ಶುಕ್ರವಾರ, ಆಗಸ್ಟ್ 19, 2022
25 °C
ಈ ಹಕ್ಕಿಯ ದೀರ್ಘಾಯುಷ್ಯ ಮತ್ತು ಸಂತಾನಾಭಿವೃದ್ಧಿ ಸಾಮರ್ಥ್ಯಗಳು ಅಧ್ಯಯನಕಾರರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ

ಸಂಗತ: ವಿವೇಕ ಹಕ್ಕಿಯ ವಿಶೇಷ ಸಂತಾನ

ಶ್ರೀಗುರು Updated:

ಅಕ್ಷರ ಗಾತ್ರ : | |

Prajavani

ಎರ್‍ರಮಟ್ಟಿ ಮಂಗ್ಯಮ್ಮ ಮತ್ತು ದಲ್ಜೀಂದರ್ ಕೌರ್ ಇಬ್ಬರೂ ತಮ್ಮ 70ರ ವಯಸ್ಸಿನಲ್ಲಿ ತಾಯಂದಿರಾದಾಗ ಇಡೀ ಜಗತ್ತೇ ಅಚ್ಚರಿಪಟ್ಟಿತ್ತು. ವೈದ್ಯಲೋಕ ತನ್ನ ಅಪರೂಪದ ಸಾಧನೆಯ ಬಗ್ಗೆ ಪುಟಗಟ್ಟಲೆ ಹೇಳಿಕೆ ನೀಡಿತ್ತು. ಅಂಥ ಇಳಿವಯಸ್ಸಿನಲ್ಲಿ ತಾಯಿಯಾಗುವುದು ಮೂರ್ಖತನದ ಪರಮಾವಧಿ ಎಂದು ಆತಂಕಪಟ್ಟವರೂ ಇದ್ದರು. ಆದರೆ ಇಲ್ಲೊಬ್ಬಳು ತನ್ನ 70ರ ಹರೆಯದಲ್ಲಿ 35ನೇ ಬಾರಿ ತಾಯಿಯಾದದ್ದಕ್ಕೆ ಇಡೀ ಜಗತ್ತೇ ಅವಳನ್ನು ಕೊಂಡಾಡುತ್ತಿದೆ.

ದೇಶ– ವಿದೇಶಗಳ ಜನ ಅವಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಂಟಿಸಿ, ಯೋಗಕ್ಷೇಮ ವಿಚಾರಿಸಿ ಶುಭಾಶಯ ಹೇಳುತ್ತಿದ್ದಾರೆ. ಅಂದ ಹಾಗೆ ಹವಾಯ್ ದ್ವೀಪ ನಿವಾಸಿಯಾದ ಅವಳ ಹೆಸರು ‘ವಿಸ್ಡಂ ಲಯಸನ್ ಅಲ್‍ಬಟ್ರಾಸ್’.

ಫೊಬಾಸ್ಟ್ರಿಯ ಇಮ್ಮುಟಾಬಿಲಿಸ್ ಎಂಬ ವೈಜ್ಞಾನಿಕ ಹೆಸರಿನ, 80 ಸೆಂಟಿಮೀಟರ್ ಉದ್ದ, 2.5 ಕೆ.ಜಿ. ತೂಕ, ಬಿಳಿ ದೇಹ, ಕಂದುಬಣ್ಣದ ವಿಶಾಲ ರೆಕ್ಕೆಯ ಈ ಸಮುದ್ರ ಪಕ್ಷಿ, ಹವಾಯ್ ದ್ವೀಪದ ಲಯಸನ್ ಭಾಗದಲ್ಲಿ ಹೆಚ್ಚಾಗಿರುವುದರಿಂದ ಇದನ್ನು ಲಯಸನ್ ಅಲ್‌ಬಟ್ರಾಸ್ ಎಂದು ಕರೆಯುತ್ತಾರೆ.

ಇದು ಪೆಸಿಫಿಕ್ ಸಾಗರದ ಉತ್ತರದವರೆಗೂ ತನ್ನ ಆವಾಸ ಹೊಂದಿದೆ. ಇದುವರೆಗಿನ ತನ್ನ ಜೀವಿತಾವಧಿ
ಯಲ್ಲಿ 35ಕ್ಕೂ ಹೆಚ್ಚು ಸಲ ಮೊಟ್ಟೆ ಇಟ್ಟಿರುವ ವಿಸ್ಡಂ, ಜಗತ್ತಿನಲ್ಲಿ ಜೀವಂತವಿರುವ ವನ್ಯ ಪಕ್ಷಿಗಳಲ್ಲೇ ಅತ್ಯಂತ ಹಿರಿದು ಎಂಬ ಖ್ಯಾತಿ ಪಡೆದಿದೆ. ಹಕ್ಕಿಯನ್ನು ಹವಾಯ್ ಬುಡಕಟ್ಟು ಜನರ ಆರಾಧ್ಯದೈವ ‘ಲೋನೊ’ದ ಜೀವಂತ ರೂಪ ಎಂದೇ ನಂಬಲಾಗಿದೆ.

ಇಟ್ಟ ಮೊಟ್ಟೆಯನ್ನು ಫೆಬ್ರುವರಿ 1ರಂದು ಮರಿ ಮಾಡಿರುವ ಅಲ್‍ಬಟ್ರಾಸ್ ಹಕ್ಕಿ ಸದ್ಯಕ್ಕೆ ಪೆಸಿಫಿಕ್ ತೀರದ ಉತ್ತರದಲ್ಲಿರುವ ಮಿಡ್‍ವೇ ಅಟಾಲ್ ವನ್ಯಪಕ್ಷಿ ಪುನರ್ವಸತಿ ಕೇಂದ್ರದಲ್ಲಿದ್ದು ಎಲ್ಲರ ಗಮನ ಸೆಳೆದಿದೆ. ಕಳೆದ ಹತ್ತು ವರ್ಷಗಳಿಂದ ಜೊತೆಗಿರುವ ತನ್ನ ಸಂಗಾತಿ ಅಕೆಯಕಮಾಯ್ ಜೊತೆಗೂಡಿ ಮೊಟ್ಟೆಗೆ ಕಾವು ಕೊಟ್ಟು ಮರಿವೂಡಿರುವ ವಿಸ್ಡಂ, ತನ್ನ ಓರಗೆಯ ಅನೇಕ ಪಕ್ಷಿಗಳ ಹೊಟ್ಟೆ ಉರಿಸುತ್ತಿದೆ. ವಿಶೇಷವೆಂದರೆ, 1956ರಲ್ಲಿ ಇದನ್ನು ಗುರುತಿಸಿ ಕೊರಳಿಗೆ ಪಟ್ಟಿ ಕಟ್ಟಿದ್ದ ಜೀವವಿಜ್ಞಾನಿ ಚನ್‍ಡ್ಲರ್ ರಾಬಿನ್ಸ್ ಈಗ ಬದುಕಿಲ್ಲ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಒಂದು ಮೊಟ್ಟೆ ಇಟ್ಟು, ಗೂಡು ಕಟ್ಟಿ ಸಂತಾನಾಭಿವೃದ್ಧಿ ಕೈಗೊಳ್ಳುವ ಅಲ್‍ಬಟ್ರಾಸ್‍ಗಳು 65 ದಿನಗಳ ಕಾಲ ಕಾವು ಕೊಟ್ಟು ಮರಿ ಮಾಡುತ್ತವೆ. ಸದಾ ಗುಂಪು ಗುಂಪಾಗಿ ವಾಸಿಸುವ ಇವುಗಳು ತಾವಿರುವ ಜಾಗದಲ್ಲೇ ವಿವಿಧ ಆಕಾರ, ಮಾದರಿಯ ಗೂಡುಗಳನ್ನು ನಿರ್ಮಿಸುತ್ತವೆ. ಸಮರ್ಥವಾಗಿ ಹಾರುವುದನ್ನು ಕಲಿತಾದ ಮೇಲೆ ಕಾಲೊನಿಗೆ ಬರುವ ಹಕ್ಕಿಗಳು ಎಂಟು-ಒಂಬತ್ತು ವರ್ಷಗಳವರೆಗೆ ಸಂತಾನಾಭಿವೃದ್ಧಿ ಕೆಲಸದಲ್ಲಿ ತೊಡಗುವುದಿಲ್ಲ. ಆದರೆ ಅಷ್ಟೂ ವರ್ಷಗಳ ಕಾಲ ಸಂಗಾತಿಯೊಂದಿಗೆ ಡೇಟಿಂಗ್ ಮಾಡುತ್ತಿರುತ್ತವೆ!

ಅಲ್‍ಬಟ್ರಾಸ್‍ಗಳ ಸುರಕ್ಷಿತ ಸಂತಾನಾಭಿವೃದ್ಧಿ ತಾಣವೆನಿಸಿರುವ ಮಿಡ್‍ವೇ ಅಟಾಲ್ ನ್ಯಾಷನಲ್ ವೈಲ್ಡ್‌ಲೈಫ್ ರೆಫ್ಯೂಜ್‍ಗೆ ಬಂದ ವಿಸ್ಡಂ, ನವೆಂಬರ್ 29ರಂದು ಮೊಟ್ಟೆ ಇಟ್ಟಿದ್ದನ್ನು ಉಸ್ತುವಾರಿ ತಜ್ಞರು ಗಮನಿಸಿದ್ದರು. ಅಲ್ಲಿನ ಸಂಸ್ಕೃತಿಯ ಪ್ರಕಾರ, ಈ ಹಕ್ಕಿಗಳು ಹವಾಯಿಯ ಶ್ರಾವಣಮಾಸ ಎಂದೇ ನಂಬಲಾಗಿರುವ ‘ಮಹಾಹಿಕಿ’ ವೇಳೆಗೆ ಸಂತಾನಾಭಿವೃದ್ಧಿಗೆ ಹಕ್ಕಿ ತಂಗುದಾಣಕ್ಕೆ ಬರುತ್ತವೆ. ಈಗ
ಇಳಿವಯಸ್ಸಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಸುದ್ದಿಯಾಗಿರುವ ವಿಸ್ಡಂನ ಕಾಲಿಗೆ Z 333 ಎಂಬ ಸಂಕೇತದ ಕೆಂಪು ಪಟ್ಟಿಯನ್ನು ಕಟ್ಟಲಾಗಿದೆ. ಅಮೆರಿಕದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞ ಜಾನ್ ಪ್ಲಿಸ್ನರ್ ‘ವಿಸ್ಡಂ ಅನ್ನು ಕಳೆದ 30 ವರ್ಷಗಳಿಂದ ಅಭ್ಯಸಿಸುತ್ತಿದ್ದು ಅದು ಪ್ರತೀ ವರ್ಷ ಮಿಡ್‍ವೇ ಅಟಾಲ್‍ಗೆ ಬರುವುದನ್ನೇ ಕಾಯುತ್ತಿರುತ್ತೇನೆ. ಅದು ಬಂದ ದಿನ ನನ್ನ ಜೀವನದ ಅತ್ಯಂತ ಸಂತಸದ ದಿನವಾಗಿರುತ್ತದೆ’ ಎನ್ನುತ್ತಾರೆ. ವಿಸ್ಡಂ, ಕಳೆದ 15 ವರ್ಷಗಳಿಂದ ಮಿಡ್‍ವೇಗೆ ಬಂದು ಒಂದೊಂದು ಮರಿಗೆ ಜನ್ಮ ನೀಡಿ ಪಕ್ಷಿ ತಜ್ಞರ ಮೆಚ್ಚುಗೆ ಮತ್ತು ಅಚ್ಚರಿಗಳೆರಡಕ್ಕೂ ಕಾರಣವಾಗಿದೆ.

ಕಳೆದ 85 ವರ್ಷಗಳಿಂದ ಈ ಹಕ್ಕಿಗಳ ಅಧ್ಯಯನ ಕೈಗೊಳ್ಳಲಾಗಿದೆ. ‘ವಿಸ್ಡಂನ ದೀರ್ಘಾಯುಷ್ಯ ಮತ್ತು ಸಂತಾನಾಭಿವೃದ್ಧಿ ಸಾಮರ್ಥ್ಯಗಳು ಅಧ್ಯಯನಕಾರರಿಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿರುವುದರ ಜೊತೆಗೆ ಅವುಗಳನ್ನು ಸಮರ್ಥವಾಗಿ ಹೇಗೆ ರಕ್ಷಿಸಬಹುದೆಂಬ ಸುಳಿವನ್ನೂ ನೀಡುತ್ತಿವೆ ಎಂದಿದ್ದಾರೆ ಅಮೆರಿಕನ್ ಬರ್ಡ್ ಕನ್ಸರ್ವೇಷನ್‍ನ ತಜ್ಞ ಫ್ಲೆಂಟ್. ಕಳೆದ ಎಪ್ಪತ್ತು ವರ್ಷಗಳ ಜೀವಿತಾವಧಿಯಲ್ಲಿ ತನ್ನ ಓರಗೆಯ ಹಕ್ಕಿಗಳಿಗಿಂತ ಎರಡು ಪಟ್ಟು ಹೆಚ್ಚು ಜೀವನ ನಡೆಸಿ 45 ಲಕ್ಷ ಕಿಲೊ ಮೀಟರ್ ಹಾರಾಟ ನಡೆಸಿರುವ ವಿಸ್ಡಂ, ಭೂಮಿಯನ್ನು 120 ಸಾರಿ ಪ್ರದಕ್ಷಿಣೆ ಹಾಕುವಷ್ಟು ದೂರ ಹಾರಾಟ ನಡೆಸಿದ ದಾಖಲೆ ಮಾಡಿದೆ. 2011ರ ತೋಹೋಕು ಸುನಾಮಿ ಮತ್ತು ಭೂಕಂಪಗಳೆರಡನ್ನೂ ಮೆಟ್ಟಿನಿಂತು ಸದೃಢ ಜೀವನ ಸಾಗಿಸುತ್ತಿರುವ ಈ ಹಕ್ಕಿಯ ಕಾಲಿನ ಸಂಕೇತ ಪಟ್ಟಿಯನ್ನು ಈವರೆಗೆ ಆರು ಸಲ ಬದಲಾಯಿಸಲಾಗಿದೆ. ವಾಯುಗುಣ ಬದಲಾವಣೆಯಿಂದ ಅಪಾಯದಲ್ಲಿರುವ ಹಕ್ಕಿಯ ಸಂತತಿಯನ್ನು ಉಳಿಸುವ ವಿಶ್ವಮಟ್ಟದ ಅನೇಕ ಪ್ರಯತ್ನಗಳು ನಡೆಯುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.