ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರಾಮಧಾನ್ಯ ಚರಿತ್ರೆ: ಸಾರ್ವಕಾಲಿಕ ಸಂದೇಶ

Last Updated 10 ನವೆಂಬರ್ 2022, 19:31 IST
ಅಕ್ಷರ ಗಾತ್ರ

‘ಕನಕ ಜಯಂತಿ’ಯನ್ನು ಇಂದು (ನ. 11) ನಾಡಿನ ಎಲ್ಲೆಡೆ ಆಚರಿಸಲಾಗುತ್ತಿದೆ. ಇತರ ಜಯಂತಿಗಳಂತೆಯೇ ‘ಆಚರಿಸಿ’ ಮರೆಯುವಂತೆ! ಸರ್ಕಾರಿ ರಜೆ ಎಂಬ ಸಂಗತಿಯಿಂದ ಸಂತಸ ಬಿಟ್ಟರೆ ಹೆಚ್ಚಿನ ಜಯಂತಿಗಳ ಆಚರಣೆ ‘ಅರ್ಥಪೂರ್ಣ’ ಎಂಬ ರೀತಿಯಲ್ಲಿ ನಮ್ಮ ಸಮಾಜದಲ್ಲಿ ಸಾಧ್ಯವಾಗಿಲ್ಲ. ಕನಕ ದಾಸರು ಬಹಳಷ್ಟು ಕೀರ್ತನೆಗಳು, ಮುಂಡಿಗೆಗಳೆಂಬ ಒಗಟಿನ ಪದ್ಯಗಳು, ನಳಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿಸಾರ ಕಾವ್ಯಗಳನ್ನು ರಚಿಸಿದ್ದಾರೆ. ಆದರೆ ಇಂದಿಗೂ ‘ಇವತ್ತಿನ ಕಥೆಯೇ’ ಅನ್ನಿಸುವಂತಹ ಅವರ ಕಾವ್ಯವೆಂದರೆ ‘ರಾಮಧಾನ್ಯ ಚರಿತ್ರೆ’. ಶಾಲಾ ಮಕ್ಕಳಿಗೂ ಸುಲಭವಾಗಿ ಬೋಧೆಯಾಗಬಹುದಾದ, ನಮ್ಮೆಲ್ಲರಿಗೂ ಅನ್ವಯಿಸಬಲ್ಲ ಕಥೆಯನ್ನು ಕನಕದಾಸರ ಸೃಜನಶೀಲ ಬೌದ್ಧಿಕ ಪ್ರತಿಭೆ ಶತಮಾನಗಳ ಹಿಂದೆಯೇ ಹುಟ್ಟುಹಾಕಿದೆ.

158 ಪದ್ಯಗಳ ಪುಟ್ಟ ಕೃತಿ ‘ರಾಮಧಾನ್ಯ ಚರಿತ್ರೆ’. ಭಾರತದಲ್ಲಿರುವ ರಾಮಾಯಣದ ಕಥೆಗಳ ಬೇರೆಲ್ಲಾ ರೂಪಗಳಿಗಿಂತ ಇದರ ಸ್ವರೂಪ ಭಿನ್ನ. ರಾಮನ ಕಥೆಗಳಲ್ಲಿ ‘ರಾಗಿ ರಾಮ’ನ ಕಥೆ ಎದ್ದು ನಿಲ್ಲುತ್ತದೆ. ರಾಗಿ ಮತ್ತು ಭತ್ತ ಎಂಬ ಎರಡು ಧಾನ್ಯಗಳು ಇಲ್ಲಿ ತಾನೇ ಮೇಲು ಎಂದು ಜಗಳಕ್ಕೆ ನಿಲ್ಲುತ್ತವೆ. ಕಥೆ ನಡೆದಿರುವುದು ರಾಮನಿದ್ದ ತ್ರೇತಾಯುಗದಲ್ಲಾದರೂ ಅದನ್ನು ಹೇಳುತ್ತಿರುವುದು ದ್ವಾಪರಯುಗದಲ್ಲಿ ಎನ್ನುವುದು ಗಮನಾರ್ಹ. ಅಂದರೆ ಕಥೆಯಲ್ಲಿರುವ ಸಂದೇಶ ಸಾರ್ವಕಾಲಿಕ! ಕಥಾ ಸಂದರ್ಭದ ‍ಪ್ರಕಾರ, ಪಾಂಡವರು ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಋಷಿ ಹೇಳುತ್ತಿರುವ ಕಥೆಯು ರಾವಣನನ್ನು ವಧಿಸಿ ತನ್ನ ‘ಅಧಿಕಾರ’ ಮರಳಿ ಪಡೆದ ರಾಮನ ಎದುರು ನಡೆದಂಥದ್ದು.

‘ಯಾವುದು ಸರ್ವಶ್ರೇಷ್ಠವಾದ ಧಾನ್ಯ?’ ಎಂದು ಕೇಳಿದಾಗ, ಗೌತಮ ಮುನಿ ‘ರಾಗಿ’ ಎಂದು ಉತ್ತರಿಸು ತ್ತಾನೆ. ಈಗಲೂ ನಡೆಯುವಂತೆ ಮಾತಿನಿಂದ ಜಗಳ ಮೊದಲಾಗುತ್ತದೆ. ಭತ್ತ ತಾನು ಶ್ರೇಷ್ಠ ಎನ್ನುತ್ತಾ ರಾಗಿಯನ್ನು ವಿಧವಿಧವಾಗಿ ಮೂದಲಿಸುತ್ತದೆ. ರಾಗಿ ಯೇನೂ ‘ಶ್ರೇಷ್ಠ’ನಂತೆ ಸುಮ್ಮನಿರದೆ ತಾನೂ ಭತ್ತವನ್ನು ಹೀಯಾಳಿಸುತ್ತದೆ. ಇಬ್ಬರ ಜಗಳದ ಪರಿಹಾರಕ್ಕಾಗಿ ರಾಮ ಒಂದು ಪರೀಕ್ಷೆಯೊಡ್ಡುತ್ತಾನೆ. ಆರು ತಿಂಗಳ ಕಾಲ ಸೆರೆಯೊಳಿರಿಸಿ, ಅಯೋಧ್ಯೆಗೆ ಕರೆತರುವಂತೆ ಹೇಳುತ್ತಾನೆ. ಅಯೋಧ್ಯೆಗೆ ಇಬ್ಬರನ್ನೂ ಕರೆತಂದಾಗ, ಸೆರೆಮನೆವಾಸದ ನಂತರವೂ ರಾಗಿ ಬಲವಾಗಿಯೇ ಇದ್ದರೂ, ಭತ್ತ ಸೊರಗಿ ಸೋತಿರುತ್ತದೆ. ರಾಮನು ರಾಗಿಗೆ ತನ್ನ ‘ರಾಘವ’ ಎಂಬ ಹೆಸರು ನೀಡಿ ಸನ್ಮಾನಿಸು ತ್ತಾನೆ. ಸಪ್ಪಗಾಗಿ ಕೆಳಕ್ಕೆ ಮುಖ ಹಾಕಿದ ಭತ್ತವನ್ನು ಸಮಾಧಾನಪಡಿಸಿ ‘ನೀನು ದೇವರ ಪರಮಾನ್ನ, ಈತ ಮನುಜರಿಗೆ ಪಕ್ವಾನ್ನ, ನೀವಿಬ್ಬರೂ ಒಟ್ಟಿಗಿದ್ದರೆ ಧರೆಗೆ ಒಳ್ಳೆಯದು’ ಎಂದು ಇಬ್ಬರನ್ನೂ ಒಟ್ಟುಗೂಡಿಸುತ್ತಾನೆ.

ರಾಮಧಾನ್ಯ ಚರಿತ್ರೆಯ ಪುಟ್ಟ ಆದರೆ ಚಿಂತನಾರ್ಹ ಕಥನಕಾವ್ಯವು ಬೌದ್ಧಿಕ- ಪಂಡಿತ ವಲಯಗಳಲ್ಲಿ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಅದರ ಬಗ್ಗೆ ನಾಡಿನ ಹೆಸರಾಂತ ಸಂಸ್ಥೆ-ವಿಶ್ವವಿದ್ಯಾಲಯಗಳು ಗೋಷ್ಠಿ ಗಳನ್ನೇ ಏರ್ಪಡಿಸಿವೆ. ಆದರೆ ಇವು ಜನಸಾಮಾನ್ಯ ರನ್ನು, ದಿನಬೆಳಗಾದರೆ ಮಾತಿನ ಕಲಹಕ್ಕೆ ಕಾಯು ತ್ತಿರುವ ರಾಜಕಾರಣಿಗಳು- ರಾಜಕೀಯ ಪಕ್ಷಗಳನ್ನು ತಲುಪಿದಂತಿಲ್ಲ! ರಾಗಿ- ಭತ್ತದ ನಡುವಿನ ಜಗಳವು ಮನೆಯ ಅಣ್ಣ-ತಂಗಿ-ಅಕ್ಕ-ತಮ್ಮಂದಿರು, ಪುರುಷ- ಸ್ತ್ರೀ, ಬಡವ- ಶ್ರೀಮಂತ, ಅಕ್ಷರಸ್ಥ- ಅನಕ್ಷರಸ್ಥ ಹೀಗೆ ಪರಸ್ಪರ ಕೀಳು ದೃಷ್ಟಿ, ಅಸಮಾನತೆ, ಶ್ರೇಷ್ಠತೆಯ ಹಂಬಲದ ಅಭಿವ್ಯಕ್ತಿ ಎನ್ನುವುದನ್ನು, ‘ಕನಕ ಜಯಂತಿ’ ಆಚರಿಸುವ ನಾವು ಗಮನಿಸಿದಂತಿಲ್ಲ.

ತೋಚಿದಂತೆ ಹೇಳಿಕೆ ನೀಡುವ ರಾಜಕೀಯ ಮಂದಿ, ಅದಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಹಾಪೂರವಾಗಿ ಹರಿದು ಬರುವ ಪರ, ವಿರೋಧದ ಹೇಳಿಕೆಗಳು, ಒಂದೆರಡು ದಿನಗಳಲ್ಲಿ ಎಲ್ಲವೂ ತಣ್ಣಗಾಗಿ, ಇವೆಲ್ಲವೂ ನಡೆದದ್ದು ‘ಮಾತಿನ ಚಪಲಕ್ಕೆ, ವ್ಯಕ್ತಿಯ ಪ್ರತಿಷ್ಠೆಗೆ ಅಷ್ಟೇ’ ಎಂಬಂಥ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ನಾವು ಕನಕದಾಸರ ‘ರಾಮಧಾನ್ಯ ಚರಿತ್ರೆ’ಯನ್ನು ಅಗತ್ಯವಾಗಿ ನೆನಪಿಸಿಕೊಳ್ಳಬೇಕು. ರಾಗಿ- ಭತ್ತ ಎರಡಕ್ಕೂ ಗೌರವ ನೀಡುವ ಕನಕದಾಸರ ‘ರಾಮ’ನನ್ನು ನೆನಪಿಸಿಕೊಳ್ಳಬೇಕು.

ಕನಕದಾಸರ ಜೀವನ ಕಥನದಲ್ಲಿ ಬರುವ ‘ಯಾರು ವೈಕುಂಠಕ್ಕೆ ಹೋಗಬಹುದು?’ ಎಂಬ ಪ್ರಶ್ನೆಗೆ ಕನಕದಾಸರಿತ್ತ ‘ನಾನು ಹೋದರೆ ಹೋದೇನು’ ಎಂಬ ಉತ್ತರವನ್ನು ಮತ್ತೆ ಮತ್ತೆ ನೆನೆಯಬೇಕು. ‘ನಾನು’ ಎಂಬ ಕಾರಣದಿಂದಲೇ ಎಲ್ಲ ರೀತಿಯ ಸಂಘರ್ಷ ಗಳೂ ಹೆಚ್ಚಾಗಿರುವ ಇಂದಿನ ಸಂದರ್ಭವನ್ನು ನಿಭಾಯಿ ಸುವುದು ಸುಲಭವಲ್ಲ. ನಾವು ನಾವೇ ಏನನ್ನಾದರೂ ಹೇಳಿಬಿಡಬಲ್ಲ, ಬರೆದುಬಿಡಬಲ್ಲ, ವ್ಯಾಪಕ ಪ್ರಸರಣದ ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಹೀಗಿರುವಾಗ, ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸುವ, ಪ್ರತಿಕ್ರಿಯಿಸುವ ಮುನ್ನ ಎಚ್ಚರದಿಂದ ಅವಲೋಕಿಸುವುದನ್ನು ನಾವು ಕಲಿಯಲೇಬೇಕಿದೆ.

‘ರಾಮಧಾನ್ಯ ಚರಿತ್ರೆ’ಯಂತಹ ಬೋಧಪ್ರದವಾದ ಕಾವ್ಯಗಳು ಕನ್ನಡದಲ್ಲಿ ಬಹಳಷ್ಟಿವೆ. ಆಡಳಿತ ವ್ಯವಸ್ಥೆಯು ವರ್ಗಸಂಘರ್ಷವನ್ನು ನೇರವಾಗಿಯೇ ನಿಭಾಯಿಸಿ ರುವ ಉದಾಹರಣೆಯೂ ಶ್ರವಣಬೆಳಗೊಳದ ‘ಬುಕ್ಕರಾಯನ ಶಾಸನ’ದಲ್ಲಿದೆ. ಇಂತಹ ಸಾಹಿತ್ಯವನ್ನು ಓದುವುದು, ಸುಲಭವಾಗಿ ಪ್ರಚೋದನೆಗೆ ಒಳಗಾಗುವ ಯುವಜನರಿಗೆ, ಮಕ್ಕಳಿಗೆ ಅದನ್ನು ಶ್ರವಣ- ದೃಶ್ಯ ಮಾಧ್ಯಮಗಳ ಮೂಲಕ ತಲುಪಿಸುವುದು ‘ಕನಕ ಜಯಂತಿ’ಯಂತಹ ಆಚರಣೆಗಳಂದು ನಾವು ಮಾಡ ಬೇಕಾಗಿರುವ ಕಾರ್ಯ. ಅದಾಗದೇ ಹೋದರೆ ಈ ಬಾರಿಯಂತೆ ‘ಕನಕ ಜಯಂತಿ’ ಕೇವಲ ‘ದೀರ್ಘ ವಾರಾಂತ್ಯ’ವಾಗಿ ಜನರಿಗೆ ಒಂದು ಹೆಚ್ಚುವರಿ ರಜೆ, ಸರ್ಕಾರಿ ಅಧಿಕಾರಿಗಳಿಗೆ, ಶಿಕ್ಷಕರಿಗೆ ಆಚರಣೆಯ ಸಭೆಯಷ್ಟೇ ಆದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT