ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜೀವಸಂಜೀವಿನಿಗೆ ಬೇಕು ಜೀವದಾನ!

ಲಾಕ್‍ಡೌನ್‍ಗಿಂತ ಮೊದಲು ಸಂಗ್ರಹಿಸಿಟ್ಟಿದ್ದ ರಕ್ತದ ಜೀವಿತಾವಧಿಯು ಬಹುತೇಕ ಮುಗಿದಿದ್ದು, ಇದೀಗ ರಕ್ತನಿಧಿಗಳಲ್ಲಿ ರಕ್ತದ ಸಂಗ್ರಹವು ಶೂನ್ಯ ಸ್ಥಿತಿ ಮುಟ್ಟಿದೆ
Last Updated 30 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಕೊರೊನಾ ಲಾಕ್‍ಡೌನ್‌ನಿಂದಾಗಿ ರಾಜ್ಯದಾದ್ಯಂತ ರಕ್ತನಿಧಿಗಳೂ ಸಂಕಷ್ಟಕ್ಕೆ ಗುರಿಯಾಗಿವೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ನೀಡಲು ಬೇಕಾದ ರಕ್ತವನ್ನು ರಕ್ತನಿಧಿಯಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

ರಕ್ತನಿಧಿಗಳು ರಕ್ತ ಸಂಗ್ರಹಕ್ಕೆ ಸಾಮಾನ್ಯವಾಗಿ ಸ್ವಯಂಪ್ರೇರಿತ ರಕ್ತದಾನಿಗಳನ್ನೇ ಅವಲಂಬಿಸಿರುತ್ತವೆ. ಔಷಧ ನಿಯಂತ್ರಣ ಮಂಡಳಿಯೂ ಸ್ವಯಂಪ್ರೇರಿತರಿಂದಲೇ ರಕ್ತ ಸಂಗ್ರಹಿಸಬೇಕೆಂಬ ನಿಯಮವನ್ನು ರಕ್ತನಿಧಿಗಳ ಮೇಲೆ ಹೇರಿರುತ್ತದೆ. ಆದರೂ ಬಹುತೇಕ ರಕ್ತನಿಧಿಗಳಲ್ಲಿ ರೋಗಿಗೆ ರಕ್ತವನ್ನು ವಿತರಿಸುವಾಗ ಆತನ ಸಂಬಂಧಿಕರಿಂದ ಬದಲಿ ರಕ್ತದಾನದ ವ್ಯವಸ್ಥೆ ಮಾಡಲು ಕೇಳುವುದು ಸಹಜ. ಏಕೆಂದರೆ, ಬರೀ ಸ್ವಯಂಪ್ರೇರಿತ ರಕ್ತದಾನಿಗಳಿಂದಷ್ಟೇ ರಕ್ತವನ್ನು ಸಂಗ್ರಹಿಸಿದಾಗ, ರಕ್ತನಿಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಗುಂಪುಗಳ ರಕ್ತದ ಯುನಿಟ್‍ಗಳನ್ನು ಸಂಗ್ರಹಿಸಿಡುವುದು ಕಷ್ಟವಾಗುತ್ತದೆ.

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವವರ ಸಂಖ್ಯೆ ವಿರಳ. ಕೆಲವು ಸಂಘ– ಸಂಸ್ಥೆಗಳು ನಡೆಸಿ ಕೊಡುವ ರಕ್ತದಾನ ಶಿಬಿರಗಳಲ್ಲಷ್ಟೇ ರಕ್ತದಾನಿಗಳು ಒಟ್ಟುಗೂಡಿ ರಕ್ತದಾನಕ್ಕೆ ಮುಂದಾಗುತ್ತಾರೆ. ಸಂಘ– ಸಂಸ್ಥೆಗಳು ತಮ್ಮ ನೆಚ್ಚಿನ ಜನನಾಯಕನ ಜನ್ಮದಿನಾಚರಣೆಗಾಗಿ, ತಮ್ಮ ಪ್ರೀತಿಯ ಸಿನಿಮಾ ತಾರೆಯರ ಹೊಸ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲಿ ಅಥವಾ ಇತರ ವಿಶೇಷ ಸಂದರ್ಭಗಳಲ್ಲಿ ಆಯೋಜಿಸುವ ರಕ್ತದಾನ ಶಿಬಿರಗಳು ರಕ್ತನಿಧಿಗಳಿಗೆ ಒಂದು ರೀತಿಯ ವರದಾನವೇ ಸರಿ. ಕೆಲವೊಮ್ಮೆ ಸಂಘ– ಸಂಸ್ಥೆಗಳ ಸ್ವಪ್ರತಿಷ್ಠೆಗಾಗಿ, ತಮ್ಮ ಸೇವಾಕಾರ್ಯಗಳ ಬಗೆಗೆ ಪತ್ರಿಕೆಗಳಲ್ಲಿ ಫೋಟೊಸಹಿತ ವರದಿ ಪ್ರಕಟವಾಗಲಿ ಎಂಬ ಕಾರಣಕ್ಕಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದೂ ಉಂಟು. ಅಂತಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ರಕ್ತದಾನ ಮಾಡುವುದಿದೆ.

ಶಾಲಾ– ಕಾಲೇಜುಗಳು ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿಯಂತಹ ವಿಶೇಷ ಸಂದರ್ಭಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುತ್ತವೆ. ಆದರೆ, ಲಾಕ್‍ಡೌನ್‍ನಿಂದ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ಹಾಗೂ ಗುಂಪುಗೂಡುವಿಕೆ
ಯನ್ನು ನಿರ್ಬಂಧಿಸಿರುವುದರಿಂದ ಒಂದು ತಿಂಗಳಿನಿಂದ ರಕ್ತದಾನ ಶಿಬಿರಗಳು ನಡೆದಿಲ್ಲ. ಇದು ರಕ್ತನಿಧಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ದಾನಿಯಿಂದ ಪಡೆದ ರಕ್ತವನ್ನು (ಪ್ಯಾಕ್ಡ್ ಆರ್‌ಬಿಸಿ) ಬರೀ 35 ದಿನಗಳವರೆಗೆ ಸಂಗ್ರಹಿಸಿಡಲು ಸಾಧ್ಯ. ಹಾಗಾಗಿ ಲಾಕ್‍ಡೌನ್‍ಗಿಂತ ಮೊದಲು ಸಂಗ್ರಹಿಸಿಟ್ಟಿದ್ದ ರಕ್ತದ ಜೀವಿತಾವಧಿಯು ಬಹುತೇಕ ಮುಗಿದಿದ್ದು, ಇದೀಗ ರಕ್ತನಿಧಿಗಳಲ್ಲಿ ರಕ್ತದ ಸಂಗ್ರಹವು ಶೂನ್ಯವಾಗಿದೆ.

ಕೆಲವು ದಿನಗಳ ಹಿಂದೆ ರೋಗಿಯೊಬ್ಬರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು. ಆದರೆ, ಆ ಗುಂಪಿನ ರಕ್ತ, ನಮ್ಮ ರಕ್ತನಿಧಿಯಲ್ಲಿ ಲಭ್ಯವಿರಲಿಲ್ಲ. ಸಾಮಾನ್ಯವಾಗಿ ಎಲ್ಲ ರಕ್ತನಿಧಿಗಳಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಪಟ್ಟಿ ಇರುತ್ತದೆ. ರೋಗಿಯ ತುರ್ತು ಅಗತ್ಯವನ್ನು ಗಮನದಲ್ಲಿರಿಸಿಕೊಂಡು ನಮ್ಮ ತಂತ್ರಜ್ಞರು ಆ ರಕ್ತದ ಗುಂಪಿನ ನಾಲ್ಕಾರು ಸ್ವಯಂಪ್ರೇರಿತ ರಕ್ತದಾನಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಆ ದಾನಿಗಳಿಗೆ ರಕ್ತದಾನ ಮಾಡುವ ಒಲವಿದ್ದರೂ ಅವರ ಮನೆಯಿಂದ ರಕ್ತನಿಧಿಗೆ ಬರುವ ವ್ಯವಸ್ಥೆ ಇಲ್ಲದಿರುವುದರಿಂದ ರಕ್ತದಾನಕ್ಕೆ ನಿರಾಕರಿಸಿದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ್ದು ಒಂದು ಸಮಸ್ಯೆಯಾದರೆ, ರಕ್ತದಾನಕ್ಕೆಂದು ಸ್ವಂತ ವಾಹನದಲ್ಲಿ ಬಂದು ಪೊಲೀಸರಿಂದ ಲಾಠಿ ಏಟು ತಿನ್ನಬೇಕಾದೀತು ಎನ್ನುವುದು ಇನ್ನೊಂದು ಸಮಸ್ಯೆ.

ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ ರಕ್ತದ ಬೇಡಿಕೆ ಇರುತ್ತದೆ. ಆಸ್ಪತ್ರೆಗಳಲ್ಲಿ ಪೂರ್ವನಿಗದಿತ ಶಸ್ತ್ರಚಿಕಿತ್ಸೆಗಳಿಗೆ ಹಾಗೂ ತುರ್ತಲ್ಲದ ಶಸ್ತ್ರಚಿಕಿತ್ಸೆಗಳಿಗೆಕೊರೊನಾ ಕಾರಣದಿಂದ ಎಷ್ಟೇ ನಿರ್ಬಂಧ ಹೇರಿದ್ದರೂ ಹೆರಿಗೆ ಮತ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳು ನಡೆಯಲೇಬೇಕಲ್ಲ! ನಮ್ಮ ದೇಶದ ಶೇಕಡ ಐವತ್ತರಷ್ಟು ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಹೆರಿಗೆ ಹಾಗೂ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ವರ್ಗಾವಣೆ ಅತ್ಯವಶ್ಯವಾಗಿರುತ್ತದೆ.

ಎಷ್ಟೋ ಸಂದರ್ಭಗಳಲ್ಲಿ, ರಕ್ತ ವರ್ಗಾವಣೆಯಿಂದ ಮಾತ್ರವೇ ವಾಸಿಯಾಗುವ ಕಾಯಿಲೆಗಳೂ ಇರುತ್ತವೆ. ಅಲ್ಲದೆ, ಒಂದು ಬಗೆಯ ಜನ್ಮಜಾತ ರಕ್ತಹೀನತೆಯಾದ ಥೆಲಸ್ಸೇಮಿಯದಲ್ಲಿ ಮೂರು ತಿಂಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡಿಸಿಕೊಳ್ಳುವುದೇ ಚಿಕಿತ್ಸಾ ಕ್ರಮವಾಗಿರುತ್ತದೆ. ಅದು, ಆ ರೋಗಿಗಳು ಚಟುವಟಿಕೆಯಿಂದಿರಲು ಕಡ್ಡಾಯವಾಗಿ ಅವಶ್ಯವಾಗಿರುತ್ತದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು, ಲಾಕ್‍ಡೌನ್ ನಿಯಮಾವಳಿಗಳಲ್ಲಿ ರಕ್ತದಾನಿಗಳಿಗೂ ವಿನಾಯಿತಿ ಕೊಡುವುದರ ಬಗ್ಗೆ ಆಯಾ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿಚಾರ ಮಾಡಬೇಕಾಗಿದೆ. ರಕ್ತದಾನಿಗಳನ್ನು ರಕ್ತನಿಧಿಗೆ ಕರೆತರಲು ಮತ್ತು ಮನೆಗೆ ತಲುಪಿಸಲು ವ್ಯವಸ್ಥೆ ಮಾಡುವುದರ ಬಗ್ಗೆ ಆಲೋಚಿಸಬೇಕಾಗಿದೆ. ಅಂತೆಯೇ ಸ್ವಯಂಪ್ರೇರಿತ ರಕ್ತದಾನಿಗಳು ಸ್ವಂತ ವಾಹನದಲ್ಲಿ ರಕ್ತನಿಧಿಗೆ ಬಂದು ಹೋಗುವಾಗಲೂ ಲಾಕ್‍ಡೌನ್ ನಿಯಮಾವಳಿಗಳಲ್ಲಿ ಒಂದಿಷ್ಟು ರಿಯಾಯಿತಿಯನ್ನು ತೋರಿಸಬೇಕಾಗಿದೆ.

ಬೆಂಗಳೂರಿನಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳಿಗಾಗಿ ಕಾಲ್‌ಸೆಂಟರ್ ಆರಂಭಿಸಿದ ಹಾಗೂ ವಾಹನ ವ್ಯವಸ್ಥೆಯನ್ನು ಮಾಡಿದ ಬಗ್ಗೆ ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿದೆ. ಅಂತಹ ಉಪಕ್ರಮಗಳು ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಯರೂಪಕ್ಕೆ ಬರಬೇಕಾದುದು ಅಗತ್ಯ.

ಲೇಖಕಿ: ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ರಕ್ತನಿಧಿಯ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT