ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕು ಜೀವಕಳೆಯ ತರಗತಿ

Published 6 ನವೆಂಬರ್ 2023, 23:30 IST
Last Updated 6 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಶಿಕ್ಷಕ ಮಿತ್ರರೊಬ್ಬರು ನನ್ನೊಂದಿಗೆ ಮಾತನಾಡುವಾಗ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ  ‘ನಾನು ತರಗತಿಯಲ್ಲಿ ಪಾಠ ಬೋಧನೆ ಮಾಡುವಾಗ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೀರಸವಾಗಿರುತ್ತದೆ.
ಇದರಿಂದ ಅನೇಕ ಬಾರಿ ನನ್ನ ಬೋಧನೆಯ ಉತ್ಸಾಹವೇ ಕುಗ್ಗಿಬಿಡುತ್ತದೆ’ ಎಂದರು. ನನಗೂ ಈ ಅನುಭವ ಆಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರೇರಣಾ ಸಂವಾದ ನಡೆಸುವಾಗ ಕೆಲವು ತರಗತಿಗಳಲ್ಲಿ ಬಹಳ ನೀರಸ ಪ್ರತಿಕ್ರಿಯೆಯನ್ನು ಕಾಣುತ್ತೇನೆ.

ಕೆಲವರು ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ಸ್ಪಂದಿಸುವ, ಪ್ರತಿಕ್ರಿಯಿಸಿ ಸಂವಾದಿಸುವ ಆಸಕ್ತಿ ತೋರುತ್ತಾರೆ. ಆದರೆ ಕೆಲವು ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಸ್ಪಂದಿಸುವಂತೆ ಮಾಡುವುದು ನಿಜಕ್ಕೂ ಸವಾಲೆನಿಸುತ್ತದೆ. ಈ ವಿಷಯದಲ್ಲಿ ಬಾಲಕರು ಬಾಲಕಿಯರಿಗಿಂತ ಹೆಚ್ಚಿನ ನೀರಸ ಮನೋಭಾವ, ಅನಾಸಕ್ತಿ ತೋರುವುದು ಕಂಡುಬರುತ್ತದೆ. ಒಂದಷ್ಟು ವಿದ್ಯಾರ್ಥಿಗಳ ಗಮನ ಎಲ್ಲೋ ಇರುತ್ತದೆ. ಕೆಲವರ ನೋಟ ನಮ್ಮ ಕಡೆ ಇದ್ದಾಗ್ಯೂ ಅವರಲ್ಲಿ ಅನ್ಯಮನಸ್ಕತೆಯನ್ನು ಕಾಣಬಹುದು. ಏನೋ ಕಳೆದುಕೊಂಡಿರುವವರಂತೆ ಇರುವ ಕೆಲವರ ಮನೋಭಾವವು ಬೋಧಕರ ಉತ್ಸಾಹ ಕರಗಿಸುವಂತೆ ಇರುತ್ತದೆ.

ಶಾಲೆ ಎಂಬುದು ಪರಮ ಬೋರ್‌ ಹೊಡೆಸುವ ತಾಣ ಎಂಬುದರಲ್ಲಿ ಸಂಶಯವಿಲ್ಲ. ಚಿಕ್ಕಂದಿನಲ್ಲಿ ಖುಷಿ, ಸಂತಸ, ಉತ್ಸಾಹದಿಂದ ಪುಟಿಯುವ ಮಗು ಶಾಲೆಗೆ ಸೇರಿದ ಆರಂಭದಲ್ಲಿ ಖುಷಿಯಾಗಿಯೇ ಇದ್ದು, ಹೊಸದನ್ನು ಕಲಿಯಲು ಪ್ರಾರಂಭಿಸುತ್ತದೆ. ದಿನಗಳೆದಂತೆ ಮಗುವಿನ ಉತ್ಸಾಹವು ನಿಧಾನವಾಗಿ ಇಳಿಯುತ್ತಾ ಹೋಗುತ್ತದೆ. ಎರಡು–ಮೂರು ವರ್ಷಗಳು ಕಳೆದ ನಂತರ ಶಾಲೆಯ ಬಗ್ಗೆ ಮೊದಲಿದ್ದ ಆಸಕ್ತಿ ಹೊರಟುಹೋಗಿ, ಆ ಜಾಗದಲ್ಲಿ ಬೇಸರ ಆವರಿಸುತ್ತದೆ. ಶಾಲೆಗೆ ಆಗಾಗ್ಗೆ ಗೈರುಹಾಜರಾಗುವ ಮಗು, ಕಲಿಯುವ ವಿಷಯಗಳಲ್ಲಿ ನಿರಂತರತೆ ಕಾಣದೆ ಕಲಿಕೆಯಲ್ಲಿ ಹಿಂದೆ ಬೀಳುತ್ತಾ ಹೋಗುತ್ತದೆ.

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳದ ಶಿಕ್ಷಕರಿದ್ದಲ್ಲಿ ಸಮಸ್ಯೆ ಇನ್ನಷ್ಟು
ಬಿಗಡಾಯಿಸುತ್ತದೆ. ಮನೆಯವರ ಒತ್ತಾಯಕ್ಕಾಗಿ ಶಾಲೆಗೆ ಹಾಜರಾಗುವ ಇಂತಹ ಮಕ್ಕಳು ಬೇಸರ, ನಿರುತ್ಸಾಹದ ಮೂರ್ತಿಗಳಾಗಿ ಶಾಲೆಗಳಲ್ಲಿ ಪ್ರತಿಷ್ಠಾಪಿತರಾಗುತ್ತಾರೆ. ಉದಾರವಾಗಿ ಉತ್ತೀರ್ಣ ಮಾಡುವ ನಿಯಮದಿಂದ ಅವರು ಪ್ರೌಢಶಾಲೆಯವರೆಗೂ ತಲುಪಿಬಿಡುತ್ತಾರೆ. ಇಂತಹ ಮಕ್ಕಳಿಗೆ ಓದು, ಬರಹ, ಸರಳ ಲೆಕ್ಕದಂತಹ ಮೂಲ ಕೌಶಲಗಳನ್ನು ಕಲಿಸುವುದೋ ಅಥವಾ ಅವರ ತರಗತಿಗೆ ಮೀಸಲಾದ ಪಠ್ಯಪುಸ್ತಕಗಳ ವಿಷಯವನ್ನು ಕಲಿಸುವುದೋ ಎಂಬ ಗೊಂದಲಕ್ಕೆ ಶಿಕ್ಷಕರು ಬೀಳುತ್ತಾರೆ.

ಜರ್ಮನಿಯ ಸಂಶೋಧಕ ರೀನ್‌ಹಾರ್ಡ್‌ ಪೆಕ್ರುನ್‌ ಹಾಗೂ ಇತರರು ದೇಶದ 5ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳ ಮೇಲೆ ಕೈಗೊಂಡ ಅಧ್ಯಯನದಂತೆ, ವಿದ್ಯಾರ್ಥಿಗಳಲ್ಲಿನ ಸಕಾರಾತ್ಮಕ ಭಾವನೆಗಳಾದ ಸಂತಸ ಮತ್ತು ಆತ್ಮಾಭಿಮಾನವು ಗಣಿತ ವಿಷಯದ ಕಲಿಕೆಗೆ ಅನುಕೂಲ ಕಲ್ಪಿಸಿವೆ. ಇದಕ್ಕೆ ಬದಲಾಗಿ,
ವಿದ್ಯಾರ್ಥಿಗಳಲ್ಲಿನ ನಕಾರಾತ್ಮಕ ಭಾವನೆಗಳಾದ ಕೋಪ, ಆತಂಕ, ಅವಮಾನ, ಬೇಸರ, ಅಸಹಾಯಕತೆಯು ಗಣಿತ ವಿಷಯದ ಕಲಿಕೆಯನ್ನು ಕುಂಠಿತಗೊಳಿಸುತ್ತವೆ. ಈ ರೀತಿ ಕುಂಠಿತವಾದ ಸಾಧನೆಯ ಕಾರಣದಿಂದ ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಭಾವನೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ಸಂಶೋಧನೆಯಿಂದ ಬಲವಾಗಿ ತಿಳಿದುಬರುವುದೇನೆಂದರೆ, ಮಕ್ಕಳು ಮತ್ತು ಹದಿಹರೆಯದವರ ಭಾವನೆಗಳಿಗೂ ಅವರ ಶೈಕ್ಷಣಿಕ ಸಾಧನೆಗೂ ನಿಕಟ ಸಂಬಂಧವಿದೆ ಎಂಬುದಾಗಿದೆ. ಇದೇ ರೀತಿಯ ಫಲಿತಾಂಶವನ್ನು ವ್ಯಕ್ತಪಡಿಸುವ ಇತರ ಸಂಶೋಧನಾ ಅಧ್ಯಯನಗಳೂ ಇವೆ.

ಈ ಹಿನ್ನೆಲೆಯಲ್ಲಿ ಶಿಕ್ಷಕರು ಉತ್ಸಾಹ, ಹುಮ್ಮಸ್ಸು, ಆಸಕ್ತಿಯಿಂದ ತರಗತಿಯ ಬೋಧನಾ- ಕಲಿಕಾ
ಪ್ರಕ್ರಿಯೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಅನುಕೂಲಕರವಾಗಬಲ್ಲದು.
ಜೊತೆಗೆ ವಿದ್ಯಾರ್ಥಿಗಳ ಕಲಿಕೆಯ ಕೊರತೆಗಳನ್ನು ಅನುಭೂತಿಯಿಂದ ಪರಿಗಣಿಸಿ, ಅವರಲ್ಲಿ ಧೈರ್ಯ ತುಂಬಿ, ಸಾವಧಾನದಿಂದ ಕಲಿಕೆಯತ್ತ ಸಾಗುವಂತೆ ಮಾಡುವುದು ಅಗತ್ಯವಾದ ಅಂಶವಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಲಿಯದಿದ್ದಲ್ಲಿ ಶಿಕ್ಷಕರು ತಮ್ಮ ಸಮಾಧಾನ ಕಳೆದುಕೊಂಡು ಅವರನ್ನು ಬೈಯುವುದು, ಶಿಕ್ಷಿಸುವುದು ಫಲ ನೀಡದು. ಇದರಿಂದ ಅವರಲ್ಲಿ ನಕಾರಾತ್ಮಕ ಭಾವನೆಗಳು ತೀವ್ರಗೊಂಡು, ಶಾಲಾ ತರಗತಿಗಳು ಅಸಹನೀಯ ಎನಿಸಿಕೊಳ್ಳುತ್ತವೆ.

ವಿದ್ಯಾರ್ಥಿಗಳನ್ನು ತರಗತಿ ಬೋಧನೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಅನುಭವ, ಆಲೋಚನೆಗೆ ಆಸ್ಪದವಾಗುವ ಬೋಧನಾ ವಿಧಾನಗಳನ್ನು ಬಳಸಬೇಕು. ಮಕ್ಕಳ ಕುತೂಹಲ, ಆಸಕ್ತಿ, ಸೃಜನಶೀಲತೆಯು ಉದ್ದೀಪನ ಆಗುವ ಕಲಿಕಾ ಚಟುವಟಿಕೆಗಳ ಆಯೋಜನೆಗೆ ಕ್ರಮ ವಹಿಸಬೇಕು. ಶಿಕ್ಷಕರು ವಿಷಯ ಬೋಧನೆ ಮಾಡುವಾಗ ತರಗತಿಗಳಲ್ಲಿ ಹೆಚ್ಚು ಮಾತನಾಡುವುದಕ್ಕಿಂತ ಪ್ರತಿ ವಿದ್ಯಾರ್ಥಿಯೂ ಮಾತನಾಡುವಂತೆ, ಪ್ರಶ್ನಿಸುವಂತೆ ಅಥವಾ ಸ್ಪಂದಿಸುವಂತೆ ಮಾಡಬೇಕು. ಈ ದಿಸೆಯಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸುವ ಅಗತ್ಯ ಇದೆ.

ತರಗತಿಗಳು ಜೀವತಳೆಯುವಂತೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಶಿಕ್ಷಕ-ವಿದ್ಯಾರ್ಥಿಗಳಿಬ್ಬರಲ್ಲಿಯೂ ಆಸಕ್ತಿ, ಹುಮ್ಮಸ್ಸು, ಉತ್ಸಾಹವಿರುವಂತೆ ನೋಡಿಕೊಳ್ಳಬೇಕಾದ ಜರೂರು ಇದೆ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌), ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT