ಗುರುವಾರ , ಅಕ್ಟೋಬರ್ 6, 2022
23 °C
ಕೆರೆಗಳನ್ನು ಮುಚ್ಚಿ, ರಾಜಕಾಲುವೆಗಳನ್ನು ಬಂದ್ ಮಾಡಿದರೆ ಏನಾಗುತ್ತದೆ ಎಂಬುದು ಈಗ ಬೆಂಗಳೂರಿಗರಿಗೆ ಅರ್ಥವಾಗಿದೆ. ಆದರೆ ಪ್ರಯೋಜನವೇನು?

ಸಂಗತ: ಮಳೆ ಅವಾಂತರದಲ್ಲಿ ಮಾಯಾನಗರಿ

ಡಾ. ಎಂ.ವೆಂಕಟಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಈ ವರ್ಷ ಮುಂಗಾರು ಮಳೆ ಅರ್ಧ ದಾರಿ ಕ್ರಮಿಸಿರುವಾಗಲೇ ರಾಜ್ಯದ ಎಲ್ಲಾ ನದಿಗಳು ಉಕ್ಕಿ ಹರಿದು, ಅಣೆಕಟ್ಟೆಗಳು ತುಂಬಿ ಹರಿದು, ಕೆರೆ ಕೋಡಿಗಳು ಹರಿದುಹೋದವು. ಇನ್ನು ಮಳೆಗಾಲ ಮುಗಿಯುವವರೆಗೂ ಬೀಳುವ ಮಳೆಯೆಲ್ಲ ಸಮುದ್ರಪಾಲಾಗಲಿದೆ. ಜೊತೆಗೆ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗುತ್ತಿದೆ.

ಮಳೆಗಾಲ ಎಂದರೆ ಹಿಂದಿನ ದಿನಗಳಲ್ಲಿ ಅದಕ್ಕೊಂದು ನಿಗದಿತ ಋತುಮಾನ ಇತ್ತು. ಈಗ ಅದೆಲ್ಲ ಯಾವ ವಿಜ್ಞಾನಿಯ ಲೆಕ್ಕಕ್ಕೂ ಸಿಗದಾಗಿದೆ. ಇದು ಬರೀ ಮುಂಗಾರು ಮಳೆಯೇ ಅಥವಾ ಇನ್ನೇನಾದರೂ ನಿಸರ್ಗದ ಅನಾಹುತಗಳು ಇದರ ಜೊತೆಗೆ ಸೇರಿಕೊಂಡಿವೆಯೇ ಎನ್ನುವ ಅನುಮಾನಗಳು ಎಲ್ಲರನ್ನೂ ಕಾಡತೊಡಗಿವೆ. ಹವಾಮಾನ ತಜ್ಞರು ಕಣ್ಣುಬಿಟ್ಟುಕೊಂಡು ನೋಡುವ ಪರಿಸ್ಥಿತಿ ಉಂಟಾಗಿದೆ. ಎಲ್ಲರೂ ಹೇಳುವ ಒಂದೇ ಒಂದು ಕಾರಣವೆಂದರೆ, ಜಾಗತಿಕ ತಾಪಮಾನ ಏರಿಕೆ. ಇದರ ಬಗ್ಗೆ ಹೇಳಿ ಹೇಳಿ, ಜನರು ಕೇಳಿ ಕೇಳಿ ಸಾಕಾಗಿದ್ದಾರೆ.

ಭೂಮಿ ಸೃಷ್ಟಿಯಾದಾಗಿನಿಂದ ನಿಸರ್ಗ ತನ್ನದೇ ಆದ ಒಂದು ವಿಧಾನವನ್ನು ರೂಪಿಸಿಕೊಳ್ಳುತ್ತಾ ಬಂದಿದೆ. ಎಷ್ಟು ಮಳೆ ಬೀಳುತ್ತದೆಯೋ ಆ ಮಳೆ ನೀರನ್ನು ಮುಂದಕ್ಕೆ ಹರಿಸಬೇಕಾದರೆ ಜಲಾನಯನ, ಹಳ್ಳಕೊಳ್ಳ, ಝರಿ, ನದಿಗಳನ್ನು ತಾನೇ ಸೃಷ್ಟಿಸಿಕೊಂಡು ಹರಿಯಬಿಡುತ್ತದೆ. ಜೊತೆಗೆ ಹರಿವ ದಾರಿಯಲ್ಲಿ ಸಸ್ಯಶ್ಯಾಮಲೆಯನ್ನು ಸೃಷ್ಟಿಸಿ, ನೀರನ್ನು ಎಷ್ಟುಬೇಕೋ ಅಷ್ಟು ನೆಲದ ಮೇಲೆ ಉಳಿಸಿಕೊಂಡು, ಉಳಿದದ್ದನ್ನು ನೆಲಕ್ಕೆ ಇಂಗಿಸಿ, ಫಲವತ್ತಾದ ಮಣ್ಣನ್ನು ಉಳಿಸಿಕೊಂಡು, ಯಾವುದೂ ಮಿತಿಮೀರದಂತೆ ನೋಡಿಕೊಂಡು ಹೆಚ್ಚಿನ ನೀರನ್ನು ನದಿಗಳ ಮೂಲಕ ಸಮುದ್ರಕ್ಕೆ ತಲುಪಿಸುತ್ತಿತ್ತು. ಆದರೆ ಮನುಷ್ಯನ ಅವೈಜ್ಞಾನಿಕ ಚಟು ವಟಿಕೆಗಳು ನಿಸರ್ಗ ಕಟ್ಟಿಕೊಂಡು ಬಂದಿದ್ದ ಲಕ್ಷಾಂತರ ವರ್ಷಗಳ ಇಂತಹ ವಿಧಾನವನ್ನು ಕೆಲವೇ ಶತಮಾನಗಳಲ್ಲಿ ಛಿದ್ರಛಿದ್ರವಾಗಿಸಿಬಿಟ್ಟವು.

ಇನ್ನು ಬೆಂಗಳೂರಿನ ವಿಷಯಕ್ಕೆ ಬಂದರೆ, ಯಾವಾಗ ಬಿಡಿಎ ಎಂಬ ಸಂಸ್ಥೆ ಹುಟ್ಟಿಕೊಂಡಿತೋ ಅಲ್ಲಿಂದಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭ ವಾಯಿತು. ಇಂದಿನ ಬೆಂಗಳೂರಿನ ಮೆಜೆಸ್ಟಿಕ್ ಬಸ್‌ ನಿಲ್ದಾಣ, ರೈಲು ನಿಲ್ದಾಣ ಒಂದು ಕಾಲದಲ್ಲಿ ಕೆರೆಗಳಾಗಿ ದ್ದವು. ಬೆಂಗಳೂರಿನ ನೂರಾರು ಬಡಾವಣೆಗಳು, ಸರ್ಕಾರಿ ಕಚೇರಿಗಳು, ಮಾಲ್‌ಗಳು, ಐಟಿ-ಬಿಟಿ ಕಂಪನಿಗಳಲ್ಲಿ ಹೆಚ್ಚಿನವು ಕೆರೆಗಳು ಮತ್ತು ಕೆಳಮಟ್ಟದ ಪ್ರದೇಶಗಳಿದ್ದ ಸ್ಥಳಗಳೇ ಆಗಿವೆ. ಸಾವಿರಾರು ರಸ್ತೆಗಳು ಹಾಗೂ ನೂರಾರು ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಯಿತು. ಸುತ್ತಮುತ್ತಲಿನ ನೂರಾರು ಹಳ್ಳಿಗಳನ್ನು ಸೇರಿಸಿಕೊಂಡು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯನ್ನು (ಬಿಬಿಎಂಪಿ) ಸ್ಥಾಪಿಸಿ ಬೆಂಗಳೂರಿಗೆ ತಲೆಬುಡ ಇಲ್ಲದಂತೆ ಮಾಡಲಾಯಿತು. ರಾಜಕಾರಣಿಗಳು- ಅಧಿಕಾರಿಗಳು ಎಲ್ಲವನ್ನೂ ತಮ್ಮ ಭ್ರಷ್ಟತೆಯ ತೆಕ್ಕೆಗೆ ತೆಗೆದುಕೊಂಡಿದ್ದರಿಂದ ಬೆಂಗಳೂರಿನ ಪರಿಸ್ಥಿತಿ ಆಯೋಮಯವಾಗತೊಡಗಿತು. ಎಲ್ಲೆಂದರಲ್ಲಿ ಯಾವುದೇ ಮುಂದಾಲೋಚನೆ ಇಲ್ಲದೆ ಬಡಾವಣೆಗಳು ಹುಟ್ಟಿಕೊಂಡವು.

16ನೇ ಶತಮಾನದಲ್ಲಿ ಕೆಂಪೇಗೌಡರು, ನಂತರ ಮೈಸೂರು ಮಹಾರಾಜರು ಮತ್ತು ಬ್ರಿಟಿಷರ ಕಾಲ ದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲಾಯಿತು. 1895 ರವರೆಗೆ, ಬೆಳೆಯುತ್ತಿದ್ದ ಬೆಂಗಳೂರಿಗೆ ಸ್ಯಾಂಕಿ ಕೆರೆ, ಧರ್ಮಾಂಬುಧಿ (ಮೆಜೆಸ್ಟಿಕ್ ಪ್ರದೇಶ), ಮಿಲ್ಲರ್ಸ್, ಹಲಸೂರು, ಹೆಸರಘಟ್ಟ ಮತ್ತು ಇತರ ಕೆರೆಗಳಿಂದ ನೀರನ್ನು ಫಿಲ್ಟರ್ ಮಾಡದೆ ನೇರವಾಗಿ ಕುಡಿಯಲು ಸರಬರಾಜು ಮಾಡಲಾಗುತ್ತಿತ್ತು. ಕೆರೆ, ಸರೋವರಗಳ ನೀರನ್ನು ಕುಡಿಯುವುದಕ್ಕಾಗಿ ಮತ್ತು ಕೃಷಿ, ಮೀನು ಗಾರಿಕೆಗೆ ಬಳಸಿಕೊಳ್ಳಲಾಗುತ್ತಿತ್ತು.

ಒಂದು ಕಾಲದಲ್ಲಿ ಒಟ್ಟು 920 ಕೆರೆ, ಸರೋವರಗಳಿದ್ದು ಕಾಲಾನಂತರದಲ್ಲಿ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗಿ 1940-50ರ ದಶಕದಲ್ಲಿ 280 ಕೆರೆಗಳು ಮಾತ್ರ ಉಳಿದುಕೊಂಡಿದ್ದವು. 1995ರಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿದ್ದ 51 ಮುಖ್ಯ ಕೆರೆಗಳಲ್ಲಿ ಈಗ 17 ಕೆರೆಗಳು ಮಾತ್ರ ಉಳಿದುಕೊಂಡಿವೆ ಎನ್ನಲಾಗಿದೆ. ಬಿಡಿಎ 28 ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನಾಗಿ ಪರಿವರ್ತಿಸಿಬಿಟ್ಟಿತು. ಉಳಿದಂತೆ, ತೆರೆದ ಚರಂಡಿಗಳು ಮತ್ತು ಅಳಿದುಳಿದ ರಾಜಕಾಲುವೆಗಳ ಮೂಲಕ ಮಹಾ ನಗರ ಸೃಷ್ಟಿಸುವ ತ್ಯಾಜ್ಯ ಹಾಗೂ ಕಾರ್ಖಾನೆಗಳು ಕಕ್ಕುವ ವಿಷಯುಕ್ತ ರಾಸಾಯನಿಕಗಳು ಈ ಕೆರೆಗಳನ್ನು ತುಂಬುತ್ತಿವೆ. ಬೆಂಗಳೂರು ನಗರದಲ್ಲಿರುವ ಕೆರೆಗಳು ಹೊತ್ತಿ ಉರಿಯುವುದನ್ನು ಆಗಾಗ ನೋಡಬಹುದು.

ಕೆರೆಗಳನ್ನು ಮುಚ್ಚಿ, ರಾಜಕಾಲುವೆಗಳನ್ನು ಬಂದ್ ಮಾಡಿದರೆ ಏನಾಗುತ್ತದೆ ಎಂಬುದು ಈಗ ಬೆಂಗಳೂರಿಗರಿಗೆ ಅರ್ಥವಾಗಿದೆ. ಆದರೆ ಪ್ರಯೋ ಜನವೇನೂ ಇಲ್ಲ. ಯಾಕೆಂದರೆ ಎಲ್ಲವೂ ಕೈಮೀರಿ ಹೋಗಿದೆ. ಅಳಿದುಳಿದ ಕೆರೆಗಳ ಅಂಚುಗಳಲ್ಲಿ ಮತ್ತು ಕೆರೆಗಳು ಕೋಡಿ ಹರಿಯುವ ಕೆಳಹಂತಗಳಲ್ಲಿ ಮನೆ ಗಳನ್ನು ಕಟ್ಟಿಕೊಂಡಿರುವ ಜನರು ಒಂದೋ ಆ ಸ್ಥಳಗಳನ್ನು ಬಿಟ್ಟು ಪಲಾಯನ ಮಾಡಬೇಕಿದೆ, ಇಲ್ಲವೇ ಪದೇಪದೇ ಇಂತಹ ಪರಿಸ್ಥಿತಿಗೆ ತಮ್ಮನ್ನು ತಾವು ಒಡ್ಡಿಕೊಂಡು ನರಳಾಡಬೇಕಾಗುತ್ತದೆ.

ಜಗತ್ತಿನಲ್ಲಿ ಸಾವಿರಾರು ನಗರ ಮತ್ತು ಮಹಾನಗರಗಳನ್ನು ರೂಪಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಕಟ್ಟಿರುವ ನಗರಗಳು ನೈಸರ್ಗಿಕ ಅನಾಹುತಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತವೆ. ಅವು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ತೀವ್ರ ಸ್ವರೂಪದ ಅನಾಹುತಗಳಿಗೆ ಒಡ್ಡಿಕೊಳ್ಳುತ್ತವೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಮನುಷ್ಯನ ದುರಾಸೆ ಮತ್ತು ಭ್ರಷ್ಟತೆ ಮಿತಿಮೀರಿಹೋಗಿ ಅವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಇದೀಗ ನಿಸರ್ಗದ ಸರದಿ. ಅದು ಈಗ ಮನುಷ್ಯನ ವಿರುದ್ಧ ತಿರುಗಿಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು