ಮೇಯುವವರಿಗೆ ಬೇಲಿ ತೆಗೆದಂತೆ...

ಬೆಂಗಳೂರಿನ ನೂರಾರು ಕೆರೆಗಳ ಸಾವಿರಾರು ಎಕರೆ ಜಾಗವನ್ನು ಭೂ ಮಾಫಿಯಾ ನುಂಗಿದೆ. ಅವರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು, ‘ಕೆಟಿಸಿಡಿಎ–2024’ರ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಬೆಂಗಳೂರು ವಿಸ್ತಾರವಾಗುತ್ತಿದೆ. ಜನಸಂಖ್ಯೆ ಮತ್ತು ವಾಹನಗಳ ಹೆಚ್ಚಳದಿಂದ ಹವಾಮಾನದಲ್ಲಿ ವಿಪರೀತ ಏರುಪೇರು ಆಗುತ್ತಿದೆ. ಅದಕ್ಕೆ ಅನುಗುಣವಾಗಿ ಇರುವ ಕೆರೆಗಳು– ಜಲಮೂಲಗಳನ್ನು ರಕ್ಷಣೆ ಮಾಡಿ, ಹಸಿರು ವಲಯಗಳನ್ನು ಹೆಚ್ಚಿಸಬೇಕಿದೆ. ಕೆರೆ ಒತ್ತುವರಿ ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ಒತ್ತುವರಿಗೆ ಉತ್ತೇಜನ ನೀಡುವ ಕಾನೂನು ತಿದ್ದುಪಡಿಗೆ ಹೊರಟಿರುವುದು ವಿಷಾದನೀಯ. ಸರ್ಕಾರದ ತಪ್ಪು ನೀತಿಗಳನ್ನು ಖಂಡಿಸಬೇಕಾದ ವಿರೋಧ ಪಕ್ಷಗಳೂ ಉಸಿರೆತ್ತುತ್ತಿಲ್ಲ. ಸರ್ಕಾರದ ಈ ನಿರ್ಧಾರವನ್ನು ಸಾರ್ವಜನಿಕರು ಹಾಗೂ ಪರಿಸರಾಸಕ್ತರು ವಿರೋಧಿಸಬೇಕಿದೆ.

–ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ಗ್ರಂಥಾಲಯ: ಪುಸ್ತಕ ಖರೀದಿ ನಡೆಯಲಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯು, 2021ರಲ್ಲಿ ಪ್ರಕಟವಾದ ಕೃತಿಗಳನ್ನು ಈ ವರ್ಷ ಆಯ್ಕೆ ಮಾಡಿದೆ. ಆದರೆ, ಪುಸ್ತಕ ಖರೀದಿಗಾಗಿ ಯಾವ ಪ್ರಕಾಶಕರಿಗೂ ‘ಆದೇಶ ಪತ್ರ’ವನ್ನು ಕಳುಹಿಸುತ್ತಿಲ್ಲ. ಏಕೆಂದರೆ, ಪುಸ್ತಕ ಖರೀದಿಗೆ ಅಗತ್ಯವಾದ ಹಣವನ್ನು ಸರ್ಕಾರ ಮಂಜೂರು ಮಾಡಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಗ್ರಂಥಾಲಯದ ಹೆಸರಿನಲ್ಲಿ ಸಂಗ್ರಹಿಸುವ ತೆರಿಗೆ ಹಣವನ್ನು ಸರ್ಕಾರ ತನ್ನಲ್ಲೇ ಉಳಿಸಿಕೊಂಡಿದೆ. ಆ ಹಣವನ್ನು ಬಿಡುಗಡೆ ಮಾಡದಿದ್ದರೆ, ಪುಸ್ತಕಗಳ ಖರೀದಿಯಾದರೂ ಹೇಗೆ ಸಾಧ್ಯ? ಲೇಖಕರು, ಪ್ರಕಾಶಕರಿಗೆ ನಷ್ಟವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.

–ಎ.ಆರ್. ನಾರಾಯಣಘಟ್ಟ, ಬೆಂಗಳೂರು

ಸಂಪಾದಕೀಯ: ಯುವಜನರಿಗೆ ಪ್ರೇರಣೆ

ಕೆಎಎಸ್, ಐಎಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ‘ಪ್ರಜಾವಾಣಿ’ ಸಂಪಾದಕೀಯ ಬರಹಗಳು ಅತ್ಯಂತ ಉಪಯುಕ್ತ. ಯಾವುದೇ ವಿಷಯವನ್ನು ನಿರ್ದಿಷ್ಟ ಪದಗಳಲ್ಲಿ ವಿವರಿಸುವ, ವಿಶ್ಲೇಷಿಸುವ ರೀತಿ ಶ್ಲಾಘನೀಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀಡುವ ಪ್ರಬಂಧಗಳಿಗೆ ಮತ್ತು ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಹಾಗೂ ವಿಷಯಗಳನ್ನು ಗ್ರಹಿಸುವುದು ಹೇಗೆ ಎನ್ನುವ ತಿಳಿವಳಿಕೆಯೊಂದಿಗೆ ಅಗತ್ಯ ಮಾಹಿತಿಯೂ ‘ಪ್ರಜಾವಾಣಿ’ ಸಂಪಾದಕೀಯ ಬರಹಗಳಿಂದ ದೊರೆಯುತ್ತಿದೆ.

– ಜಗದೀಶ ಬಿ.ಜಿ., ಧಾರವಾಡ

ಬೀದಿನಾಯಿಗಳಿಗೆ ಇನ್ನೆಷ್ಟು ಬಲಿ?

ಬೆಂಗಳೂರಿನ ಕೊಡಿಗೇಹಳ್ಳಿಯ ಕೆಂಪೇಗೌಡ ನಗರದಲ್ಲಿ ಬೀದಿನಾಯಿಗಳ ದಾಳಿಗೆ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರ ಸುರಕ್ಷತೆ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ನಾಗರಿಕರು ಅನೇಕ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದರೂ ಬೀದಿನಾಯಿಗಳ ಉಪಟಳ ನಿಗ್ರಹಕ್ಕೆ ಮುಂದಾಗದಿರುವುದು ದುರದೃಷ್ಟಕರ. ಬೀದಿನಾಯಿಗಳಿಗೆ ಪೌಷ್ಟಿಕ ಆಹಾರ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಸಿದ್ಧವಿರುವ ಬಿಬಿಎಂಪಿ ಆಡಳಿತವು, ನಾಗರಿಕರು ಬೀದಿನಾಯಿಗಳಿಗಿಂತಲೂ ಕನಿಷ್ಠ ಎಂಬ ಧೋರಣೆ ತಳೆದಂತಿದೆ.

– ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು

– ಟ್ರಂಪ್ ಸ್ನೇಹ ಸಹನೀಯವೇ?

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತವು ಶೇ 25ರಷ್ಟು ಸುಂಕ ಹೇರಿದೆ. ಇದರಿಂದ ಭಾರತಕ್ಕೆ ಅಲ್ಪ ತೊಂದರೆಆಗಬಹುದು. ಈ ಗರ್ವದ ಬೆದರಿಕೆಗೆ ಭಾರತ ಹೆದರಬೇಕಿಲ್ಲ. ಅಮೆರಿಕವು ಭಾರತವನ್ನು ಯಾವಾಗಲೂ ವ್ಯಾಪಾರಿ ದೃಷ್ಟಿಯಿಂದಲೇ ನೋಡಿದೆ. ಪರಮಾಣು ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಸೂಪರ್ ಕಂಪ್ಯೂಟರ್ ಕೊಡುವುದಿಲ್ಲ ವೆಂದು ಹೇಳಿತ್ತು. ಆದರೆ, ದೇಶದ ವಿಜ್ಞಾನಿಗಳು ಅದನ್ನು ಸವಾಲಾಗಿ ಸ್ವೀಕರಿಸಿ, ಸೂಪರ್ ಕಂಪ್ಯೂಟರ್ ‘ಪರಮ್’ ಅಭಿವೃದ್ಧಿಪಡಿಸಿದ್ದರು. ಯಾವ ದೇಶವನ್ನೂ ನಾವು ಶಾಶ್ವತ ಸ್ನೇಹಿತರೆಂದು ಭಾವಿಸಬೇಕಿಲ್ಲ. ನಮ್ಮದೇ ಆದ ಶಕ್ತಿ ಬೆಳೆಸಿಕೊಳ್ಳ ಬೇಕು. ಒಂದು ದಾರಿ ಮುಚ್ಚಿದರೆ ಮತ್ತೊಂದು ದಾರಿ ತೆರೆಯುತ್ತದೆ.

– ಅತ್ತಿಹಳ್ಳಿ ದೇವರಾಜ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.