ಮಂಗಳವಾರ, ಅಕ್ಟೋಬರ್ 19, 2021
22 °C
ಸಂಪೂರ್ಣ ಕಲಿಕಾಕೇಂದ್ರಿತವಾದ ಗುಂಪು ಅಧ್ಯಯನ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತದೆ

ಸಂಗತ: ಗುಂಪು ಅಧ್ಯಯನದಿಂದ ಗಮನಾರ್ಹ ಉನ್ನತಿ

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಮಾನವ ಮೂಲತಃ ಸಂಘಜೀವಿ. ಕುಟುಂಬವಾಸಿ ಯಾಗಿ ವೈಯಕ್ತಿಕ ಹಿತಾಸಕ್ತಿಯೊಂದಿಗೆ ಸಮೂಹದ ಏಳ್ಗೆಯನ್ನು ಬಯಸುವ ಸದಸ್ಯರ ತಂಡವನ್ನು ಕಟ್ಟಿಕೊಂಡು ಗುಂಪಿನಲ್ಲಿ ಒಟ್ಟಿಗೆ ಬದುಕುವುದು ಅವನ ಎಲ್ಲಾ ಕಾಲದ ಆದ್ಯತೆ. ಗುಂಪಿನ ಸದಸ್ಯರುಗಳಲ್ಲಿನ ಪರಸ್ಪರ ಒಮ್ಮತ, ಪ್ರೀತಿ, ಕಕ್ಕುಲಾತಿ, ಸಹಕಾರ, ಸೌಹಾರ್ದ, ಶಿಸ್ತು-ಶ್ರದ್ಧೆಯಂತಹ ಗುಣ ಗಳ ಕಾರಣಕ್ಕೆ ಅಲ್ಲೊಂದು ‘ಗುಂಪಿನ ಮನಸು’ ಕಾಣ ಸಿಗುತ್ತದೆ. ಕುಟುಂಬ, ಸಮಾಜ, ಶಾಲೆ ಮತ್ತು ಸಂಘಸಂಸ್ಥೆಗಳಲ್ಲಿನ ಕಾರ್ಯಚಟುವಟಿಕೆಗಳಲ್ಲಿ ಗುಂಪಿನ ಮಾನಸಿಕತೆಯ ಪ್ರಾಮುಖ್ಯ ಢಾಳಾಗಿ ಪ್ರತಿಫಲಿಸುತ್ತದೆ.

ಔಪಚಾರಿಕ ಕಲಿಕೆಯಲ್ಲಿ ಶಾಲಾ ಕಾಲೇಜುಗಳದ್ದು ಮಹತ್ವದ ಪಾತ್ರ. ಆದರೂ ತರಗತಿಯ ಪಾಠದಲ್ಲಿ ಕೆಲವಷ್ಟು ಸಂಗತಿಗಳು ಮಕ್ಕಳ ಗ್ರಹಿಕೆಗೆ ನಿಲುಕದೇ ಹೋಗಬಹುದು. ಮಕ್ಕಳಲ್ಲಿನ ವೈಯಕಿಕ ಭಿನ್ನತೆ, ಮುಖ್ಯವಾಗಿ ಅವರ ಆಸಕ್ತಿ-ಕುತೂಹಲ, ಮಾನಸಿಕ ಸಿದ್ಧತೆ, ಆರೋಗ್ಯ ಇವೆಲ್ಲಾ ಕಲಿಕೆಯಲ್ಲಿ ಪ್ರಭಾವ ಬೀರುವ ಅಂಶಗಳು. ಕೆಲವು ವಿದ್ಯಾರ್ಥಿಗಳು, ಶಿಕ್ಷಕರು ನೀಡುವ ಒಂದೇ ವಿವರಣೆಯಲ್ಲಿ ಅರ್ಥೈಸಿಕೊಂಡರೆ, ಕೆಲವರಿಗೆ ಪುನರಾವರ್ತನೆ ಬೇಕು. ಮತ್ತೆ ಕೆಲವರಿಗೆ ಬರೆದು ಕಲಿತ ಮೇಲೆಯೇ ಪರಿಕಲ್ಪನೆ ಸ್ಪಷ್ಟಗೊಳ್ಳು ತ್ತದೆ. ಇನ್ನು ಕೆಲವರಿಗಂತೂ ಅರ್ಥವಾಗದೇ ಉಳಿದ ಅರ್ಧಂಬರ್ಧ ಭಾಗವು ಪೂರ್ಣಗೊಳ್ಳುವುದು ಮನೆಯ ಓದಿನಲ್ಲಿ ಮಾತ್ರ. ಹಾಗಾಗಿ, ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಂಡಲ್ಲಿ ಕಲಿ ಕಾಂಶಗಳು ಸ್ಮೃತಿಪಟಲದಲ್ಲಿ ಗಟ್ಟಿಗೊಳ್ಳುತ್ತವೆ.

ಪಾಠದಲ್ಲಿಯ ಅರ್ಥವಾಗದ ಮತ್ತು ಅಸ್ಪಷ್ಟ ಸಂಗತಿಗಳು ಮಕ್ಕಳಿಗೆ ಯಾವಾಗಲೂ ಕಲಿಕೆಯಿಂದ ದೂರವೇ ಉಳಿದುಬಿಡುತ್ತವೆ. ಆಗೆಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸಂಪರ್ಕಿಸಿ, ಚರ್ಚಿಸಿ ಅರ್ಥವಾಗದ ವಿವರಣೆ, ಪರಿಕಲ್ಪನೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಶಿಕ್ಷಕರನ್ನು ಪದೇಪದೇ ಭೇಟಿ ಮಾಡಲು ವಿದ್ಯಾರ್ಥಿಗಳು ಹಿಂಜರಿಯುವುದಿದೆ. ಅಂತಹ ಸಂದರ್ಭದಲ್ಲಿ ವಿಷಯವನ್ನು ಅರ್ಥೈಸಿಕೊಳ್ಳಲು ತೋರುವ ಅತ್ಯುತ್ತಮ ಮಾದರಿಯೆಂದರೆ ‘ಗುಂಪು ಅಧ್ಯಯನ’.

ಜವಾಬ್ದಾರಿ ಹಂಚಿಕೆಯಾಗುವ ದೃಷ್ಟಿಯಿಂದ ಕೂಡಿ ಬಾಳುವುದು ಉತ್ತಮವೆನಿಸುವಂತೆ ಕೂಡಿ ಕಲಿಯುವುದು ಕೂಡ ಸರಾಗ ಕಲಿಕಾಮಾರ್ಗವಾಗಿ ಪ್ರಮುಖವಾಗುತ್ತದೆ. ಆದರೆ ಭಾಗಿಯಾಗುವ ಗುಂಪಿಗೊಂದು ಚೌಕಟ್ಟು, ಸ್ವರೂಪಗಳು ಇರಬೇಕು. ಸಮಾನಮನಸ್ಕ ಗುಂಪು ಮುಖ್ಯವಾಗಿ ವಿವಿಧ ಹಂತದ ಕಲಿಕಾ ಸಾಮರ್ಥ್ಯವುಳ್ಳ ಮಕ್ಕಳನ್ನು ಒಳ ಗೊಂಡಿರಬೇಕು. ಒಂದು ಉದ್ದೇಶ ಸಾಧನೆಗಾಗಿ ತುಡಿಯುವ ಮನಸ್ಸುಳ್ಳ ವರು ಅಲ್ಲಿರಬೇಕು. ಭೇದಭಾವ ಮೀರಿ ಯಾವುದೇ ಹೆಚ್ಚುಗಾರಿಕೆಗೆ ಅವಕಾಶವಿಲ್ಲದಂತೆ ಸಮಾನ ಅವಕಾಶ, ಹೊಣೆಗಾರಿಕೆಯ ಆಧಾರ ದಲ್ಲಿ ನಿರ್ದಿಷ್ಟ ಸಂಖ್ಯೆಯ ತಂಡವನ್ನು ರಚಿಸಬೇಕು.

ಯಾರೋ ಒಬ್ಬ ಗುಂಪಿನ ನಾಯಕನಾದರೂ ಸಾಮೂಹಿಕ ಜವಾಬ್ದಾರಿ ಅಪೇಕ್ಷಣೀಯ. ಗುಂಪು ಅಧ್ಯಯನ ಮತ್ತು ಗುಂಪು ಚರ್ಚೆಗಳು ಕೇವಲ ಶಾಲಾ ಹಂತಕ್ಕೆ ಸೀಮಿತವಲ್ಲ. ವೃತ್ತಿಶಿಕ್ಷಣ ಮತ್ತು ತರಬೇತಿ ಶಾಖೆಗಳಲ್ಲಿಯೂ ನಿಗದಿತ ಸಮಸ್ಯೆ, ಸವಾಲು, ಸಂಕಷ್ಟಗಳಿಗೊಂದು ಪರಿಹಾರವನ್ನು ‘ಗುಂಪು ಚರ್ಚೆ’ ಯಲ್ಲಿ ಕಂಡುಕೊಳ್ಳಬಹುದು. ಸಮುದಾಯದ ಸವಾಲುಗಳಿಗೂ ವಿಸ್ತೃತ ಸಮಾಲೋಚನೆ ಮತ್ತು ಚರ್ಚೆಗಳ ತರುವಾಯ ಒಮ್ಮತದ ಅಭಿಪ್ರಾಯ ಪಡೆದು ವಿಚಾರ ಮಂಡನೆ ನಿರ್ವಹಿಸುವುದು ಹೆಚ್ಚು ಫಲದಾಯಕ. ಈಗಿನ ಕೊರೊನೋತ್ತರ ಕಾಲ ಘಟ್ಟವಂತೂ ಅಂತಹ ಹತ್ತಾರು ಆನ್‌ಲೈನ್ ಗುಂಪು ಸಂವಾದಗಳಿಗೆ ಬಗೆಬಗೆಯ ಆ್ಯಪ್‍ಗಳನ್ನು ಪರಿಚಯಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.

ಗುಂಪು ಅಧ್ಯಯನದಲ್ಲಿ ಅವ್ಯಕ್ತ ಸ್ವಾತಂತ್ರ್ಯ ವಿರುತ್ತದೆ. ಆತ್ಮೀಯ ಪರಿಸರದಲ್ಲಿ ಹಿತಕರ ಕಲಿಕಾನುಭವ ಸುಲಭ ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಆಲಿಸುವ, ಆಲೋಚಿಸುವ, ಚಿಂತಿಸುವ ಸಾಮರ್ಥ್ಯ ವೃದ್ಧಿಸುತ್ತದೆ. ಸಂವಹನಾ ಕೌಶಲ ಬೆಳೆಯುತ್ತದೆ. ಗುಂಪಿನಲ್ಲಿ ಹಿಂಜರಿಕೆ, ಅಂಜಿಕೆ, ಅಳುಕುಗಳು ದೂರವಾಗಿ ಒತ್ತಡರಹಿತ ಸ್ಥಿತಿಯಲ್ಲಿ ಕಲಿಯುವುದು ಸಾಧ್ಯವಾಗುತ್ತದೆ. ನಿರ್ದಿಷ್ಟ ಗುರಿ, ಯೋಜನೆಗಳೊಂದಿಗೆ ರೂಪುಗೊಂಡ ಗುಂಪುಗಳಲ್ಲಿ ನಿತ್ಯದ ಪಾಠದಲ್ಲಿನ ಬಹುತೇಕ ಗೊಂದಲಗಳು ಬಗೆಹರಿಯುತ್ತವೆ.

ಎಲ್ಲರೊಟ್ಟಿಗಿನ ಚರ್ಚೆಯಲ್ಲಿ ಪಠ್ಯವಸ್ತುವಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೆ ಗೊತ್ತಿರುವ ಅಂಶಗಳನ್ನು ಚರ್ಚಿಸುತ್ತಾ, ಅರ್ಥೈಸಿಕೊಳ್ಳುವ ಸುಲಭ ಮಾರ್ಗವನ್ನು ವಿನಿಮಯ ಮಾಡುತ್ತಾ, ತಾವೂ ಸ್ಪಷ್ಟಗೊಳ್ಳುತ್ತಾ, ಬೇರೆಯವರಿಗೂ ತಮ್ಮ ಅರಿವನ್ನು ಸುಲಭವಾಗಿ ದಾಟಿಸುತ್ತಾರೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ತಮ್ಮ ಇತಿಮಿತಿಗಳನ್ನು ಬಲ್ಲ ಆಪ್ತ ಸಹಪಾಠಿಗಳಿಂದ ಹೇಳಿಸಿಕೊಂಡು ಕಲಿಯುವುದು ಬಲುಸುಲಭ ಮತ್ತು ಅದು ಹೆಚ್ಚು ಪರಿಣಾಮಕಾರಿ. ಹೇಳಿಕೊಡುವ ವಿದ್ಯಾರ್ಥಿಗೂ ಗಮನಾರ್ಹ ಉನ್ನತಿ ಸಾಧ್ಯವಾಗುತ್ತದೆ.

ಹಾಗಿದ್ದೂ, ಗುಂಪಿನ ಕಾರ್ಯವೈಖರಿಯ ಬಗ್ಗೆ ಸದಾ ಜಾಗರೂಕರಾಗಿರಬೇಕು. ಸದಸ್ಯರಲ್ಲಿ ಸ್ಪಷ್ಟ ಗುರಿ, ಬದ್ಧತೆ ಮತ್ತು ಕ್ರಿಯಾಶೀಲತೆ ಇರದಿದ್ದಲ್ಲಿ ಗುಂಪಿನ ಚಟುವಟಿಕೆಗಳು ಅಪಾರ್ಥಗೊಳ್ಳುವುದು ಮಾತ್ರವಲ್ಲ ಗುಂಪು ರಚನೆಯ ಉದ್ದೇಶವೇ ಈಡೇರದೆ ಕೇವಲ ಗದ್ದಲ, ಕಾಲಹರಣಕ್ಕೆ ಮಿತಿಗೊಳ್ಳುವ ಅಪಾಯವಿದೆ. ಶಿವರಾಮ ಕಾರಂತರು ಹೇಳಿದಂತೆ ‘ಮನಸು ಅರಳುವುದು ಏಕಾಂತದಲ್ಲಿಯೇ ಹೊರತು ಸಂತೆಯಲ್ಲಲ್ಲ...’ ಹಾಗೆಯೇ ಅರಳಿದ ಮನಸಿನ ಅನಾವರಣವು ಸಮಾನ ಮನಸುಗಳ ಸಮ್ಮುಖದಲ್ಲಿ ನೆರವೇರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ಒಗ್ಗಟ್ಟಿನಲ್ಲಿ ಒಲವಿದೆ, ಬಲವಿದೆ. ಜಯಿಸುವ ಛಲವೊಂದು ಇರಬೇಕಷ್ಟೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು