ಗುರುವಾರ , ಜುಲೈ 7, 2022
23 °C
ಮಕ್ಕಳು ಗಳಿಸುವ ಅಂಕಗಳಿಗಿಂತ ನೈಜ ಕಲಿಕೆಯ ಬಲವೇ ಪರಿಣಾಮಕಾರಿ ಎಂಬುದನ್ನು ಮನಗಂಡರೆ, ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ

ಸಂಗತ: ಪರೀಕ್ಷಾ ಅಕ್ರಮ: ಶೈಕ್ಷಣಿಕ ಅನೈತಿಕತೆ

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಯೋಧರ ನೇಮಕಾತಿಗಾಗಿ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದ ಸೇನಾಪಡೆಯು ರದ್ದುಗೊಳಿಸಿದ ವರದಿಯು (ಪ್ರ.ವಾ., ಮಾರ್ಚ್‌ 1) ಪರೀಕ್ಷಾ ಅಕ್ರಮಗಳ ಸಾಲಿಗೆ ಆದ ಇತ್ತೀಚಿನ ಹೊಸ ಸೇರ್ಪಡೆ ಎನ್ನಬಹುದು. ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಬೇಕಿದ್ದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೆಲವು ದಿನಗಳ ಹಿಂದೆ ಸೋರಿಕೆಯಾಗಿತ್ತು. 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದೇಶದ ವಿವಿಧ ಬೋರ್ಡ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಹಾಗೂ ಹಲವಾರು ನೇಮಕಾತಿಗಳಿಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಬಗ್ಗೆ ಆಗಾಗ್ಗೆ ಮಾಧ್ಯಮ ಗಳಲ್ಲಿ ವರದಿಗಳು ಬರುತ್ತಲೇ ಇರುತ್ತವೆ.

ಒಂದೆಡೆ ಪರೀಕ್ಷೆಗಳನ್ನು ಬಿಗಿಯಾಗಿ ನಡೆಸಲು ಕಠಿಣ ನಿಯಮ ಹಾಗೂ ವಿಧಾನಗಳನ್ನು ಜಾರಿಗೆ ತರಲಾಗುತ್ತಿದ್ದರೆ, ಇನ್ನೊಂದೆಡೆ, ಅವುಗಳನ್ನು ಭೇದಿಸಿ ಅಕ್ರಮಗಳನ್ನು ನಡೆಸಲು ವಂಚಕರ ತಂಡ ಕಾರ್ಯ
ತತ್ಪರವಾಗುತ್ತದೆ. ಪ್ರಶ್ನೆಪತ್ರಿಕೆಗಳ ತಯಾರಿ, ಮುದ್ರಣ, ಸಾಗಣೆಯ ಹಂತ, ಪರೀಕ್ಷೆಗಳನ್ನು ನಡೆಸುವಾಗ ನಕಲು ಮಾಡುವುದು, ನಕಲು ಮಾಡಲು ಸಹಕರಿಸುವುದು, ಉತ್ತರಪತ್ರಿಕೆಗಳ ಮೌಲ್ಯಮಾಪನ, ಅಂಕಗಳನ್ನು ಗಣಕೀಕರಣ ಮಾಡುವ ಹಂತದಲ್ಲಿ ಪರೀಕ್ಷಾ ಅಕ್ರಮಗಳು ನಡೆಯುವ ಸಾಧ್ಯತೆಗಳಿರುತ್ತವೆ.

ಪರೀಕ್ಷಾ ಅಕ್ರಮವು ಜಾಗತಿಕ ಪಿಡುಗಾಗಿದೆ. ಶಿಸ್ತು, ಪ್ರಾಮಾಣಿಕತೆ, ಸಚ್ಚಾರಿತ್ರ್ಯದ ಮೌಲ್ಯಗಳನ್ನು ಬೆಳೆಸಲು ಬದ್ಧವಾದ ಶಿಕ್ಷಣ ಕ್ಷೇತ್ರದಲ್ಲಿ ನಡೆಯುವ ಪರೀಕ್ಷಾ ಅಕ್ರಮವನ್ನು ಶೈಕ್ಷಣಿಕ ಅನೈತಿಕತೆ ಎನ್ನಬಹುದು. ದೇಶದ ಕೆಲವು ರಾಜ್ಯಗಳಲ್ಲಿ ಪರೀಕ್ಷಾ ಅಕ್ರಮಗಳು ಉದ್ಯಮದ ಸ್ವರೂಪ ತಳೆದ ವರದಿಗಳಿವೆ. ಕೋಚಿಂಗ್ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು, ಪರೀಕ್ಷೆ ನಡೆಸುವ ಸಂಸ್ಥೆ ಹಾಗೂ ಕೆಲವು ವ್ಯಕ್ತಿಗಳ ದುಷ್ಟಕೂಟದ ಕಾರಣ ಪರೀಕ್ಷಾ ಅಕ್ರಮಗಳು ನಡೆಯುತ್ತವೆ. ಶೇ 1ಕ್ಕಿಂತ ಕಡಿಮೆ ಪ್ರಮಾಣದ ಜನರಿಂದ ನಡೆಯುವ ಇಂತಹ ಪರೀಕ್ಷಾ ಅಕ್ರಮಗಳಿಂದ ಶೇ 99ರಷ್ಟು ಜನರಿಗೆ
ತೊಂದರೆಯಾಗುತ್ತದೆ.

ರಾಜ್ಯದಲ್ಲಿ ಕೆಲವು ವರ್ಷಗಳ ಕೆಳಗೆ ದ್ವಿತೀಯ ಪಿಯು ಪ್ರಶ್ನೆಪತ್ರಿಕೆಗಳ ಸೋರಿಕೆ ಸವಾಲಾಗಿ ಪರಿಣಮಿಸಿತ್ತು. ಆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಲಾಯಿತು. ಪ್ರಶ್ನೆಪತ್ರಿಕೆಗಳ ಸಾಗಣೆಯ ವಾಹನವನ್ನು ತಂತ್ರಜ್ಞಾನದ ಮೂಲಕ ಟ್ರ್ಯಾಕಿಂಗ್ ಮಾಡಲಾಯಿತು. ಜಿಲ್ಲಾ ಹಂತದ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ದಾಸ್ತಾನು ಮಾಡುವುದು, ಪ್ರಶ್ನೆಪತ್ರಿಕೆ ದಾಸ್ತಾನು ಮಾಡಲಾದ ಖಜಾನೆಯ ಕೊಠಡಿಗೆ ಸಿ.ಸಿ. ಟಿ.ವಿ. ಕ್ಯಾಮೆರಾ ಮೂಲಕ ಸದಾಕಾಲ ಕಣ್ಗಾವಲು ಹಾಕುವುದು, ಎಲ್ಲ ಖಜಾನೆಗಳ ಸಿ.ಸಿ. ಟಿ.ವಿ. ಕ್ಯಾಮೆರಾ ದೃಶ್ಯಗಳನ್ನು ಕೇಂದ್ರ ಕಚೇರಿಯಲ್ಲಿ ಗಮನಿಸಿ ಹದ್ದಿನ ಕಣ್ಣಿಡುವುದು ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಅಂದಿನಿಂದ ಜಾರಿಯಲ್ಲಿರುವ ಬಿಗಿ ಕ್ರಮಗಳು ಪರೀಕ್ಷಾ ಅಕ್ರಮಗಳಿಗೆ ತಡೆಯೊಡ್ಡಿವೆ ಎಂದೇ ಹೇಳಬಹುದು.

ಪರೀಕ್ಷಾ ಅಕ್ರಮಗಳನ್ನು ಬಿಗಿಯಾಗಿ ನಿಯಂತ್ರಿಸಿದ ಸಂದರ್ಭಗಳಲ್ಲಿ ಪರೀಕ್ಷಾ ಫಲಿತಾಂಶದಲ್ಲಿ ಕುಸಿತವಾಗುವುದನ್ನು ಗಮನಿಸಬಹುದಾಗಿದೆ. ಕೆಲವೊಮ್ಮೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರೀಕ್ಷೆಗಳಲ್ಲಿ ನಕಲನ್ನು ತಡೆಗಟ್ಟಲು ತೆಗೆದುಕೊಳ್ಳುವ ಕಠಿಣ ಕ್ರಮಗಳ ಕಾರಣ, ಆ ಜಿಲ್ಲೆಗಳ ಪರೀಕ್ಷಾ ಫಲಿತಾಂಶವು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆಯಾದ ಉದಾಹರಣೆಗಳಿವೆ. ಕೆಲವೊಮ್ಮೆ ಪರೀಕ್ಷಾ ಅಕ್ರಮಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡ ರಾಜ್ಯ ಸರ್ಕಾರಗಳ ನೇತೃತ್ವ ವಹಿಸಿದ್ದ ಪಕ್ಷಗಳು, ನಂತರ ಬಂದ ಚುನಾವಣೆಯಲ್ಲಿ ಸೋತ ಉದಾಹರಣೆಗಳೂ ಇವೆ. ಈ ಕಾರಣಗಳಿಂದ ಪರೀಕ್ಷಾ ಅಕ್ರಮಗಳ ಕುರಿತ ಮಾಹಿತಿ ಇದ್ದಾಗ್ಯೂ ಕೆಲವು ರಾಜ್ಯಗಳಲ್ಲಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನಸ್ಸು ಮಾಡುವುದಿಲ್ಲ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನ್ಯಾಯ, ಅಕ್ರಮ, ವಂಚನೆಗಳು ನಡೆಯುವ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಪರೀಕ್ಷಾ ಅಕ್ರಮಗಳು ನಡೆಯುತ್ತವೆ. ಈ ಪರೀಕ್ಷಾ ಅಕ್ರಮಗಳು ಸಮಾಜದ ಸ್ವಾಸ್ಥ್ಯದ ಪ್ರತಿಬಿಂಬ ಎನ್ನಬಹುದು. ಪರೀಕ್ಷಾ ಅಕ್ರಮಗಳಿಂದ ಶಿಕ್ಷಣ ಕ್ಷೇತ್ರದ ಗುಣಮಟ್ಟವು ತೀವ್ರ ಕುಸಿತಕ್ಕೊಳ
ಗಾಗುವುದರ ಜೊತೆಗೆ ಇಡೀ ಸಾಮಾಜಿಕ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗುತ್ತವೆ. ಬಳಸುಹಾದಿ
ಯಲ್ಲಿ ಪರೀಕ್ಷೆಗಳನ್ನು ಬರೆದು, ಉತ್ತೀರ್ಣರಾಗಿ ಕೆಲಸಕ್ಕೆ ಸೇರಿದ ಅನೇಕರು ಪರೀಕ್ಷಾ ಅಕ್ರಮಗಳನ್ನು ಎಸಗುವ ದಾರಿ ಹಿಡಿಯುತ್ತಾರೆ. ಇನ್ನು ಕೆಲವರು ಹಣದ ಆಸೆ ಅಥವಾ ಬಾಹ್ಯ ಒತ್ತಡಗಳಿಗೆ ಬಲಿಯಾಗಿ ಪರೀಕ್ಷಾ ಅಕ್ರಮಗಳನ್ನು ನಡೆಸುತ್ತಾರೆ.

ಫಲಿತಾಂಶದ ಪ್ರಮಾಣ ಹೆಚ್ಚಿಸುವ ದಿಸೆಯಲ್ಲಿ ಹಾಕುವ ಒತ್ತಡಗಳು ಪರೀಕ್ಷಾ ಅಕ್ರಮಗಳಿಗೆ ಕಾರಣವಾಗುತ್ತವೆ. ಪರೀಕ್ಷಾ ಅಕ್ರಮಗಳಿಂದ ಉಬ್ಬಿದ ಹುಸಿ ಫಲಿತಾಂಶಕ್ಕಿಂತ, ಕುಸಿತವಾದರೂ ನೈಜ ಫಲಿತಾಂಶವೇ ಶ್ರೇಷ್ಠ ಎಂಬುದು ಮುಖ್ಯವಾಗಬೇಕು.

ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯ ವಾಸ್ತವಿಕ ಸ್ಥಿತಿಗತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು, ಅವುಗಳನ್ನು ಉತ್ತಮಪಡಿಸುವ ದಿಸೆಯಲ್ಲಿ ಬೋಧನಾ ವಿಧಾನಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಇಚ್ಛಾಶಕ್ತಿ ತೋರಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು ಪ್ರಮುಖವಾದುದು. ಪೋಷಕರು ಸಹ ತಮ್ಮ ಮಕ್ಕಳು ಗಳಿಸುವ ಅಂಕಗಳಿಗಿಂತ ನೈಜ ಕಲಿಕೆಯ ಬಲವೇ ಪರಿಣಾಮಕಾರಿ ಎಂಬುದನ್ನು ಮನಗಾಣುವಂತೆ ಆಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು