ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಮರಸ ಕಾಣದ ಸಮರೋತ್ಸಾಹ

Published 4 ಡಿಸೆಂಬರ್ 2023, 23:34 IST
Last Updated 4 ಡಿಸೆಂಬರ್ 2023, 23:34 IST
ಅಕ್ಷರ ಗಾತ್ರ

ಪುನೀತ್ ರಾಜ್‌ಕುಮಾರ್ ಅವರ ಎರಡನೇ ಪುಣ್ಯತಿಥಿಯ ಪ್ರಯುಕ್ತ, ಕನ್ನಡ ಚಿತ್ರರಸಿಕರ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಇತ್ತೀಚೆಗೆ ಅವರ ಭಾವಚಿತ್ರ ರಾರಾಜಿಸಿತು. ಅಮೆರಿಕದ ‘ಫ್ರೆಂಡ್ಸ್’ ಎಂಬ ಟಿ.ವಿ. ಷೋನಲ್ಲಿನ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಮ್ಯಾಥ್ಯು ಪೆರ‍್ರಿ ಅವರು ಅದೇ ಸಮಯದಲ್ಲಿ ನಿಧನರಾಗಿದ್ದು, ಕೋಟ್ಯಂತರ ಅಭಿಮಾನಿಗಳು ಆಘಾತಕ್ಕೆ ಒಳಗಾದರು. ಮೃತರಾದಾಗ ಪುನೀತ್ ಅವರಿಗೆ ಬರೀ 46 ವರ್ಷ ಮತ್ತು ಪೆರ‍್ರಿ ಅವರಿಗೆ 54 ವರ್ಷ. ಇಬ್ಬರೂ ನಟರು ತಮ್ಮ ತಮ್ಮ ವಲಯದಲ್ಲಿ ಬಹಳಷ್ಟು ಯಶಸ್ಸು ಪಡೆದಿದ್ದರು ಮತ್ತು ಅಭಿಮಾನಿಗಳನ್ನು ಗಳಿಸಿದ್ದರು. ಆದರೆ ಅವರ ಜೀವಿತಾವಧಿ ಕುರಿತಂತೆ ವಿಧಿಲಿಖಿತ ಬೇರೆಯೇ ಇತ್ತು.

ಸಾವಿನ ಕುರಿತಂತೆ ಏನೇ ವ್ಯಾಖ್ಯಾನಗಳಿದ್ದರೂ ಕಡೆಗೆ ನಮಗೆ ಅತ್ಯಂತ ಆಪ್ಯಾಯಮಾನ ಎನಿಸುವುದು, ‘ನಮ್ಮ ಜೀವನವನ್ನು ಆವರಿಸಿರುವುದು ಒಂದು ರೀತಿಯ ಅಸಂಬದ್ಧತೆ’ ಎಂಬ ಅಸ್ತಿತ್ವವಾದಿ ಗಳ ಮಾತು. ಹಾಗೆಯೇ, ಇದರೊಟ್ಟಿಗೆ ನಮ್ಮನ್ನು ಕಾಡುವುದು ಆತಂಕ ಮತ್ತು ಅನಿಶ್ಚಿತತೆ. ಇದನ್ನು ಮಾಸ್ಟರ್ ಹಿರಣ್ಣಯ್ಯ ಬಹಳ ಸರಳವಾಗಿ ವಿವರಿಸಿದ್ದಾರೆ. ಹಿರಣ್ಣಯ್ಯನವರು ಯಾವುದೋ ವಿಚಾರಕ್ಕೆ ದುಃಖಿತರಾಗಿ, ಆತ್ಮಹತ್ಯೆಗೆ ಶರಣಾಗಲು ಮಾಡಿದ ಪ್ರಯತ್ನ ವಿಫಲವಾಯಿತಂತೆ. ಆಗ ಅವರು ತಮ್ಮ ಮಗನಿಗೆ ಹೀಗೆ ಹೇಳಿದರಂತೆ, ‘ವ್ಯಾಧಿಗೆ ಅವಧಿ ಮತ್ತು ಸಾವಿಗೆ ಸ್ವರೂಪ ಎರಡೂ ದೈವನಿರ್ಣಯ’. ಇದು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ, ಕರ್ನಾಟಕದ ‘ಫಿಟ್ನೆಸ್ ಐಕಾನ್’ ಎನಿಸಿಕೊಂಡಿದ್ದ ಪುನೀತ್‌ ಹೃದಯಾಘಾತದಿಂದ ಮತ್ತು ಪೆರ‍್ರಿ ಸ್ನಾನ ಮಾಡುತ್ತಾ ತಮ್ಮ ಬಾತ್ ಟಬ್ಬಿನಲ್ಲಿ ಸಾವಿಗೆ ಜಾರುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಇದೇ ಕಾರಣಕ್ಕೆ ಇರಬೇಕು, ‘ಕ್ಷಣಿಕವಾದ ಈ ಬದುಕು ಲೊಳಲೊಟ್ಟೆ ಇದ್ದಂತೆ. ಆದ್ದರಿಂದ ಮನುಷ್ಯರ ನಡುವೆ ಸಮರಸವಿರಲಿ’ ಎಂದು ಜಗತ್ತಿನಾ ದ್ಯಂತ ತತ್ವಜ್ಞಾನಿಗಳು ಸಾರಿ ಸಾರಿ ಹೇಳಿರುವುದು. ಹಾಗೆಯೇ, ‘ಇರುವಷ್ಟು ದಿನ ಸಮಾಜಕ್ಕೆ ನಾವು ಕೊಟ್ಟದ್ದು ಹೆಚ್ಚಿರಬೇಕು ಮತ್ತು ನಾವು ಗತಿಸಿದ ನಂತರ ಸಮಾಜವು ನಮ್ಮನ್ನು ಹೇಗೆ ನೆನೆಯುತ್ತದೆ ಎಂಬುದು ಮುಖ್ಯ’ ಎಂದು ಶಿವರಾಮ ಕಾರಂತರು ತಮ್ಮ ‘ಅಳಿದ ಮೇಲೆ’ ಕಾದಂಬರಿಯಲ್ಲಿ ಸುಂದರವಾಗಿ ವಿವರಿಸುತ್ತಾರೆ. ಇಲ್ಲಿ ನಮಗೆ ಥಟ್ಟನೆ ಗೋಚರಿಸುವ ವೈರುಧ್ಯವೆಂದರೆ, ಇಷ್ಟೆಲ್ಲಾ ಸಾಹಿತಿಗಳು ಮತ್ತು ತತ್ವಜ್ಞಾನಿಗಳ ಮಾತುಗಳ ಹೊರತಾಗಿಯೂ ನಮಗೆ ಸಮರವೇ ಹೆಚ್ಚು ಪ್ರಿಯ ಎನಿಸುವುದು!

ವಿಶ್ವವನ್ನೇ ತಲ್ಲಣಗೊಳಿಸಿದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾವು ಆರುವ ಮುನ್ನವೇ ಇಸ್ರೇಲ್ ಮತ್ತು ಹಮಾಸ್‌ ನಡುವೆ ಯುದ್ಧ ಶುರುವಾಯಿತು. ಪ್ರತಿಬಾರಿ ಯುದ್ಧ ಸಂಭವಿಸಿದಾಗ ಆ ಯುದ್ಧಕ್ಕೆ ಕಾರಣಗಳು ಆಯಾ ದೇಶದ ಮೂಗಿನ ನೇರಕ್ಕೆ ನ್ಯಾಯಬದ್ಧವಾಗಿಯೇ ಇರುತ್ತವೆ. ಇದೇ ಸಮಯದಲ್ಲಿ, ಯುದ್ಧಗಳಿಂದ ಹೊರಗಿರುವ ಜನರು ತಮ್ಮ ತಮ್ಮ ಸೈದ್ಧಾಂತಿಕ ದೃಷ್ಟಿಕೋನಗಳಿಂದ ಈ ಯುದ್ಧಗಳನ್ನು ಅರ್ಥೈಸುತ್ತಾರೆ. ಈ ಅರ್ಥೈಸುವಿಕೆಗಳು ಸಾಮಾನ್ಯವಾಗಿ ಇಡೀ ಮಾನವಸಂಕುಲದ ಒಳಿತನ್ನು ಬಯಸುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ತಮ್ಮ ಸೈದ್ಧಾಂತಿಕ ನೆಲೆಗಟ್ಟಿನ ಮೂಲಕ ಯುದ್ಧಗಳನ್ನು ಅರ್ಥೈಸಿದರೆ, ಮುಂದಾಗುವ ಅವಘಡಗಳಿಗೆ ನಾವೇ ಜವಾಬ್ದಾರರು.

ಒಟ್ಟಿನಲ್ಲಿ ಶತಶತಮಾನಗಳಿಂದ ಮನುಷ್ಯರಿಗೆ ಯುದ್ಧವೇ ಒಂದು ಧರ್ಮವಾಗಿದೆ. ಈ ನಡುವೆ ಸೊರಗುವುದು ನಮ್ಮನ್ನು ನಂಬಿರುವ ಕುಟುಂಬಗಳು ಎಂಬುದನ್ನು ಯುದ್ಧದ ಮದದಲ್ಲಿ ನಾವು ಮರೆಯುತ್ತೇವೆ. ನಮ್ಮ ನೆಲವನ್ನು ಬೃಹತ್ ಸ್ಮಶಾನವ ನ್ನಾಗಿ ಪರಿವರ್ತಿಸುತ್ತಿದ್ದೇವೆ ಎಂಬ ಅರಿವು ನಮಗೆ ಇರುವುದಿಲ್ಲ.

ಈಗಿನ ಸಂದರ್ಭದಲ್ಲಿ ನ್ಯಾಯವು ಇಸ್ರೇಲಿಯರ ಪರವಾಗಿದೆಯೋ ಅಥವಾ ಪ್ಯಾಲೆಸ್ಟೀನಿ
ಯನ್ನರ ಪರವಾಗಿದೆಯೋ ಎಂದು ಹೇಳುವುದು ಬಹಳ ಕ್ಲಿಷ್ಟಕರ. ಆದರೆ, ಸರ್ವಾಧಿಕಾರಿ ಹಿಟ್ಲರ್‌ನ ಆಡಳಿತದಲ್ಲಿ ಅತ್ಯಂತ ಹೀನಾಯವಾದ ದೌರ್ಜನ್ಯಕ್ಕೆ ಒಳಗಾದ ಯಹೂದಿಯರು, ಈಗ ತಮಗೆ ಅನುಕೂಲ ಕರವಾದ ರಾಜಕೀಯ ವಾತಾವರಣ ಸೃಷ್ಟಿಯಾದಾಗ ತಾವೇ ದೌರ್ಜನ್ಯ ನಡೆಸುತ್ತಾ ಸಮರಪ್ರೇಮಿಗಳಾಗಿ
ರುವುದು, ಮನುಷ್ಯರು ಮೂಲತಃ ಸಮರೋತ್ಸಾಹಿಗಳೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡಿದೆ.

ಸಿಂಗಪುರದ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕಿ ಲೀ ಝು ಫೆಂಗ್ ಅವರ ಕವಿತೆಯೊಂದು ಬದುಕಿನ ಅನಿಶ್ಚಿತತೆ ಕುರಿತು ಬಹಳ ಸುಂದರವಾಗಿ ತಿಳಿ ಹೇಳುತ್ತದೆ. ಅದರ ಸಾರ ಹೀಗಿದೆ: ‘ನಿಮ್ಮ ಚಹಾವನ್ನು ನಿಧಾನವಾಗಿ ಸವಿಯಿರಿ. ಇಲ್ಲಿಂದ ತೆರಳುವ ಕಾಲ ಬಲ್ಲವರು ಯಾರು? ಈ ಬದುಕು ಎಷ್ಟು ಅಮೂಲ್ಯವೋ ಅಷ್ಟೇ ಕ್ಷಣಿಕ. ಕೆಲವರು ಉಳಿಯುತ್ತಾರೆ, ಕೆಲವರು ಮರೆಯಾಗುತ್ತಾರೆ. ಕಡೆಯಲ್ಲಿ ನಮಗೆ ಮುಖ್ಯವಾಗುವುದು ನಾವು ಕೊಟ್ಟ ಮತ್ತು ಪಡೆದ ಪ್ರೀತಿಯಷ್ಟೇ!’

ಯುದ್ಧವೇ ಎಲ್ಲಕ್ಕೂ ಪರಿಹಾರ ಎಂದಾದರೆ, ನಾಗರಿಕತೆ ಎಂಬ ಪದಕ್ಕೆ ಅರ್ಥವೇ ಇರುವುದಿಲ್ಲ. ಇದೇ ಕಾರಣಕ್ಕಿರಬೇಕು, ಮನುಷ್ಯನ ಪ್ರತಿ ಹೊಸ ನಾಗರಿಕತೆ ತನ್ನ ಹಿಂದಿನ ನಾಗರಿಕತೆಯನ್ನು ಅಳಿಸಿ ತನ್ನ ಹುಟ್ಟನ್ನು ಸಾಧಿಸಿಕೊಳ್ಳುತ್ತದೆ. ತುಳಿದು ಬಾಳುವುದೊಂದನ್ನೇ ಗುರಿಯಾಗಿಸದೆ ತಿಳಿದು ಬಾಳಬೇಕು ಎಂದು ಅರಿತುಕೊಂಡರೆ, ಬೇಂದ್ರೆ ಅವರ ಈ ಸಾಲುಗಳು ಬಹಳ ಆಸಕ್ತಿಕರ ಎನಿಸುತ್ತವೆ: ‘ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿ... ಇದನೊಪ್ಪದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT