ಮಂಗಳವಾರ, ಜನವರಿ 28, 2020
25 °C

ಕನ್ನಡಿಗರಿಗೆ ಎಚ್ಚರಿಕೆಯ ಗಂಟೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ಯಾವುದೇ ಕಾರ್ಯಕ್ರಮವಿರಲಿ, ಪೂರ್ಣ ಸಹಕಾರ ನೀಡಿ ಅದು ಯಶಸ್ವಿಯಾಗುವಂತೆ ಮಾಡಬೇಕಾದುದು ಕನ್ನಡ ನಾಡಿನ ಸರ್ಕಾರದ ಆದ್ಯ ಕರ್ತವ್ಯ. ಆದರೆ, ಅಂತಹ ಸರ್ಕಾರವೇ ನುಡಿಜಾತ್ರೆಯೊಂದು ನಡೆಯದಂತೆ ನೋಡಿಕೊಳ್ಳಲು ಸರ್ವಯತ್ನ ನಡೆಸಿ, ಅದರಲ್ಲಿ ಭಾಗಶಃ ಯಶಸ್ವಿಯಾದ ಆಘಾತಕಾರಿ ವಿದ್ಯಮಾನವೊಂದಕ್ಕೆ ಮೊದಲ ಬಾರಿ ನಾಡು ಸಾಕ್ಷಿಯಾಯಿತು. ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ.

ಕಾರ್ಯಕ್ರಮವೊಂದಕ್ಕೆ ಯಾರಾದರೂ ಬೆದರಿಕೆ ಒಡ್ಡುತ್ತಾರಾದರೆ ಹಾಗೆ ಬೆದರಿಕೆ ಒಡ್ಡುವವರ ಮೇಲೆ ಕ್ರಮ ಜರುಗಿಸಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಮಾಡಬೇಕಾದುದು ಸರ್ಕಾರದ ಕೆಲಸ. ಅದು ಬಿಟ್ಟು ವಿರೋಧ ಇದೆ, ಬೆದರಿಕೆ ಇದೆ, ಆ ಕಾರಣಕ್ಕೆ ಕಾರ್ಯಕ್ರಮ ನಡೆಸಕೂಡದು, ನಡೆಸಿದರೆ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸರೇ ಧಮಕಿ ಹಾಕುವುದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ, ಸೈದ್ಧಾಂತಿಕ ಕಾರಣಕ್ಕೆ ಈ ಸರ್ಕಾರವು ಕನ್ನಡದ ವಿರುದ್ಧವೂ ನಿಲ್ಲಲು ಹೇಸುವುದಿಲ್ಲ. ಎರಡನೆಯದಾಗಿ, ಯಃಕಶ್ಚಿತ್ ಒಂದು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೂ ಭದ್ರತೆ ನೀಡುವ ಕ್ಷಮತೆ ನಮ್ಮ ಕರ್ನಾಟಕದ ಪೊಲೀಸರಿಗಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ಸ್ವಾಯತ್ತ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೂ ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ನಿರ್ಧರಿಸಲು ರಾಜಕಾರಣಿಗಳಿಗೆ ಅವಕಾಶ ನೀಡುವುದೇ ಆದರೆ, ಇದು ಮುಂದೆ ಇನ್ನಷ್ಟು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಲಿದೆ. ಕನ್ನಡದ ಹಿತಾಸಕ್ತಿಯ ದೃಷ್ಟಿಯಿಂದ ಇಂತಹ ದುಷ್ಟ ಯತ್ನಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ಅಗತ್ಯವಿದೆ. ಶೃಂಗೇರಿಯ ಸಾಹಿತ್ಯ ಸಮ್ಮೇಳನದ ವಿಷಯದಲ್ಲಿ ಕರ್ನಾಟಕ ಸರ್ಕಾರ ನಡೆದುಕೊಂಡ ರೀತಿ ಈ ನಿಟ್ಟಿನಲ್ಲಿ ಕನ್ನಡಿಗರಿಗೆ ಎಚ್ಚರಿಕೆಯ ಗಂಟೆಯಾಗಬೇಕು.

ಶ್ರೀನಿವಾಸ ಕಾರ್ಕಳ, ಮಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು