ಶನಿವಾರ, ಜನವರಿ 16, 2021
24 °C
ನಮ್ಮ ಸಂವಿಧಾನದ ರಚನೆ, ಮಹತ್ವ ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ?

ಸಂಗತ: ಭಾರತದ ಜನತೆಯಾದ ನಾವು...

ಪ್ರೊ. ಎಸ್.ನಾಗವೇಣಿ Updated:

ಅಕ್ಷರ ಗಾತ್ರ : | |

Prajavani

ಇವತ್ತಿಗೆ (ನ. 26) ಸರಿಯಾಗಿ 71 ವರ್ಷಗಳ ಹಿಂದೆ, ಎಂದರೆ 1949ರ ನವೆಂಬರ್ 26ರಂದು ಭಾರತದ ಸಂಸತ್ ಭವನದಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತ್ತು. ಸಂವಿಧಾನ ರಚನಾ ಸಭೆಯ 2 ವರ್ಷ 11 ತಿಂಗಳು 18 ದಿನಗಳ ಕಠಿಣ ಪರಿಶ್ರಮ ಸಾರ್ಥಕವಾಗಿತ್ತು. ಭಾರತವು ತನ್ನದೇ ಆದ ಒಂದು ಸಂವಿಧಾನವನ್ನು ಪಡೆದಿತ್ತು.

ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್‍ ಅವರು ಈ ಸಂವಿಧಾನದ ಮೂಲ ಕರಡನ್ನು ಸಭಾಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್‍ ಅವರ ಕೈಗೆ ಹಿಂದಿನ ದಿನವಷ್ಟೇ ಒಪ್ಪಿಸಿದ್ದರು. ಭಾರತದ ಮೊದಲ ಸಂಸತ್ತೂ ಆಗಿದ್ದ ಸಭೆಯ ಎಲ್ಲ ಸದಸ್ಯರು ಇದಕ್ಕೆ ಸಹಿ ಹಾಕುವ ಮೂಲಕ ನವೆಂಬರ್ 26ರಂದು ಇದನ್ನು ‘ಭಾರತ ಸಂವಿಧಾನ’ ಎಂಬುದಾಗಿ ಅಂಗೀಕರಿಸಿದರು.

ನಾವು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಗಳನ್ನು ಆಚರಣೆ ಮಾಡುತ್ತಿದ್ದೆವು. ಸಂವಿಧಾನ ದಿನವನ್ನು ಆಚರಿಸುತ್ತಿರಲಿಲ್ಲ. ಭಾರತ ಸರ್ಕಾರವು 2015ರಿಂದ, ಈ ಮೊದಲು ರಾಷ್ಟ್ರೀಯ ಕಾನೂನು ದಿನ ಎಂದು ಗುರುತಿಸಲ್ಪಟ್ಟಿದ್ದ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ 2015ರಲ್ಲಿ ಮೊದಲ ಸಂವಿಧಾನ ದಿನವನ್ನು ಆಚರಿಸಲಾಯಿತು. ಎಲ್ಲಾ ಶಾಲೆಗಳಲ್ಲಿ ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ವಿಶೇಷ ಉಪನ್ಯಾಸಗಳು, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ನಡೆದವು. ಹಿಂದಿನ ವರ್ಷದವರೆಗೂ ಹೀಗೆ ನಡೆಯಿತು. ಆದರೆ ಈ ವರ್ಷ ಕೊರೊನಾ ಆಪತ್ತಿನಿಂದಾಗಿ ಆಚರಣೆ ಸಪ್ಪೆಯಾಗಿದೆ.

ಸಂವಿಧಾನ ದಿನದ ಘೋಷಣೆ ಮಾಡಿದ ದಿನವೂ ಒಂದು ರೀತಿಯಲ್ಲಿ ಐತಿಹಾಸಿಕವಾಗಿತ್ತು. 2015, ಡಾ. ಅಂಬೇಡ್ಕರ್‍ ಅವರ 125ನೇ ಜನ್ಮ ವರ್ಷಾಚರಣೆಯಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನಲ್ಲಿ ಅಂಬೇಡ್ಕರ್ ಅವರ ಸಮಾನತಾ ಪ್ರತಿಮೆಯ ಸ್ಮಾರಕಕ್ಕೆ ಶಿಲಾನ್ಯಾಸ ಮಾಡುತ್ತಿದ್ದ ಸಮಾರಂಭದಲ್ಲಿ ಇದನ್ನು ಘೋಷಿಸಿದರು. ಬಹುಶಃ 65 ವರ್ಷಗಳ ನಂತರ ಸರ್ಕಾರವು ಅಂಬೇಡ್ಕರ್‍ ಅವರಿಗೆ ತೋರಿದ ಅರ್ಥಪೂರ್ಣ ಗೌರವ ಇದಾಗಿತ್ತು.

ಬಹು ಜಾತಿ, ಧರ್ಮ, ಸಂಸ್ಕೃತಿ, ಭಾಷೆ ಇತ್ಯಾದಿಗಳ ಬೃಹತ್ ದೇಶವಾದ ಭಾರತಕ್ಕೆ ಒಂದು ಸತ್ವಯುತವಾದ, ಸುಸ್ಥಿರವಾದ ಸಂವಿಧಾನವನ್ನು ರಚಿಸುವುದು ಸುಲಭದ ಕೆಲಸವಲ್ಲ. ಸ್ವಾತಂತ್ರ್ಯವನ್ನು ಕೊಡುವುದು ನಿಶ್ಚಿತ ಎಂದು ಗೊತ್ತಾದ ನಂತರ ಬ್ರಿಟಿಷರು, ‘ಹೋಗಲಿ ಬಿಡಿ ನಿಮ್ಮ ದೇಶಕ್ಕೊಂದು ಸಂವಿಧಾನವನ್ನು ನಾವು ರಚನೆ ಮಾಡಿಕೊಡುತ್ತೇವೆ’ ಎಂದರು. ಆದರೆ ಗಾಂಧೀಜಿ, ‘ನೀವು ಇಲ್ಲಿಂದ ಹೊರಡಿ, ನಮ್ಮ ಸಂವಿಧಾನವನ್ನು ಬರೆದುಕೊಳ್ಳುವ ಸಾಮರ್ಥ್ಯ ನಮಗಿದೆ’ ಎಂದಿದ್ದರು. ಆದರೆ, ಈ ಕಾರ್ಯವೂ ಜನಸತ್ತಾತ್ಮಕವಾಗಿ ಆಗಬೇಕಾಗಿತ್ತು. ಇದಕ್ಕಾಗಿ, ಬಹಳ ಹಿಂದೆಯೇ, 1934ರಲ್ಲಿಯೇ ಇದರ ಪ್ರಸ್ತಾಪ ಬಂದಿದ್ದಾಗ, ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿಯ ಆದ್ಯ ಪ್ರವರ್ತಕರೂ ಆಮೂಲಾಗ್ರ ಜನಸತ್ತೆಯ ಪ್ರತಿಪಾದಕರೂ ಆಗಿದ್ದ ಎಂ.ಎನ್.ರಾಯ್, ಸಂವಿಧಾನದ ರಚನೆ ದೇಶದ ಜನರೇ ಆರಿಸಿ ಕಳಿಸಿದ ಪ್ರತಿನಿಧಿಗಳಿಂದಾಗಬೇಕು ಎಂಬುದನ್ನು ದೃಢವಾಗಿ ಹೇಳಿದ್ದರು. ನಂತರ 1935ರಲ್ಲಿ ಆಗಿನ ಜನಪ್ರಿಯ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಧಿಕೃತ ಬೇಡಿಕೆಯೂ ಇದೇ ಆಯಿತು.

ಸಿ.ರಾಜಗೋಪಾಲಾಚಾರಿಯವರು 1939ರ ನವೆಂಬರ್ 15ರಂದು ಸಾರ್ವಜನಿಕರು ಮತ ಚಲಾಯಿಸಿ ಆಯ್ಕೆ ಮಾಡಿದ ಸಂವಿಧಾನ ಸಭೆಗಾಗಿ ಬೇಡಿಕೆಯಿಟ್ಟರು. ಬ್ರಿಟಿಷ್ ಸರ್ಕಾರ ಅದನ್ನು 1940ರ ಆಗಸ್ಟ್‌ನಲ್ಲಿ ಒಪ್ಪಿಕೊಂಡಿತು. ಆ ಹೊತ್ತಿಗಾಗಲೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದ ಅಂದಿನ 12 ಪ್ರಾಂತ್ಯಗಳು ಮತ್ತು 29 ಬ್ರಿಟಿಷ್ ಪ್ರಿನ್ಸ್ಲಿ ಸ್ಟೇಟ್ಸ್‌ ಅನ್ನು ಪ್ರತಿನಿಧಿಸಿದ 15 ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಸಂವಿಧಾನ ರಚನೆಯ ಹೊಣೆಯನ್ನು ಹೊತ್ತರು. 21 ಸಮಿತಿಗಳಲ್ಲಿ ಕೆಲಸವನ್ನು ಹಂಚಿಕೊಂಡು ವ್ಯಾಪಕವಾದ ಸಂಶೋಧನೆ, ಬಿರುಸಿನ ಚರ್ಚೆ ನಡೆಸಿ ಬೆಟ್ಟದಷ್ಟು ಸಾಮಗ್ರಿಯನ್ನು ಗುಡ್ಡೆ ಹಾಕಿದರು. ಅದಕ್ಕೆ, ನಾವೀಗ ನೋಡುತ್ತಿರುವ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತ ಸಂವಿಧಾನದ ರೂಪವನ್ನು ಕೊಟ್ಟಿದ್ದು, ಕರಡು ರಚನಾ ಸಭೆಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್. ಅದಕ್ಕೇ ಈ ದೇಶದ ಜನ ಅವರನ್ನು ಪ್ರೀತ್ಯಾದರಗಳಿಂದ ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.

ಭಾರತ ಸಂವಿಧಾನ ಆರಂಭವಾಗುವುದೇ ‘ಭಾರತದ ಜನತೆಯಾದ ನಾವು’ ಎಂದು. ಈ ಪ್ರಸ್ತಾವನೆ ಕೊನೆಗೊಳ್ಳುವುದು, ‘ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ’ ಎಂದು. ಆದ್ದರಿಂದ ಇದನ್ನು ಯಾವ ಹೊರಗಿನ ಶಕ್ತಿಯೂ ನಮ್ಮ ಮೇಲೆ ಹೇರಿಲ್ಲ, ನಾವೇ ಇದನ್ನು ಬರೆದುಕೊಂಡಿದ್ದೇವೆ. ಇದು ನಮಗಾಗಿರುವ ನಮ್ಮ ಸಂವಿಧಾನ, ‘ವಿ ದ ಪೀಪಲ್ ಆಫ್‌ ಇಂಡಿಯಾ’ದಲ್ಲಿ ನಾನು, ನೀವು, ಎಲ್ಲರೂ ಇದ್ದೇವೆ.

ವಿಪರ್ಯಾಸದ ಸಂಗತಿಯೆಂದರೆ, ಸಂವಿಧಾನ ವನ್ನು ನಮ್ಮದು ಎಂದು ಒಪ್ಪಿಕೊಂಡು 70 ವರ್ಷವಾಗಿದ್ದರೂ ಇದರ ಪ್ರಮುಖ ಬಾಧ್ಯಸ್ಥರಾದ ಭಾರತೀಯರಾದ ನಮ್ಮಲ್ಲಿ ಎಷ್ಟು ಜನರಿಗೆ ಭಾರತ ಸಂವಿಧಾನದ ರಚನೆ, ಮಹತ್ವ ಗೊತ್ತಿದೆ? ಈವರೆಗೆ ಆಗದೇ ಇದ್ದು ಈಗ ತುರ್ತಾಗಿ ಆಗಬೇಕಾಗಿರುವುದು ಸಂವಿಧಾನ ಸಾಕ್ಷರತೆಗಾಗಿ ಬೃಹತ್ ಜನಾಂದೋಲನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು