ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅರ್ಥನೀತಿ– ಬಿಕ್ಕಟ್ಟುಗಳ ಸುಗ್ಗಿ ಕಾಲ!

ದಿನನಿತ್ಯದ ವಸ್ತುಗಳ ಬೇಕಾಬಿಟ್ಟಿ ಬೆಲೆ ಏರಿಕೆ ವಿಷಯದಲ್ಲಿ ವ್ಯಾಪಾರೀ ವರ್ಗವು ಉದಾತ್ತ ನ್ಯಾಯಯುತ ಲಾಭ ನೀತಿ ಅಳವಡಿಸಿಕೊಳ್ಳುವ ಹೃದಯವಂತಿಕೆ ತೋರಬೇಕಿದೆ
Last Updated 16 ಜೂನ್ 2021, 22:36 IST
ಅಕ್ಷರ ಗಾತ್ರ

ಕೊರೊನಾ ನಿಮಿತ್ತ ಜಗತ್ತು ಎದುರಿಸುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ಆರ್ಥಿಕವಾಗಿ ಕುಸಿದು ಹೋಗುತ್ತಿರುವ ಸಮಾಜದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗಗಳು ಇನ್ನಿಲ್ಲದಂತೆ ನೆಲಕಚ್ಚುತ್ತಿದ್ದರೆ, ದಿನನಿತ್ಯದ ವಸ್ತುಗಳ ಬೆಲೆಗಳು ಮಾರುಕಟ್ಟೆ ನೀತಿಯನ್ನು ಮೀರಿ ಗಗನಮುಖಿಯಾಗುತ್ತಿವೆ. ಬೆಲೆ ಏರಿಕೆಯ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡುವ ಸಾಮಾಜಿಕ ವಾತಾವರಣ ಅಕ್ಷರಶಃ ಇಲ್ಲವಾಗಿದೆ. ಇಂಥದ್ದೊಂದು ಅಸಹಾಯಕತೆ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಸರ್ವವ್ಯಾಪಿಯಾಗಿದೆ ಎನಿಸುತ್ತಿದೆ.

ಅಷ್ಟಕ್ಕೂ ಇಂಥದ್ದೊಂದು ಸ್ಥಿತಿಗೆ ಕೊರೊನಾ ಸಾಂಕ್ರಾಮಿಕವೊಂದೇ ಕಾರಣವಲ್ಲ. ದೂರದೃಷ್ಟಿ ಮತ್ತು ವಿವೇಚನಾರಹಿತ ಆಳುವ ಮನಸ್ಸಿನ ಜಡತೆಯ ಜೊತೆಗೆ ವ್ಯಾಪಾರೀ ವರ್ಗದ ಔದಾರ್ಯಹೀನ ಮನೋಧರ್ಮವೂ ಕಾರಣ. ಕೊರೊನಾದಿಂದ ಲಾಕ್‌ಡೌನ್‌ನಂತಹ ಕ್ರಮಗಳು ಅನಿವಾರ್ಯ
ವಾದಾಗ ದೊಡ್ಡ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ
ವ್ಯಾಪಾರಿಗಳವರೆಗೂ ತಮ್ಮ ಉತ್ಪನ್ನಗಳ ಬೆಲೆ ನಿಗದಿಗೆ ನಿಯಂತ್ರಣವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಹೀಗೇಕೆ ಬೆಲೆ ಹೆಚ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರೆ, ಮುಖ್ಯಮಂತ್ರಿಯನ್ನೋ ಪ್ರಧಾನಿಯನ್ನೋ ಕೇಳಿ ಅನ್ನುವ ನಿರ್ಭೀತ ಉತ್ತರ ಬರುತ್ತದೆ. ಸ್ವಲ್ಪ ಏರು ದನಿಯಲ್ಲಿ ಕೇಳಿದರೆ ‘ಬೇಕಾದರೆ ತಗೊಳ್ಳಿ, ಬೇಡದಿದ್ದರೆ ಹೋಗಿ’ ಅನ್ನುತ್ತಾರೆ. ಅಲ್ಲದೆ ‘ವರ್ಷದಿಂದ ಲಾಕ್‌ಡೌನ್ ಕಾರಣದಿಂದ ವ್ಯಾಪಾರವೇ ಇಲ್ಲ, ಬಂಡವಾಳ ಹಾಕಿದವರು ನಾವು ನಷ್ಟ ಅನುಭವಿಸಬೇಕೆ?’ ಅಂತ ಗ್ರಾಹಕರ ಬಾಯಿ ಮುಚ್ಚಿಸುತ್ತಾರೆ. ಹೋಗಲಿ, ವ್ಯಾಪಾರ ವಹಿವಾಟು ಎಂದಿನಂತಾದಾಗಲಾದರೂ ಈ ಸಂಕಷ್ಟ ಕಾಲದಲ್ಲಿ ಏರಿಸಿದ ಬೆಲೆಯನ್ನು ಹಿಂಪಡೆಯುವ ನೈತಿಕತೆಯನ್ನು ತೋರುತ್ತಾರೆಯೇ? ಇಲ್ಲ.

ಇಂಥ ಸಂದರ್ಭದಲ್ಲಿ ಗ್ರಾಹಕನಿಗೆ ಆಯ್ಕೆಯೇ ಇರುವುದಿಲ್ಲ. ಹಾಗಾದರೆ ಬೆಲೆ ನಿಯಂತ್ರಣ ಮಾಡುವವರಾರು? ಬೆಲೆ ಎಷ್ಟಾದರೂ ಕೊಂಡು
ಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಗೆ ಪರಿಹಾರ ವೇನು? ಗ್ರಾಹಕನನ್ನು ಇಂಥ ನೀತಿಯಿಲ್ಲದ ಸುಲಿಗೆ ಯಿಂದ ಯಾರು ಕಾಪಾಡಬೇಕು? ಅದಕ್ಕೇ ಇರಬೇಕು ‘ನಿತ್ಯದ್ರೋಹಂ ವ್ಯಾಪಾರ ಲಕ್ಷಣಂ’ ಎನ್ನುವುದು. ಯಾವ ಸರ್ಕಾರವೂ ಈ ಬಗೆಯ ದ್ರೋಹವನ್ನು ತಡೆಯಲಾಗದು. ಅಷ್ಟೇ ಅಲ್ಲ, ಇಂಥ ದ್ರೋಹದ ವ್ಯಾಪಾರವೇ ಸರ್ಕಾರಗಳನ್ನು ನಿಯಂತ್ರಿಸು
ತ್ತದೆ ಅನ್ನುವುದು ಕಟುಸತ್ಯ. ಅನೇಕರು ಮಾಡಿದ ವಹಿವಾಟಿಗೆ ಅರ್ಧದಷ್ಟು ತೆರಿಗೆಯನ್ನೂ ಕಟ್ಟುವುದಿಲ್ಲ. ಉತ್ಪನ್ನಗಳ ಮೂಲ ಮಾಲೀಕನಾದ ರೈತನಿಗಾದರೂ ಇದರ ಲಾಭಾಂಶ ಸಿಗುತ್ತದೆಯೇ? ಅದೂ ಇಲ್ಲ.

ಸಾಮಾಜಿಕ ಔದಾರ್ಯಕ್ಕೆ ಆರ್ಥಿಕವಾದ ಪ್ರಾಮಾಣಿಕತೆಯೂ ಸಮಾನವಾಗಿರಬೇಕು. ಹುಟ್ಟುತ್ತಲೇ ಸಾಮ್ರಾಟನಾಗಿದ್ದ ಸಿದ್ಧಾರ್ಥ ಬಯಲಿಗೆ ಬಂದು ಭಿಕ್ಷುಕನನ್ನು ಕಂಡು, ಅವನ ಮೂಲಕ ಆರ್ಥಿಕವಾದ ಅಸಮಾನ ನೆಲೆಗಳನ್ನು ಕಾಣಲು ಸಾಧ್ಯವಾಯಿತು. ವ್ಯವಹಾರಕ್ಕೆ ನ್ಯಾಯಯುತ ಲಾಭದ ಉನ್ನತ ಮಾದರಿಯನ್ನು ಮೊಹಮ್ಮದ್ ಪೈಗಂಬರ್ ಬದುಕಿ ತೋರಿಸಿದರು. ಬಯಲಿನಿಂದ ಅಧಿಕಾರದ ಗದ್ದುಗೆಗೇರಿದ ಬಸವಣ್ಣ ಆರ್ಥಿಕ ಪ್ರಾಮಾಣಿಕತೆಯನ್ನು ಜೀವನ್ಮರಣದ ಪ್ರಶ್ನೆಯಾಗಿಸಿ
ಕೊಂಡರು. ‘ಹೊನ್ನಿನೊಳಗೊಂದೊರೆಯ, ಅನ್ನದೊಳ ಗೊಂದಗುಳ, ವಸ್ತ್ರದೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬಯಸಿದೆನಾದೊಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ’ ಎಂದು ಪ್ರಾಮಾಣಿಕತೆಯನ್ನು ಸಾರ್ವಜನಿಕವಾಗಿ ನಿಕಷಕ್ಕೊಡ್ಡಿದರು. ನೀತಿಯಿಲ್ಲದ ವಾಣಿಜ್ಯವು ಪಾಪಕ್ಕೆ ಸಮಾನ ಎಂದ ಗಾಂಧೀಜಿ ಕೂಡ ಪ್ರಜ್ಞಾ
ಪೂರ್ವಕವಾಗಿ ಬಡವರಾಗಿರಲು ಬಯಸಿ ಹಾಗೇ ಬದುಕಿದರು. ಇಂಥವರೆಲ್ಲರ ನೈತಿಕ ಆದರ್ಶಗಳನ್ನು ಕೇವಲ ಭಾಷಣಕ್ಕೆ ಸೀಮಿತ ಮಾಡಿ, ಬಿಕ್ಕಟ್ಟುಗಳನ್ನೂ ಸುಗ್ಗಿ ಮಾಡಿಕೊಳ್ಳುವ ಲಜ್ಜೆಗೇಡಿ ಅರ್ಥನೀತಿಯ
ವಾರಸುದಾರರಾಗಿದ್ದೇವೆಯೇ ನಾವು?

ಸರ್ಕಾರದ್ದಾಗಲೀ, ವ್ಯಕ್ತಿಗತವಾದದ್ದಾಗಲೀ ಐದು ಪೈಸೆಯ ಲೆಕ್ಕವನ್ನೂ ಕೊಡುತ್ತಿದ್ದವರ ಕಾಲವೊಂದಿತ್ತು. ಅದು ಸಾರ್ವಜನಿಕವಾದದ್ದು ತಿನ್ನಬಾರದ್ದು ಅನ್ನುವ ಅರಿವಿತ್ತು. ಈ ಅರಿವು ಓದಿನಿಂದ ಬಂದಿದ್ದಾಗಿರದೆ ಎದೆಯ ದನಿಯಿಂದ ಹೊಮ್ಮುತ್ತಿತ್ತು ಅನ್ನುವುದು ಗಮನಾರ್ಹ. ನೈತಿಕ ಮಟ್ಟವನ್ನು ಎತ್ತರಿಸಬೇಕಾದ ಶಿಕ್ಷಣ ಆ ದಿಸೆಯಲ್ಲಿ ಸೋತಿದೆ ಎಂದೇ ಹೇಳಬೇಕಾಗಿದೆ.

‘ಗ್ರಾಹಕ ನಮ್ಮ ದೇವರು’ ಅಂತ ಬೋರ್ಡ್ ಹಾಕಿಕೊಂಡು ಅವನನ್ನು ಸಾಂಕ್ರಾಮಿಕದಂತಹ ಬೇರೆ ಬೇರೆ ನೆಪಗಳ ಹೆಸರಿನಲ್ಲಿ ದೋಚುವುದು ಯಾವ ಸೀಮೆಯ ನೈತಿಕತೆ? ಅರ್ಥನೀತಿಯ ಆಚರಣೆಯಲ್ಲಿನ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಕೊರತೆಯೇ ಉಳಿದೆಲ್ಲ ಸಾಮಾಜಿಕ ಪಿಡುಗುಗಳ ಮೂಲವಾಗಿದೆ. ಅವೈಜ್ಞಾನಿಕವಾಗಿ ಏರುತ್ತಿರುವ ಬೆಲೆಗಳನ್ನು ತಡೆಯುವ ಸಂಘಟಿತ ಪ್ರಯತ್ನ ನಡೆಯದೇ ಹೋದರೆ ಬಡವ, ಶ್ರೀಮಂತರ ನಡುವಿನ ಕಂದರ ಹೆಚ್ಚಾಗುವ ಆತಂಕ ಅಪಾಯಕಾರಿಯಾಗಬಲ್ಲದು. ಅಗತ್ಯ ತತ್ವ ವೊಂದನ್ನು ಶಾಸನಬದ್ಧಗೊಳಿಸದ ಹೊರತು, ಎದೆ ದನಿಗೆ ಕಿವಿಗೊಡದ ಹೊರತು ಈ ಕಂದರದ ಆಳ, ಕರಾಳತೆಯನ್ನು ಕಡಿಮೆ ಮಾಡಲಾಗದು.

ಬೇಕಾಬಿಟ್ಟಿ ಬೆಲೆ ಏರಿಕೆಯ ವಿಷಯದಲ್ಲಿ ವ್ಯಾಪಾರೀ ವರ್ಗವು ಉದಾತ್ತ ನ್ಯಾಯಯುತ ಲಾಭ ನೀತಿಯನ್ನು ಅಳವಡಿಸಿಕೊಳ್ಳಲು ಹೃದಯವಂತಿಕೆ ಬೇಕು. ಕಳೆದ ಎರಡು– ಮೂರು ದಶಕಗಳ ರಾಜಕೀಯವೇ ವ್ಯಾಪಾರೋದ್ಯಮವಾಗಿ ಬೆಳೆದು ‘ಬಿತ್ತಿ ಬೆಳೆದುಕೊಳ್ಳುವ’ ನಿಧಾನ ಅಭಿವೃದ್ಧಿ ವಿಧಾನದ ಹಾದಿ ‘ಚೆಲ್ಲಿ ಬಾಚಿಕೊಳ್ಳುವ’ ಅವಸರದ ದಾರಿಗೆ ಹೊರಳಿರುವ ಸಮಯದಲ್ಲಿ, ಸಮಾಜ ಬಯಸುವ ನೈತಿಕತೆಯನ್ನು ಅನುತ್ಪಾದಕವೆಂದು ತಿಳಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT