ಸರ್ಕಾರಿ ಶಾಲೆಗಳು ಈಗ ಬಡವರು ಮತ್ತು ಸಾಮಾಜಿಕ ಏಣಿಯ ಕೆಳಗಿನ ಮೆಟ್ಟಿಲುಗಳಲ್ಲಿ ಇರುವವರಿಗಾಗಿ ಮಾತ್ರ ಇವೆ ಎಂಬಂತೆ ಆಗಿದೆ. ಸಾಂಪ್ರದಾಯಿಕ ಮೇಲ್ವರ್ಗದ ಪೋಷಕರು ಮತ್ತು ಹೊಸದಾಗಿ ಹುಟ್ಟಿಕೊಂಡ ಮೇಲ್ವರ್ಗಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿಲ್ಲ. ಇದರಿಂದಾಗಿ ಸರ್ಕಾರಿ ಶಾಲೆಗಳ ಬೇಡಿಕೆಗಳ ಬಗ್ಗೆ ಗಟ್ಟಿಯಾಗಿ ದನಿ ಎತ್ತುವ ಸಮೂಹವೇ ಇಲ್ಲವಾಗಿದೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕೂಲಿಕಾರ್ಮಿಕ ಪೋಷಕರು ಕೆಲಸ ಅರಸಿ ಪ್ರತಿವರ್ಷ ದಕ್ಷಿಣ ಕರ್ನಾಟಕದ ಕಡೆ ವಲಸೆ ಬರುತ್ತಾರೆ. ಮೂರು–ನಾಲ್ಕು ತಿಂಗಳು ತಮ್ಮ ಊರಿಂದ ಬೇರೆಡೆ ಅವರು ಸ್ಥಳಾಂತರವಾದಾಗ ಅವರ ಮಕ್ಕಳೂ ಅವರೊಂದಿಗೆ ತೆರಳುವುದು ಅನಿವಾರ್ಯ. ಈ ಅವಧಿಯಲ್ಲಿ ಆ ಮಕ್ಕಳು ಶಾಲೆಯಿಂದ ಹೊರಗಿರುತ್ತಾರೆ. ಅವರು ಮರಳಿ ತಮ್ಮೂರಿಗೆ ಹೋದಾಗ, ಅದಾಗಲೇ ಸಂಭವಿಸಿರುವ ಕಲಿಕೆಯ ಹಿನ್ನಡೆಯನ್ನು ಸರಿದೂಗಿಸಿಕೊಳ್ಳಲು ಅವರಿಗೆ ಇರುವ ದಾರಿಗಳು ಅವಾಸ್ತವಿಕವಾಗಿ ಇರುವುದರಿಂದ ಮುಂದಿನ ಕಲಿಕೆ ಅವರ ಕೈಗೆಟಕುವುದಿಲ್ಲ.

ತರಗತಿ ಕಲಿಕೆಗೆ ಒಂದು ನಿಗದಿತ ವೇಗ ಇರಬೇಕಾಗುತ್ತದೆ. ಆದ್ದರಿಂದ ದೀರ್ಘಕಾಲ ಗೈರುಹಾಜರಾದ ಮಕ್ಕಳು ಮತ್ತೆ ತರಗತಿಯೊಳಗೆ ಬಂದಾಗ ಶ್ರೇಣೀಕರಣದ ಸಮಸ್ಯೆ ಉಂಟಾಗುತ್ತದೆ. ಮಾತ್ರವಲ್ಲ, ಶಿಕ್ಷಕರು ತರಗತಿಯಲ್ಲಿ ರೂಪಿಸುವ ಕಲಿಕೆಯ ಸನ್ನಿವೇಶಗಳು ದೀರ್ಘ ಸಮಯ ಶಾಲೆಯಿಂದ ಹೊರಗುಳಿದು ಮರಳಿದ ಮಕ್ಕಳಿಗೆ ಅಸಹನೀಯ ಎನಿಸುತ್ತವೆ. ಅವರು ಶಾಲೆ ಬಿಡುತ್ತಾರೆ. ಇಂತಹ ಪ್ರವೃತ್ತಿಯನ್ನು ಕಡಿಮೆ ಮಾಡಲು ಬೇರೆ ಬೇರೆ ಕಾರ್ಯಕ್ರಮಗಳು ಇವೆಯಾದರೂ ಅವುಗಳೆಲ್ಲ ಸಹಜ ತರಗತಿಯ ಸನ್ನಿವೇಶಗಳೊಡನೆ ಹೊಂದಿಕೆಯಾಗದೇ ಇರುವುದರಿಂದ ಹೆಸರಿಗಷ್ಟೇ ಎಂಬಂತೆ ಆಗಿವೆ.

ಇದರ ಜೊತೆಗೆ ಇನ್ನೊಂದು ಬಗೆಯ ಗೈರು ಹಾಜರಿಯನ್ನೂ ನಾವು ಕಾಣಬಹುದು. ಮಕ್ಕಳು ನಿಯಮಿತವಾಗಿ ಶಾಲೆಗೆ ಬರುತ್ತಾರಾದರೂ ಅವರಿಗೆ ಶಿಕ್ಷಕರ ಒಡನಾಟ ದೊರೆಯದಿದ್ದರೆ ಅವರು ಶಾಲೆಯಲ್ಲಿ ಇದ್ದೂ ಇರದಂತೆಯೇ ಆಗುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಅವಶ್ಯಕತೆಯನ್ನು ನಿರ್ಧರಿಸಲಾಗುತ್ತದೆ. ಐದು ತರಗತಿಗಳಿಗೆ ಒಬ್ಬರೇ ಶಿಕ್ಷಕ ಇರುವ ಎರಡು ಸಾವಿರ ಶಾಲೆಗಳು ಕರ್ನಾಟಕದಲ್ಲಿವೆ. ಏಳು ತರಗತಿಗಳಿಗೆ ಮೂವರು ಶಿಕ್ಷಕರು ಇರುವುದು ಸಾಮಾನ್ಯವಾಗಿದೆ. ಒಬ್ಬ ಶಿಕ್ಷಕಿ ವಾರದಲ್ಲಿ ಗರಿಷ್ಠ ನಲವತ್ತೈದು ಅವಧಿಗಳನ್ನು ತೆಗೆದುಕೊಳ್ಳಬಲ್ಲರು. ಐದು ತರಗತಿಗೆ ಒಬ್ಬರೇ ಶಿಕ್ಷಕಿ ಇರುವುದೆಂದರೆ, ಒಂದು ವಾರಕ್ಕೆ ಒಂದು ತರಗತಿಗೆ ಅವರು ಲಭ್ಯವಾಗುವುದು ಒಂಬತ್ತು ಅವಧಿಗಳಿಗೆ ಮಾತ್ರ.

ದಿನವೂ ಶಾಲೆಗೆ ಬಂದೂ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳದೆ ಅಥವಾ ತನ್ನ ತರಗತಿಯಲ್ಲಿ ಕಲಿಯಬೇಕಾದ ಕಲಿಕೆಯ ಫಲಗಳನ್ನು ಹೊಂದದೆ ಆ ಮಗು ಮುಂದಿನ ತರಗತಿಗೆ ಹೋಗಬೇಕಾಗುತ್ತದೆ. ಅಲ್ಲಿ ಹೊಸ ನಿರೀಕ್ಷೆಗಳಿರುತ್ತವೆ. ಅಲ್ಲಿ ಕಲಿಯಬೇಕಾದ ಸಂಗತಿಗಳೇ ಬೇರೆಯಾಗಿರುತ್ತವೆ. ಕಲಿಕೆಯ ಫಲಗಳನ್ನಾಧರಿಸಿ ರೂಪಿಸಿದ ತರಗತಿವಾರು ಪಠ್ಯವಸ್ತುವು ಏಣಿಯಂತೆ ಜೋಡಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದರೂ ಪೂರ್ವ ಕಲಿಕೆಗೆ ಅಲ್ಲಿ ಅವಕಾಶ ಕಡಿಮೆ.

ಪ್ರತಿ ತರಗತಿಯ ಪ್ರತಿ ಅವಧಿಯಲ್ಲೂ ನಿರ್ದಿಷ್ಟ ಕಲಿಕೆಯ ಸಂದರ್ಭಗಳನ್ನು ಒದಗಿಸಿದ್ದೇವೆಯೇ ಎಂಬುದು ಮುಖ್ಯ ಪ್ರಶ್ನೆ ಮತ್ತು ಅದೇ ಕಲಿಕೆಯ ವೇಗವನ್ನು ನಿರ್ಧರಿಸುತ್ತದೆ. ಆದರೆ, ಪ್ರತಿ ತರಗತಿಗೂ ನಮ್ಮಲ್ಲಿ ಶಿಕ್ಷಕರಿಲ್ಲ. ಐದು ತರಗತಿಗಳಿಗೆ ಒಬ್ಬರೇ ಶಿಕ್ಷಕರು ಇದ್ದಾರೆಂದರೆ, ಮಗುವಿಗೆ ವಾರಕ್ಕೆ ಒಂಬತ್ತು ಅವಧಿಗಳು ಮಾತ್ರ ಶಿಕ್ಷಕರ ಬೆಂಬಲ ದೊರೆಯುತ್ತದೆ. ಮಗುವು ಐದು ವಾರಗಳು ಶಾಲೆಗೆ ಬಂದರೂ ಕಲಿಕೆಯ ದೃಷ್ಟಿಯಿಂದ ಆ ಮಗು ನಾಲ್ಕು ವಾರಗಳಷ್ಟು ಗೈರುಹಾಜರಾದಂತೆ! ಐದನೇ ತರಗತಿಯವರೆಗೆ ಮಗು ಮೂಲಕೌಶಲಗಳನ್ನು ಕಲಿಯದಿದ್ದರೆ ಅದಕ್ಕೆ ಮುಂದಿನ ಕಲಿಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಕಲಿಯಲು ಅಗತ್ಯವಾದ ಕಲಿಕಾ ಕೌಶಲವೇ ಮಗುವಿಗೆ ದೊರೆತಿರುವುದಿಲ್ಲ.

ಶಾಲೆಗಳಲ್ಲಿ ತರಗತಿವಾರು ಶಿಕ್ಷಕರಿಲ್ಲ. ಇರುವ ಶಿಕ್ಷಕರು ಕಲಿಕೆಗೆ ನೇರವಾಗಿ ಸಂಬಂಧಿಸದ ಕಚೇರಿ ಕಾರ್ಯಗಳಲ್ಲಿ ಶೇಕಡ 30ರಷ್ಟು ಶಾಲಾ ಸಮಯವನ್ನು ಕಳೆಯಬೇಕಿದೆ. ಒಂದು ತಿಂಗಳಿಗೆ ಏನಿಲ್ಲವೆಂದರೂ ಐವತ್ತರಿಂದ ಅರವತ್ತು ಆದೇಶಗಳು, ಜ್ಞಾಪನಗಳು, ಸುತ್ತೋಲೆಗಳು ಬೇರೆ ಬೇರೆ ಹಂತಗಳಿಂದ ಶಿಕ್ಷಕರನ್ನು ತಲುಪುತ್ತವೆ. ಇವುಗಳಲ್ಲದೆ ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಸಂದೇಶಗಳು ಬರುತ್ತವೆ. ಬಹುತೇಕ ಸಂದೇಶಗಳು, ಮಾಡಿದ ಕಾರ್ಯಕ್ರಮಗಳ ಫೋಟೊ ಅಪ್ಲೋಡ್ ಮಾಡುವುದು, ಅಂಕಿ ಅಂಶ ನೀಡುವಂತಹ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಹೇರುತ್ತಿರುತ್ತವೆ. ಇವೆಲ್ಲದರ ಪರಿಣಾಮವಾಗಿ, ಮಕ್ಕಳು ಶಾಲೆಯಲ್ಲಿ ಇದ್ದೂ ಕಲಿಕೆಯ ಸಂದರ್ಭಗಳಿಂದ ಹೊರಗೆ ಉಳಿಯಬೇಕಾಗುತ್ತದೆ.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕಾ ಬಲವರ್ಧನೆ ಮಾಡಲು ವಿಶೇಷ ತರಬೇತಿ, ಪೂರಕ ಪಠ್ಯದಂತಹವುಗಳನ್ನೆಲ್ಲ ಒದಗಿಸಲಾಗುತ್ತದೆ. ಮೂಲಭೂತ ಕಲಿಕೆ ಮತ್ತು ಸಾಂಖ್ಯಿಕ ಜ್ಞಾನವನ್ನು ಖಾತರಿಪಡಿಸಲು ಏನೇನೋ ಕಾರ್ಯಕ್ರಮಗಳಿವೆ. ಆದರೆ, ಶಿಕ್ಷಕರ ಕೊರತೆ ನೀಗಿಸದ ವಿನಾ ಮಾಡುವ ಬೇರೆಲ್ಲ ಕಾರ್ಯಕ್ರಮಗಳು ಹೊಳೆಯಲ್ಲಿ ತೊಳೆದ ಹುಣಸೆಯಂತೆಯೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.