ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವೈದ್ಯ ಶಿಕ್ಷಣ– ಕೈಗೆಟಕುವ ದ್ರಾಕ್ಷಿಯಾಗಲಿ

ಉಕ್ರೇನ್‌ನಂತಹ ರಾಷ್ಟ್ರಗಳು ಮತ್ತು ನಮ್ಮಲ್ಲಿನ ವೈದ್ಯಕೀಯ ಶಿಕ್ಷಣ ವೆಚ್ಚಕ್ಕೆ ಅಜಗಜಾಂತರ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿದೆ
Last Updated 3 ಮಾರ್ಚ್ 2022, 23:00 IST
ಅಕ್ಷರ ಗಾತ್ರ

ಉಕ್ರೇನಿನ ಮೇಲೆ ಬೃಹತ್ ರಷ್ಯಾ ದೇಶ ದಾಳಿ ಮಾಡುತ್ತಿರುವ ಬೆನ್ನಲ್ಲೇ ಉಕ್ರೇನಿನಲ್ಲಿ ದೊರೆಯುತ್ತಿರುವ ವೈದ್ಯಕೀಯ ಶಿಕ್ಷಣದ ವಿಚಾರವೀಗ ಭಾರತದಲ್ಲಿ ಚರ್ಚೆಗೆ ಬಂದಿದೆ. ಇಪ್ಪತ್ತೈದು ಸಾವಿರಕ್ಕಿಂತಲೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉಕ್ರೇನಿನಂತಹ ದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವುದು ತಿಳಿದು ಬರುತ್ತಿರುವ ಸಂದರ್ಭದಲ್ಲೇ ಅಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ತಗಲುವ ವೆಚ್ಚವು ಭಾರತಕ್ಕಿಂತ ಅತ್ಯಂತ ಕಡಿಮೆ ಎಂಬ ವಿಚಾರ ಬೆಳಕಿಗೆ ಬರುತ್ತಿದೆ. ಮಾತ್ರವಲ್ಲ, ಭಾರತದ ಕೆಲವು ಖಾಸಗಿ ವೈದ್ಯ ಕಾಲೇಜುಗಳ ಹಣದ ಹಪಹಪಿತನದ ದಿವ್ಯ ದರ್ಶನವೂ ಆಗುತ್ತಿದೆ.

ರಷ್ಯಾ ಮತ್ತು ಅದರ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಗಲುವ ವೈದ್ಯಕೀಯ ಶಿಕ್ಷಣ ವೆಚ್ಚಕ್ಕಿಂತಲೂ ಆರೇಳು ಪಟ್ಟು ಜಾಸ್ತಿ ಹಣ ಪೀಕುವ ಇಲ್ಲಿಯ ಕೆಲವು ಮೆಡಿಕಲ್ ಕಾಲೇಜುಗಳು ಅಂತರರಾಷ್ಟ್ರೀಯ ವೈದ್ಯ ಶಿಕ್ಷಣದ ಮಾನ್ಯತೆಯ ದೃಷ್ಟಿಯಿಂದ ಕೆಳಮಟ್ಟದಲ್ಲಿವೆ ಎಂದು‌ ಕೆಲವು ವರದಿಗಳು ಕೂಡಾ ಹೇಳುತ್ತಿವೆ. ಆದರೂ ಇಲ್ಲಿಯ ಕೆಲವು ಕಾಲೇಜುಗಳು ನೀಡುವ ಪ್ರಚಾರ ಫಲಕಗಳಲ್ಲಿ ತಾವು ಹೊಂದಿರುವ ಸವಲತ್ತುಗಳ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೊಳ್ಳುತ್ತಲೇ ಹೋಗುತ್ತಿವೆ. ಇವರುಗಳ ಮಾತನ್ನೇ ನಂಬುವುದಾದರೆ, ಉಕ್ರೇನ್, ಉಜ್ಬೇಕಿಸ್ತಾನಕ್ಕಿಂತಲೂ ಇಲ್ಲಿಯ ಕಾಲೇಜು ಶಿಕ್ಷಣ ವ್ಯವಸ್ಥೆ ಗುಣಮಟ್ಟದಲ್ಲಿ ಮೇಲಿದೆಯೇ ಅಥವಾ ಕಡಿಮೆ ದುಡ್ಡಿನಲ್ಲಿ ಶಿಕ್ಷಣ ನೀಡುವ ವಿದೇಶಿ ವೈದ್ಯಕೀಯ ಸಂಸ್ಥೆಗಳು ಅಗ್ಗದ ದರಕ್ಕೆ ಮುಗ್ಗಿದ ಜೋಳ ನೀಡುವಂತಹವುಗಳೇ?

ವಿದೇಶದಲ್ಲಿ ಅದರಲ್ಲೂ ಯುರೋಪ್‌ ಖಂಡದಲ್ಲಿ ಓದಿ ಹೊರಬಂದರೆ ಅತಿ ಹೆಚ್ಚು ಮರ್ಯಾದೆ ಸಿಗುತ್ತದೆ ಮತ್ತು ವೃತ್ತಿಯಲ್ಲಿ ಹುಸಿ ಘನತೆ, ಗೌರವಗಳು ಪ್ರಾಪ್ತಿಯಾಗುತ್ತವೆ ಎಂಬ ಕಾರಣಕ್ಕಾಗಿ ಪೂರ್ವ ಯುರೋಪ್ ರಾಷ್ಟ್ರಗಳನ್ನು ಆರಿಸಿಕೊಳ್ಳಲಾಗುತ್ತಿದೆಯೇ? ಇವೆಲ್ಲವೂ
ಇದೀಗ ಖಂಡಿತವಾಗಿ ಚರ್ಚೆಯಾಗಬೇಕಾದ ವಿಷಯಗಳು.

ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ, ನನ್ನ ಸ್ನೇಹಿತರ ಮಗನೊಬ್ಬ ಚೀನಾದ ಕಾಲೇಜೊಂದರಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದವ ತನ್ನ ಊರಿಗೆ ಬಂದಿದ್ದ. ಈ ಹುಡುಗ ಕೇವಲ ₹17 ಲಕ್ಷದಲ್ಲಿ ಮೆಡಿಕಲ್ ಶಿಕ್ಷಣ ಪದವಿ ಪಡೆಯುವ ಒಪ್ಪಂದದ ಆಧಾರದ ಮೇಲೆ ಸದರಿ ಶಿಕ್ಷಣ ಸಂಸ್ಥೆಗೆ ಸೇರಿಕೊಂಡಿದ್ದ. ಅವನು ಓದುತ್ತಿದ್ದ ಕಾಲೇಜು ಮತ್ತು ಹಾಸ್ಟೆಲ್ಲಿನಲ್ಲಿ ಇದ್ದ ಅತ್ಯಾಧುನಿಕ ಸವಲತ್ತುಗಳನ್ನು ವಿಡಿಯೊವೊಂದರಲ್ಲಿ ನೋಡಿ ದಂಗಾಗಿ ಹೋದೆ. ಪ್ರಯೋಗಾಲಯದಲ್ಲಿದ್ದ ಸಲಕರಣೆಗಳು ವಿಶ್ವದ ಬೇರಾವ ದೇಶದಲ್ಲೂ ಇಲ್ಲ ಎಂಬುದನ್ನು ತನ್ನ ಮಾತುಗಳ ಮೂಲಕ ಸಾಬೀತುಪಡಿಸುತ್ತಿದ್ದ. ಭಾರತದಲ್ಲಿ ಇಂತಹ ಶಿಕ್ಷಣ ನೀಡುವ ಕಾಲೇಜುಗಳೇ ಇಲ್ಲವೆಂಬುದು ಅವನ ವಾದವಾಗಿತ್ತು.

ಮಧ್ಯಮ ವರ್ಗದ ಜೇಬಿಗೆ ಹೆಚ್ಚು ಹೆಚ್ಚು ಹರಿತವಾದ ಕತ್ತರಿಯ ಜೊತೆ ಕೊಡಲಿಯನ್ನೇ ಹಾಕುವುದರ ಮೂಲಕ ತಾವು ನೀಡುವ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಭ್ರಮಾಲೋಕವೊಂದನ್ನು ಸೃಷ್ಟಿ ಮಾಡಿ ಮೋಸಪಡಿಸುವ ವ್ಯವಸ್ಥೆಯ ಬಹುದೊಡ್ಡ ಜಾಲವೊಂದು ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ರಾಜ್ಯ ಅಥವಾ ದೇಶದಲ್ಲಿರುವ ಬಹುತೇಕ ಮೆಡಿಕಲ್ ಕಾಲೇಜುಗಳು ಹಾಲಿ ಮಂತ್ರಿಗಳು ಮತ್ತು ಮಾಜಿ ಮಂತ್ರಿಗಳ ಕೈಯಲ್ಲೋ ಮಠಾಧೀಶರ ಕೈಯಲ್ಲೋ ಇರುವುದರಿಂದ ಇವುಗಳ ಮೇಲಿನ ಸರ್ಕಾರದ ನಿಯಂತ್ರಣ ಮರೀಚಿಕೆಯಾಗಿಯೇ ಕಾಣಿಸುತ್ತದೆ.

ನಾಲ್ಕೈದು ವರ್ಷಗಳ ಹಿಂದಿನ ಸಂಗತಿಯೊಂದು ನೆನಪಿಗೆ ಬರುತ್ತಿದೆ. ಅಂದು, ದಿವಂಗತ ಅನಂತಕುಮಾರ್‌ ಅವರು ಕೇಂದ್ರ ಆರೋಗ್ಯ ಸಚಿವರಾಗಿದ್ದರು. ಹೃದಯಸಂಬಂಧಿ ಕಾಯಿಲೆಗಳಿಗೆ ಬಳಸುವ ಸ್ಟೆಂಟ್, ಪೇಸ್‌ಮೇಕರ್ ಹಾಗೂ ಇತರ ಉಪಕರಣಗಳಿಗೆ ಲಕ್ಷಾಂತರ ರೂಪಾಯಿಯನ್ನು ಖಾಸಗಿ ಆಸ್ಪತ್ರೆಯವರು ನಿರ್ದಯವಾಗಿ ವಸೂಲು ಮಾಡುತ್ತಿದ್ದರು. ಹೃದಯಸಂಬಂಧಿ ಕಾಯಿಲೆಗಳ ಉಪಶಮನಕ್ಕೆ ಇಂತಹ ಉಪಕರಣಗಳನ್ನು ಮಧ್ಯಮ ಮತ್ತು ಕೆಳವರ್ಗದವರು ಅಳವಡಿಸಿಕೊಳ್ಳಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇತ್ತು. ಇವುಗಳಿಗೆ ನೀಡಬೇಕಿದ್ದ ಲಕ್ಷಾಂತರ ರೂಪಾಯಿಯಲ್ಲಿ ಶೇ 90ರಷ್ಟು ಹಣ ಇವುಗಳನ್ನು ಉತ್ಪಾದಿಸುವ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಅನೈತಿಕ ಹಣಕಾಸು ಒಪ್ಪಂದದ ಆಧಾರದ ಮೇಲೆ ವಿಲೇವಾರಿಯಾಗುತ್ತಿತ್ತು.

ಇವುಗಳಿಗೆ ನಾಲ್ಕಾರು ಪಟ್ಟು ಹೆಚ್ಚಿಗೆ ಬೆಲೆಯನ್ನು ನೀಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಹುಸಿ ಕಾರಣಗಳನ್ನು ನೀಡಿ ರೋಗಿಗಳನ್ನು ಒಪ್ಪಿಸಲಾಗುತ್ತಿತ್ತು.ಇಂತಹ ಶೋಷಣೆಯನ್ನು ಅರ್ಥಮಾಡಿಕೊಂಡ ಸಚಿವ ಅನಂತಕುಮಾರ್‌, ಈ ಉಪಕರಣಗಳನ್ನು ಸಾಮಾನ್ಯರ ಕೈಗೆಟಕುವ ದರದಲ್ಲಿ ನೀಡುವಂತೆ ಆದೇಶಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಬೇಕಿದೆ.

ಈಗಲೂ ಅಂತಹುದೇ ಸಂದರ್ಭವೊಂದು ನಮ್ಮ ಸರ್ಕಾರಗಳಿಗೆ ಎದುರಾಗಿದೆ. ಅದು ಕೂಡಾ ಉಕ್ರೇನ್ ಮತ್ತು ರಷ್ಯಾ ನಡುವೆ ಉಂಟಾಗಿರುವ ಕದನದ ಮೂಲಕ. ಉಕ್ರೇನ್‌ನಲ್ಲಿ ₹ 14 ಲಕ್ಷಕ್ಕೆ ದೊರೆಯುವ ಮೆಡಿಕಲ್ ಶಿಕ್ಷಣಕ್ಕೆ ಇಲ್ಲಿ ಒಂದೂವರೆ ಕೋಟಿ ರೂಪಾಯಿ ಖರ್ಚಾಗಲು ಕಾರಣವೇನು ಎಂಬುದನ್ನು ಚರ್ಚೆಗೆ ಒಳಪಡಿಸಬೇಕಿದೆ. ನಿಯಂತ್ರಣ ಕ್ರಮಗಳ ಕುರಿತೂ ಯೋಚಿಸಬೇಕಿದೆ. ಖಾಸಗಿಯಾಗಿ ನಮ್ಮ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಉಕ್ರೇನ್‌ನಂತಹ ದೇಶಗಳಲ್ಲಿ ಸಿಗುವಂತೆ ಇಲ್ಲೂ ಮೆಡಿಕಲ್ ಸೀಟುಗಳು ಕೈಗೆ ಸಿಗುವ ದ್ರಾಕ್ಷಿಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT