ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪುಟ್ಟ ಮಸ್ತಕಕ್ಕೆ ಬೇಕೊಂದು ಪುಸ್ತಕ

Published 2 ಏಪ್ರಿಲ್ 2024, 0:04 IST
Last Updated 2 ಏಪ್ರಿಲ್ 2024, 0:04 IST
ಅಕ್ಷರ ಗಾತ್ರ

ಕೆಲವೇ ದಶಕಗಳ ಹಿಂದೆ ಪ್ರತಿ ಮನೆಯಲ್ಲೂ ರಾತ್ರಿ ಮಗು ಮಲಗಬೇಕಿದ್ದರೆ ಅಪ್ಪನೋ ಅಮ್ಮನೋ ಒಂದು ಕತೆ ಹೇಳಲೇಬೇಕಿತ್ತು. ಕಿನ್ನರರು, ರಾಕ್ಷಸರು, ಸತ್ಯವಂತರು, ದಯಾಶೀಲರ ಕತೆಗಳನ್ನು ಆಲಿಸಿ ಹ್ಞೂಂಗುಟ್ಟುತ್ತ ತನ್ನದೇ ಭ್ರಮಾಲೋಕದಲ್ಲಿ ತೇಲುತ್ತ ಮಗು ನಿದ್ರೆಗೆ ಜಾರುತ್ತಿತ್ತು. ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ನಂತರ ಒಂದು ಅವಧಿ ಕತೆ ಪುಸ್ತಕ ಓದಲು ಮೀಸಲಾಗಿರುತ್ತಿತ್ತು. ಪಠ್ಯದ ಜೊತೆಗೆ ಉಪಪಠ್ಯವಾಗಿ ಒಂದು ಕತೆ ಪುಸ್ತಕವನ್ನು ಬಳಸಲು ಶಿಕ್ಷಣ ಇಲಾಖೆ ಅವಕಾಶ ನೀಡಿತ್ತು.

ಆದರೆ ಬದಲಾದ ಕಾಲದಲ್ಲಿ ಮಗುವಿಗೊಂದು ಕತೆ ಹೇಳಿ ಮಲಗಿಸುವ ಪೋಷಕರೂ ಇಲ್ಲ, ಇಬ್ಬರೂ ದುಡಿಯುವ ಮನೆಗಳಲ್ಲಿ ಅದಕ್ಕೆ ಬಿಡುವೂ ಇಲ್ಲ. ಒಂದೊಮ್ಮೆ ಮಗು ಪಠ್ಯದ ಬದಲು ಬೇರೆ ಪುಸ್ತಕವನ್ನು ಮುಟ್ಟಿ ನೋಡಿದರೂ ಅದರ ಶೈಕ್ಷಣಿಕ ಭವಿಷ್ಯದ ಬಗೆಗೆ ಬಹು ದೊಡ್ಡ ಕನಸು ಹೊತ್ತಿರುವ ಹೆತ್ತವರು, ಅಂತಹ ಓದಿನ ಬಗೆಗೆ ಅಸ್ಪೃಶ್ಯ ಭಾವ ತಳೆದುಬಿಡುತ್ತಾರೆ. ಮಗುವಿನ ಗುರಿಯೇನಿದ್ದರೂ ಕಲಿತು ಉತ್ತಮ ಅಂಕ ಪಡೆದು ಉದ್ಯೋಗ ಗಳಿಸುವುದೇ ವಿನಾ ಕಾಗಕ್ಕ ಗೂಬಕ್ಕನ ಕತೆಗಳನ್ನು ಓದುವುದರಿಂದ ಯಾವುದೇ ಪುರುಷಾರ್ಥವನ್ನೂ ಸಾಧಿಸಿದಂತೆ ಆಗುವುದಿಲ್ಲ ಎಂದು ಅವರು ಎಂದೋ ತೀರ್ಮಾನಿಸಿಯಾಗಿದೆ.

ಇದರಿಂದಾಗಿ ಇಂದಿನ ವಿದ್ಯಾರ್ಥಿಗಳು ಅವರ ಪಾಠ ಪಠ್ಯದ ಹೊರಗಿನ ಪ್ರಪಂಚವನ್ನು ಅರಿಯುವುದಿಲ್ಲ. ನೈತಿಕ ಗುಣಗಳು, ಮಹಾಪುರುಷರು ಬಾಳಿ ಬದುಕಿದ ಬಗೆ, ಕರಟಕ-ದಮನಕರ ಪಂಚತಂತ್ರ ಯಾವುದೂ ಅವರ ಭವಿಷ್ಯದ ಸುಖೀ ಜೀವನಕ್ಕೆ ಅಗತ್ಯವೂ ಅಲ್ಲ ಎಂಬ ಮನೋಭಾವ ಮನೆಮಾಡಿದೆ. ಮಕ್ಕಳು ಕತೆ ಕೇಳುವುದು, ಪುಸ್ತಕ ಓದುವುದರಿಂದ ಹಿಂಜರಿದ ಪರಿಣಾಮವಾಗಿ, ಮಾರಾಟದ ದಾಖಲೆ ನಿರ್ಮಿಸಿದ್ದ ಮಕ್ಕಳ ನಿಯತಕಾಲಿಕಗಳು ನಿಂತುಹೋದವು. ಪ್ರಕಾಶನ ಪ್ರಪಂಚದಲ್ಲಿ ಮಕ್ಕಳ ಪುಸ್ತಕಗಳ ಪ್ರಕಟಣೆಯಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆಗಳು ಬಾಗಿಲು ಮುಚ್ಚಿದವು. ಕಾರ್ಟೂನ್‌ ಪುಸ್ತಕಗಳ ಸರಣಿಯನ್ನು ಹೊರತರುತ್ತಿದ್ದ ಹೆಸರಾಂತ ಪ್ರಕಾಶಕರು ಕೈಚೆಲ್ಲಿ ಹೋದರು.

ಮಕ್ಕಳು ಓದಿನಿಂದ ವಿಮುಖರಾಗಲು ಟಿ.ವಿ. ಮತ್ತು ಮೊಬೈಲ್‌ ಫೋನುಗಳು ಕಾರಣ ಎಂದು ಹೇಳುವವರಿದ್ದಾರೆ. ದೃಶ್ಯ ಮಾಧ್ಯಮವು ವಾಚ್ಯ ಮಾಧ್ಯಮವನ್ನು ಕೊಂದುಹಾಕಲು ಇವು ಪ್ರಬಲ ಕಾರಣಗಳೆಂಬುದು ಮಾತ್ರ ಒಪ್ಪತಕ್ಕದ್ದಲ್ಲ. ಓದಿನಿಂದ ಸಿಗುವ ಸುಖ ಮತ್ತು ಪುಸ್ತಕಗಳನ್ನು ಸಂಗ್ರಹಿಸಿಡುವುದರ ಮಹತ್ವವನ್ನು ಇಂದು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ತಿಳಿಹೇಳದೆ ಹೋಗಿರುವುದೇ ಪುಸ್ತಕ ಸಂಸ್ಕೃತಿಯ ಅವನತಿಗೆ ಮೂಲ ಎಂಬುದು ನಿಶ್ಚಿತ.

ಮಕ್ಕಳಿಗಾಗಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದ ಬೆಂಗಳೂರಿನ ಹೆಸರಾಂತ ಪ್ರಕಾಶಕರು ಇತ್ತೀಚೆಗೆ ಮಕ್ಕಳ ಪುಸ್ತಕಗಳು ಮಾರಾಟವೇ ಆಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಅವರು ಮಕ್ಕಳ ಕತೆಗಳನ್ನು ಆ್ಯನಿಮೇಷನ್‌ ತಂತ್ರಜ್ಞಾನಕ್ಕೆ ಅಳವಡಿಸುವ ಕೆಲಸವನ್ನು ಮಾಡಿದರು. ಒಂದು ಕತೆಯ ಪ್ರತಿಯೊಂದು ಸಿ.ಡಿ. ತಯಾರಿಸಲು ನಲವತ್ತು ಸಾವಿರ ರೂಪಾಯಿ ಮುಗಿಸಿದ ಅವರು ಇದನ್ನು ವಿವರಿಸುತ್ತ, ‘ಒಂದು ತಿಂಗಳಿನಲ್ಲಿ ಮಾರಾಟವಾದದ್ದು ಹದಿನಾಲ್ಕು ಸಾವಿರ ರೂಪಾಯಿ ಮೊತ್ತದ ಸಿ.ಡಿಗಳು ಮಾತ್ರ’ ಎಂದು ವಿಷಾದದಿಂದ ಹೇಳಿದರು.

ಸಣ್ಣ ಕತೆಗಳ ರಚನೆಯ ವಿಧಾನ ಬದಲಾಗಿದೆ. ಮಾಸ್ತಿ, ಕಟ್ಟೀಮನಿಯವರ ಶೈಲಿ ಈಗ ಇಲ್ಲ. ಆದರೆ ಮಕ್ಕಳ ಕತೆಗಳ ರಚನೆಯಲ್ಲಿ ಹೊಸ ವಿಧಾನ ಇನ್ನೂ ಬಳಕೆಗೆ ಬಂದಿಲ್ಲ, ಅದೇ ರಾಕ್ಷಸ, ರಾಜಕುಮಾರಿ ಎನ್ನುವ ಆರೋಪವೂ ಇದೆ. ಆದರೆ ಹೊಸ ವಿಧಾನದ ಪ್ರಯತ್ನಗಳು ಆಗೇ ಇಲ್ಲ ಎಂದು ಹೇಳಲಾಗದು. ರಾಜಶೇಖರ ಭೂಸನೂರಮಠ ಅವರು ವೈಜ್ಞಾನಿಕ ಕತೆ, ಕಾದಂಬರಿಗಳನ್ನು ಬರೆದರು. ಹೊಸ ಶೈಲಿ, ಹೊಸ ವಿಧಾನ, ಸೃಜನಶೀಲ ಪ್ರಯೋಗಗಳು ನಡೆದರೂ ಮಾರಾಟ ದಾಖಲೆ ನಿರ್ಮಿಸಲು ಮಕ್ಕಳ ಪುಸ್ತಕಗಳು ಸಫಲವಾಗಲಿಲ್ಲ. ಮಕ್ಕಳ ಪುಸ್ತಕಗಳ ಪ್ರಕಟಣೆಯಲ್ಲಿ ಪ್ರಕಾಶಕರೂ ಅನಾಸಕ್ತರಾಗುತ್ತಿದ್ದಾರೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ವಿಶ್ವ ಮಕ್ಕಳ ಪುಸ್ತಕ ದಿನದ ಆಚರಣೆ (ಏ. 2) ಸದ್ಯದ ಮಟ್ಟಿಗಂತೂ ಬರೀ ಶಾಸ್ತ್ರಾಚಾರವಾಗಬಹುದೇ ವಿನಾ ಅದರಿಂದ ದೊಡ್ಡ ಸಾಹಿತ್ಯ ಸೇವೆಯಂತೂ ನಡೆಯುವುದಿಲ್ಲ.

ಮಕ್ಕಳಿಗೆ ಕತೆ ಹೇಳುವುದು ಅವರ ನಿದ್ರೆಗೆ ಮಾತ್ರ ಸಹಾಯಕ ಎಂಬ ಭಾವದಿಂದ ಹೊರಬಂದು, ಪುಟ್ಟ ಮೆದುಳಿನ ವಿಕಸನಕ್ಕೆ ಅದರಿಂದ ಏನು ಲಾಭವಿದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಭಾಷೆಯ ಪರಿಪಕ್ವತೆ, ಕಲ್ಪನಾಶಕ್ತಿಯ ಉದ್ದೀಪನ, ಮನೋವಿಕಾಸ ಎಲ್ಲದಕ್ಕೂ ಕಾಲ್ಪನಿಕ ಕತೆಗಳು ಹೇಗೆ ಸಾಧಕ ಎನ್ನುವ ಸತ್ಯವನ್ನು ಹೆತ್ತವರು ಅರಿತುಕೊಳ್ಳಬೇಕು. ದಿನಕ್ಕೊಂದು ಕತೆ ಓದುವುದು ಅಥವಾ ಕೇಳುವುದು ಯಾವುದೇ ಮಗುವಿನ ಶೈಕ್ಷಣಿಕ ಬದುಕಿಗೆ ಧಕ್ಕೆ ತರಲಾರದು. ಮನೆಯಲ್ಲಿ ಮಗುವಿನದೇ ಒಂದು ಪುಸ್ತಕ ಸಂಗ್ರಹಾಲಯ ಸ್ಥಾಪಿಸಲು ಅದಕ್ಕೆ ಹಿರಿಯರು ನೆರವಾದಾಗಲೇ ವಿಶ್ವ ಮಕ್ಕಳ ಪುಸ್ತಕ ದಿನಾಚರಣೆಗೆ (ಏ. 2) ಅದು ಮಹತ್ವದ ಕೊಡುಗೆ ಎನಿಸಿಕೊಳ್ಳಲು ಸಾಧ್ಯ.

ಕ್ರಮಶಃ ಅಳಿದುಹೋಗುತ್ತಿರುವ ಸಾಹಿತ್ಯದ ಒಂದು ಪ್ರಕಾರದ ರಚನೆ ಪರಂಪರೆಯ ಉಳಿವು ಪೋಷಕರ ಕೈಯಲ್ಲಿದೆ. ಹಾಗೆಯೇ ಶಿಕ್ಷಕರು ಕೂಡ ಕತೆಗಳ ಓದಿನಿಂದ ಶಿಕ್ಷಣದ ಭವಿಷ್ಯ ಶಿಥಿಲವಾಗುವುದಿಲ್ಲ ಎಂಬ ಸತ್ಯವನ್ನು ಮನಗಾಣಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT