ಎಲ್ಲ ರಸಗಳನ್ನು ಕಿವಿಯಿಂದಲೇ ಸವಿಯುವ ಒಂದು ಅವಕಾಶವಿದೆ ಎಂದರೆ ತಕ್ಷಣಕ್ಕೆ ನಂಬುವುದು ಕಷ್ಟ. ಯೋಚಿಸಿ ನೋಡಿದರೆ, ‘ಕರ್ಣಯಜ್ಞ’ದ ಆ ಸಾಧ್ಯತೆ ಹೊಳೆಯುತ್ತದೆ. ಆ ಯಜ್ಞದ ಯಂತ್ರ ರೇಡಿಯೊ. ಅದು ಧ್ವನಿ ಪ್ರಪಂಚದ ಆಸ್ತಿ!

ನಮ್ಮ ಸಾಮಾಜಿಕ ಜೀವನದಲ್ಲಿ ಸಪ್ಪಳ ಹಾಗೂ ಸಾಂಸ್ಕೃತಿಕ ನಡೆ– ನುಡಿಗಳಲ್ಲಿನ ಧ್ವನಿ, ಇವೆರಡೂ ನಮ್ಮ ಜೊತೆಗೇ ಇರುವುದನ್ನು ನಾವು ಗಮನಿಸುವುದು ಅತ್ಯಂತ ವಿರಳ. ನೋಡುವುದು ಬೇಡವಾಗಿದ್ದರೆ ಕಣ್ಣು ಮುಚ್ಚಿಕೊಳ್ಳುತ್ತೇವೆ. ಮಾತನಾಡಲು ಬೇಡವಾಗಿದ್ದರೆ ಬಾಯಿ ಮುಚ್ಚಿಕೊಳ್ಳುತ್ತೇವೆ. ಇವರೆಡೂ ಕ್ರಿಯೆ ತಮ್ಮಷ್ಟಕ್ಕೆ ತಾವೇ, ಅಪ್ರಜ್ಞಾಪೂರ್ವಕವಾಗಿ ಜರುಗುತ್ತವೆ. ಆದರೆ, ಕೇಳಲು ಬೇಡವಾಗಿದ್ದರೆ ಕಿವಿಗಳು ತಮ್ಮಿಂದ ತಾವೇ ಮುಚ್ಚಿಕೊಳ್ಳುವುದಿಲ್ಲ. ಅವನ್ನು ಮುಚ್ಚಲು ಎರಡೂ ಕೈಗಳ ನೆರವು ಬೇಕು. ಅದೊಂದು ಪ್ರಜ್ಞಾಪೂರ್ವಕ ಕ್ರಿಯೆ. ಧ್ವನಿ– ಸಪ್ಪಳ, ಎಲ್ಲಿ ಬೇಕಾದರಲ್ಲಿ ಧಾರಾಳವಾಗಿ ಸಿಗುತ್ತವೆ. ಕಿವಿ ಇದ್ದು ಕಿವುಡರಾಗುವುದು ಈ ಪ್ರಪಂಚದಲ್ಲಿ ಕಷ್ಟದ ಕೆಲಸ. ಇಂಥ ಧ್ವನಿ ಪ್ರಪಂಚಕ್ಕೆ ಮೌಲ್ಯ ಒದಗಿಸಿರುವಂತಹದ್ದು ರೇಡಿಯೊ ಮಾಧ್ಯಮ.

ಬಹಳಷ್ಟು ಸಂದರ್ಭಗಳಲ್ಲಿ ಧ್ವನಿ ಪ್ರಪಂಚವೂ ಒಂದಿದೆ ಎಂಬುದು ಸಹ ನಮಗೆ ಗೊತ್ತೇ ಇರುವುದಿಲ್ಲ. ಈ ಪ್ರಪಂಚದಲ್ಲಿ ಕಣ್ಣುಗಳಿಗೇನೂ ಕೆಲಸವಿಲ್ಲ. ಕಿವಿಗಳಿಗೆ ಮಾತ್ರ ಕಿವಿತುಂಬ ಕೆಲಸ. ಧ್ವನಿಗಳನ್ನು ಗ್ರಹಿಸುತ್ತ, ಮನಸ್ಸಿಗೆ ತಲುಪಿಸುವ ಕೆಲಸವನ್ನು ನಮ್ಮ ಎರಡೂ ಕಿವಿಗಳು ಮಾಡುತ್ತಲೇ ಇರುತ್ತವೆ.

ಮಾತನಾಡಿ ಮಾತನಾಡಿ ಬಾಯಿ ನೋಯುತ್ತದೆ. ಆದರೆ, ಕೇಳಿ ಕೇಳಿ ಕಿವಿಗಳಂತೂ ನೋಯುವುದಿಲ್ಲವಲ್ಲ ಅಥವಾ ಆ ನೋವು ದೈಹಿಕವಾಗಿ ಅರಿವಿಗೆ ಬರುವುದಿಲ್ಲ. ಈ ಗುಟ್ಟನ್ನು ತಿಳಿದ ವಾಚಾಳಿಗಳು ತಮ್ಮ ಮಾತಿಗೆ ಎಂದೂ ಪೂರ್ಣವಿರಾಮ ಕೊಡುವುದಿಲ್ಲ. ಬಾಯಿ ಮತ್ತು ಕಿವಿಯ ನಡುವಿನ ತೊಟ್ಟಿಲು ತೂಗಿ ತೂಗಿ ನಿಂತು ಹರಿದು ಬಿದ್ದರೂ ಅವರ ಮಾತುಗಳು ಮುಂದುವರಿದೇ ಇರುತ್ತವೆ.

ಧ್ವನಿ ಪ್ರಪಂಚದಲ್ಲಿ ನಿರಂತರವಾಗಿ ನಡೆಯುವ ಒಂದು ಕೆಲಸವೆಂದರೆ ಕರ್ಣಯಜ್ಞ. ಈ ಯಜ್ಞ ನಡೆಯುವುದು ಯಾವುದೇ ಆಶ್ರಮದಲ್ಲಿ ಅಲ್ಲ. ರೇಡಿಯೊ ಸ್ಟೇಷನ್ನಲ್ಲಿ. ಅಲ್ಲಿ, ದಿನದ ಇಪ್ಪತ್ತನಾಲ್ಕು ತಾಸೂ ಧ್ವನಿಗಳನ್ನು ಸೃಷ್ಟಿಸಿ, ಹೊರಗೆ ಹಾಕಿ ಹಾಕಿ ಸ್ಟೇಷನ್ನಿನ ಹೊರಗೆ ಒಂದು ಪ್ರಪಂಚವೇ ನಿರ್ಮಾಣವಾಗಿರುತ್ತದೆ. ಆ ಧ್ವನಿ ಪ್ರಪಂಚದ ಅಚ್ಚರಿಗಳಲ್ಲಿ ಒಂದು, ಅಲ್ಲಿ ಇರುವವರ ವಯಸ್ಸೇ ಬೇರೆ, ಅವರ ಧ್ವನಿಯ ವಯಸ್ಸೇ ಬೇರೆ. ರೇಡಿಯೊ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ವಯಸ್ಸಾದರೂ ಅವರ ಧ್ವನಿಗೆ ಸದಾ ತಾರುಣ್ಯ.

ರೇಡಿಯೊ ನಾಟಕದಲ್ಲಿ ಭೀಮನ ಪಾತ್ರ ಮಾಡುವವನು ಭೀಮನಂತೆ ದೃಢಕಾಯ ಆಗಿರಬೇಕೆಂದೇನೂ ಇಲ್ಲ. ಮಾತನಾಡುವ ಕಲಾವಿದನ ಶಾರೀರವೇ ಶರೀರದ ಸಾಧ್ಯತೆಗಳನ್ನು ಧ್ವನಿಯ ಮೂಲಕವೇ ಕೇಳುಗರ ಮನಸ್ಸಿನಲ್ಲಿ ಉಂಟು ಮಾಡುತ್ತದೆ. ಬಿಸಿಲಿನ ತಾಪಮಾನ, ಮಳೆಯ ತಂಪು, ಚಳಿಯ ನಡುಕ ಎಲ್ಲವೂ ಮಾತುಗಳ ಮೂಲಕವೇ ಸಹೃದಯರಿಗೆ ಮುಟ್ಟುವುದು ರೇಡಿಯೊ ಮಾಧ್ಯಮದಲ್ಲಿ ಸಾಧ್ಯ.

‘ರೇಡಿಯೊ ಮನುಷ್ಯ’ ಅಂದರೆ ಕುರುಡ ಎಂದು ಹಿಂದೆ ಯಾರೋ ಹೇಳಿದ್ದು ನೆನಪು. ರೇಡಿಯೊ ಎದುರು ಕುಳಿತಿರುವವನಿಗೆ ದೇವರು ಎರಡು ಕಿವಿ ಕೊಟ್ಟಿದ್ದರೆ ಸಾಕು. ಇಲ್ಲಿ ಕೇಳುವವನಿಗೆ ಕಿವಿ ಇರುವಂತೆ ಹೇಳುವವನಿಗೆ ಬಾಯಿ ಬೇಕು. ಬಾಯಿ ಅಂದರೆ ಕೇವಲ ಬಾಯಿ ಅಲ್ಲ, ಮಾತನಾಡುವ ಬಾಯಿ. ಈ ಪ್ರಪಂಚದಲ್ಲಿ ಮಾತನಾಡುವವ, ಕೇಳುವವ ಇವರಿಬ್ಬರನ್ನೂ ಜೋಡಿಸುವ ಕೊಂಡಿ, ಪ್ರಸಾರ ಯಂತ್ರ. ಬಾಯಿ ಮತ್ತು ಕಿವಿ, ಧ್ವನಿ ಪ್ರಪಂಚದ ಆಧಾರ ಸ್ತಂಭಗಳು. ಈ ಆಧಾರ ಸ್ತಂಭಗಳಿಗೆ ಜೋತುಬಿದ್ದವನಿಗೆ ‘ಪ್ರಸಾರಕ’ ಎಂದು ಕರೆಯುತ್ತಾರೆ. ಕೇಳುವವರ ಕಿವಿಗಳನ್ನು ಹಚ್ಚಿಕೊಂಡೇ ಪ್ರಸಾರದ ಕೆಲಸ ಮಾಡಬೇಕಾಗುತ್ತದೆ.

ಧ್ವನಿ ಪ್ರಪಂಚದಲ್ಲಿ ರೇಡಿಯೊ ಒಂದು ಪ್ರಬಲ ಯಾಂತ್ರಿಕ ಸಂಪರ್ಕ ಸಾಧನ. ಇಲ್ಲಿ ಒಂದೆಡೆ ಹೇಳುವ ಕ್ರಿಯೆ ನಡೆದಿರುತ್ತದೆ, ಇನ್ನೊಂದೆಡೆ ಕೇಳುವ ಕ್ರಿಯೆ. ಪುರಾಣ, ಪುಣ್ಯ, ಪ್ರವಚನ ಕಥೆಗಳನ್ನು ಓದಿದವರಿಗೆ ಕೇಳಿದವರಿಗೆ ಅಲ್ಲಿ ಬರುವ ಅಶರೀರವಾಣಿಗಳು ಅಪರಿಚಿತವೇನಲ್ಲ. ಈ ಅಶರೀರವಾಣಿಗಳು ಶಾಪ, ವರ, ಆಜ್ಞೆಗಳ ರೂಪದಲ್ಲಿ ಹಿತ ಅಹಿತವಾಗಿದ್ದರೂ ಭಾಷೆ, ಶೈಲಿ, ಗಾತ್ರಗಳಲ್ಲಿ ಮಿತವಾಗಿರಬೇಕು. ಹೇಳುವವರು ಏನೇ ಹೇಳಲಿ, ಅವರು ಮಿತ ಭಾಷಿಗಳಾಗಿರಬೇಕೆಂಬುದೇ ನಮ್ಮ ಶ್ರವಣ ಸಂಸ್ಕೃತಿಯ ಶಿಷ್ಟಾಚಾರ.

ಕೇಳುಗರ ಎದುರು ಧ್ವನಿಚಿತ್ರ ನಿರ್ಮಿಸುವ ಕಲಾವಿದನ ಹತ್ತಿರ ಕುಂಚ–ಬಣ್ಣಗಳು ಇರದಿದ್ದರೂ, ರೂಪಿಸುವ ಕಲಾಕೃತಿ ಅಚ್ಚಳಿಯದೇ ಉಳಿಯುತ್ತದೆ. ಕೇಳು, ಕೇಳಿರಿ, ಲಾಲಿಸು, ಆಲಿಸು ಮುಂತಾದ ಅನೇಕ ಶಬ್ದಗಳನ್ನು ನಮ್ಮ ದೇಶದ ಯಾವುದೇ ಸಂಸ್ಕೃತಿಯಲ್ಲೂ ಕೇಳಬಹುದು. ನಮ್ಮ ಸಂಸ್ಕೃತಿ ಪ್ರಾರಂಭವಾಗಿದ್ದೇ ಧ್ವನಿ ಪ್ರಪಂಚದ ಮೂಲಕ. ಈ ಪ್ರಪಂಚದಲ್ಲಿ ಇರುವವರು ಮಾತನಾಡುವುದು, ಕೇಳುವುದೂ ಇದ್ದೇ ಇದೆ; ಕೇಳಲು ಯೋಗ್ಯವಾದುದನ್ನು ಆಡುವುದು ಹೇಗೆ ಎನ್ನುವುದೇ ಸವಾಲು. ಇದು ಮಾತಿನ ಕಾಲ. ಮಾತನ್ನು ಮೌಲ್ಯದಂತೆ ಬಳಸಬೇಕಾದ ಕಾಲ. ಆ ಮೌಲ್ಯದ ಪ್ರತಿನಿಧಿಯಂತೆ ಗುರ್ತಿಸಿಕೊಂಡಿರುವ ಕಾರಣದಿಂದಲೇ ರೇಡಿಯೊಕ್ಕೆ ಇನ್ನಿಲ್ಲದ ಮಹತ್ವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.