ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪಾಠದ ಜೊತೆ ಇರಲಿ ಆಟದ ಮಜಾ

ಕೌಟುಂಬಿಕ ಮತ್ತು ಶಾಲಾ ಪರಿಸರ ಎರಡರಲ್ಲೂ ಮಕ್ಕಳ ದೈಹಿಕಚಟುವಟಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕಾಗಿದೆ
Published 12 ಡಿಸೆಂಬರ್ 2023, 19:23 IST
Last Updated 12 ಡಿಸೆಂಬರ್ 2023, 19:23 IST
ಅಕ್ಷರ ಗಾತ್ರ

ನಮ್ಮ ಶಿಕ್ಷಣ ಕ್ರಮದಲ್ಲಿ ನಿಗದಿತ ಪಠ್ಯಪುಸ್ತಕಗಳ ಅಭ್ಯಾಸ ಹಾಗೂ ಪರೀಕ್ಷೆಗಾಗಿ ಗಂಭೀರವಾಗಿ ಸಿದ್ಧತೆ ನಡೆಸುವುದಕ್ಕೆ ನೀಡುವಷ್ಟು ಪ್ರಾಮುಖ್ಯವನ್ನು ಆಟೋಟ, ವ್ಯಾಯಾಮದ ಅಭ್ಯಾಸಕ್ಕೆ ನೀಡುವುದಿಲ್ಲ. ಇಂತಹ ಅಭ್ಯಾಸವು ದೈಹಿಕ ಬೆಳವಣಿಗೆಯ ಜೊತೆ ಬೌದ್ಧಿಕ ಬೆಳವಣಿಗೆಗೂ ಸಹಕಾರಿ ಎಂಬ ಅಂಶವನ್ನು ನಾವೆಲ್ಲ ಮರೆತುಬಿಡುತ್ತೇವೆ. ಅದರಲ್ಲೂ ಹೆಚ್ಚಿನ ಶಾಲೆ, ಕಾಲೇಜುಗಳು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಟವು ಸಂಪೂರ್ಣ ನಿಷಿದ್ಧ ಎನ್ನುವಂತೆ ಮಾಡಿಬಿಡುತ್ತವೆ. ಪರೀಕ್ಷೆಯ ಸಿದ್ಧತೆಗೆ ಓದಿನ ಜೊತೆ ಜೊತೆಗೆ ಆಟ, ಓಟದಂತಹ ಒಂದಷ್ಟು ದೈಹಿಕ ಚಟುವಟಿಕೆಗಳು ಮಕ್ಕಳ ಏಕತಾನತೆಯನ್ನು ಹೋಗಲಾಡಿಸಿ, ಅವರಲ್ಲಿ ಹುರುಪು, ಚೈತನ್ಯವನ್ನು ತುಂಬುತ್ತವೆ. ಆದರೆ, ಕೌಟುಂಬಿಕ ಮತ್ತು ಶಾಲಾ ಪರಿಸರದಲ್ಲಿ ದೈಹಿಕ ಚಟುವಟಿಕೆಗೆ ದೊರೆಯಬೇಕಾ ದಷ್ಟು ಪ್ರಾಮುಖ್ಯ ದೊರೆಯದಿರುವುದು ವಾಸ್ತವ.

ವ್ಯಕ್ತಿತ್ವ ವಿಕಸನದ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವ ಸಂದರ್ಭದಲ್ಲಿ ನಾನು ಅವರಿಗೆ, ‘ನಿಮ್ಮಲ್ಲಿ ಎಷ್ಟು ಜನ ಆಟ, ವ್ಯಾಯಾಮ, ಯೋಗದಂತಹ ಚಟುವಟಿಕೆಗಳನ್ನು ರೂಢಿಸಿ
ಕೊಂಡಿದ್ದೀರಿ?’ ಎಂದು ಕೇಳುತ್ತೇನೆ. ಹೆಚ್ಚಿನ ಸಂದರ್ಭ ಗಳಲ್ಲಿ ಶೇ 10ರಿಂದ 30ರಷ್ಟು ವಿದ್ಯಾರ್ಥಿಗಳು ಮಾತ್ರ ಇಂತಹ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಾಗಿ ಹೇಳುತ್ತಾರೆ. ಒಂದಷ್ಟು ವಿದ್ಯಾರ್ಥಿಗಳು ಚೆಸ್‌ನಂತಹ ಒಳಾಂಗಣ ಆಟಗಳನ್ನು ಆಡುವುದಾಗಿ ತಿಳಿಸುತ್ತಾರೆ.

ಶಾಲೆಗಳಲ್ಲಿ ದೈಹಿಕ ಚಟುವಟಿಕೆಯ ಆಯೋಜನೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕಾಗುತ್ತದೆ. ಆದರೆ ಕಡಿಮೆ ಸಂಖ್ಯೆಯ ದಾಖಲಾತಿ ಹೊಂದಿರುವ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನು ಮಂಜೂರು ಮಾಡಿರುವುದಿಲ್ಲ. ಕೆಲವು ಕಡೆ ಈ ಹುದ್ದೆ ಇನ್ನಷ್ಟೇ ಭರ್ತಿಯಾಗಬೇಕಿರುತ್ತದೆ. ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನ ಇರುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ದೈಹಿಕ ಚಟುವಟಿಕೆಗೆ ಹಿನ್ನಡೆ
ಆಗದಂತೆ ಸೂಕ್ತ ಯೋಜನೆ ರೂಪಿಸುವುದು ಅಗತ್ಯ. ದೈಹಿಕ ಶಿಕ್ಷಣ ಶಿಕ್ಷಕರು ಲಭ್ಯವಾಗದಂತಹ ಕಡೆಗಳಲ್ಲಿ ಇತರ ಶಿಕ್ಷಕರೇ ಈ ಕಾರ್ಯಕ್ಕೆ ಮುಂದಾಗಬೇಕು.

ಆಟದ ಮೈದಾನ ಇಲ್ಲದಿದ್ದರೆ ಸೂಕ್ತವಾದ ರೀತಿಯಲ್ಲಿ ದೈಹಿಕ ಚಟುವಟಿಕೆಗಳನ್ನು ಆಯೋಜಿಸ ಬೇಕು. ನಿಯಮಿತವಾಗಿ ಕೈಗೊಳ್ಳುವ ದೈಹಿಕ
ಚಟುವಟಿಕೆಗಳಿಂದ ದೇಹದ ಮೂಳೆ, ಸ್ನಾಯುಗಳು ಗಟ್ಟಿಯಾಗುವುದರ ಜೊತೆಗೆ ದೇಹದ ಕ್ಷಮತೆಯೂ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಆಹಾರಾಭ್ಯಾಸದ ಜೊತೆಗೆ ದೇಹವನ್ನು ಚಟುವಟಿಕೆಯಿಂದ ಇರಿಸುವುದರ ಮಹತ್ವವನ್ನು ವಿದ್ಯಾರ್ಥಿ ಹಂತದಲ್ಲೇ ರೂಢಿಸುವುದು ಒಳಿತು.

ಶಾಲೆಗಳಲ್ಲಿ ಸಾಮಾನ್ಯವಾಗಿ ಶನಿವಾರದಂದು ಪಿ.ಟಿ. ಪಿರಿಯಡ್‌ ಹೆಸರಿನಲ್ಲಿ ದೈಹಿಕ ವ್ಯಾಯಾಮ ಮಾಡಿಸಲಾಗುತ್ತದೆ. ಇಂದಿನ ಆಧುನಿಕ ಜೀವನದಲ್ಲಿ ವಾರಕ್ಕೊಮ್ಮೆ ಮಾಡುವ ದೈಹಿಕ ಚಟುವಟಿಕೆ ಏನೇನೂ ಸಾಲದು. ತಜ್ಞರ ಪ್ರಕಾರ, ಶಾಲೆಗಳಲ್ಲಿ ಪ್ರತಿದಿನ ಮಕ್ಕಳು ಕನಿಷ್ಠ 60 ನಿಮಿಷದಷ್ಟು ಕಾಲ ದೈಹಿಕ
ಚಟುವಟಿಕೆಯಲ್ಲಿ ತೊಡಗಬೇಕು. ಮಕ್ಕಳನ್ನು ಕಠಿಣವಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸುವ ಮುನ್ನ ಅವರ ದೇಹವು ಅದಕ್ಕೆ ಸೂಕ್ತವಾಗಿ
ಹೊಂದಿಕೊಳ್ಳುವಷ್ಟು ಆರೋಗ್ಯಕರವಾಗಿ ಇದೆಯೇ ಎಂಬುದನ್ನು ವೈದ್ಯಕೀಯ ತಪಾಸಣೆಯಿಂದ ಮೊದಲು ಖಾತರಿಪಡಿಸಿಕೊಂಡು ಮುಂದುವರಿಯಬೇಕು. ದೈಹಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ವಿಷಯದಲ್ಲಿ ತಂದೆ, ತಾಯಿ ಹಾಗೂ ಶಿಕ್ಷಕರು ಮಾದರಿಯಾಗಬೇಕು.

ಸಾಮಾನ್ಯವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಬೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಒಂದೆರಡು ತರಗತಿಗಳು ಮುಕ್ತಾಯವಾದ ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎದ್ದು ನಿಂತು, ಒಂದೆರಡು ನಿಮಿಷ ಕೈಕಾಲುಗಳನ್ನು ಸಡಿಲಗೊಳಿಸುವ ರೀತಿಯ ಸರಳ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು. ಇದು ಅವರಲ್ಲಿ ಜಡತ್ವವನ್ನು ಹೋಗಲಾಡಿಸಿ, ನವ ಚೈತನ್ಯವನ್ನು ತರಬಲ್ಲದು. ತರಗತಿಗಳಲ್ಲಿ ವಿದ್ಯಾರ್ಥಿಗಳು ಆಕಳಿಸಿದಾಗ ಅಥವಾ ತೂಕಡಿಸಿದಾಗ ಅವರನ್ನು ಶಿಕ್ಷೆಗೊಳಪಡಿಸುವ ಬದಲು, ಸರಳ ದೈಹಿಕ ಚಟುವಟಿಕೆಗಳಿಂದ ಅವರಲ್ಲಿ ಒಂದಿಷ್ಟು ಚೈತನ್ಯ ತುಂಬುವ ಪ್ರಯತ್ನ ಮಾಡಬೇಕು. ಕೆಲ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಸಭೆಗಳು ಸುದೀರ್ಘ ಅವಧಿಗೆ ನಿಗದಿ
ಯಾಗಿದ್ದರೆ, ದೈಹಿಕ ಚಲನೆಗೆ ಪೂರಕವಾಗಿ ಮಧ್ಯೆಮಧ್ಯೆ ಸಭೆಯನ್ನು ಕೆಲ ನಿಮಿಷ ಸ್ಥಗಿತಗೊಳಿಸಿ, ಬಳಿಕ ಮುಂದುವರಿಸುವಂತಹ ವ್ಯವಸ್ಥೆ ಇರುತ್ತದೆ. ದೇಹದ ಚಲನಶೀಲತೆಯ ಪ್ರಾಮುಖ್ಯತೆಯನ್ನು ಶಾಲೆಗಳೂ ಮನಗಾಣಬೇಕು.

ಆಟದ ಪಿರಿಯಡ್‌ ಅಥವಾ ಬಿಡುವಿನ ಪಿರಿಯಡ್‌ಗಳಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಜೊತೆ ಆಟವಾಡಬಹುದು. ಇದರಿಂದ ಶಿಕ್ಷಕರು- ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಉತ್ತಮವಾಗುವುದರ ಜೊತೆಗೆ ಇಬ್ಬರ ಆರೋಗ್ಯಕ್ಕೂ ಒತ್ತು ಕೊಟ್ಟಂತಾಗುತ್ತದೆ. ಮಕ್ಕಳಿಗೆ ತರಗತಿಯ ಕೋಣೆಯಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಖುಷಿ ಹಾಗೂ ಸಂತಸ ಆಟದ ಮೈದಾನದಲ್ಲಿ ಸಿಗುತ್ತದೆ. ಶಾಲೆಗಳಲ್ಲಿ ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣಿನಂತಹ ಪೌಷ್ಟಿಕ ಆಹಾರ ನೀಡುತ್ತಿರುವುದು ಸರಿಯಷ್ಟೆ. ಇದರ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಇನ್ನಷ್ಟು ಒತ್ತು ನೀಡುವುದು ಪರಿಣಾಮಕಾರಿಯಾಗುತ್ತದೆ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT