ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹಾರುವ ವಸ್ತು: ತಣಿಯದ ಕುತೂಹಲ

ವಿಶ್ವದಾದ್ಯಂತ ವರದಿಯಾಗಿರುವ ‘ಗುರುತಿಸಲಾಗದ ಹಾರುವ ವಸ್ತು’ಗಳ ಘಟನೆಗಳು, ಖಗೋಳಾಸಕ್ತರಿಂದ ಹಿಡಿದು ಸೇನಾಪಡೆಗಳವರೆಗೆ ಹಲವರ ನಿದ್ದೆಗೆಡಿಸಿವೆ
Last Updated 1 ಜುಲೈ 2020, 19:30 IST
ಅಕ್ಷರ ಗಾತ್ರ

ಸೌರವ್ಯೂಹದ ಬಗೆಗಿನ ತಿಳಿವಳಿಕೆ ಹೆಚ್ಚಾದ ದಿನಗಳಿಂದ ಆಸಕ್ತರು ಹಾಗೂ ಜನಸಾಮಾನ್ಯರೆನ್ನದೆ ಎಲ್ಲರನ್ನೂ ‘ನಮ್ಮಲ್ಲಿರುವಂತೆ ಅನ್ಯಗ್ರಹಗಳಲ್ಲೂ ಜೀವಿಗಳಿವೆಯೇ’ ಎಂಬ ಪ್ರಶ್ನೆ ನಿರಂತರವಾಗಿ ಕಾಡುತ್ತಿದೆ. ಬೇರೊಂದು ಗ್ರಹದಲ್ಲಿ ಜೀವಿಗಳಿವೆ, ಅವು ಭೂಮಿಯನ್ನು ಆಗಾಗ ಸಂದರ್ಶಿಸುತ್ತವೆ ಎಂಬ ನಂಬಿಕೆ ಹೊಂದಿರುವ ಅನೇಕರು, ಗುರುತಿಸಲಾಗದ ಹಾರುವ ವಸ್ತು ಅಥವಾ ನೌಕೆಯನ್ನು ಬಳಸಿಕೊಂಡು ಅವು ಆಗಾಗ ಇಲ್ಲಿಗೆ ಬರುತ್ತವೆ ಎಂದು ವಾದಿಸುತ್ತಾರೆ.

ಹಾರುವ ತಟ್ಟೆಯಂತೆ ಕಾಣುವ ಗಗನನೌಕೆಯನ್ನು ಬಳಸಿಕೊಂಡು ಭೂಮಿಯನ್ನು ಆಗಾಗ ಸಂದರ್ಶಿಸುವ ಜೀವಸಂಕುಲವೊಂದು ಅನ್ಯಗ್ರಹದಲ್ಲಿದೆ, ಅದು ನಮಗಿಂತ ಅತ್ಯಂತ ಮುಂದುವರಿದಿದೆ ಮತ್ತು ಶಕ್ತಿಶಾಲಿಯಾಗಿದೆ ಎಂಬ ನಂಬಿಕೆ ಅನೇಕರಲ್ಲಿ ಮನೆ ಮಾಡಿದೆ. ವಿಶ್ವದ ವಿವಿಧ ಭಾಗಗಳಲ್ಲಿ ವರದಿಯಾಗುವ ‘ಗುರುತಿಸಲಾಗದ ಹಾರುವ ವಸ್ತು’ಗಳ ಘಟನೆಗಳು ಖಗೋಳಾಸಕ್ತರಿಂದ ಹಿಡಿದು ದೇಶಗಳ ಭದ್ರತೆಯ ಉಸ್ತುವಾರಿ ಗೊತ್ತಿರುವ ಸೇನಾಪಡೆಗಳವರೆಗೆ ಹಲವರ ನಿದ್ದೆಗೆಡಿಸಿವೆ. ಅದರಲ್ಲೂ ಏಪ್ರಿಲ್ 20ರಂದು ವಿಡಿಯೊ ತುಣುಕೊಂದನ್ನು ಬಿಡುಗಡೆ ಮಾಡಿದ ಅಮೆರಿಕದ ‘ಪೆಂಟಗನ್’, ಗುರುತಿಸಲಾಗದ ಹಾರುವ ವಸ್ತುಗಳು ಇರಬಹುದು ಎಂಬುದಕ್ಕೆ ಸಾಕ್ಷ್ಯ ಒದಗಿಸಿತ್ತು. ಮೊನ್ನೆ ಬೆಂಗಳೂರಿನ ಆಕಾಶದಲ್ಲಿ ಕೇಳಿಬಂದ ಅಗಾಧ ಶಬ್ದವೂ ‘ಏಲಿಯನ್’ಗಳು ಬಳಸಿದ ನೌಕೆಯಿಂದ ಉಂಟಾಗಿರಬಹುದು ಎಂಬ ಶಂಕೆ ಅನೇಕರಲ್ಲಿ ವ್ಯಕ್ತವಾಯಿತು.

ಘಟಿಸುವ ಘಟನೆಗಳನ್ನು ಅರ್ಥಮಾಡಿಕೊಳ್ಳಲು, ಜನರಿಗೆ ತಿಳಿವಳಿಕೆ ನೀಡಲು ಪ್ರತೀ ವರ್ಷದ ಜುಲೈ 2ರಂದು ‘ಗುರುತಿಸಲಾಗದ ಹಾರುವ ವಸ್ತು’ ದಿನ (UFO day) ಆಚರಿಸಲಾಗುತ್ತದೆ. ಇದುವರೆಗೂ ವಿಶ್ವದಾದ್ಯಂತ ಯುಎಫ್‍ಓಗಳ ಕುರಿತ ಸುಮಾರು 3,200 ಘಟನೆಗಳು ವರದಿಯಾಗಿವೆ. ಮೊದಲ ಘಟನೆ ವರದಿಯಾದದ್ದು 1947ರ ಜೂನ್ 24ರಂದು. ಅಮೆರಿಕದ ವಾಷಿಂಗ್ಟನ್ ಪ್ರಾಂತ್ಯದ ರೇನರ್ ಪರ್ವತದ ಬಳಿ ನೀರಿನ ಮೇಲೆ ತೇಲುವ ತಟ್ಟೆಗಳಂತಿದ್ದ ಬರೋಬ್ಬರಿ 9 ಹಾರುವ ವಸ್ತುಗಳನ್ನು ಕಂಡದ್ದಾಗಿ ಹೇಳಿದ ಕೆನೆತ್ ಅರ್ನಾಲ್ಡ್ ಇಡೀ ಜಗತ್ತಿನ ಕುತೂಹಲ ಹೆಚ್ಚಿಸಿದ್ದರು.

ಅದೇ ವರ್ಷ ಮಾವ್ರಿ ದ್ವೀಪದ ಬಳಿ ಎಲ್ಲಿಂದಲೋ ಬಂದ ಆರು ಗಗನನೌಕೆಗಳು ತನ್ನ ನಾಯಿಯನ್ನು ಕೊಂದು, ಮಗನನ್ನು ಗಾಯಗೊಳಿಸಿದ್ದಾಗಿ ಹೆರಾಲ್ಡ್ ಢಾಲ್ ಎಂಬುವರು ಹೇಳಿದ್ದರು. ಜುಲೈ 2ರಂದು ನ್ಯೂಮೆಕ್ಸಿಕೋದ ರಾಸ್‍ವೆಲ್ ಸಮೀಪ ಅಪಘಾತಕ್ಕೀಡಾದ ಹಾರುವ ತಟ್ಟೆಯ ಅವಶೇಷ ನಮಗೆ ಸಿಕ್ಕಿದೆ ಮತ್ತು ಅದರೊಳಗಿದ್ದ ವಿಚಿತ್ರ ಜೀವಿಗಳನ್ನು ನಾವು ಸೆರೆಹಿಡಿದಿದ್ದೇವೆ ಎಂದು ಅಮೆರಿಕದ ವಾಯುಸೇನೆಯ ಅಧಿಕಾರಿಗಳು ಮಾಹಿತಿ ನೀಡಿ, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದರು.

ಅಮೆರಿಕ, ಕೆನಡಾದ ಭೂ ಭಾಗಗಳಲ್ಲಿ ಯುಎಫ್‍ಓ ಕುರಿತು ಹೆಚ್ಚಿನ ವರದಿಗಳು ಪ್ರಕಟವಾಗುತ್ತಿರುವುದು ವಿಶ್ವದ ಇತರ ಭಾಗದ ಜನರಿಗೆ ಆಶ್ಚರ್ಯದ ಜೊತೆ ಅನುಮಾನಗಳನ್ನೂ ಹುಟ್ಟುಹಾಕಿದೆ. ಜಗತ್ತಿನ ಗಮನ ಬೇರೆಡೆ ಸೆಳೆಯಲು ಅಮೆರಿಕದಂಥ ದೇಶಗಳು ಮಾಡುತ್ತಿರುವ ಪಿತೂರಿ ಇದು ಎನ್ನುವವರೂ ಇದ್ದಾರೆ. ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಆಕ್ರಮಣ ಮಾಡುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಯುಎಫ್‍ಓ ಘಟನೆಗಳು ವಿದೇಶಗಳಲ್ಲಿ ಮಾತ್ರವಲ್ಲ, ಆಗಾಗ್ಗೆ ನಮ್ಮಲ್ಲೂ ವರದಿಯಾಗುತ್ತವೆ. 2007ರ ಅ. 29ರ ಬೆಳಿಗ್ಗೆ ಕೋಲ್ಕತ್ತದ ಪೂರ್ವ ಆಕಾಶದ ಕ್ಷಿತಿಜದಲ್ಲಿ ತೀಕ್ಷ್ಣ ಬೆಳಕು ಹೊಮ್ಮಿಸುತ್ತಿದ್ದ ಗುರುತಿಸಲಾಗದ ಹಾರುವ ವಸ್ತುವೊಂದು ಗೋಚರಿಸಿತ್ತು. ಬಿರ್ಲಾ ತಾರಾಲಯದ ನಿರ್ದೇಶಕ ಡಿ.ಪಿ.ದುರೈ ‘ಇದು ತೀರಾ ವಿಚಿತ್ರ ಮತ್ತು ಕುತೂಹಲಕಾರಿ’ ವಿದ್ಯಮಾನ ಎಂದು ಅಭಿಪ್ರಾಯಪಟ್ಟಿದ್ದರು. ಪುಣೆಯ ಆಕಾಶದಲ್ಲಿ ವಿಮಾನ ಹಾರಾಟ ನಡೆಸಿದ್ದ ಕಮರ್ಷಿಯಲ್ ಪೈಲಟ್ 2014ರ ಅಕ್ಟೋಬರ್‌ನಲ್ಲಿ, ನೀಲಿ ಮಿಶ್ರಿತ ಕಪ್ಪು ಬಣ್ಣದ ಯುಎಫ್‍ಓ ಒಂದನ್ನು 26,300 ಅಡಿ ಎತ್ತರದಲ್ಲಿ ಗುರುತಿಸಿದ್ದಾಗಿ ಹೇಳಿ ಗಮನ ಸೆಳೆದಿದ್ದರು. 2016ರ ಏ. 30ರಂದು ಕೊಡಗಿನ ಮುತ್ತೂರು ಕಾಲೊನಿಯ ಹಳ್ಳಿಗರು ರಾತ್ರಿ ಹನ್ನೊಂದರ ಹೊತ್ತಿಗೆ ಶುಂಠಿ ಬೆಳೆಗೆ ನೀರುಣಿಸುತ್ತಿದ್ದಾಗ, ತೀಕ್ಷ್ಣ ಬೆಳಕು ಹೊಮ್ಮಿಸುತ್ತ ಹಾರುತ್ತಿದ್ದ ತಟ್ಟೆಯಾಕಾರದ ವಸ್ತುವನ್ನು ನೋಡಿದ್ದಾಗಿ ಭಯಭೀತರಾಗಿ ಹೇಳಿದ್ದರು.

2015ರಲ್ಲಿ ಕಣಗಾಲ್ ಗ್ರಾಮದಲ್ಲಿ ಅನ್ಯಗ್ರಹ ಜೀವಿ ಪ್ರತ್ಯಕ್ಷವಾಗಿತ್ತು ಎಂಬ ಸುದ್ದಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. 2018ರಲ್ಲಿ ಮೈಸೂರು ಅರಮನೆಯ ಮೇಲಿನ ಆಗಸದಲ್ಲಿ ಹಾರುವ ತಟ್ಟೆಯಂಥ ವಸ್ತು ಗೋಚರವಾಗಿತ್ತು ಎಂಬ ಸುದ್ದಿಯ ವಿಡಿಯೊ ತುಣುಕು ಸುದ್ದಿವಾಹಿನಿಗಳಲ್ಲಿ ಇಡೀ ದಿನ ಬಿತ್ತರಿಸಲ್ಪಟ್ಟಿತ್ತು.

ಕಳೆದ ಐವತ್ತು ವರ್ಷಗಳಿಂದ ಯುಎಫ್‍ಓ ವಿದ್ಯಮಾನವನ್ನು ಅಭ್ಯಸಿಸುತ್ತಾ ಬಂದಿರುವ ಅಮೆರಿಕ, ಸುಮಾರು ಶೇ 70ರಷ್ಟು ಘಟನೆಗಳು ನಿಜ ಅಲ್ಲ, ಚಲಿಸುತ್ತಿರುವ ಉಪಗ್ರಹ, ಉಲ್ಕೆ ಅಥವಾ ವಿಮಾನವನ್ನು ಕಂಡ ಜನ ಆ ರೀತಿ ಹೇಳುತ್ತಿರಬಹುದು ಎಂದಿದೆ. ಭೂಮಿಯನ್ನು ಹೋಲುವ ಗ್ರಹಗಳು ಇವೆ, ಅಲ್ಲಿನ ಜೀವಿಗಳು ಆಗಾಗ ಭೂಮಿಯ ಸಂಪರ್ಕಕ್ಕೆ ಬರುವುದನ್ನು ತಳ್ಳಿಹಾಕುವಂತಿಲ್ಲ ಎಂದೇ ಪ್ರತಿಪಾದಿಸುತ್ತಿರುವ ವಿಜ್ಞಾನಿಗಳು, ಉಳಿದ ಶೇ 30ರಷ್ಟು ಘಟನೆಗಳಲ್ಲಿ ಅದಕ್ಕೆ ಪುರಾವೆ ದೊರೆಯಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT