ಮಂಗಳವಾರ, ಜೂನ್ 2, 2020
27 °C
ಕೆಲವು ಮನಸ್ಸುಗಳಿಗೆ ಕೊರೊನಾ ಬಗ್ಗೆ ಎಚ್ಚರ ಮೂಡಿಸುವುದರ ಜೊತೆಗೆ ಮಾನವತೆಯ ಮದ್ದನ್ನೂ ನೀಡಬೇಕಾದ ತುರ್ತಿದೆ

ಸಂಗತ: ಸಾಮಾಜಿಕ ಅರ್ಥ; ವೈದ್ಯಕೀಯ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಹಾಗೂ ಸಾಮಾಜಿಕ ಅಂತರ ಕುರಿತು ಸಾಹಿತಿಗಳ ವಿಚಾರದ ಮೂಲಕ ಪ್ರಾರಂಭಿಸಿದ ಚರ್ಚೆ (ಪ್ರ.ವಾ., ಏ. 15) ಅರ್ಥಪೂರ್ಣವಾಗಿದೆ. ‘ಸಾಮಾಜಿಕ ಅಂತರ’ ಪದದ ಮೂಲವಾದ ಸೋಷಿಯಲ್ ಡಿಸ್ಟೆನ್ಸ್ ಎಂಬ ನುಡಿಗಟ್ಟು ಇಂಗ್ಲಿಷ್ ಭಾಷೆಗೆ ಸರಿ. ಯಾಕೆಂದರೆ ಇಂಗ್ಲಿಷ್‌ನಲ್ಲಿ ಸೋಷಿಯಲ್ (ಸೋಷಿಯಲ್ಸ್‌) ಎಂದರೆ ಸಾಮೂಹಿಕ ಸೇರುವಿಕೆಗೆ ಸಂಬಂಧಿಸಿದ್ದು ಎಂದು ಅರ್ಥ. ‘ಇವತ್ತು ಕ್ಲಾಸ್ ಸೋಷಿಯಲ್ ಇದೆ’ ಎಂದರೆ ತರಗತಿಯ ವಿದ್ಯಾರ್ಥಿಗಳು ಸಾಮೂಹಿಕವಾಗಿ ಒಂದೆಡೆ ಸೇರುವುದು. ಸಮಾಜ ಎಂದಾಗ ಭಾರತೀಯ ಭಾಷೆಗಳಲ್ಲಿ ಜಾತಿ, ಧರ್ಮಗಳ ಅನುರಣನಗಳು ಸೇರಿಕೊಳ್ಳುತ್ತವೆ. ‘ಬಂಟ ಸಮಾಜ’, ‘ಬ್ರಾಹ್ಮಣ ಸಮಾಜ’, ‘ಆರ್ಯ ಸಮಾಜ’ ಎಂಬಂತಹ ಭಾಷಾ ಬಳಕೆ ಇದೆ. ಹಾಗಾಗಿ ಪದ ಬಳಕೆಯಲ್ಲಿ ಜಾಗ್ರತೆ ಒಳ್ಳೆಯದು.

***

ಸಾಮಾಜಿಕ ಅಂತರ ಎನ್ನುವ ಬದಲು ಸಾಮೂಹಿಕ ಅಂತರ ಅಥವಾ ಸಾರ್ವಜನಿಕ ಅಂತರ (ಪಬ್ಲಿಕ್‌ ಡಿಸ್ಟೆನ್ಸ್‌) ಅಥವಾ ‘ಪ್ರಜಾವಾಣಿ’ ಸೂಚಿಸಿರುವಂತೆ ಕೇವಲ ‘ಅಂತರ’ ಪದದ ಹೊಸ ಬಳಕೆ ಉತ್ತಮ. ನಮಗೆ ಮನೆ ಒಳಗೆ ಅಂತರ ಬೇಕಾಗಿಲ್ಲ. ಹೊರಗೆ ಸಾರ್ವಜನಿಕ ಸಂದರ್ಭಗಳಲ್ಲಿ ಸಾಮೂಹಿಕವಾಗಿ ಇದ್ದಾಗ ಮಾತ್ರ ರೋಗಾಣುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಅಂತರ ಬೇಕಾಗಿರುವುದು. ಇದೊಂದು ವೈಜ್ಞಾನಿಕ ಸಂದರ್ಭದ ವೈದ್ಯಕೀಯ ಅಗತ್ಯ. ಅಲ್ಲಿ ಸಾಮಾಜಿಕ ಅರ್ಥಛಾಯೆಯುಳ್ಳ ಪದಗಳನ್ನು ಸಾಧ್ಯವಾದಷ್ಟೂ ಬಳಸದೆ ಇರುವುದು ಉತ್ತಮ.

-ಎಸ್.ಆರ್.ವಿಜಯಶಂಕರ, ಬೆಂಗಳೂರು

***

ಪ್ರಾಚೀನ ತಲೆ ಆಧುನಿಕ ದೇಹ!

ಇಡೀ ಜಗತ್ತು ಕೊರೊನಾ ವೈರಸ್ಸಿನಿಂದ ತಲ್ಲಣಿಸುತ್ತಿರುವ ಸಂದರ್ಭದಲ್ಲಿ, ಮನುಷ್ಯ ಬದುಕುಳಿಯಲು ಸಾಮಾಜಿಕ ಅಂತರ ಎಂಬ ಶಬ್ದವನ್ನು ಬಳಸಲಾಗುತ್ತಿದೆ. ಇದನ್ನು ದೈಹಿಕ ಅಂತರ ಎಂದು ಬಳಸಬೇಕಿತ್ತೇನೊ. ಆದರೆ ಬಳಸಿಯಾಗಿದೆ. ಈ ಕಾಲದ ‘ಸಾಮಾಜಿಕ ಅಂತರ’ ಎಂಬ ಶಬ್ದ ಬಳಕೆಯನ್ನು ಪ್ರಾಚೀನ ಭಾರತದ ಸಂಪ್ರದಾಯಗಳಿಗೆ ಹೋಲಿಸುತ್ತ; ಪುರಾತನ ಪದ್ಧತಿಗಳು ಅರ್ಥಪೂರ್ಣ, ಪರಿಣಾಮಕಾರಿಯಾಗಿದ್ದವು ಎಂದು ಸಮರ್ಥಿಸುವುದನ್ನು ನೋಡಿದರೆ, ಇಂಥವರು ಪ್ರಾಚೀನ ತಲೆಯನ್ನು ಮತ್ತು ಆಧುನಿಕ ದೇಹವನ್ನು ಹೊಂದಿರುವುದು ಬಹಿರಂಗವಾಗುತ್ತಿದೆ.

ಪ್ರಾಚೀನ ಭಾರತದಲ್ಲಿ ಜಾತಿಪದ್ಧತಿ, ಅಸ್ಪೃಶ್ಯತೆಯ ಆಚರಣೆ– ನಂಬಿಕೆ ಕಾರಣವಾಗಿ, ಬೇರೆಬೇರೆ ಜಾತಿ ಸಮುದಾಯಗಳ ನಡುವೆ ಕೇರಿ ಪದ್ಧತಿ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಇಂಥ ಅಂತರದಿಂದ ಸಾಮಾಜಿಕ– ಆರ್ಥಿಕ ಅಸಮಾನತೆಯ ಭೌತಿಕ ರೋಗದ ಜೊತೆಗೆ ಅಮಾನವೀಯ ಮೇಲು–ಕೀಳಿನ ಮಾನಸಿಕ ರೋಗವೂ ಕಾಡಿತು. ಆದರೆ ಆಯಾ ಜಾತಿಸಮುದಾಯಗಳ ನಡುವೆ ಅಂತರ ಕಾಯ್ದುಕೊಳ್ಳುವುದೇನೂ ಇರಲಿಲ್ಲ.

ಈ ಹಿಂದಿನ ಅನೇಕ ಸಾಂಕ್ರಾಮಿಕ ರೋಗಗಳನ್ನು ಗಮನಿಸಿದಾಗ– ಪ್ಲೇಗ್‌, ಕಾಲರಾ, ಮಲೇರಿಯಾ– ಇವು ಪ್ರಾಚೀನ ಪದ್ಧತಿ ಅನುಸರಿಸಿಕೊಂಡು ಬಂದವರನ್ನೂ ಒಳಗೊಂಡಂತೆ ಇಡೀ ಜನಸಮುದಾಯವನ್ನು ಸಾವುನೋವಿಗೆ ದೂಡಿದ ವಾಸ್ತವ ಸತ್ಯವನ್ನು ನೆನಪಿಸಿಕೊಳ್ಳಬೇಕಿದೆ. ಇವುಗಳನ್ನು ತಡೆಗಟ್ಟಲು ಸಾಧ್ಯವಾಗಿದ್ದು ಆಧುನಿಕ ವಿಜ್ಞಾನ ಆವಿಷ್ಕರಿಸಿದ ಔಷಧಗಳಿಂದ ಎಂಬುದೂ ಅಷ್ಟೇ ಸತ್ಯ.

ನಮ್ಮ ಭಾರತದ ಪುರಾತನ ಪದ್ಧತಿಗಳಲ್ಲಿ ಯಾವುವು ಮಾನವೀಯತೆಯ ಜೊತೆಜೊತೆಗೆ ದೈಹಿಕ ಆರೋಗ್ಯಕ್ಕೆ ಪೂರಕವಾಗಿದ್ದವು ಎಂಬುದನ್ನಷ್ಟೇ ಗುರುತಿಸಿ, ಉದಾಹರಿಸಿ, ಚರ್ಚಿಸಿದರೆ ಒಪ್ಪಬಹುದು. ಆದರೆ ಸಮಕಾಲೀನ ಭೀಕರ ಸಾಂಕ್ರಾಮಿಕ ಕೊರೊನಾದಿಂದ ತಪ್ಪಿಸಿಕೊಳ್ಳಲು ಪ್ರತೀ ವ್ಯಕ್ತಿಯೂ ಅಂತರ ಕಾಯ್ದುಕೊಳ್ಳಬೇಕೆಂಬ ಅರ್ಥದಲ್ಲಿ ಬಳಸುತ್ತಿರುವ ಸಾಮಾಜಿಕ ಅಂತರ ಎಂಬ ಪದವನ್ನೇ ತಪ್ಪಾಗಿ ಅರ್ಥೈಸಿಕೊಂಡು ತಮ್ಮ ಜಾತಿಪದ್ಧತಿ, ಅಸ್ಪೃಶ್ಯತೆಯ ರೋಗವನ್ನು ಪ್ರದರ್ಶಿಸುತ್ತಿರುವುದು ಅನಾರೋಗ್ಯಕರವಾಗಿದೆ. ಇಂಥ ಮನಸ್ಸುಗಳಿಗೆ ಕೊರೊನಾ ವೈರಸ್ಸಿನ ಬಗ್ಗೆ ಎಚ್ಚರ ಮೂಡಿಸುವುದರ ಜೊತೆ ಜೊತೆಗೇ ಮಾನವತೆಯ ಮದ್ದನ್ನೂ ನೀಡಬೇಕಾದ ತುರ್ತಿದೆ.

-ಡಾ. ಎಸ್‌.ನರೇಂದ್ರ ಕುಮಾರ್‌, ಮೈಸೂರು

***

ತರತಮ ಭಾವನೆ

ಬಡವ- ಬಲ್ಲಿದ, ಆಳು- ಮಾಲೀಕ, ಮೇಲು- ಕೀಳು ಎನ್ನುವ ರೂಢಿಗತ ತರತಮ ಭಾವನೆಯನ್ನೇ ಬೇಡಬೇಡವೆಂದರೂ ಈ ಸಾಮಾಜಿಕ ಅಂತರ ಪದ ನೆನಪಿಗೆ ತರುತ್ತಿದೆ. ಈ ಪದಕ್ಕೆ ಬದಲಾಗಿ, ವಾಚ್ಯ ಎನ್ನಿಸಿದರೂ ‘ದೈಹಿಕ ಅಥವಾ ಭೌತಿಕ ಅಂತರ’ ಎಂಬ ಬಳಕೆ ಸೂಕ್ತ ಎನ್ನಿಸುತ್ತದೆ. ಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿ– ವ್ಯಕ್ತಿ ನಡುವೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕೆನ್ನುವ ಸಂದೇಶವನ್ನು ಈ ಪದವು ಹೆಚ್ಚು ಸ್ಪಷ್ಟಪಡಿಸುತ್ತದೆ.

-ಕೆ.ವಿ.ಮಂಜುನಾಥ್, ಕುಂಟುಗೋಡು, ಸಾಗರ

***

ಸಾಮಾಜಿಕ ಸಾಮೀಪ್ಯ

ಇಂದಿನ ಕ್ಲಿಷ್ಟಕರ ಸಂದರ್ಭದಲ್ಲಿ ಮಾನಸಿಕ ದೃಢತೆ ಹೆಚ್ಚು ಅವಶ್ಯವಾಗಿದ್ದು, ಈ ಹಂತದಲ್ಲಿ ‘ಸಾಮಾಜಿಕ ಸಾಮೀಪ್ಯ’ ಮುಖ್ಯವಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ವ್ಯಕ್ತಿಯ ಜೀವನವನ್ನು ಮತ್ತೂ ಸಂಕಷ್ಟಕ್ಕೆ ದೂಡುತ್ತದೆ. ಆದ್ದರಿಂದ ‘ಸಾಮಾಜಿಕ ಅಂತರ’ಕ್ಕಿಂತ ದೈಹಿಕ ಅಥವಾ ಶಾರೀರಿಕ ಅಂತರ ಎಂಬ ಪದವನ್ನು ಬಳಸುವುದು ಸೂಕ್ತ.

-ಆನಂದ ಎನ್.ಎಲ್., ಅಜ್ಜಂಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು