗೋ ಚಹಾ ಬಾಯಿ ಚಪ್ಪರಿಸಿ ಕುಡಿದೇ ರೂಢಿ. ಆದರೆ ಬಾಯಿ ಚಪ್ಪರಿಸುವುದಾಗಲೀ, ಕಚ್ಚಿ ನೀರು ಕುಡಿಯುವುದಾಗಲೀ ಅನಾಗರಿಕತೆಯ ಲಕ್ಷಣ ಎಂದು ಭಾವಿಸಿದ ಮನೆಯದು. ಆ ಮನೆಯ ಜನ ಮಾತಿನಲ್ಲಷ್ಟೇ ತೂಕಬದ್ಧರಲ್ಲ ಆಹಾರವನ್ನು ಕೂಡ ಅವರು ತೂಗಿಯೇ ತಿನ್ನುವರು.

ವಯಸ್ಸಾದ ಅಜ್ಜಿಯೊಬ್ಬಳಿದ್ದಾಳೆ ಅವರ ಮನೆಯಲ್ಲಿ. ಬದುಕಿನ ಬಹುಭಾಗ ಹಳ್ಳಿಯಲ್ಲೇ ಕಳೆದ ವಳು ಈಗ ಆಶ್ರಯಕ್ಕಾಗಿ ಮಗನ ಮನೆಗೆ ಬಂದಿದ್ದಾಳೆ. ನಗರ ಬದುಕಿನ ನಾಗರಿಕತೆಯ ಸ್ಪರ್ಶ ಆ ಅಜ್ಜಿಗೆ ಇನ್ನೂ ಸೋಕಿಲ್ಲದ ಕಾರಣ, ಮನೆಯ ಸದಸ್ಯರಿಗೆ ಅವಳನ್ನು ಸಂಭಾಳಿಸುವುದೇ ದೊಡ್ಡ ಸಮಸ್ಯೆಯಾಗಿದೆ. ನಾವಿದ್ದ ಸಮಯದಲ್ಲೇ ತುಂಬ ಸಿವಿಲೈಜ್ಡ್ ಕುಟುಂಬವೊಂದು ಆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿ ದ್ದರಿಂದ, ಅಜ್ಜಿಯನ್ನು ಒಂದು ದಿನದ ಮಟ್ಟಿಗೆ ದೂರದ ಸಂಬಂಧಿಕರ ಮನೆಗೆ ಸಾಗಹಾಕಲಾಯಿತು. ಅದುವರೆಗೂ ಸಮಾಜದಲ್ಲಿ ತಾವು ಕಾಯ್ದುಕೊಂಡುಬಂದಿದ್ದ ಗೌರವ, ಪ್ರತಿಷ್ಠೆಗೆ ಆ ಅನಾಗರಿಕ ಅಜ್ಜಿಯಿಂದ ಧಕ್ಕೆ ಬರಬಹುದೆನ್ನುವ ಆತಂಕ ಅವರದಾಗಿತ್ತು. ಪ್ರತಿ ರೋಧಿಸುವುದು ಎಲ್ಲಿ ಅನಾಗರಿಕತೆಯಾದೀತೋ ಎಂದು ಹೆದರಿ ಬಾಯಿಮುಚ್ಚಿ ಕುಳಿತುಕೊಳ್ಳಬೇಕಾದ ಅಸಹಾಯಕತೆ ನನ್ನದಾಗಿತ್ತು. ಆ ಅಸಹಾಯಕತೆಯೂ ಒಂದರ್ಥದಲ್ಲಿ ಅನಾಗರಿಕತೆಯ ರೂಪಾಂತರವಾಗಿತ್ತು ಎಂದು ಈಗ ನನಗನಿಸುತ್ತಿದೆ.

ಆಧುನಿಕ ನಾಗರಿಕತೆಯ ಇನ್ನೊಂದು ಘಟನೆ ಹೀಗಿದೆ. ನನ್ನ ಪರಿಚಿತರೊಬ್ಬರು ಮಗಳಿಗೆ ಗಂಡು ಹುಡುಕುತ್ತಿದ್ದಾರೆ. ಸಾಫ್ಟ್‌ವೇರ್ ಓದಿರುವ ಮಗಳಿಗೆ ಗಂಡು ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು ಸ್ವಂತಕ್ಕೊಂದು ಸೂರಿದ್ದರೆ ಸಾಕು. ನಾದಿನಿಯರ ಕಾಟದಿಂದ ಮನೆ ಮುಕ್ತವಾಗಿರಬೇಕಾದ್ದರಿಂದ ತಂದೆ– ತಾಯಿಗೆ ಒಬ್ಬನೇ ಮಗನಾಗಿರಬೇಕು. ಅಪ್ಪ-ಅಮ್ಮ ಸ್ವರ್ಗಸ್ಥರಾಗಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ದೊಡ್ಡಪ್ಪ, ಚಿಕ್ಕಪ್ಪ, ಸೋದರತ್ತೆ, ಸೋದರಮಾವ ಈ ಎಲ್ಲ ಸಂಬಂಧಗಳಿಂದ ಮದುವೆ ಗಂಡು ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡಿ ರಬೇಕು. ಒಟ್ಟಾರೆ ಬಂಧು– ಬಳಗ ಇಲ್ಲದ ಅನಾಥನಾಗಿದ್ದರೆ ಮೊದಲ ಆದ್ಯತೆ. ಬಹುತೇಕ ಕನ್ಯಾಮಣಿಗಳ ಅಪ್ಪ– ಅಮ್ಮಂದಿರ ಬೇಡಿಕೆಗಳಿವು. ಹಾಗೆಂದು ಇದನ್ನು ಅನಾಗರಿಕತೆ ಎಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಆಧುನಿಕ ಸಮಾಜದ ಸುಶಿಕ್ಷಿತ ಅಪ್ಪ– ಅಮ್ಮಂದಿರ ನಾಗರಿಕ ಬೇಡಿಕೆಗಳಿವು.

ಆಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಮಾಹಿತಿ ಪ್ರಸರಣ ಅತೀ ವೇಗವನ್ನು ಪಡೆದುಕೊಂಡಿದೆ. ರಸ್ತೆ ಅಪಘಾತ, ಬೆಂಕಿ ಅವಘಡದಂತಹ ಸಂದರ್ಭಗಳಲ್ಲೂ ಮನುಷ್ಯ ಸಂವೇದನೆಯನ್ನೇ ಕಳೆದುಕೊಂಡು, ಘಟನೆಯನ್ನು ಚಿತ್ರೀಕರಿಸಿ ಶೀಘ್ರವಾಗಿ ಮಾಹಿತಿಯನ್ನು ಇತರರಿಗೆ ತಲುಪಿಸುವ ಧಾವಂತಕ್ಕೆ ಒಳಗಾಗುತ್ತಿದ್ದಾನೆ. ಸಂಗತಿಯೊಂದನ್ನು ವಿಶ್ಲೇಷಿಸಿ ವಿಮರ್ಶಿಸುವ ವ್ಯವಧಾನವಾಗಲೀ ಸಂಯಮವಾಗಲೀ ಇಲ್ಲದ ಮನುಷ್ಯ ಮಾಡುತ್ತಿರುವುದು ಸುದ್ದಿಯ ವಿಲೇವಾರಿಯೊಂದೇ.

ಸಾವಿನ ಮನೆಯ ಸೂತಕವೂ ಇಂದು ಪ್ರಸರಣ ಯೋಗ್ಯ ಸಂಗತಿಯಾಗಿದೆ. ಸ್ನೇಹಿತರೊಬ್ಬರು ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡ ಅವರ ತಂದೆಯ ಸಾವಿನ ಸುದ್ದಿಗೆ ಸರಿಸುಮಾರು ನೂರು ಕಮೆಂಟ್‍ಗಳು, ಐದುನೂರು ಲೈಕ್‍ಗಳು ಪ್ರಾಪ್ತವಾಗಿದ್ದವು. ವಿಪರ್ಯಾಸವೆಂದರೆ, ಅಂತಿಮಸಂಸ್ಕಾರದಲ್ಲಿ ಹಾಜರಿದ್ದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಆಧುನಿಕ ಪರಿವೇಷ ಧರಿಸಿರುವ ಇಂಥ (ಅ)ನಾಗರಿಕತೆಗಳನ್ನು ನೋಡುತ್ತಿದ್ದರೆ ನನಗೆ ನನ್ನೂರಿನ ಗಂಗಜ್ಜಿ ನೆನಪಾಗುತ್ತಾಳೆ. ಹತ್ತು ಹಡೆದು ಗಂಡನೊಡನೆ ಹೆಗಲೆಣೆಯಾಗಿ ದುಡಿದು ಬದುಕು ಕಟ್ಟಿಕೊಂಡವಳು ಗಂಗಜ್ಜಿ. ಈಗ ವಯಸ್ಸಾಗಿದೆ. ಮನೆಯ ಯಜಮಾನಿಕೆಯನ್ನು ಸೊಸೆಯಂದಿರಿಗೆ ಒಪ್ಪಿಸಿ ಊರ ಉಸಾಬರಿಯಲ್ಲಿ ತೊಡಗಿಕೊಂಡಿದ್ದಾಳೆ. ಯಾರದೇ ಮನೆಯ ಶುಭ, ಅಶುಭ ಕಾರ್ಯಗಳಿರಲಿ ಹಾಜರಿರುತ್ತಾಳೆ. ಅವರ ಸಂಭ್ರಮದಲ್ಲಿ ತಾನೂ ಸಂಭ್ರಮಿಸುತ್ತಾಳೆ. ಸಾವಿನ ಮನೆಯಾಗಿದ್ದರೆ ಆ ಕುಟುಂಬದ ಸದಸ್ಯರ ದುಃಖದಲ್ಲಿ ಭಾಗಿಯಾಗಿ ಅವರ ಕಣ್ಣೊರೆಸುತ್ತಾಳೆ. ಯಾರದೋ ಮನೆಯ ರಚ್ಚೆಹಿಡಿದ ಮಗು ಅವಳ ಸೊಂಟದಲ್ಲಿ ಕುಳಿತು ಅಳು ಮರೆಯುತ್ತದೆ. ಅತಿಥಿ ಸತ್ಕಾರದಲ್ಲಿ ಗಂಗಜ್ಜಿ ಅಕ್ಷರಶಃ ಮಾತೃ ಸಮಾನಳು. ನಾಗರಿಕತೆಯ ಯಾವ ಶಿಷ್ಟಾಚಾರಕ್ಕೂ ಒಳಗಾಗದ ಗಂಗಜ್ಜಿಯ ವರ್ತನೆ, ಆಧುನಿಕತೆಗೆ ಪಕ್ಕಾದ ಮೊಮ್ಮಕ್ಕಳಿಗೆ ಅನಾಗರಿಕವಾಗಿ ಕಾಣಿಸುತ್ತಿದೆ.

ಶಿಕ್ಷಣದೊಂದಿಗೆ ಆಧುನಿಕತೆ ಜೊತೆಗೂಡಿ ಮನು ಷ್ಯನ ಭಾವನೆಗಳು ಜಡವಾಗುತ್ತಿವೆ. ಸಂಬಂಧಗಳು ಸಂಕುಚಿತಗೊಂಡು ಬದುಕು ದ್ವೀಪವಾಗುತ್ತಿದೆ. ವಿಪರ್ಯಾಸವೆಂದರೆ, ಹೀಗೆ ಬದುಕುವುದನ್ನೇ ಜನರು ನಾಗರಿಕತೆ ಎಂದು ಭಾವಿಸಿದ್ದಾರೆ. ಪ್ರೀತಿ, ವಾತ್ಸಲ್ಯದ ಭಾವನೆಗಳು ಹಿಂದೆ ಸರಿದು ಲಾಭ, ನಷ್ಟದ ವ್ಯಾಪಾರಿ ಮನೋಭಾವವೇ ಮುನ್ನೆಲೆಗೆ ಬಂದಿದೆ.

ಕಟ್ಟುವುದಾದರೆ ಸೇತುವೆಗಳನ್ನು ಕಟ್ಟಿ, ಕೆಡ ಹುವುದಾದರೆ ಗೋಡೆಗಳನ್ನು ಕೆಡವಿ ಎಂದಿರುವರು ಅನುಭಾವಿಗಳು. ಆದರೆ ಮನುಷ್ಯನು ಮನಸ್ಸುಗಳ ನಡುವೆ ಸೇತುವೆಗಳನ್ನು ಕೆಡವುತ್ತ ಗೋಡೆಗಳನ್ನು ಕಟ್ಟುತ್ತಿದ್ದಾನೆ. ಗೋಡೆಗಳನ್ನು ಕೆಡವಿ ನಾಗರಿಕತೆಯ ಆಧುನಿಕ ಮುಖವಾಡ ಕಿತ್ತೊಗೆಯಲು ಪ್ರತಿಮನೆಗೂ ಗಂಗಜ್ಜಿಯಂಥ ಹಿರಿಯ ಜೀವದ ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು