ಶುಕ್ರವಾರ, ಮೇ 20, 2022
23 °C
ಲೋಕಗುರು ಮತ್ತು ನಾಡಿನ ಆತ್ಮಬಲ

ಸಂಗತ: ನ್ಯಾಯದ ಪರ ನಿಲ್ಲುವುದಕ್ಕಿಂತ ಬೇರಾವ ಘನತೆ ಬೇಕು ಧರ್ಮಕ್ಕೂ ಧರ್ಮಗುರುವಿಗೂ?

ದಾದಾಪೀರ್ ನವಿಲೇಹಾಳ್ Updated:

ಅಕ್ಷರ ಗಾತ್ರ : | |

Prajavani

ಜಾತಿಗಳು ಎಗ್ಗಿಲ್ಲದೆ ಪ್ರಚಾರ ಪಡೆಯುತ್ತಿರುವ ದಿನಗಳಿವು. ಒಂದು ಕಾಲಕ್ಕೆ ಸಾರ್ವಜನಿಕವಾಗಿ ತಮ್ಮ ಜಾತಿಯ ಹೆಸರು ಹೇಳಿಕೊಳ್ಳಲು ನಾಚುವ ವಾತಾವರಣವಿತ್ತು. ಈಗ ಅದು ಹೆಮ್ಮೆಯ, ಅಧಿಕಾರದ, ಮತ್ತೊಂದು ಜಾತಿಯ ವಿರುದ್ಧ ಸಂಘಟನೆಗೊಳ್ಳಬೇಕಾದ ಸಂಗತಿಯಾಗಿದೆ. ಜಾತಿಗೊಂದು ಪೀಠ, ಅದಕ್ಕೆ ಒಬ್ಬ ಪೀಠಾಧಿಕಾರಿ, ಅವರಿಗೊಂದು ವಿಲಾಸಿ ಕಾರು, ಸುತ್ತು ಹಾಕಲು ಅದೇ ಜಾತಿಯ ಒಂದಿಷ್ಟು ಮಂದಿ ಇದ್ದ ಮೇಲೆ ಇನ್ನೇನು ಬೇಕು?

ಜನರ ನೈತಿಕ ಶಕ್ತಿ ಕುಗ್ಗದಂತೆ, ಅವರ ಬದುಕು ಸಮಾಜದ ಸಹಜ ಸಂತೋಷವನ್ನು ಸವಿಯುವಂತೆ ಮಾಡಬಲ್ಲ ಚೇತೋಹಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕೆಲವು ಪೀಠಾಧಿಪತಿಗಳಿಗೆ ಸಮಯವಿಲ್ಲದಂತಹ ಸ್ಥಿತಿ ಉಂಟಾಗಿದೆ. ಹೀಗಿರುವಾಗ, ನಾವು ನಮ್ಮ ದೇಶದ ಆಧ್ಯಾತ್ಮಿಕ ಬೆರಗನ್ನು ಮರಳಿ ಪಡೆಯುವ ಹಂಬಲಕ್ಕಾಗಿ ಆಶಿಸಬೇಕಾಗಿದೆ.

ಜಾತಿಯ ಪೋಷಣೆಗಾಗಿ ಇರುವ ಮಠ ಮತ್ತು ಗುರುಗಳಿಂದ ಅಧ್ಯಾತ್ಮ ದೂರವಾದಂತಿದೆ. ಲೌಕಿಕದ, ಅದರಲ್ಲೂ ರಾಜಕೀಯ ಮೇಲಾಟಗಳ ಆಸಕ್ತಿ ಇದ್ದ ಕಡೆ ನಿಜ ಭಕ್ತಿಯನ್ನು, ಶುದ್ಧ ನಡೆ-ನುಡಿಯನ್ನು ನಿರೀಕ್ಷಿಸುವುದು ಕಷ್ಟ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಹತ್ತರ ಜವಾಬ್ದಾರಿ ಇರಬೇಕಾದ ಧಾರ್ಮಿಕ ಗುರುಗಳಲ್ಲಿ ಕೆಲವರು ಪಕ್ಷ ಮತ್ತು ರಾಜಕೀಯ ನಾಯಕರ ಆರಾಧಕರಾಗಿ ಅಸಮಾನತೆ ಮತ್ತು ಭ್ರಷ್ಟಾಚಾರದ  ಕಾವಲಿಗೆ ನಿಂತಿರುವ ವಿಪರ್ಯಾಸವನ್ನು ಕಾಣುತ್ತಿದ್ದೇವೆ.

ಒಂದು ಜಾತಿಗೆ ಗುರುವಾದವರು ಆ ಜಾತಿಯ ಸಾಂಸ್ಕೃತಿಕ ಸಂಪತ್ತನ್ನು ಅದರ ಆಂತರಿಕ ಬಲದೊಂದಿಗೆ ಸ್ಥಿರೀಕರಿಸುವ ಕ್ರಿಯಾತ್ಮಕ ನಡೆಯನ್ನು ಪ್ರಕಟಿಸಬೇಕೆನ್ನುವುದು ಮತ್ತು ಆ ಮೂಲಕ ಅದೇ ಜಾತಿಯ ಗಡಿಗೆರೆಗಳನ್ನು ಮೀರಿ ಅದರ ಸಾಮಾಜಿಕ ಎತ್ತರವನ್ನು ಎಲ್ಲರೊಳಗೊಂದಾಗುವ ಮಾನವೀಯ ನೆಲೆಗೆ ತರುವುದು ಆ ಸ್ಥಾನದ ಆತ್ಯಂತಿಕ ನಿರೀಕ್ಷೆ.

ಧಾರ್ಮಿಕ ಗುರುಪದವಿಯಲ್ಲಿ ಇರುವವರಿಗೆ ವಾಸ್ತವವಾಗಿ ಸ್ವಾಮಿ ವಿವೇಕಾನಂದರು ಮತ್ತು ನಾರಾಯಣಗುರು ಅಂಥವರು ಮಾದರಿಯಾಗಬೇಕು. ವಿವೇಕಾನಂದರನ್ನು ವಿಭಿನ್ನ ರೀತಿಯಲ್ಲಿ ಕಂಡರಿಸಿರುವ ಪುಟ್ಟಣ್ಣ ಕಣಗಾಲರ ‘ಪಡುವಾರಹಳ್ಳಿ ಪಾಂಡವರು’ ಸಿನಿಮಾದ ಧರ್ಮಗುರುವಿನ ಪಾತ್ರವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.

ಜಾತಿ ಮತ್ತು ಧರ್ಮಗಳ ಆಂತರಿಕ ಮೂಲ ಬಲವಾದ ನೈತಿಕತೆಯೇ ನಾಪತ್ತೆ ಯಾಗಿರುವ ಈ ಹೊತ್ತಿನಲ್ಲಿ ಈ ಪಾತ್ರ ಮತ್ತೆ ಮತ್ತೆ ಕಾಡುತ್ತಿದೆ. ಹೆಣ್ಣನ್ನೂ ಸೇರಿದಂತೆ ಬಡವರನ್ನು ಇನ್ನಿಲ್ಲದಂತೆ ಶೋಷಿಸುವ ಸಾಹುಕಾರನನ್ನು ಕರೆಸಿ ನ್ಯಾಯದ ಹಾದಿಯನ್ನು ತೋರಿಸುವ, ಅದು ಸಾಧ್ಯವಾಗದಿದ್ದಾಗ ‘ದುರ್ಜನ– ಸಜ್ಜನ ಸಂಗ್ರಾಮ’ದ ಸೂಚನೆ ಕೊಟ್ಟು, ಎಲ್ಲ ಕಾಲಕ್ಕೂ ಧರ್ಮವೇ ಅಂತಿಮವಾಗಿ ಗೆಲ್ಲುತ್ತದೆ ಎಂಬ ವಿಶ್ವಾಸ ತುಂಬುವ, ಇಡೀ ಹಳ್ಳಿ ಸಾಹುಕಾರನ ವಿರುದ್ಧ ಸಿಡಿದೆದ್ದಾಗ ದುಷ್ಟರಿಗೆ ಅಹಿಂಸಾರೂಪದ ಓಡಿಸುವ ಶಿಕ್ಷೆಯನ್ನು ವಿಧಿಸುವ, ಓಡಿಸುತ್ತಲೇ ಇರಬೇಕಾದ ನಿರಂತರ ವಿವೇಕವನ್ನು ತುಂಬುವ ಪಾತ್ರ ಅದು.

ನಮ್ಮ ಇಂದಿನ ಧಾರ್ಮಿಕ ವಾತಾವರಣ ‘ಕುಲ ಕುಲವೆಂದು ಹೊಡೆದಾಡು’ವುದನ್ನು, ‘ಇವನಾರವ ಇವನಾರವ’ ಎಂದು ಗಟ್ಟಿಯಾಗಿ ‘ಇವ ನಮ್ಮವ ಇವ ನಮ್ಮವ’ನೆಂದು ಗುಟ್ಟಾಗಿ ಹೇಳುವುದನ್ನು ಕಲಿಸುತ್ತಿರು ವಂತಿದೆ. ಹಿಂದುಳಿದಿರುವ ಮಾನದಂಡದಿಂದಲೇ ಜಾತಿಗಳಿಗೆ ಗೌರವ ತರುವ ಭ್ರಮೆಯನ್ನು ಹುಟ್ಟಿಸ ಲಾಗುತ್ತಿದೆ. ಸಮಾವೇಶಗಳಿಂದ, ಪಾದಯಾತ್ರೆಗಳಿಂದ ಸೇರುವ ದೊಡ್ಡ ಸಂಖ್ಯೆಯ ಜನರೆದುರು ಆಳುವವರನ್ನೇ ಕರೆಸುವ, ಬದಲಿಸುವ ಠೇಂಕಾರದ ಮಾತುಗಳು ಬರುತ್ತವೆ. ಸಾಮಾಜಿಕ ಮೀಸಲಾತಿಯ ಹಂಗಿಲ್ಲದೆ ಓದಿ ಉದ್ಯಮಿಗಳಾಗುವಂತಹ ಅಥವಾ ಉದ್ಯೋಗ ಪಡೆಯುವಂತಹ ಸತ್ಪ್ರೇರಣೆ ನೀಡುವ ಜಾತಿವಿನಾಶದ ನೀತಿಬೋಧಕ ಗುರುಗಳು ಕಾಣುತ್ತಿಲ್ಲ.

ಕಳೆದ ಮೂರು ದಶಕಗಳಲ್ಲಿ ಆಗಿರುವ ಕೆಟ್ಟ ಬದಲಾವಣೆ ಇದು. ವಿದ್ಯಾರ್ಥಿ ಹೇಗಾದರೂ ಬರೆದಿರಲಿ ಅಧ್ಯಾಪಕ ಉತ್ತಮ ಅಂಕಗಳನ್ನು ಕೊಡಬೇಕು. ಇಲ್ಲದಿದ್ದರೆ ಆತ ದಲಿತ ವಿರೋಧಿಯೋ ಮೇಲ್ವರ್ಗದ ವಿರೋಧಿಯೋ ಆಗಿಬಿಡುತ್ತಾನೆ. ಶಾಸಕರು, ಮಂತ್ರಿಗಳು ತಮ್ಮ ಕ್ಷೇತ್ರದ ಯಾವುದೇ ಮದುವೆ, ಮರಣಗಳಿಗೆ ಗೈರುಹಾಜರಾದರೆ ಮುಗಿಯಿತು, ಅವರು ಆ ಜಾತಿಯವರ ವಿರೋಧಿ ಅಂತಲೇ ಹಣೆಪಟ್ಟಿ ಗ್ಯಾರಂಟಿ. ನಮ್ಮ ಇತಿಹಾಸದ ಯಾವ ಕಾಲದಲ್ಲೂ ಸಾರ್ವಜನಿಕ ಲಜ್ಜೆ ಬಿಟ್ಟು ಈ ಮಟ್ಟದಲ್ಲಿ ಆಳುವವರನ್ನು ಅವಲಂಬಿಸಿದ, ಆಧುನಿಕ ಗುಲಾಮಗಿರಿಯ ಉದಾಹರಣೆ ಸಿಗಲಾರದು.

ತರಗತಿಯೊಳಗಿನ ಗುರುವಿಗೆ ಸಾಧ್ಯವಾಗದ್ದು ಲೋಕಗುರುವಿಗೆ ಸಾಧ್ಯ. ತನಗೆ ದೊರೆತ ಅವಕಾಶವನ್ನು, ಜನಬೆಂಬಲವನ್ನು ಇಡೀ ನಾಡಿನ ಆತ್ಮಬಲವನ್ನಾಗಿಸುವ ದಿಕ್ಕಿನಲ್ಲಿ ಮುನ್ನಡೆಸುವ ಸಾಧ್ಯತೆಯನ್ನು ಮನಗಾಣಬೇಕು. ಸಮಾಜದ ಕ್ರೂರ ಮುಖಗಳಾದ ಅಸಮಾನತೆ, ಭ್ರಷ್ಟಾಚಾರ, ಶೋಷಣೆಗಳನ್ನು ಅದೇ ಜಾತಿಯ ಬಲದಿಂದ ತೊಡೆಯುವ ಬೌದ್ಧಿಕ ಶಕ್ತಿಗಳನ್ನು ರೂಪಿಸಬಹುದು.

ಸಜ್ಜನಿಕೆಯ, ನ್ಯಾಯದ, ಸಮಸಮಾಜದ ಪರ ನಿಲ್ಲುವುದಕ್ಕಿಂತ ಬೇರಾವ ಘನತೆ ಬೇಕು ಧರ್ಮಕ್ಕೂ ಧರ್ಮಗುರುವಿಗೂ? ತನಗೆ ನೆಲೆ ಕೊಟ್ಟ ಸ್ಥಾವರವನ್ನು ಜಂಗಮಗೊಳಿಸುವ ಅವಕಾಶವನ್ನು ಕಳೆದುಕೊಳ್ಳದೇ ಸಂವಾದದ ಪ್ರಜಾಸತ್ತೆಗೆ ಜೀವ ತುಂಬುತ್ತಾ ಲೋಕಗುರು ಲೋಕಮಾತೆಯ ಮಮತೆಯನ್ನು ತುಂಬಿ ಕೊಳ್ಳಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು