ಮುಂಜಾನೆ ವಾಕಿಂಗ್ಗೆ ಹೋದಾಗ ಭೇಟಿಯಾದ ಸ್ನೇಹಿತರೊಬ್ಬರು ನಂದಿನಿ ಹಾಲು, ಮೊಸರಿನ ಬೆಲೆ ಪ್ರತಿ ಲೀಟರ್ಗೆ ₹ 4 ಹೆಚ್ಚಿಗೆ ಆಗಿರುವ ವಿಷಯ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು. ‘ಹಾಲಿನ ಬೆಲೆ ಏರಿಕೆಯ ಬಿಸಿ ನಮಗೆ ತಟ್ಟಿಲ್ಲ’ ಎಂದು ಹೇಳಿದಾಗ ಚಕಿತಗೊಂಡ ಅವರು, ‘ಹೌದೇ, ಅದು ಹೇಗೆ ಸಾಧ್ಯ?’ ಎಂದು ಕೇಳಿದರು.

‘ನಮ್ಮ ಬಡಾವಣೆಗೆ ಸಮೀಪದ ಹಳ್ಳಿಗಳಿಂದ ಕೃಷಿ ಮಹಿಳೆಯರು ನಿತ್ಯ ಮುಂಜಾನೆ ಬಂದು ಹಾಲು, ಮೊಸರು, ಹಣ್ಣು, ತರಕಾರಿ ಮಾರುತ್ತಾರೆ. ಮನೆಗಳ ಬಳಿಗೇ ತಂದು ಕೊಡುತ್ತಾರೆ. ತಾಜಾ ಇರುತ್ತವೆ. ಮಾರುಕಟ್ಟೆಯ ಬೆಲೆಗೆ ಹೋಲಿಸಿದರೆ ಬೆಲೆ ಕೂಡ ಕಡಿಮೆ. ನಾವು ಇವರ ಬಳಿಯೇ ಹಾಲು, ಮೊಸರು, ತರಕಾರಿ ಖರೀದಿಸುತ್ತೇವೆ’ ಎಂದು ಹೇಳಿದೆ.

ನನ್ನ ಮಾತು ಅವರಿಗೆ ಇಷ್ಟವಾಯಿತು. ‘ಕೃಷಿ ಮಹಿಳೆಯರು ನಮ್ಮ ಬಡಾವಣೆಗೂ ಹಣ್ಣು– ತರಕಾರಿ ತರುತ್ತಾರೆ. ಆದರೆ ನಾನು ಈ ಕಡೆ ಗಮನವನ್ನೇ ಕೊಟ್ಟಿರಲಿಲ್ಲ. ಇನ್ನು ಮುಂದೆ ನಾವೂ ಅವರ ಬಳಿಯೇ ಖರೀದಿಸುತ್ತೇವೆ...’ ಎಂದು ಸ್ನೇಹಿತ ನಗುತ್ತ ಹೇಳಿದರು.

ಕೃಷಿ ಮಹಿಳೆಯರು ಹಾಲು, ಮೊಸರು, ಬೆಣ್ಣೆ ಹಾಗೂ ತಮ್ಮ ಹೊಲ–ಗದ್ದೆಗಳಲ್ಲಿ ಬೆಳೆದ ಹಣ್ಣು–ತರಕಾರಿಯನ್ನು ಒಳಗೊಂಡ ಆಹಾರ ಸಾಮಗ್ರಿಯನ್ನು ಮಾರಾಟ ಮಾಡಲು ನಗರ ಹಾಗೂ ಪಟ್ಟಣಗಳಿಗೆ ಬರುತ್ತಾರೆ. ಉಚಿತ ಬಸ್ ಸೌಲಭ್ಯ ಇರುವುದರಿಂದ ಈಚೆಗೆ ಹೆಚ್ಚು ಹೆಚ್ಚು ಕೃಷಿ ಮಹಿಳೆಯರು ತಮ್ಮ ಉತ್ಪನ್ನಗಳನ್ನು ಮಾರಲು ಬರುತ್ತಿದ್ದಾರೆ. ಇವರ ಬಳಿ ಖರೀದಿಸುವುದರಿಂದ ಹಣದ ಉಳಿತಾಯದ ಜತೆಗೆ, ಗುಣಮಟ್ಟದ ಆಹಾರ ವಸ್ತುಗಳನ್ನು ಪಡೆಯಬಹುದು. ಬೆಲೆ ಏರಿಕೆಯ ಭೂತವನ್ನು ಎದುರಿಸಲು ಸೂಕ್ತ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕು. ಇದು ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸರಳ ವಿಧಾನ.

ಈಚಿಗೆ ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ವಿಪರೀತ ಎನ್ನುವ ಮಟ್ಟಿಗೆ ಹೆಚ್ಚಿಸಲಾಯಿತು. ಆಗ ಅನೇಕ ಮಹಿಳೆಯರು ಮೆಟ್ರೊ ಬಿಟ್ಟು, ಉಚಿತ ಬಸ್ ಪ್ರಯಾಣ ಆಯ್ಕೆ ಮಾಡಿಕೊಂಡರು. ಕೆಲವರು ಸ್ಕೂಟರ್ ಬಳಸತೊಡಗಿದರು ಎಂಬುದು ವರದಿಯಾಗಿತ್ತು. ಅಷ್ಟರಮಟ್ಟಿಗೆ ನಾವು ಜಾಣತನವನ್ನು ರೂಢಿಸಿ
ಕೊಳ್ಳದಿದ್ದರೆ ಈಗಿನ ದಿನಮಾನದಲ್ಲಿ ಬದುಕು ನಡೆಸುವುದು ಕಷ್ಟವಾಗುತ್ತದೆ.

ಈ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿದಾಗ ಅಡುಗೆಗೆ ಅದನ್ನು ಬಿಟ್ಟು ಹುಣಿಸೆಹಣ್ಣು ಬಳಸುವ ವಿಧಾನವನ್ನು ಮಹಿಳೆಯರು ಆಯ್ಕೆ ಮಾಡಿಕೊಂಡಿದ್ದರು. ಹುಣಿಸೆಹಣ್ಣು ಹೆಚ್ಚು ರುಚಿಕರ. ಜತೆಗೆ, ಆರೋಗ್ಯಕ್ಕೂ ಒಳ್ಳೆಯದು. ಹಿಂದೆ ನಮ್ಮ ಮನೆಯಲ್ಲಿ ಚಹಾ ಪುಡಿ ಇಲ್ಲದಾಗ ಅಮ್ಮ ಲಿಂಬೆ ಗಿಡದ ಎಲೆಗಳನ್ನು ಬಳಸಿ ಚಹಾ ಮಾಡುತ್ತಿದ್ದರು.

ಕೃಷಿ ಮಹಿಳೆಯರು ತಮ್ಮ ಉತ್ಪನ್ನಗಳನ್ನು ನಗರಗಳಲ್ಲಿ ಮಾರಾಟ ಮಾಡುವುದರಿಂದ ಅವರ ಕೈಗೆ ಹಣ ಬರುತ್ತದೆ. ಅವರ ಕೌಟುಂಬಿಕ ಉನ್ನತಿಗೂ ನೆರವಾಗುತ್ತದೆ. ‘ಮಹಿಳೆಯ ಬಳಿ ಸದಾಕಾಲ ಸ್ವಲ್ಪವಾದರೂ ಸ್ವಂತದ ಹಣ ಇರುವುದು ಆಕೆಯ ಸುರಕ್ಷತೆಯ ಮೊದಲು ಹೆಜ್ಜೆ ಆಗಿದೆ’ ಎಂದು ಅಮೆರಿಕದ ಲೇಖಕಿ ಕ್ಲೇರ್ ಬೂತ್ ಲುಸೆ ಹೇಳುವ ಮಾತು ವಾಸ್ತವದಿಂದ ಕೂಡಿದೆ.

ಆನ್ಲೈನ್ ವ್ಯಾಪಾರ ಈಗ ಜೋರು ಪಡೆದಿದೆ. ಇದು ಆಕರ್ಷಕವಾಗಿಯೂ ಕಾಣುತ್ತದೆ. ಮಾಲ್ಗಳಲ್ಲಿ ವಸ್ತುಗಳನ್ನು ಖರೀದಿಸುವುದು ಪ್ರತಿಷ್ಠೆಯಾಗಿದೆ. ಆದರೆ ಕೃಷಿಕರಿಂದ ನೇರವಾಗಿ ಖರೀದಿಸಿದರೆ ಅದು ಶ್ರಮದ ಸಂಸ್ಕೃತಿಯನ್ನು ಗೌರವಿಸಿದಂತೆ ಆಗುತ್ತದೆ. ಆಹಾರ ಪದಾರ್ಥಗಳ ತಾಜಾತನವನ್ನು ಪರಿಶೀಲಿಸಲು, ಬೆಲೆ ಚೌಕಾಸಿ ಮಾಡಲು, ಅಗತ್ಯವಿದ್ದಷ್ಟು ಮಾತ್ರ ಖರೀದಿಸಲು ಇಲ್ಲಿ ಮುಕ್ತ ಅವಕಾಶ ಇರುತ್ತದೆ. ಆದರೆ, ಆನ್ಲೈನ್ ವ್ಯಾಪಾರದಲ್ಲಿ ಇದು ಆಗದು.

ಬಾಗಲಕೋಟೆ– ಬೆಳಗಾವಿ ಹೆದ್ದಾರಿಯ ಬದಿಗೆ ಕಲಾದಗಿ ಎಂಬ ಗ್ರಾಮ ಇದೆ. ಇಲ್ಲಿ ಗುಣಮಟ್ಟದ ಸಪೋಟ, ದಾಳಿಂಬೆ, ಪೇರಲ, ಪಪ್ಪಾಯಿ ಹೇರಳವಾಗಿ ಬೆಳೆಯುತ್ತಾರೆ. ಕೃಷಿ ಮಹಿಳೆಯರು ತಾವು ಬೆಳೆದ ಹಣ್ಣುಗಳನ್ನು ಹೆದ್ದಾರಿಯ ಬದಿಗೆ ಕುಳಿತು ಮಾರುತ್ತಾರೆ. ಇವರೆಲ್ಲ ರಸ್ತೆ ಬದಿಯಲ್ಲಿ ಇರುವ ತಮ್ಮ ತೋಟ, ಹಣ್ಣಿನ ಗಿಡಗಳನ್ನು ಹೆಮ್ಮೆಯಿಂದ ತೋರಿಸುತ್ತಾರೆ. ಬಯಸಿದರೆ ಗಿಡಗಳಲ್ಲಿಯೇ ಪಕ್ವವಾದ ಹಣ್ಣು ತಂದುಕೊಡುತ್ತಾರೆ. ಇಂಥ ಹಣ್ಣುಗಳನ್ನು ಸವಿಯುವುದು ಖುಷಿಯ ಸಂಗತಿ.

ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿಯಲ್ಲಿ ‘ಮೊಸರಿನ ಪೇಟೆ’ ಎಂಬ ಸಣ್ಣ ಪ್ರದೇಶ ಇದೆ. ಬಹಳ ವರ್ಷಗಳ ಹಿಂದೆ ಹಳ್ಳಿಗಳ ಮಹಿಳೆಯರು ಇಲ್ಲಿ ಕುಳಿತು ಮೊಸರು ಮಾರುತ್ತಿದ್ದರು. ಈಗ ಹೆಸರು ಮಾತ್ರ ಉಳಿದಿದೆ. ಮೊಸರು ಮಾರುವವರು ಬರುತ್ತಿಲ್ಲ. ಈ ಸೊಬಗು ಮತ್ತೆ ಮೂಡಿ ಬರುವಂತೆ ಅಲ್ಲಿನ ಜನ ಪ್ರಯತ್ನಿಸಬೇಕು.

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಸಮೀಪದ ಗ್ರಾಮಗಳ ಕೃಷಿ ಮಹಿಳೆಯರು ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಬೆಳ್ಳುಳ್ಳಿ ಖಾರ ಮತ್ತು ಮೊಸರನ್ನು ಬುಟ್ಟಿಗಳಲ್ಲಿ ತಂದು ಪ್ರವಾಸಿಗರಿಗೆ ಉಣ ಬಡಿಸುತ್ತಾರೆ. ಅಗಸ್ತ್ಯತೀರ್ಥ ಕೆರೆಯ ಕಟ್ಟೆಯ ಸುತ್ತಲೂ ಕುಳಿತು ಪ್ರವಾಸಿಗರು ಊಟ ಸವಿಯುತ್ತಾರೆ. ಕಡಿಮೆ ಹಣದಲ್ಲಿ ರುಚಿಕಟ್ಟಾದ ಪೌಷ್ಟಿಕ ಊಟ ದೊರೆಯುತ್ತದೆ. ಉಳಿದ ದೇವಸ್ಥಾನ ಮತ್ತು ಪ್ರವಾಸಿ ತಾಣಗಳಲ್ಲಿಯೂ ಇಂಥ ಊಟ ಪೂರೈಸುವ ಯೋಜನೆ ರೂಪಿಸಬೇಕು.

ಬೆಲೆ ಏರಿಕೆ, ಕಲಬೆರಕೆ, ಪ್ಲಾಸ್ಟಿಕ್ ಹಾವಳಿಯಿಂದ ಪಾರಾಗುವುದಕ್ಕೆ ಹಲವು ಮಾರ್ಗಗಳಿವೆ. ಅಂಥ ಮಾರ್ಗಗಳನ್ನು ಜಾಣ್ಮೆಯಿಂದ ಆಯ್ಕೆ ಮಾಡಿಕೊಂಡು ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.