ಮಹಿಳೆಯರ ಕುರಿತು ಲಘುವಾಗಿ ಮಾತನಾಡುವುದು ಹಾಗೂ ಲಿಂಗ ಸಂವೇದನೆ ಮರೆತು ನಾಲಿಗೆ ಸಡಿಲಬಿಡುವುದು ರಾಜಕಾರಣಿಗಳಿಗೆ ಚಾಳಿ ಆಗಿರುವಂತಿದೆ.

‘ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಾವಾಗ ನಿರ್ಮಿಸುವಿರಿ? ಪ್ರವಾಹ ಬಂದರೆ ಹೆರಿಗೆಗೆ ಆಸ್ಪತ್ರೆಗೆ ಹೋಗಲು ಕಷ್ಟದ ಸ್ಥಿತಿಯಿದೆ’ ಎನ್ನುವ ಹಿರಿಯ ಪತ್ರಕರ್ತೆಯೊಬ್ಬರ ಪ್ರಶ್ನೆಗೆ, ಸಚಿವ ಆರ್.ವಿ. ದೇಶಪಾಂಡೆ, ‘ಹಳಿಯಾಳಕ್ಕೆ ಬಾ, ನಿನ್ನ ಹೆರಿಗೆ ಮಾಡಿಸ್ತೀನಿ’ ಎಂದು ಉಡಾಫೆಯಿಂದ ಮಾತಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎನ್ನುವುದು ಆ ಜಿಲ್ಲೆಯ ಜನರ ಬಹುದಿನದ ಬೇಡಿಕೆ. ವೈದ್ಯಕೀಯ ತುರ್ತು ಎದುರಾದಾಗ ಆ ಜಿಲ್ಲೆಯ ಜನರು ಹುಬ್ಬಳ್ಳಿ, ಬೆಳಗಾವಿ, ಮಣಿಪಾಲ್, ಶಿವಮೊಗ್ಗ, ಮಂಗಳೂರಿಗೆ ಹೋಗಬೇಕು. ರೋಗಿಗಳು ದಾರಿ ಮಧ್ಯದಲ್ಲೇ ಅಸುನೀಗಿದ ಘಟನೆಗಳು ಇವೆ. ಈ ಗಂಭೀರ ಸಮಸ್ಯೆಗೆ ಉತ್ತರ ಹೇಳಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು, ‘ಹೆರಿಗೆ ಮಾಡಿಸುತ್ತೇನೆ' ಎಂದು ಹಾಸ್ಯ ಚಟಾಕಿ ಹಾರಿಸಿದರೆ ಹೇಗೆ? ಪ್ರಶ್ನೆಯ ಗಾಂಭೀರ್ಯವನ್ನು ದೇಶಪಾಂಡೆ ಅವರಂತಹ ಹಿರಿಯ ರಾಜಕಾರಣಿ ಅರ್ಥ ಮಾಡಿಕೊಳ್ಳದೆ ಹೋದುದು ದುರದೃಷ್ಟಕರ. ಇದು ಅವರಿಗೆ ಮಹಿಳೆಯರ ಬಗ್ಗೆ ಇರುವ ಅಗೌರವದ ಜೊತೆಗೆ, ತಮ್ಮ ಹೊಣೆಗಾರಿಕೆಯ ಬಗ್ಗೆ ಇರುವ ಬೇಜವಾಬ್ದಾರಿತನವನ್ನೂ ಸೂಚಿಸುವಂತಿದೆ.

ಹೆಣ್ಣುಮಕ್ಕಳ ಬಗ್ಗೆ ರಾಜಕಾರಣಿಗಳು ಹಗುರವಾಗಿ ಮಾತನಾಡಿರುವುದು ಇದು ಹೊಸತೇನೂ ಅಲ್ಲ. ಈ ಹಿಂದೆಯೂ ಕೆಲವು ಜನಪ್ರತಿನಿಧಿ ಗಳು ಮಹಿಳೆಯರ ಕುರಿತು ಕೀಳಾಗಿ ಮಾತನಾಡಿ, ವಿರೋಧ ಎದುರಾದಾಗ ವಿಷಾದ ಅಥವಾ ಕ್ಷಮೆಯ ನಾಟಕ ಆಡಿರುವುದಿದೆ. ಈ ಹಿಂದೆ ಸದನದಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ ಕುಮಾರ್ ಅವರು ಅತ್ಯಾಚಾರದ ಕುರಿತು ಕೀಳು ಅಭಿರುಚಿಯ ಗಾದೆ ಹೇಳಿದ್ದರು. ಸಿ.ಟಿ. ರವಿ ಅವರು ಸಚಿವೆಗೆ ಅಸಾಂವಿಧಾನಿಕ ಪದ ಬಳಕೆಯ ಆರೋಪ ಹೊತ್ತಿದ್ದಾರೆ. ಮೈಸೂರಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ, ಆಗ ಗೃಹ ಮಂತ್ರಿಗಳಾಗಿದ್ದ ಆರಗ ಜ್ಞಾನೇಂದ್ರ ಅವರು, ‘ಅಷ್ಟು ಹೊತ್ತಲ್ಲಿ ಅಲ್ಲಿಗೆ ಯಾಕೆ ಹೋಗಬೇಕು’ ಎಂದು ಪ್ರಶ್ನಿಸಿದ್ದರು. ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರು ಜಿಲ್ಲೆಯ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಗೆ
ಅವಹೇಳನಕಾರಿಯಾಗಿ ಮಾತನಾಡಿರುವುದೂ ಇದೆ.

ಶಾಸನಸಭೆಗಳಲ್ಲಿ ನಮ್ಮನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಸಾರ್ವಜನಿಕ ವಲಯದಲ್ಲಿ ಕನಿಷ್ಠ ಪ್ರಜ್ಞೆಯೂ ಇರದೇ ಮಾತನಾಡುವುದು, ವಿರೋಧ ವ್ಯಕ್ತವಾದಾಗ ಕ್ಷಮೆ ಕೇಳುವುದು, ಸಾಮಾನ್ಯ ಎನ್ನುವಂತಾಗಿ ಬಿಟ್ಟಿದೆ. ರಾಜಕಾರಣಿಗಳ ಎಲ್ಲೆ ಮೀರುವ ಮಾತುಗಳನ್ನು ಕುರಿತು ನಾವು ಗಂಭೀರವಾಗಿ ಪರಿಗಣಿಸದಿದ್ದರೆ, ಮತ್ತೆ ಮತ್ತೆ ಅವರು ನಾಲಿಗೆ ಹರಿಬಿಡುತ್ತಲೇ ಇರುತ್ತಾರೆ.

ಮತದಾರರನ್ನು ಪ್ರತಿನಿಧಿಸುವ ರಾಜಕಾರಣಿಗಳು ಎಲ್ಲರಿಗೂ ಮಾದರಿ ಆಗುವಂತಿರಬೇಕು. ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ ಹಿರಿಯ ಶಾಸಕರೇ ಉಡಾಫೆ ಮಾತನಾಡುತ್ತಾರೆ, ಅದೂ ಒಬ್ಬ ಕಾರ್ಯನಿರತ ಪತ್ರಕರ್ತೆಗೆ. ಹಿರಿಯರ ಈ ಚಾಳಿಯನ್ನೇ ಕಿರಿಯ ರಾಜಕಾರಣಿಗಳೂ ಅನುಸರಿಸುತ್ತಾರೆ.

ದೇಶಪಾಂಡೆ ಅವರ ಸಲ್ಲದ ಮಾತಿಗೆ ನಮ್ಮ ಮಹಿಳಾ ಜನಪ್ರತಿ ನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತಬೇಕಿತ್ತು. ವಿಪರ್ಯಾಸ ಎಂದರೆ, ಮಹಿಳೆಯರ ಬಗ್ಗೆ ಸದನದಲ್ಲೇ ಅವಹೇಳನದ ಮಾತುಗಳು ಕೇಳಿಬಂದರೂ ಶಾಸಕಿಯರು ಮೌನವಾಗಿರುತ್ತಾರೆ. ಮಹಿಳಾ ಪ್ರಾತಿನಿಧೀಕರಣ ಎನ್ನುವುದು ರಾಜಕೀಯ ವಲಯದಲ್ಲಿ ಅಂಕಿಸಂಖ್ಯೆಗಳ ಸರಿದೂಗಿಸುವಿಕೆಗಷ್ಟೇ ಸೀಮಿತವಾಗಿದೆ. ಮಹಿಳಾ ಕಾಳಜಿ ಕುರಿತ ಗಂಡಿನ ಧೋರಣೆ ಹಾಗೂ ಸಂವೇದನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದು ಖೇದಕರ.

ಮಹಿಳಾ ಅವಹೇಳನದ ಮಾತುಗಳಿಗೆ ಕಾನೂನು ಅಡಿಯಲ್ಲೇ ಉತ್ತರ ಕೊಡಬೇಕಾಗಿದೆ. ಹಾಗೆ ಆದಾಗಲೇ, ಅಧಿಕಾರ ಬಳಸಿ ಏನನ್ನಾದರೂ ಮಾತನಾಡಬಹುದು ಎನ್ನುವ ಜನಪ್ರತಿನಿಧಿಗಳ ಅಹಂಗೆ ಹಾಗೂ ಗಂಡಾಳ್ವಿಕೆಯ ಮನಃಸ್ಥಿತಿಗೆ ಒಂದು ಎಚ್ಚರಿಕೆ ತಲುಪುತ್ತದೆ. ಆದರೆ ಎಚ್ಚರಿಕೆ ನೀಡಬೇಕಾದವರು ಯಾರು? ಪುರುಷರೇ ಹೆಚ್ಚಿರುವ ನಮ್ಮ ಶಾಸನಸಭೆಯ ಸದಸ್ಯರಿಂದ ಇದನ್ನು ನಿರೀಕ್ಷಿಸಲಾಗದು. ಇದೊಂದು ರೀತಿಯಲ್ಲಿ ಕಾಯಬೇಕಾದ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಈ ಕೆಲಸವನ್ನು ಕಾನೂನೇ ಕೈಗೆತ್ತಿಕೊಳ್ಳ ಬೇಕು.

ಅಧಿಕಾರದಲ್ಲಿ ಇರುವವರಿಗೆ ಮಾತಿನ ಮೌಲ್ಯವನ್ನು ಕಲಿಸುವ ತುರ್ತು ಇಂದಿನದು. ಅವಹೇಳನದ ಮಾತುಗಳಿಗೆ ಕೇವಲ ಕ್ಷಮೆಯಾಚನೆ ಬೇಡ. ಶಿಕ್ಷೆಯೂ ಆಗಲಿ. ಆಗಲೇ ಬಾಯಿಬಡುಕರಿಗೆ ಬಿಸಿ ತಟ್ಟುವುದು. ಇದರ ಜೊತೆಗೆ, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ರಾಜಕಾರಣಿ ಗಳನ್ನು ಮತದಾರರೇ, ವಿಶೇಷವಾಗಿ ಮಹಿಳೆಯರು ನಿರಾಕರಿಸಬೇಕು. ರಾಜಕಾರಣಿಯನ್ನು ನಿಯಂತ್ರಣದಲ್ಲಿ ಇರಿಸುವುದಕ್ಕೆ, ತಾವು ಮತ ಚಲಾಯಿಸುವ ವ್ಯಕ್ತಿಗೆ ನಾಲಿಗೆ ಸ್ವಚ್ಛವಾಗಿರಬೇಕು ಎನ್ನುವ ಮತದಾರನ ಅರಿವಿಗಿಂತಲೂ ಪರಿಣಾಮಕಾರಿ ಆಯುಧ ಮತ್ತೊಂದಿಲ್ಲ.

ಹೆಣ್ಣನ್ನು ದೇವತೆಯನ್ನಾಗಿ ಮಾಡಿ ಗೌರವಿಸುವ ಮಾತುಗಳನ್ನು ಕೆಲವರು ಆಡುತ್ತಾರೆ. ಇಂಥ ಮಾತುಗಳಿಗೆ ಅರ್ಥವೇನಿಲ್ಲ. ಬಹುತೇಕ ಸಂದರ್ಭದಲ್ಲಿ ಹೆಣ್ಣಿನ ಕುರಿತ ಗೌರವದ ಮಾತುಗಳೂ ಆಕೆಯನ್ನು ಅಂಕೆಯಲ್ಲಿಡುವ ಗಂಡಿನ ಪ್ರಯತ್ನಗಳೇ ಆಗಿರುತ್ತವೆ.

ಸಮಾಜದಲ್ಲಿ ಲಿಂಗ ಸಂವೇದನೆಯನ್ನು ರೂಪಿಸುವ ಪ್ರಯತ್ನಗಳು ನಿರಂತರವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.