ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ನೇಮಕಾತಿ ಪ‍್ರಕ್ರಿಯೆ: ಅಭ್ಯರ್ಥಿಸ್ನೇಹಿ ಆಗಲಿ

Published : 1 ಫೆಬ್ರುವರಿ 2024, 23:30 IST
Last Updated : 1 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments

ಸರ್ಕಾರಿ ಹುದ್ದೆಗಳ ಭರ್ತಿಗಾಗಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರ, ನೇಮಕಾತಿ ಆಯೋಗ ಹಾಗೂ ಇಲಾಖೆಗಳು ಮುತುವರ್ಜಿ ತೋರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಅಕ್ರಮಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳು, ಅಕ್ರಮಗಳ ಮೂಲಕ್ಕೆ ಕೈ ಹಾಕದೆ ಬರೀ ಕಣ್ಣೊರೆಸುವ ತಂತ್ರಗಳಾಗಿ ಬಳಕೆಯಾಗುವುದೂ ಇದೆ. ಹೀಗೆ, ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ರೂಪಿಸುವ ನಿಯಮಾವಳಿ ಎರಡರಿಂದಲೂ ಹೆಚ್ಚು ತೊಂದರೆಗೆ ಒಳಗಾಗುತ್ತಿರುವವರು ಅಭ್ಯರ್ಥಿಗಳೆ.

ನೇಮಕಾತಿ ಪ್ರಕ್ರಿಯೆ ನಡೆಸುವವರಲ್ಲಿ ಅಭ್ಯರ್ಥಿಗಳ ಕುರಿತು ಯಾವ ಪರಿ ತಾತ್ಸಾರ ಮನೋಭಾವ ಬೇರೂರಿದೆ ಎಂಬುದನ್ನು ಅರಿಯಲು, ಒಟ್ಟಾರೆ ನೇಮಕಾತಿ ಪ್ರಕ್ರಿಯೆಯನ್ನು ಗಮನಿಸಿದರೂ ಸಾಕು. 3,000ಕ್ಕೂ ಹೆಚ್ಚು ‘ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌’ಗಳ ನೇಮಕಾತಿಗಾಗಿ ಜನವರಿ 28ರಂದು ನಡೆದ ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಬಹಳಷ್ಟು ತೊಂದರೆ ಅನುಭವಿಸಿದರು. ಪೊಲೀಸ್ ಇಲಾಖೆಯ ಉಸ್ತುವಾರಿಯಲ್ಲಿ ನಡೆದ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತಮಗೆ ಅನುಕೂಲ ಕರವಾದ ಪರೀಕ್ಷಾ ಕೇಂದ್ರ ಆರಿಸಿಕೊಳ್ಳುವ ಆಯ್ಕೆ ಯನ್ನೇ ನೀಡಲಾಗಿರ ಲಿಲ್ಲ. ಅಕ್ರಮಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ಅಭ್ಯರ್ಥಿಗಳು ದೂರದ ಊರು ಗಳಿಗೆ ಪ್ರಯಾಣಿಸಿ ಪರೀಕ್ಷೆ ಬರೆಯುವ ಸನ್ನಿವೇಶ ಸೃಷ್ಟಿಸಲಾಯಿತು.

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ ಹಲವರು ಬಡತನದ ಹಿನ್ನೆಲೆಯವರು. ಪ್ರಯಾಣ ವೆಚ್ಚ ಭರಿಸಲೇ ಏದುಸಿರು ಬಿಡುವವರು. ಇನ್ನು ವಿಶ್ರಾಂತಿಗಾಗಿ ಲಾಡ್ಜ್‌ಗಳಲ್ಲಿ ತಂಗುವುದು ಕೆಲವರ ಪಾಲಿಗಂತೂ ಅಸಾಧ್ಯವೇ ಆಗಿತ್ತು. ಹೀಗಾಗಿ, ರೈಲು, ಬಸ್ ನಿಲ್ದಾಣ ಸೇರಿದಂತೆ ಸಿಕ್ಕ ಸಿಕ್ಕಲ್ಲಿ ಮಲಗಿ ವಿಶ್ರಾಂತಿ ಪಡೆದದ್ದೂ ಇದೆ. ಇನ್ನು ಪರೀಕ್ಷಾ ಕೊಠಡಿಯೊಳಗಿನ ಅಕ್ರಮ ತಡೆಯುವ ಸಲುವಾಗಿ ತುಂಬು ತೋಳಿನ ಶರ್ಟ್ ಧರಿಸುವುದಕ್ಕೂ ನಿರ್ಬಂಧ ಹೇರಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ತಡೆಯುವ ಸಲುವಾಗಿ ಕೈಗೊಳ್ಳುವ ಇಂತಹ ಕ್ರಮಗಳು, ಅಭ್ಯರ್ಥಿಗಳನ್ನು ಹೆಚ್ಚು ಹೈರಾಣಾಗಿಸುವಲ್ಲಿ ಕಾಣುವಷ್ಟು ಯಶಸ್ಸನ್ನು ಅಕ್ರಮಗಳಿಗೆ ತಡೆಯೊಡ್ಡುವಲ್ಲಿ ಕಾಣಲಾರವು.

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ಅವಕಾಶ ನೀಡುವುದು ಸೇರಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುವ ತರಹೇವಾರಿ ಅಕ್ರಮಗಳಿಗೆ ಮೂಲ ಕಾರಣ ಆಯಾ ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವ್ಯಕ್ತಿಗಳೇ ವಿನಾ ಅಭ್ಯರ್ಥಿಗಳಲ್ಲ. ಲಿಖಿತ ಪರೀಕ್ಷೆಯ ಉತ್ತರ
ಪತ್ರಿಕೆ (ಓಎಂಆರ್) ತಿದ್ದುವುದು ಸದ್ಯ ಚಾಲ್ತಿಯಲ್ಲಿರುವ ಅಡ್ಡದಾರಿಗಳ ಪೈಕಿ ಬಹುಮುಖ್ಯವಾದುದು. ಇದನ್ನು ಮಾಡಲು ಒಂದು ವ್ಯವಸ್ಥಿತ ಜಾಲವೇ ಇರಬೇಕಲ್ಲವೇ?

‘ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌’ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಯಾರೆಲ್ಲಾ ಹತ್ತಕ್ಕಿಂತ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸಿದರೋ ಅಂತಹ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು ಪ್ರತ್ಯೇಕವಾಗಿ ದಾಖಲಿಸಿ ಇಟ್ಟುಕೊಳ್ಳಲಾಯಿತು. ಮೇಲ್ನೋಟಕ್ಕೆ ಇದು ಕೂಡ ಅಕ್ರಮ ತಡೆಗಟ್ಟಲು ನೆರವಾಗಲಿದೆ ಎನ್ನುವ ಆಶಾಭಾವ ಮೂಡಿಸಿದರೂ, ಆ ದಿಸೆಯಲ್ಲಿ ಇದರ ಕೊಡುಗೆ ನಗಣ್ಯವೇ.

ನೂರು ಬಹು ಆಯ್ಕೆಯ ಪ್ರಶ್ನೆಗಳ ಪೈಕಿ ಬರೀ 11 ಪ್ರಶ್ನೆಗಳಿಗೆ ಉತ್ತರಿಸಿದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯೂ ಇಲ್ಲಿ ಗಣನೆಗೆ ಬರುವುದಿಲ್ಲ. ಅಭ್ಯರ್ಥಿಗ ಳಿಂದ ಹಣ ಪಡೆದು ಉತ್ತರಪತ್ರಿಕೆ ತಿದ್ದಿಸುವುದಾಗಿ ಆಶ್ವಾಸನೆ ನೀಡುವ ಜಾಲಕ್ಕೂ ಇಂತಹ ನಿಯಮಗಳ ಅರಿವಿರುತ್ತದೆ. ಅವರು, ಹನ್ನೊಂದೋ ಹನ್ನೆರಡೋ ಹದಿಮೂರೋ ಪ್ರಶ್ನೆಗಳಿಗಷ್ಟೇ ಉತ್ತರಿಸಿ ಉಳಿದವನ್ನು ಖಾಲಿ ಬಿಡಿ ಎನ್ನುವ ಸೂಚನೆ ನೀಡದಿರಲಾರರು ಎಂದು ಭಾವಿಸಬಹುದೇ? ಪರೀಕ್ಷೆ ನಡೆಸುವವರ ಬಳಿ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸಿದವರ ನೋಂದಣಿ ಸಂಖ್ಯೆ ಸಂಗ್ರಹ ಆಗಿರುತ್ತದೆ. ಇದನ್ನು ಸಂಬಂಧಪಟ್ಟ ಜಾಲತಾಣದಲ್ಲಿ ಲಭ್ಯವಾಗಿಸದೇ ಹೋದಲ್ಲಿ ಈ ನಡೆಯು ವಿಶ್ವಾಸಾರ್ಹತೆ ಕಾಯ್ದುಕೊಳ್ಳುವಲ್ಲಿ ನೆರವಾಗಲಾರದು.

ಅಕ್ರಮಗಳಿಗೆ ಕಡಿವಾಣ ಹಾಕುವ ಇಚ್ಛಾಶಕ್ತಿ ಅಸಲಿಗೂ ಇದ್ದರೆ, ಅಭ್ಯರ್ಥಿಗಳಿಗೆ ಹೆಚ್ಚು ತೊಂದರೆ ಆಗದ ರೀತಿಯಲ್ಲಿ ನಿಯಮಾವಳಿಗಳನ್ನು ರೂಪಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಾಧ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅಕ್ರಮಗಳ ಬೇರಿಗೆ ಕೈ ಹಾಕಲು ನೇಮಕಾತಿ ಪ್ರಕ್ರಿಯೆ ನಡೆಸುವವರಿಗೇ
ಮನಸ್ಸಿರುವುದಿಲ್ಲ. ಅಷ್ಟಕ್ಕೂ ಅಕ್ರಮಗಳಲ್ಲಿ ಭಾಗಿಯಾಗುವ ಕೈಗಳು ಅವರವೇ ಅಲ್ಲವೇ?

ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕಿಂತ ಅಕ್ರಮ ಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಬಿಂಬಿಸುವುದರಲ್ಲೇ ಪಟ್ಟಭದ್ರರಿಗೆ ಹೆಚ್ಚು ಲಾಭ. ನೇಮಕಾತಿಯಲ್ಲಿನ ಭ್ರಷ್ಟಾಚಾರವಲ್ಲದೆ ಅದನ್ನು ತಡೆಯುವ ಸಲುವಾಗಿ ಅನುಸರಿಸುವ ಕ್ರಮಗಳಿಂದಲೂ ಬಲಿಪಶುಗಳಾಗುವವರು ಅಭ್ಯರ್ಥಿಗಳೇ ಎಂಬುದು ವಿಪರ್ಯಾಸವಾದರೂ ವಾಸ್ತವ.

ಆಮೆಗತಿಯಲ್ಲಿ ಸಾಗುವ ನೇಮಕಾತಿ ಪ್ರಕ್ರಿಯೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನಡೆಯುವ ಮರುಪರೀಕ್ಷೆ ಇವೆಲ್ಲವೂ ಅಭ್ಯರ್ಥಿಗಳನ್ನು ಮತ್ತಷ್ಟು ಹತಾಶೆಗೆ ದೂಡುತ್ತವೆ. ಅದುಬಿಟ್ಟರೆ, ಸರ್ಕಾರಿ ನೇಮಕಾತಿ ವ್ಯವಸ್ಥೆ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಾರವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT