ಶುಕ್ರವಾರ, ಡಿಸೆಂಬರ್ 3, 2021
20 °C
ಮಹರ್ಷಿ ವಾಲ್ಮೀಕಿಯನ್ನು ಜ್ಞಾನ ಹಾಗೂ ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ

ಸಂಗತ | ಮಹರ್ಷಿ ವಾಲ್ಮೀಕಿ: ಪೂರ್ವಾಶ್ರಮದ ಸುತ್ತ...

ಅರುಣ್ ಜೋಳದಕೂಡ್ಲಿಗಿ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದಲ್ಲಿ ಆಚರಿಸಲಾಗುವ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿಯ ಬಗೆಗೆ ಕಡ್ಡಾಯವಾಗಿ ಉಲ್ಲೇಖಿಸುವ ಕಟ್ಟುಕತೆಯೊಂದಿದೆ. ಅದೆಂದರೆ, ವಾಲ್ಮೀಕಿ ಪೂರ್ವಾಶ್ರಮದಲ್ಲಿ ರತ್ನಾಕರ ಎಂಬ ದರೋಡೆಕೋರನಾಗಿದ್ದ ಎಂಬುದು.

ನಾರದರು ಒಮ್ಮೆ ರತ್ನಾಕರನಿಗೆ ಎದುರಾಗಿ ‘ನಿನ್ನ ಅಪರಾಧದಲ್ಲಿ ಮನೆಯವರು ಪಾಲುದಾರರೇ?’ ಎನ್ನುತ್ತಾರೆ. ವಿಚಾರಿಸಲಾಗಿ, ರತ್ನಾಕರನ ಕುಟುಂಬ ಆತನ ಅಪರಾಧದಲ್ಲಿ ಪಾಲು ಪಡೆಯಲು ನಿರಾಕರಿಸುತ್ತದೆ. ನಂತರ ರತ್ನಾಕರನಿಗೆ ಅರಿವಾಗಿ ದರೋಡೆಯನ್ನು ನಿಲ್ಲಿಸಿ ತಪಸ್ಸು ಮಾಡುತ್ತಾನೆ. ಬಹುದಿನಗಳ ನಂತರ ತಪಸ್ಸಿಗೆ ಕೂತಲ್ಲಿಯೇ ಬೆಳೆದಿದ್ದ ಹುತ್ತವನ್ನು ಒಡೆದು ವಾಲ್ಮೀಕಿಯಾಗಿ ಹೊರಬಂದು ರಾಮಾಯಣ ರಚಿಸಿದನು ಎನ್ನುವುದು ಈ ಕತೆ.

ವಿಶ್ವವಿದ್ಯಾಲಯಗಳ ಅಧ್ಯಾಪಕರಿಂದ ಮೊದಲುಗೊಂಡು ಸ್ವಾಮೀಜಿಗಳು, ರಾಜಕಾರಣಿಗಳತನಕ ಈ ಕತೆಯನ್ನು ಹೇಳುತ್ತಲೇ ಇದ್ದಾರೆ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಪುರಾವೆಗಳೇನು?

ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ ಕುರಿತಂತೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಇತಿಹಾಸತಜ್ಞ ಎಚ್.ಡಿ.ಸಾಂಕಾಲಿಯ ಅವರು ಉಲ್ಲೇಖಿಸಿರುವಂತೆ, 1843ರಿಂದ 1867ರವರೆಗಿನ ಅವಧಿಯಲ್ಲಿ ಗೊರೇಸಿಯೊ ಪ್ರಕಟಿಸಿದ ರಾಮಾಯಣದ ಆರು ಸಂಪುಟಗಳಿಂದ ಈ ಅಧ್ಯಯನ ಆರಂಭವಾಗಿರಬೇಕು, ಎ.ವೆಬರ್ (1873) ಮೊದಲು ಕಾಲ ನಿರ್ಣಯದ ಚರ್ಚೆ ಮಾಡಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಿಲಿಯಂ ಜೋನ್ಸ್, ರಾಮಸ್ವಾಮಿ ಶಾಸ್ತ್ರಿ, ಆರ್.ಸಿ.ಮಜುಂದಾರ್, ಪಿ.ವಿ.ಕಾಣೆ, ಡಿ.ಡಿ.ಕೊಸಾಂಬಿ, ಎ.ಎಲ್.ಬಾಷಂ, ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಅಂಬೇಡ್ಕರ್ ತನಕ ನೂರಾರು ಇತಿಹಾಸ ತಜ್ಞರು, ಪುರಾತತ್ವಜ್ಞರು, ಮಾನವಶಾಸ್ತ್ರಜ್ಞರು ಹಲವು ಜ್ಞಾನಶಾಖೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ವಾಲ್ಮೀಕಿಯ ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕ್ರಿ.ಪೂ. 3ರಿಂದ 5ನೇ ಶತಮಾನದಲ್ಲಿ ವಾಲ್ಮೀಕಿ ಬದುಕಿದ್ದು ರಾಮಾಯಣ ರಚಿಸಿರಬೇಕು ಎಂಬ ನಿಲುವಿದೆ.

ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕತೆಯ ಬಗ್ಗೆ ಕರ್ನಾಟಕದಲ್ಲಿ ಆಕ್ಷೇಪಗಳಿಲ್ಲ. ಇದೊಂದು ಒಪ್ಪಿತ ಪಠ್ಯ. ಆದರೆ ಪಂಜಾಬ್ ಒಳಗೊಂಡಂತೆ ಉತ್ತರ ಭಾರತದಲ್ಲಿ ಈ ಕತೆಯ ಬಗ್ಗೆ ಆಕ್ಷೇಪಗಳಿವೆ. ಪಂಜಾಬ್‍ನ ಜಲಂಧರ್ ಜಿಲ್ಲೆಯ ನವ್ವಿಕಾಸ್ ಎನ್ನುವ ವರು 2009ರ ಅಕ್ಟೋಬರ್‌ 6ರಂದು ಸ್ಟಾರ್ ಪ್ಲಸ್ ಟಿ.ವಿ ವಾಹಿನಿಯಲ್ಲಿ ಪ್ರಸಾರವಾದ ‘ಸಪ್ನ ಬಾಬುಲ್ ಕಾ... ಬಿದಾಯಿ’ ಎನ್ನುವ ಧಾರಾವಾಹಿಯಲ್ಲಿ ‘ವಾಲ್ಮೀಕಿಯು ದರೋಡೆಕೋರನಾಗಿದ್ದ’ ಎನ್ನುವ ಸಂಭಾಷಣೆಯನ್ನು ಆಕ್ಷೇಪಿಸಿ ಕೋರ್ಟ್ ಮೆಟ್ಟಿಲೇರುತ್ತಾರೆ. ಪಂಜಾಬ್- ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್‌ ಭಲ್ಲಾ ಅವರು ಈ ಕೇಸ್ ವಿಚಾರವಾಗಿ ಪಂಜಾಬ್ ಯೂನಿವರ್ಸಿಟಿಯ ನಿವೃತ್ತ ಪ್ರೊಫೆಸರ್ ಮಂಜುಳಾ ಸಹದೇವ್ ಅವರ ‘ಮಹರ್ಷಿ ವಾಲ್ಮೀಕಿ– ಏಕ್ ಸಮೀಕ್ಷಾತ್ಮಕ್‌ ಅಧ್ಯಯನ್‌’ ಸಂಶೋಧನಾ ಕೃತಿಯಲ್ಲಿನ ಅಂಶಗಳನ್ನು ಉಲ್ಲೇಖಿಸುತ್ತಾರೆ.

ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ವೇದಗಳ ಕಾಲದಿಂದ ಕ್ರಿ.ಶ. 9ನೇ ಶತಮಾನದತನಕ ಯಾವುದೇ ಉಲ್ಲೇಖಗಳಿಲ್ಲ. ರಾಮಾಯಣದಲ್ಲಿಯೇ ವಾಲ್ಮೀಕಿ ತನ್ನನ್ನು ಭಗವಾನ್, ಮುನಿ, ರಿಷಿ, ಮಹರ್ಷಿ ಎಂದು ಕರೆದುಕೊಂಡಿದ್ದಾನೆ. ಮೊದಲಿಗೆ ಹತ್ತನೇ ಶತಮಾನದ ಸ್ಕಂದ ಪುರಾಣದಲ್ಲಿ ವಾಲ್ಮೀಕಿ ದರೋಡೆಕೋರನಾಗಿದ್ದ ಎಂದು ಉಲ್ಲೇಖ ಸಿಗುತ್ತದೆ. ‘ಮರ ಮರ’ ಎನ್ನುವ ಮಂತ್ರದ ಉಲ್ಲೇಖ 15ನೇ ಶತಮಾನದ ‘ಅಧ್ಯಾತ್ಮ ರಾಮಾಯಣ’ ಮತ್ತು 16ನೇ ಶತಮಾನದ ‘ಆನಂದ ರಾಮಾಯಣ’ದಲ್ಲಿ ಸಿಗುತ್ತದೆ. ಅಂದರೆ ‘ಮರ ಮರ’ ಮಂತ್ರದಿಂದಲೇ ವಾಲ್ಮೀಕಿ ರಾಮಾಯಣ ರಚಿಸಿದ ಎನ್ನುವುದೂ ಕಟ್ಟುಕತೆ. 13 ಮತ್ತು 16ನೇ ಶತಮಾನಗಳಲ್ಲಿ ರಾಮನನ್ನು ವಿಷ್ಣುವಿನ ಅವತಾರ ಎಂದು ದೈವೀಕರಿಸಿದ ಮೇಲೆ ವಾಲ್ಮೀಕಿಯ ಬಗೆಗೆ ಇಂತಹ ಕತೆಗಳು ಹೆಣೆಯಲ್ಪಟ್ಟಿವೆ. ಅಂದರೆ ವಾಲ್ಮೀಕಿ ಬದುಕಿದ್ದ 1,500 ವರ್ಷಗಳ ನಂತರ ಆತ ‘ದರೋಡೆಕೋರನಾಗಿದ್ದ’ ಎನ್ನುವ ಕತೆ ಸಿಗುತ್ತದೆ. ಹೀಗಾಗಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪುರಾಣವನ್ನು ಉಲ್ಲೇಖಿಸುವುದು ಸರಿಯಲ್ಲ. 2009ರ ‘ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ನ್ಯಾಯಮೂರ್ತಿ ರಾಜೀವ್‌ ಭಲ್ಲಾ ‘ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿರಲಿಲ್ಲ’ ಎನ್ನುವ ತೀರ್ಪು ನೀಡುತ್ತಾರೆ. 2019ರಲ್ಲಿ ಪ್ರೊ. ಮಂಜುಳಾ ಸಹದೇವ್ ವಿರುದ್ಧದ ಕೇಸಿನಲ್ಲಿ ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ಕೂಡ ಈ ತೀರ್ಪನ್ನು ಎತ್ತಿಹಿಡಿದಿದ್ದಾರೆ.

ಮಹರ್ಷಿ ವಾಲ್ಮೀಕಿಯ ಬಗೆಗಿನ ಅಧ್ಯಯನಗಳನ್ನು ಆಧರಿಸಿ ನೋಡುವುದಾದರೆ, ವಾಲ್ಮೀಕಿ ಭರತ ಖಂಡದ ಆದಿಕವಿ, ಬೇಡ ಸಮುದಾಯದ ಮೊದಲ ಸಾಕ್ಷರ. ಕೆಳಜಾತಿ ಜನರು ಯಾವುದೇಮಹತ್ಸಾಧನೆಯನ್ನು ಮಾಡಿದಾಗ ಪ್ರಬಲ ಜಾತಿಗಳು ಅವರ ಹುಟ್ಟನ್ನೇ ಅನುಮಾನಿಸುವ, ಅವರ ಚಾರಿತ್ರ್ಯವನ್ನು ತಿರುಚುವ ಯತ್ನ ನಡೆದೇ ಇದೆ. ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟು ಕಥೆ ಕೂಡ ಇಂತಹದ್ದೇ ಒಂದು ಪ್ರಯತ್ನ. ಹಾಗಾಗಿ ವಾಲ್ಮೀಕಿಯನ್ನು ಅಕ್ಷರ, ಶಿಕ್ಷಣ, ಜ್ಞಾನ, ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ.

ಇನ್ನಾದರೂ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕತೆಯನ್ನು ಉಲ್ಲೇಖಿಸುವುದು ಬಿಡಬೇಕು. ಹಾಗೆ ಹೇಳುವುದನ್ನು ಮಹರ್ಷಿ ವಾಲ್ಮೀಕಿಯ ಚಾರಿತ್ರ್ಯವಧೆ ಎಂದು ಪರಿಭಾವಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು