ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ದಲ್ಲಿ ಭಾಗವಹಿಸಲು ಇತ್ತೀಚೆಗೆ ಶಿವಮೊಗ್ಗಕ್ಕೆ ಹೋಗಿದ್ದ ನನ್ನ ಶಿಕ್ಷಕ ಮಿತ್ರರಿಗೆ, ಹತ್ತಿರದಲ್ಲಿದ್ದ ಕುಪ್ಪಳಿಗೆ ಭೇಟಿ ನೀಡಬೇಕೆಂದೆನಿಸಿತು. ಕ್ರೀಡಾಕೂಟದ ನಡುವೆ ಬಿಡುವು ಮಾಡಿಕೊಂಡು ಒಂದರ್ಧ ದಿನ ಕುಪ್ಪಳಿಗೆ ಹೋಗಿಬರಲು ನಿರ್ಧರಿಸಿದರು. ಕ್ರೀಡಾಕೂಟಕ್ಕೆಂದು ಬಂದಿದ್ದ ಪರಿಚಿತ ಶಿಕ್ಷಕರಿಗೆ ತಮ್ಮ ಮನದ ಇಂಗಿತ ತಿಳಿಸಿ ಜೊತೆಗೆ ಬರಲು ಆಹ್ವಾನಿಸಿದರು. ಬಹುತೇಕ ಶಿಕ್ಷಕರು ನಿರಾಕರಿಸಿದ್ದೇ ಹೆಚ್ಚು. ಕೊನೆಗೆ ಒಬ್ಬರೇ ಹೋಗಿ ಕವಿಮನೆಯ ಅಂಗಳದಲ್ಲಿ ನಿಂತು, ಜೊತೆಯ ಶಿಕ್ಷಕರು ಒಂದು ಅವಿಸ್ಮರಣೀಯ ಗಳಿಗೆಯನ್ನು ಕಳೆದುಕೊಂಡರೆಂದು ಹಳಹಳಿಸಿದರು. ವಿಪರ್ಯಾಸ ಎಂದರೆ, ಕುಪ್ಪಳಿಗೆ ಬರಲು ನಿರಾಕರಿಸಿದ ಶಿಕ್ಷಕರಲ್ಲಿ ಅನೇಕರು ಸಿನಿಮಾ, ಮಾಲ್, ರೆಸಾರ್ಟ್ ಎಂದು, ಮೋಜುಮಸ್ತಿಗಾಗಿ ಸಮಯದ ಸದುಪಯೋಗ ಮಾಡಿಕೊಂಡ ಧನ್ಯತೆಯಿಂದ ಬೀಗಿದರು.

ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರಲ್ಲೇ ಸಾಹಿತ್ಯಾಸಕ್ತಿ ಕ್ಷೀಣಿಸುತ್ತಿರುವಾಗ ಇನ್ನು ಶಿಕ್ಷಕೇತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಂದ ಸಾಹಿತ್ಯ ಪ್ರೀತಿಯನ್ನು ನಿರೀಕ್ಷಿಸುವುದು ದೂರದ ಮಾತು. ಸಾಹಿತ್ಯಾಸಕ್ತಿಯ ಕೊರತೆಯ ಪರಿಣಾಮವಾಗಿ, ಹೆಚ್ಚಿನ ಸರ್ಕಾರಿ ನೌಕರರಲ್ಲಿ ಸೂಕ್ಷ್ಮಸಂವೇದನೆ ಇಲ್ಲವಾಗಿದೆ. ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರನ್ನು ಮಾತನಾಡಿಸುವಾಗ ಬಹುತೇಕ ನೌಕರರಲ್ಲಿ ಕನಿಷ್ಠ ಸೌಜನ್ಯ ಕೂಡ ಇರುವುದಿಲ್ಲ. ಅಹವಾಲು ಸಲ್ಲಿಸಲು ಬರುವವರ ವಯೋಮಾನವನ್ನು ಸಹ ಪರಿಗಣಿಸದೆ ವಯೋವೃದ್ಧರ ಜೊತೆಗೂ ಧಾರ್ಷ್ಟ್ಯದಿಂದ ವರ್ತಿಸುವವರಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಮತ್ತು ಸರ್ಕಾರಿ ನೌಕರರು ಅಕ್ರಮವಾಗಿ ಆಸ್ತಿ ಗಳಿಸುತ್ತಿದ್ದಾರೆ ಎನ್ನುವ ಆಪಾದನೆ ಸಾಮಾನ್ಯವಾಗಿ ಎಲ್ಲ ಕಡೆ ಕೇಳಿಬರುತ್ತಿದೆ. ಸದ್ಯದ ಸಂದರ್ಭದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ನೈತಿಕ ಶಿಕ್ಷಣದ ಅಗತ್ಯವಿದೆ. ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸದಾಚಾರ, ನಿರ್ಮೋಹ, ಸಾಮಾಜಿಕ ಪ್ರಜ್ಞೆಯಂತಹ ಉತ್ತಮ ಗುಣಗಳನ್ನು ಸರ್ಕಾರಿ ನೌಕರರಲ್ಲಿ ಬೆಳೆಸಬೇಕಾಗಿದೆ. ಸರ್ಕಾರಿ ಇಲಾಖೆಯು ತನ್ನ ಕರ್ತವ್ಯನಿಷ್ಠೆಯ ಮೂಲಕ ಸಾರ್ವಜನಿಕಸ್ನೇಹಿ ಎನ್ನುವ ಮನ್ನಣೆಗೆ ಪಾತ್ರವಾಗಬೇಕಿದೆ. ಸರ್ಕಾರಿ ಕಚೇರಿಗಳಲ್ಲಿ ವಿಳಂಬವಿಲ್ಲದೆ ತಮ್ಮ ಕೆಲಸಕಾರ್ಯಗಳಾಗುತ್ತಿವೆ ಎನ್ನುವ ಸದಭಿಪ್ರಾಯ ಸಾರ್ವಜನಿಕರಲ್ಲಿ ಮೂಡಬೇಕು.

ಸರ್ಕಾರಿ ಇಲಾಖೆಗಳಿಗೆ ಸಾಹಿತ್ಯದ ದೀಕ್ಷೆ ನೀಡುವ ಮೂಲಕ ಅಲ್ಲಿನ ವಾತಾವರಣವನ್ನು ಒಂದಿಷ್ಟಾದರೂ ಸಹನೀಯವಾಗಿಸಬಹುದು. ಸಾಹಿತ್ಯವೇ ಎಲ್ಲಕ್ಕೂ ಮದ್ದಲ್ಲವಾದರೂ ಮನುಷ್ಯನನ್ನು ಸೂಕ್ಷ್ಮಸಂವೇದಿ ಯಾಗಿಸುವಲ್ಲಿ ಅದರ ಪಾತ್ರವನ್ನು ಕಡೆಗಣಿಸುವಂತಿಲ್ಲ.

ಸರ್ಕಾರಿ ನೌಕರರಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ರಜೆ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಈ ಸೌಲಭ್ಯವನ್ನು ಸಾಹಿತ್ಯಕ್ಕಾಗಿ ಸದುಪಯೋಗಪಡಿಸಿಕೊಳ್ಳುವ ನೌಕರರ ಸಂಖ್ಯೆ ಬಹಳಷ್ಟು ಕಡಿಮೆ. ಸಾಹಿತ್ಯ ಸಮ್ಮೇಳನದ ನೆಪದಲ್ಲಿ ರಜೆ ಪಡೆದರೂ ಬೇರೆ ಚಟುವಟಿಕೆಗಳಲ್ಲಿ ಹಾಗೂ ಮೋಜು ಮಸ್ತಿಯಲ್ಲಿ ಸಮಯ ಕಳೆಯುವವರ ಸಂಖ್ಯೆ ಹೆಚ್ಚಿದೆ. ಸರ್ಕಾರಿ ನೌಕರರ ಪುಸ್ತಕ ಪ್ರಕಾಶನ ಮತ್ತು ಪುಸ್ತಕ ಕೇಂದ್ರ ಅಸ್ತಿತ್ವದಲ್ಲಿ ಇವೆಯಾದರೂ ಅಲ್ಲಿ ಸಾಹಿತ್ಯದ ಚಟುವಟಿಕೆ ಶೂನ್ಯವಾಗಿದೆ. ಸೇವಾ ನಿಯಮಗಳು, ವೇತನ ಬಡ್ತಿ, ಪಿಂಚಣಿಯಂತಹ ಉದ್ಯೋಗ ಸಂಬಂಧಿತ ಪುಸ್ತಕಗಳನ್ನು ಹೊರತುಪಡಿಸಿ ಸಾಹಿತ್ಯದ ಪುಸ್ತಕಗಳು ಲಭ್ಯವಿಲ್ಲ.

ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಮಾಸ್ತಿ ಅವರು ಕಥೆಗಳನ್ನು ಬರೆದು ‘ಸಣ್ಣ ಕಥೆಗಳ ಜನಕ’ ಎನ್ನುವ ಗೌರವಕ್ಕೆ ಪಾತ್ರರಾದರು. ಕಥೆ ಎನ್ನುವುದು ಮಾಸ್ತಿ ಅವರಿಗೆ ಜೊತೆಯ ಜೀವದ ಜೀವನವನ್ನು ಬೇರೊಂದು ಜೀವಕ್ಕೆ ಹೇಳುವುದಾಗಿತ್ತು. ಸರ್ಕಾರಿ ನೌಕರರಾಗಿ ಇದ್ದುಕೊಂಡೇ ಕೆ.ಎಸ್.ನರಸಿಂಹಸ್ವಾಮಿ ನಿತ್ಯನೂತನವಾದ ದಾಂಪತ್ಯಗೀತೆಗಳನ್ನು ಬರೆದರು. ಪೊಲೀಸ್ ಇಲಾಖೆಯಲ್ಲಿದ್ದ ಬೀಚಿ ತಮ್ಮ ಮೊನಚು ಮತ್ತು ವ್ಯಂಗ್ಯದ ಲೇಖನಗಳ ಮೂಲಕ ಸಮಾಜದ ಅವ್ಯವಸ್ಥೆಗೆ ಚಾಟಿ ಬೀಸಿದರು. ಮುಳುಗಡೆ ಸಂತ್ರಸ್ತರ ನೋವಿಗೆ ನಾ.ಡಿಸೋಜ ಸ್ಪಂದಿಸಿದ್ದು ತಮ್ಮ ಕಥೆ ಮತ್ತು ಕಾದಂಬರಿಗಳ ಮೂಲಕ. ಶರಾವತಿ ಯೋಜನೆಯಲ್ಲಿನ ಉದ್ಯೋಗದ ಅನುಭವವು ಮುಳುಗಡೆ ಸಂತ್ರಸ್ತರ ನೋವನ್ನು ಅಕ್ಷರವಾಗಿಸಲು ಅವರನ್ನು ಪ್ರೇರೇಪಿಸಿತು.

‘ಎಷ್ಟೇ ಸಂಪಾದನೆ ಮಾಡಿರಲಿ ಎರಡು ಚಪಾತಿ, ಎರಡು ಹಿಡಿ ಅನ್ನಕ್ಕಿಂತ ಒಂದು ಸಲಕ್ಕೆ ಹೆಚ್ಚು ತಿನ್ನಕ್ಕೆ ಆಗೊಲ್ಲ, ಒಟ್ಟಿಗೆ ಎರಡು ಶರಟು ಹಾಕುಕ್ಕೆ ಆಗೊಲ್ಲ, ಒಂದೇ ಸಲ ಎರಡು ಕಾರಿನಲ್ಲಿ ಕೂಡುಕ್ಕೆ ಆಗೊಲ್ಲ ಅಂತ ಅರ್ಥ ಮಾಡಿಕೊಂಡರೆ ದುರಾಶೆ ತನಗೆ ತಾನೆ ಇಳಿದು ಹೋಗುತ್ತೆ. ಒಬ್ಬನಿಗೆ ಎಷ್ಟು ಭೂಮಿ ಬೇಕು? ಸತ್ತವರನ್ನು ಹೂಳುವ ಪದ್ಧತಿ ಇರುವ ಸಮಾಜಕ್ಕೆ ಬೇಕಾದುದು ಆರಡಿ ಉದ್ದ ಮೂರಡಿ ಅಗಲ ಜಾಗ ಮಾತ್ರ. ಹೆಣಾನ ಸುಡೂ ಪದ್ಧತಿ ಇರುವವರಿಗೆ ಅದೂ ಬೇಕಿಲ್ಲ’ ಎಂದು ವೈರಾಗ್ಯದ ಮಾತನಾಡುವ, ಎಸ್.ಎಲ್.ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿನ ಪಾತ್ರವೊಂದು ಬದುಕಿನ ನಿಜವಾದ ಅರ್ಥವನ್ನು ಅನಾವರಣಗೊಳಿಸುತ್ತದೆ. ಇಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಲ್ಲಿ ಅಪ್ರಾಮಾಣಿಕತೆ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಬೇರುಮಟ್ಟದಿಂದಲೇ ಕಿತ್ತೊಗೆಯಲು ಸಾಧ್ಯ. ಸಾಹಿತ್ಯದ ಓದು ಇಂತಹದ್ದೊಂದು ಸಾಧ್ಯತೆಯನ್ನು ಸಾಧ್ಯವಾಗಿಸು ತ್ತದೆ ಎನ್ನುವ ನಂಬಿಕೆ ಸತ್ಯಕ್ಕೆ ಹತ್ತಿರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.