ಸೋಮವಾರ, ಮಾರ್ಚ್ 8, 2021
26 °C
ಪರಿಷ್ಕೃತ ನಿಯಮಗಳು ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಹಿತಕ್ಕೆ ಪೂರಕವಾಗಿವೆಯೇ ಅಥವಾ ಅವರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿವೆಯೇ ಎಂದು ಯೋಚಿಸಬೇಕಿದೆ

ಶಿಕ್ಷಕರ ನೇಮಕಾತಿ: ಮಾನದಂಡದ ತೊಡಕು

ನಾಗರಾಜ ಮಗ್ಗದ Updated:

ಅಕ್ಷರ ಗಾತ್ರ : | |

Prajavani

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷಾ ವಿಧಾನದ ನೇರ ನೇಮಕಾತಿ ಮೂಲಕ 2015ರಿಂದ ಭರ್ತಿ ಮಾಡುತ್ತಿದೆ. ಈ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕ ಎಂದಿದ್ದ ಹುದ್ದೆಯನ್ನು ಪದವೀಧರ ಶಿಕ್ಷಕ ಎಂದು ಬದಲಾಯಿಸಲಾಗಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, ತಮ್ಮ ವಾಸಸ್ಥಳದಿಂದ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗೆ ಒಂದು ಕಿ.ಮೀ., ಹಿರಿಯ ಪ್ರಾಥಮಿಕ ವಿದ್ಯಾರ್ಥಿಗೆ 3 ಕಿ.ಮೀ. ಹಾಗೂ ಪ್ರೌಢ ಶಿಕ್ಷಣ ವಿದ್ಯಾರ್ಥಿಗೆ 5 ಕಿ.ಮೀ. ವ್ಯಾಪ್ತಿಯೊಳಗೆ ಶಿಕ್ಷಣ ದೊರೆಯಬೇಕು. ಅದರ ಅನ್ವಯ, ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲಾಯಿತು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6-8ನೇ ತರಗತಿ) ಹುದ್ದೆ ಸೃಜಿಸಲಾಯಿತು.

ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ) ತೇರ್ಗಡೆಯಾಗಬೇಕಾದುದು ಕಡ್ಡಾಯ. 2015ರ ನೇಮಕಾತಿ ಅಧಿಸೂಚನೆಯಲ್ಲಿ ಈ ಹೊಸ ವಿಧಾನದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಟಿ.ಇ.ಟಿ.ಯಲ್ಲಿ ಉತ್ತೀರ್ಣರಾದ ಎಲ್ಲ ಅಭ್ಯರ್ಥಿಗಳಿಗೂ ಅವಕಾಶ ದೊರೆಯಿತು. ಅಲ್ಲಿಂದ ಇಲಾಖೆಯು ಪ್ರತೀ ವರ್ಷ ಟಿ.ಇ.ಟಿ.ಗೆ ಅಧಿಸೂಚನೆ ಹೊರಡಿಸಲು ಮುಂದಾಯಿತು. ಅದರಂತೆ ಪ್ರಸ್ತುತ ಸುಮಾರು 30ರಿಂದ 40 ಸಾವಿರ ಅಭ್ಯರ್ಥಿಗಳು ಟಿ.ಇ.ಟಿ ಉತ್ತೀರ್ಣರಾಗಿರಬಹುದು. ಆದರೆ 2017ರಲ್ಲಿ ಇಲಾಖೆಯು ಕೆಲವು ಬದಲಾವಣೆಗಳೊಂದಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತು. ಇಲಾಖೆಯ ಈ ಅವೈಜ್ಞಾನಿಕ ನಿಯಮಗಳಿಂದಾಗಿ, ಹಲವು ಅಭ್ಯರ್ಥಿಗಳು ಟಿ.ಇ.ಟಿ.ಯಲ್ಲಿ ಉತ್ತೀರ್ಣರಾಗಿದ್ದರೂ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದರು.

ಗಣಿತ, ವಿಜ್ಞಾನ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ಹಂತದಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಅಲ್ಲದೆ ಶೇ 50ರಷ್ಟು ಅಂಕ ಪಡೆದಿರಬೇಕು. ಪದವಿಯಲ್ಲಿ ರಸಾಯನಶಾಸ್ತ್ರ,
ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅನರ್ಹರು.

ಸಮಾಜ ವಿಜ್ಞಾನ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ಹಂತದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳ ಶಾಸ್ತ್ರ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳಲ್ಲಿ ಅಭ್ಯಾಸ ಮಾಡಿ, ಶೇ 50ರಷ್ಟು ಅಂಕ ಪಡೆದಿರಬೇಕು. ಈ ಸಂಯೋಜನೆಯಲ್ಲಿ ಅಧ್ಯಯನ ಮಾಡದೇ ಇರುವವರು, ಶೇ 50ಕ್ಕಿಂತ ಕಡಿಮೆ ಅಂಕ ಪಡೆದಿರುವವರು ಅರ್ಜಿ ಸಲ್ಲಿಸಲು ಅನರ್ಹರು.

ಇಂಗ್ಲಿಷ್ ಭಾಷಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಪದವಿ ಹಂತದಲ್ಲಿ ಇಂಗ್ಲಿಷ್‌ ಅನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿ ಶೇ 50ರಷ್ಟು ಅಂಕ ಪಡೆದಿರಬೇಕು. ಡಿ.ಇಡಿ.ಯಲ್ಲಿ ಇಂಗ್ಲಿಷ್ ಅಥವಾ ಬಿ.ಇಡಿ.ಯಲ್ಲಿ ಇಂಗ್ಲಿಷ್ ಅನ್ನು ಐಚ್ಛಿಕವಾಗಿ ಅಧ್ಯಯನ ಮಾಡಿರಬೇಕು. ಡಿ.ಇಡಿ.ಯಲ್ಲಿ ಸಮಾಜ ಮತ್ತು ಗಣಿತ ಮೆಥಡಾಲಜಿ ಅಧ್ಯಯನ ಮಾಡಿ, ಪದವಿಯಲ್ಲಿ ಇಂಗ್ಲಿಷ್ ಆಯ್ಕೆ ಮಾಡಿಕೊಂಡಿರುವ ಹಲವಾರು ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗೆ ಅನರ್ಹರು.

ಯು.ಜಿ.ಸಿ ಮಾನ್ಯತೆ ಇರುವ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‌ಗಳ ಸಂಯೋಜನೆಯ ದೋಷವೋ, ಆ ವ್ಯಾಪ್ತಿಯನ್ನು ವಿವೇಚಿಸದೇ ನಿಯಮಗಳನ್ನು ರೂಪಿಸಿದ ಶಿಕ್ಷಣ ಇಲಾಖೆಯ ಕ್ರಮವೋ ಒಟ್ಟಿನಲ್ಲಿ ಇದಕ್ಕೆ ಬಲಿಪಶುಗಳಾಗಿದ್ದು ಮಾತ್ರ ಅಭ್ಯರ್ಥಿಗಳು. ಸಮಸ್ಯೆಗಳು ಇಲ್ಲಿಗೇ ಮುಗಿಯುವುದಿಲ್ಲ. ಎಲ್ಲಾ ಅರ್ಹತೆಯಿದ್ದೂ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭವಿಲ್ಲ. ಸಾಮಾನ್ಯ ಪ್ರವೇಶ ಪರೀಕ್ಷೆಯ ಪತ್ರಿಕೆ- 3ರಲ್ಲಿ ಕಡ್ಡಾಯವಾಗಿ ಶೇ 60ರಷ್ಟು ಅಂಕಗಳು ಅರ್ಹತಾ ಮಾನದಂಡವಾಗಿವೆ. ಬಹು ಆಯ್ಕೆ ಪ್ರಶ್ನೆಗಳಿಗಷ್ಟೇ ಸೀಮಿತವಾಗಿದ್ದ ಪರೀಕ್ಷಾ ವಿಧಾನವು ವಿವರಣಾತ್ಮಕ ವಿಧಾನಕ್ಕೂ ವಿಸ್ತರಣೆಯಾಗಿದೆ. ಅದು ಅನಗತ್ಯ. ಏಕೆಂದರೆ, ಡಿ.ಇಡಿ ಮತ್ತು ಬಿ.ಇಡಿ.ಯ ವಿವರಣಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಬರಹ ಸಾಮರ್ಥ್ಯವು ಅದಾಗಲೇ ದೃಢಪಟ್ಟಿರುತ್ತದೆ.

ಈ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಪ್ರತಿಭಾನ್ವಿತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದೂ ಆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಏಕೆ ಇಳಿಮುಖವಾಗುತ್ತಿದೆ? ಸರ್ಕಾರಿ ಶಾಲೆಗಳ ಬಲಪಡಿಸುವಿಕೆಯಲ್ಲಿ ನಿರ್ಣಾಯಕ ಅಂಶಗಳು ಯಾವುವು? ಶಿಕ್ಷಕರ ನೇಮಕಾತಿ
ಯಲ್ಲಿ ಅಳವಡಿಸಿಕೊಂಡಿರುವ ಪರಿಷ್ಕೃತ ನಿಯಮಗಳು ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಹಿತಕ್ಕೆ ಪೂರಕವಾಗಿವೆಯೇ ಅಥವಾ ಅವರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿವೆಯೇ ಎಂದು ಯೋಚಿಸಬೇಕಿದೆ.

ಡಿ.ಇಡಿ.ಯನ್ನಷ್ಟೇ ಪೂರೈಸಿರುವ ಹಲವು ಅಭ್ಯರ್ಥಿಗಳು ಪ್ರಾಥಮಿಕ ಶಾಲಾ ಶಿಕ್ಷಕರಾಗುವ ಹಂಬಲದಲ್ಲಿದ್ದಾರೆ. ಇವರು 1ರಿಂದ 5ನೇ ತರಗತಿವರೆಗೆ ಬೋಧಿಸಲು ಮಾತ್ರ ಅರ್ಹರು. ಪ್ರಸ್ತುತ ಆ ಹುದ್ದೆಗಳು ಖಾಲಿಯಿಲ್ಲ ಎಂದು ಹೇಳುತ್ತಿದೆ ಇಲಾಖೆ. ಇಂತಹ ಅಭ್ಯರ್ಥಿಗಳ ನೇಮಕಾತಿಗೆ ಅವಕಾಶ ಕಲ್ಪಿಸುವ ನಿಯಮಗಳತ್ತ ಗಮನಹರಿಸಬೇಕಿದೆ. ಜೊತೆಗೆ, 1ರಿಂದ 5ನೇ ತರಗತಿವರೆಗೆ ಬೋಧಿಸುತ್ತಿದ್ದರೂ ನಂತರದ ದಿನಗಳಲ್ಲಿ ಪದವಿ ಪೂರೈಸಿರುವ ಶಿಕ್ಷಕರಿದ್ದಾರೆ. ಇಂತಹವರಿಗೆ ವಿದ್ಯಾರ್ಹತೆ ಆಧಾರದಲ್ಲಿ ಪದವೀಧರ ಶಿಕ್ಷಕ (6-8ನೇ ತರಗತಿ) ಹುದ್ದೆಗೆ ಬಡ್ತಿ ನೀಡುವತ್ತ ಇಲಾಖೆ ಚಿಂತಿಸಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು