ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಠಿಗೆ ನೀಡಲಿ ವಿರಾಮ

Last Updated 10 ಮೇ 2021, 19:31 IST
ಅಕ್ಷರ ಗಾತ್ರ

ಕಾನೂನು, ಕಟ್ಟಲೆ ಪಾಲಿಸದವರು, ಸಾರ್ವಜನಿಕವಾಗಿ ಅಶಿಸ್ತು, ದುರ್ವರ್ತನೆಯಿಂದ ನಡೆದುಕೊಳ್ಳುವವರ ಮೇಲೆ ಪೊಲೀಸರು ಲಾಠಿ ಪ್ರಯೋಗಿಸುವುದಿದೆ. ಪೊಲೀಸರ ‘ಕಿಟ್’ನಲ್ಲಿ ಲಾಠಿಗೆ ಮಹತ್ವದ ಸ್ಥಾನವೇ ಇದೆ. ನಾವಿಂದು ಅಂತರಿಕ್ಷ ಯುಗದಲ್ಲಿದ್ದೇವೆ. ವಿಜ್ಞಾನ ನಮ್ಮ ಮನೋಭೂಮಿಕೆಯನ್ನು ಇನ್ನೂ ಸುಧಾರಿಸಬೇಕಾದ ಹಲವು ಆಯಾಮಗಳಿವೆ. ಆಗಸದ ಆಳ ಅವಲೋಕಿಸುವ ಭರದಲ್ಲಿ ಮನುಷ್ಯನ ಮನಸ್ಸಿನ ಆಳವನ್ನು ಕಡೆಗಣಿಸಿದ್ದೇವೆ. ಲಾಠಿಯೇಟಿನ ದುಷ್ಪರಿಣಾಮಗಳನ್ನು ಅವಲೋಕಿಸಲು ನಮ್ಮ ಪ್ರಭುತ್ವಕ್ಕೆ ವ್ಯವಧಾನ ಇದ್ದಂತಿಲ್ಲ.

ಲಾಠಿ 5-6 ಅಡಿಗಳ ಬೆತ್ತ. ಅದಕ್ಕೆ ಲೋಹದ ಕಟ್ಟನ್ನೂ ಹೊಂದಿಸುವುದಿದೆ. ಬಗೆ ಬಗೆ ಕಾರಣಗಳಿಗೆ ಲಾಠಿ ಏಟಿಗೆ ಗುರಿಯಾಗುವವರಿಗೆ ಮೂಳೆ ಮುರಿತ, ಮರಗಟ್ಟುವಿಕೆ, ರಕ್ತಸ್ರಾವ ಸಂಭಾವ್ಯ. ಬೆನ್ನುಹುರಿಗೆ ಗಾಸಿಯಾದರೆ ಜೀವನಪರ್ಯಂತ ನರಳಾಟವೆ ಎನ್ನುತ್ತದೆ ವೈದ್ಯವಿಜ್ಞಾನ. ವಿಶೇಷವಾಗಿ ದ್ವಿಚಕ್ರವಾಹನ ಸವಾರರು ಪಾರಾಗಲು ಪ್ರಯತ್ನಿಸಿಯೇ ಹೆಚ್ಚಿನ ಯಾತನೆಗೊಳಗಾದಾರು. ಮಾನಸಿಕ ಆಘಾತದಿಂದ ಹೊರಬರಲು ವಾರಗಳೇ ಬೇಕು. ಹಾಗಾಗಿ ನಮ್ಮ ಪೊಲೀಸ್ ವ್ಯವಸ್ಥೆ ಈ ಓಬಿರಾಯನ ಕಾಲದ ಲಾಠಿ ಎಂಬ ಅಸ್ತ್ರಕ್ಕೆ ಕೋವಿಡ್ ವ್ಯಾಧಿ ಹತೋಟಿ ನಿಮಿತ್ತ ಲಾಕ್‌ಡೌನ್‌ ಸಂದರ್ಭದಲ್ಲಾದರೂ ವಿರಾಮ ಹೇಳಬೇಕು. ಅದಕ್ಕೆ ಅಹಿಂಸಾತ್ಮಕವೂ ಪರಿಣಾಮಕಾರಿಯೂ ಆದ ಪರ್ಯಾಯ ಕಂಡುಕೊಳ್ಳಬೇಕಿದೆ.

ನಿಯಮ ಪಾಲಿಸದವರನ್ನು ಒಂದು ತಕ್ಕಷ್ಟು ವಿಶಾಲ ಸ್ಥಳದಲ್ಲಿ ಕೂರಿಸಿ ಧ್ಯಾನ, ಯೋಗ, ಆರೋಗ್ಯ, ನೈರ್ಮಲ್ಯ, ಪರಿಸರ, ಸಾಮಾಜಿಕ ಹೊಣೆಗಾರಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿವು ಮೂಡಿಸುವುದು ಯುಕ್ತ. ಬೊಬ್ಬೆಯೆಬ್ಬಿಸುವ ಲಾಠಿಗಿಂತ ಜಾಗೃತಿಯ ಪಾಠ ಮೇಲು.

-ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT