ಬುಧವಾರ, ಮಾರ್ಚ್ 29, 2023
25 °C

ಸಂಗತ | ಹಿಂಸೆ, ಸ್ವಹಿಂಸೆ, ಅಹಿಂಸೆ

ಯೋಗಾನಂದ Updated:

ಅಕ್ಷರ ಗಾತ್ರ : | |

1948ರ ಜನವರಿ 30ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಗೊಳಗಾದರು. ಅಹಿಂಸೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಸಂತ ಹಿಂಸೆಗೆ ಗುರಿಯಾಗಿದ್ದು ಜಗತ್ತಿನ ಇತಿಹಾಸದ ಕಪ್ಪು ಚುಕ್ಕೆ.

‘ಓ ತಾಯೆ, ಓ ತಾಯೆ ಮುಳುಗುತಿದೆ ನೌಕೆ, ಈ ಜಗದ ಕತ್ತಲೆಯ ತೆರೆಕಡಲ ತಳಕೆ’ ಎಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ತಮ್ಮ ಅತೀವ ದುಃಖವನ್ನು ಅಭಿವ್ಯಕ್ತಿಸಿದ್ದರು. ಭಾರತದಲ್ಲಿ ಪ್ರತಿವರ್ಷ ಜನವರಿ 30ರಂದು ‘ಹುತಾತ್ಮರ ದಿನ’ ಆಚರಿಸಲಾಗುತ್ತದೆ.
ಪ್ರಾಚೀನ ನಾಗರಿಕತೆಗಳಲ್ಲಿ ಹುತಾತ್ಮರ ದಿನದ ಪರಿಕಲ್ಪನೆ ಕಂಡುಬರುತ್ತದೆ. ದೇಶಕ್ಕಾಗಿ, ತಾವು ನಂಬಿದ ಸಿದ್ಧಾಂತಗಳಿಗಾಗಿ ಹೋರಾಡಿ ಬಲಿದಾನಗೈದವರಿಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಗತವನ್ನು ಗೌರವಿಸುವುದರ ಜೊತೆಗೆ ಭವಿತವ್ಯವನ್ನೂ ದೃಷ್ಟಿಯಲ್ಲಿ ಇರಿಸಿಕೊಂಡು, ಸಂದ ಮಹನೀಯರ ಆದರ್ಶಗಳ ಪಥದಲ್ಲಿ ಸಾಗಲು ಸಂಕಲ್ಪಿಸುವ ಸಂದರ್ಭವಿದು.

ಗಾಂಧೀಜಿ ಪಾಲಿಗೆ ಅಹಿಂಸೆ ಒಂದು ಕಾರ್ಯತಂತ್ರ ವಾಗಿರಲಿಲ್ಲ. ಅದು ಅವರ ಜೀವನಶೈಲಿಯೇ ಆಗಿತ್ತು. ಅಹಿಂಸೆಯು ಆತ್ಮದ ವಿಶೇಷ ಗುಣವೆಂದು ಗಾಂಧೀಜಿ ಪರಿಗಣಿಸಿದ್ದರು. ಗುರಿಯೂ ಅದನ್ನು ತಲುಪುವ ಮಾರ್ಗವೂ ಪರಿಶುದ್ಧವಾಗಿರಬೇಕೆಂದು ಅವರು ಬಯಸಿದರು, ಅದರಂತೆ ಚಾಚೂ ತಪ್ಪದೆ ನಡೆದುಕೊಂಡರು. ‘ನಾನು ಹಿಂಸೆಯನ್ನು ವಿರೋಧಿಸು ತ್ತೇನೆ. ಏಕೆಂದರೆ ಹಿಂಸೆ ಒಳಿತು ಮಾಡುವಂತೆ ತೋರು ವುದು. ಆದರೆ ಆ ಒಳಿತು ತಾತ್ಕಾಲಿಕ, ಹಿಂಸೆಯಿಂದ ಹಾನಿಯೇ ಹೆಚ್ಚು’ ಎನ್ನುವುದು ಗಾಂಧೀಜಿ ಸ್ಪಷ್ಟ ನುಡಿ.

ಅಹಿಂಸೆಯೆಂದರೆ ಅನಿಷ್ಟಕ್ಕೆ ಮಾರುಹೋಗುವುದಲ್ಲ, ಆ ಅನಿಷ್ಟವನ್ನು ಸಹನೆಯಿಂದ ಸಂಪೂರ್ಣವಾಗಿ ವಿರೋಧಿಸುವುದು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಅಮೋಘವಾಗಿ ಅನುಸರಿಸಿದ ಅಹಿಂಸಾ ತತ್ವ ಇಂದಿಗೂ ಪ್ರಸ್ತುತ. ಅಹಿಂಸೆ ನಮ್ಮ ದಿನಚರಿಯಲ್ಲಿ ಮೇಳೈಸಿದರೆ ನ್ಯಾಯಾಲಯಗಳ ಮುಂದೆ ಬರುವ ಮೊಕದ್ದಮೆಗಳು ಕಡಿಮೆಯಾಗುತ್ತವೆ.

ಅಹಿಂಸೆಯೆಂದರೆ ಹಿಂಸೆ ಅಥವಾ ಅಶಾಂತಿ ಇಲ್ಲದ್ದು ಎಂದಲ್ಲ. ಅದು ಪ್ರತಿಯೊಂದು ಹಂತದಲ್ಲೂ ಪುಟಿಯುವ ಪ್ರೀತಿ, ವಾತ್ಸಲ್ಯ. ಹಿಂಸೆಯೆಂದರೆ ಥಳಿತ, ದರೋಡೆ, ಕೊಲೆಯಷ್ಟೇ ಅಲ್ಲ. ಕ್ರೌರ್ಯಕ್ಕೆ ನೋವಿಲ್ಲದೆ ಗಾಢವಾಗಿ ನಲುಗಿಸುವ ಮುಖಗಳು ಹಲವಿವೆ. ತಾರತಮ್ಯ, ಆಹಾರ ಪದಾರ್ಥಗಳ ವೃಥಾ ಪೋಲು, ಪರಿಸರ ನಿರ್ಲಕ್ಷ್ಯ, ಲಾಭಕೋರತನ, ಇಲ್ಲದವರ ಬಗ್ಗೆ ಅನಾದರ, ಇರುವವರ ಕುರಿತು ಅಸೂಯೆ, ದ್ವೇಷ- ನಾವು ತಿಳಿದೊ, ತಿಳಿಯದೆಯೊ ಎಸಗುವ ತೀವ್ರತರ ಹಿಂಸೆಜನ್ಯ ಉಪೇಕ್ಷೆಗಳಿವು. ಇಂತಹ ಹೊಣೆಗೇಡಿತನ ಗಳು ಅಸಮಾನತೆ, ಆವೇಶಗಳನ್ನು ಸೃಷ್ಟಿಸುತ್ತವೆ. ನಾವು ಚಲಾಯಿಸುವ ವಾಹನದ ಕರ್ಕಶ ಸದ್ದಾದರೆ ಇಲ್ಲವೆ ಸಂಭಾಷಣೆ ಏರು ಧ್ವನಿಯಲ್ಲಿದ್ದರೆ ಅದೂ ಹಿಂಸೆಯೇ. ಎಂದಮೇಲೆ ಪ್ರತ್ಯಕ್ಷಕ್ಕಿಂತ ಪರೋಕ್ಷವಾಗಿಯೇ ಹಿಂಸೆ ತಾಂಡವವಾಡಿರುತ್ತದೆ.

ಕೋವಿಡ್ ಖಂಡಾಂತರ ವ್ಯಾಧಿಯು ಗಾಂಧಿ ತತ್ವ ಪಾಲನೆಗೆ ವಿಶಿಷ್ಟವಾದ ಆಯಾಮವೊಂದನ್ನು ಕಲ್ಪಿಸಿತೆನ್ನಬಹುದು. ಒಬ್ಬರು ಮಾಸ್ಕ್ ಧರಿಸುವುದು ಎಲ್ಲರನ್ನೂ ರೋಗಮುಕ್ತಗೊಳಿಸಲು, ಅಂತೆಯೇ ಎಲ್ಲರೂ ಮಾಸ್ಕ್ ಧರಿಸುವುದು ಆ ಒಬ್ಬರನ್ನು ವ್ಯಾಧಿಯಿಂದ ಪಾರುಮಾಡಲೆಂದು. ಹಾಗಾಗಿ ಮಾಸ್ಕ್ ಧರಿಸದಿರುವುದು ಹಿಂಸೆಯ ಒಂದು ರೂಪವೇ.

ಯಾವುದೇ ನಾಗರಿಕತೆ ದೈಹಿಕ, ಮಾನಸಿಕ ಹಿಂಸೆಯನ್ನು ಸಾಮಾಜಿಕವಾಗಿ ಸಮ್ಮತಿಸದು. ನಮ್ಮ ಚಿಂತನೆಯ ಮಾರ್ಗ ಅಹಿಂಸೆಯದಾದರೆ ಅದು ಶಕ್ತಿಯುತವಾಗಿರುವುದು. ಗಾಂಧೀಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಬ್ರಿಟಿಷರನ್ನು ದ್ವೇಷಿಸ ಲಿಲ್ಲ. ಅವರ ದೃಷ್ಟಿಯಲ್ಲಿ ಸೇಡೆನ್ನುವುದು ಸ್ವಹಿಂಸೆ.

ಪ್ರಜಾಸತ್ತೆಯಲ್ಲಿ ನಿಸ್ಸಂದೇಹವಾಗಿ ಪ್ರಜೆಗಳಿಗೆ ಬೇಕು ಬೇಡಗಳು ಇದ್ದೇ ಇರುತ್ತವೆ. ಸರ್ಕಾರಗಳ ಮುಂದೆ ಬೇಡಿಕೆಗಳನ್ನು ಇಡಬಹುದು, ಪ್ರತಿರೋಧಿಸ ಬಹುದು. ಆದರೆ ಯಾವುದೇ ಪ್ರತಿಭಟನೆ ಶಾಂತಿಯುತವಾಗಿರಬೇಕೆಂದು ವ್ಯವಸ್ಥೆ ನಿರೀಕ್ಷಿಸುತ್ತದೆ. ಸಂಪು, ಮುಷ್ಕರ, ಧರಣಿ ಹೆಸರಿನಲ್ಲಿ ರಸ್ತೆ ಅಥವಾ ರೈಲು ಬಂದ್ ಮಾಡುವುದಕ್ಕೆ, ಜನಜೀವನಕ್ಕೆ ಅಡ್ಡಿಯಾಗುವುದಕ್ಕೆ ಯಾವುದೇ ಸಮರ್ಥನೆ ಇರದು. ಅಡುಗೆಯಾಗಲಿಲ್ಲ ಎಂಬ ಕಾರಣಕ್ಕೆ ಮಡಕೆಯನ್ನೇ ಒಡೆದಂತೆ ಇಂಥ ಚಟುವಟಿಕೆಗಳು.

ವ್ಯಕ್ತಿ ಪರಿಶುದ್ಧಿಯಿಂದಲೇ ರಾಷ್ಟ್ರಶುದ್ಧಿ ಎನ್ನುವುದು ಗಾಂಧಿಯವರ ಅಚಲ ನಂಬಿಕೆ. ವ್ಯಕ್ತಿಯ ಸದ್ಗುಣ ರಾಜಕೀಯದ ಅಡಿಗಲ್ಲಾಗಬೇಕಿದೆ. ಅಹಿಂಸಾ ಹಾದಿ ಎದುರಾಳಿಗಳಿಗೆ ಗೌರವ ಮತ್ತು ಲಕ್ಷ್ಯ ನೀಡುತ್ತದೆ. ಎಂತಹ ಕಠಿಣ ಸಂದರ್ಭಗಳಲ್ಲೂ ನಿಂದನೆ, ಶಿಷ್ಟಾಚಾರ ಮೀರಿದ ಮಾತುಗಳಿಗೆ ಬದ್ಧವಾದ ಮನಃಸ್ಥಿತಿ ರಾಜಕಾರಣಿಗಳಿಗೆ ಸಾಧ್ಯವಾಗಬೇಕಿದೆ.

ಅಹಿಂಸೆಯ ಬದುಕಿನ ಆಯ್ಕೆ ಎಂದರೆ ಉದಾತ್ತ ಮೌಲ್ಯಗಳೊಂದಿಗೆ ನೀತಿಯುತ ಬದುಕಿನ ಆಯ್ಕೆ. ಸಭೆ, ಸಮಾರಂಭಗಳಲ್ಲಿ ಎಂದೂ ದೀರ್ಘ ಭಾಷಣ ಮಾಡದ ಬಾಪು ಥಟ್ಟನೆ ನಗೆಯುಕ್ಕಿಸುವುದನ್ನಂತೂ ತಪ್ಪಿಸುತ್ತಿರ ಲಿಲ್ಲ. ತಮಗೆ ಅರ್ಪಣೆಯಾದ ಉಡುಗೊರೆ, ಸ್ಮರಣಿಕೆ ಗಳನ್ನು ಹರಾಜಿಗೆ ಹಾಕಿ, ಬಂದ ಹಣವನ್ನು ಬಡವರಿಗೆ ನೀಡಲು ಅವರು ಆಯೋಜಕರಿಗೆ ಸೂಚಿಸುತ್ತಿದ್ದರು. ಒಮ್ಮೆ ಅವರ ಚಿತ್ರಪಟಗಳನ್ನು ಹರಾಜಿಗಿಡಲಾಗಿತ್ತು. ಒಂದು ಪಟಕ್ಕೆ ₹100ರಿಂದ ಕೂಗು ಆರಂಭವಾಗಿ ₹125ಕ್ಕೆ ನಿಂತಿತು. ‘ಏನು? ಈ ಮುದುಕನ ಚಿತ್ರಪಟಕ್ಕೆ ₹125 ಮಾತ್ರವೆ? ಬೇಡಿ ಅದನ್ನು ಬದಿಗಿಡಿ’ ಎಂದರಂತೆ ಅವರು. ಪೂರ್ಣಪುರುಷ ವಿನೋದಪಟುವಾಗಬಲ್ಲ ಎನ್ನಲು ಇದಕ್ಕೂ ನಿದರ್ಶನ ಬೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.