ಅವರು ಮಾಡುತ್ತಿರುವುದೂ ಹೊಟ್ಟೆಪಾಡಿಗಾಗಿಯೇ...
ರ್‍ಯಾಪಿಡೊ ಹಾಗೂ ಇತರ ಕಂಪನಿಗಳ ಬೈಕ್ ಟ್ಯಾಕ್ಸಿಗಳಿಂದ ಆಟೊ ಚಾಲಕರ ಹೊಟ್ಟೆ ಮೇಲೆ ಹೊಡೆದಂತಾಗು
ತ್ತದೆ ಎಂದು ಬೆಂಗಳೂರಿನ ಆಟೊ ಚಾಲಕರು ಆರೋಪಿಸಿರುವುದು ಹಾಸ್ಯಾಸ್ಪದ. ಬೈಕ್ ಟ್ಯಾಕ್ಸಿಯವರು ಮೋಜಿಗಾಗಿ ಅದನ್ನು ಓಡಿಸುತ್ತಿಲ್ಲ. ಅವರೂ ಹೊಟ್ಟೆ ತುಂಬಿಸಲು ತಾನೆ ಆ ಕೆಲಸ ಮಾಡುತ್ತಿರುವುದು? ಕೆಲವು ಆಟೊ ಚಾಲಕರ ದೌರ್ಜನ್ಯ
ವನ್ನು ಅನುಭವಿಸಿದವರಿಗೆ ಅವರ ಬಗ್ಗೆ ಸಹಾನುಭೂತಿ ಬರಲು ಸಾಧ್ಯ ಇಲ್ಲ. ಆಟೊ ನಿಲ್ಲಿಸಿ, ತಾವು ಹೋಗಬೇಕಾದ ಸ್ಥಳವನ್ನು ಪ್ರಯಾಣಿಕರು ತಿಳಿಸಿದಾಗ, ಬರುವುದಿಲ್ಲ ಎಂದು ಹೇಳುವ ಸೌಜನ್ಯವೂ ಇಲ್ಲದೆ ಮುಂದೆ ಹೋಗುವವರಿದ್ದಾರೆ. ಇನ್ನು ಮೀಟರ್ ಹಾಕದೆ, ಅಷ್ಟು ಕೊಡಿ ಇಷ್ಟು ಕೊಡಿ ಎಂಬ ಜುಲುಮೆ ಸಾಮಾನ್ಯ. ಮೀಟರ್ ಹಾಕಿದರೂ ನೂರಾರು ರೂಪಾಯಿ ಜಾಸ್ತಿ ಕೇಳುವುದು ಇದ್ದೇ ಇದೆ. ಕೆಲವರಂತೂ ಗೂಂಡಾಗಿರಿಗೂ ಹೇಸುವುದಿಲ್ಲ. ಸರ್ಕಾರ ಇವರ ಒತ್ತಡದ ತಂತ್ರಕ್ಕೆ ಮಣಿಯಬಾರದು.
- ಕೃಷ್ಣ ಭಟ್, ಬೆಂಗಳೂರು
***
ಸುರಕ್ಷಾ ಉಪಕರಣಕ್ಕೆ ಸಿಗಲಿ ಆದ್ಯತೆ
ಜಗಳೂರು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಯ ದಿನಗೂಲಿ ಕಾರ್ಮಿಕರಿಬ್ಬರು ಚರಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೃತಪಟ್ಟಿರುವುದು ದುರದೃಷ್ಟಕರ. ಯಾವುದೇ ಸುರಕ್ಷಾ ಉಪಕರಣಗಳಿಲ್ಲದೆ ಅವರನ್ನು ಚರಂಡಿಗೆ ಇಳಿಸಿದ್ದನ್ನು ತಿಳಿದು ತುಂಬಾ ನೋವಾಯಿತು. ಕಾರ್ಮಿಕರನ್ನು ಶೋಷಣೆ ಮಾಡುವ ವ್ಯವಸ್ಥೆಯಿಂದ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿವೆ. ಮುನ್ನೆಚ್ಚರಿಕೆ ಕ್ರಮವಿಲ್ಲದೆ ಕಾರ್ಮಿಕರನ್ನು ಚರಂಡಿಗೆ ಇಳಿಸಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಅವರ ಕುಟುಂಬಗಳ ತಲಾ ಒಬ್ಬರನ್ನು ಅನುಕಂಪದ ಆಧಾರದ ಮೇಲೆ ಪಂಚಾಯಿತಿಗೆ ಕಾಯಂ ಕಾರ್ಮಿಕರಾಗಿ ನೇಮಿಸಿಕೊಳ್ಳಬೇಕು. ಕಾರ್ಮಿಕರಿಗೆ ಸ್ವಚ್ಛತೆಗೆ ಸಂಬಂಧಿಸಿದ ಸುರಕ್ಷಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಇಂಥ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.
-ಶಶಿಕುಮಾರ್ ಕೆಸರಟ್ಟಿ, ಲಿಂಗಸುಗೂರು
***
ಭಾವನಾತ್ಮಕ ವಿಷಯ ಮುನ್ನೆಲೆಗೆ ತರುವ ಕುತಂತ್ರ
ಉರಿಗೌಡ, ನಂಜೇಗೌಡ ಕುರಿತ ಚರ್ಚೆ ಬಗ್ಗೆ ಆದಿಚುಂಚನಗಿರಿ ಶ್ರೀಗಳ ಪ್ರತಿಕ್ರಿಯೆ ಸ್ವಾಗತಾರ್ಹ. ಚುನಾವಣೆಯ ಸಮಯದಲ್ಲಿ ಮತ ಗಳಿಕೆಯ ತಂತ್ರವಾಗಿ ಈ ರೀತಿಯ ವಿವಾದಗಳನ್ನು ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನವನ್ನು ಯಾವ ಪಕ್ಷದವರು ಮಾಡಿದರೂ ಅದು ಖಂಡನೀಯ. ಜನ ಇಂದು ತಮ್ಮ ಬದುಕಿನ ಸಮಸ್ಯೆಗಳಲ್ಲಿ ಬಿದ್ದು ತೊಳಲಾಡುತ್ತಿದ್ದಾರೆ. ಹೀಗಿರುವಾಗ ಅವುಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಇಂಥ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುವ ರಾಜಕಾರಣಿಗಳ ಕುತಂತ್ರಕ್ಕೆ ಜನ ತಕ್ಕ ಪಾಠ ಕಲಿಸಬೇಕಾಗಿದೆ.
-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ
***
ಸಜೀವ ಗುಬ್ಬಿಗಳನ್ನೇ ತೋರೋಣ!
ಗುಬ್ಬಚ್ಚಿಗಳ ದಿನವನ್ನು ಸೋಮವಾರವಷ್ಟೇ (ಮಾರ್ಚ್ 20) ಆಚರಿಸಿದ್ದೇವೆ. ನನ್ನ ಮನೆಯ ತಾರಸಿಯಲ್ಲಿ ಪ್ರತಿದಿನವೂ ಗುಬ್ಬಿಗಳಿಗೆ ಆಹಾರ, ನೀರು ಒದಗಿಸುತ್ತೇನೆ. ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣಗಳು ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚೆಗೆ ನಾನು ನವಿಮುಂಬೈ ನಗರದ ಪಾದಚಾರಿ ಮಾರ್ಗವೊಂದರಲ್ಲಿ ಗುಬ್ಬಚ್ಚಿಗಳು ಯಾರ ಭಯವೂ ಇಲ್ಲದೆ ತಮ್ಮ ಹಸಿವು ತಣಿಸಿಕೊಳ್ಳುತ್ತಿದ್ದುದನ್ನು ಕಂಡು ಖುಷಿಪಟ್ಟೆ. ಹೀಗಾಗಿ ನಾವು ಮರಗಿಡಗಳ ರಕ್ಷಣೆಗೆ ಮುಂದಾದರೆ, ಗುಬ್ಬಿಗಳು ಗೂಡು ಕಟ್ಟಿಕೊಳ್ಳಲು, ಹಸಿವು ತಣಿಸಿಕೊಳ್ಳಲು ನೀರು, ಆಹಾರದ ಅನೂಕೂಲ ಕಲ್ಪಿಸಿದರೆ ಮುಂದೆ ಪುಸ್ತಕಗಳಲ್ಲಿ ಮಾತ್ರ ಗುಬ್ಬಚ್ಚಿಗಳ ಚಿತ್ರ ನೋಡುವ ಬದಲು, ಸಜೀವ ಗುಬ್ಬಚ್ಚಿಗಳನ್ನೇ ಮಕ್ಕಳಿಗೆ ತೋರಿಸಬಹುದು.
-ರಘುನಾಥರಾವ್ ತಾಪ್ಸೆ, ದಾವಣಗೆರೆ
***
ಉರಿಗೌಡ– ನಂಜೇಗೌಡ: ಇತಿಹಾಸ ಸೃಷ್ಟಿಸುವ ಸೋಜಿಗ
ಇತಿಹಾಸವು ವರ್ತಮಾನವನ್ನು ರೂಪಿಸುತ್ತಿರುತ್ತದೆ. ಇತಿಹಾಸ, ವರ್ತಮಾನಗಳೆರಡೂ ಸೇರಿ ಭವಿಷ್ಯವನ್ನು ನಿರ್ಧರಿಸುತ್ತಿರುತ್ತವೆ. ಪ್ರಸ್ತುತ ಕರ್ನಾಟಕದ ಸಂದರ್ಭದಲ್ಲಿ, ವರ್ತಮಾನವೇ ಇತಿಹಾಸವನ್ನು ಸೃಷ್ಟಿಸುತ್ತಿರುವ ವಿಚಿತ್ರ ವಿದ್ಯಮಾನವೊಂದು ಕಾಣಿಸಿಕೊಂಡಿದೆ. ಎರಡು–ಮೂರು ವರ್ಷಗಳ ಹಿಂದೆ ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಉರಿಗೌಡ ಮತ್ತು ನಂಜೇಗೌಡ ಎಂಬಿಬ್ಬರು ಟಿಪ್ಪುವನ್ನು ಕೊಂದ ಕತೆಯನ್ನು, ಐತಿಹಾಸಿಕ ಸತ್ಯವೆಂದು ಬಿಂಬಿಸಲು ಇಡೀ ವರ್ತಮಾನವೇ ಶ್ರಮಿಸುತ್ತಿದೆ! ತಮಿಳುನಾಡಿನ ಪಿರಿಯ ಮರುದೈ ಮತ್ತು ಚಿನ್ನ ಮರುದೈ ಎಂಬ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನೇ ಉರಿಗೌಡ-ನಂಜೇಗೌಡ ಎಂದು ಪ್ರಚಾರ ಮಾಡಲಾಗುತ್ತಿದೆ. ದೇಶದ ಪ್ರಧಾನಿಯ ಸ್ವಾಗತಕ್ಕೆ ಕಲ್ಪಿತ ಪಾತ್ರಗಳ ಹೆಸರಿನಲ್ಲಿ ಸ್ವಾಗತ ಕಮಾನು ಹಾಕುವ ಸಾಹಸವೇ ನಡೆಯುತ್ತದೆ. ಧನವಂತ ಮಂತ್ರಿಯೊಬ್ಬರು ಆ ಹೆಸರಿನಲ್ಲಿ ಸಿನಿಮಾ ಮಾಡಲು ಹೆಸರನ್ನು ನೋಂದಾಯಿಸುತ್ತಾರೆ. ಟಿಪ್ಪುವಿನ ಬಗೆಗಿನ ಜಾನಪದ ಲಾವಣಿಗಳಿಗೆ, ಈ ಹೆಸರುಗಳನ್ನು ಸೇರಿಸಿ ಪ್ರಕ್ಷಿಪ್ತಗೊಳಿಸಿ ಪ್ರಸಾರ ಮಾಡುವ ಪ್ರಯತ್ನವೂ ನಡೆಯುತ್ತಿದೆ.
ಸಮಕಾಲೀನ ಐತಿಹಾಸಿಕ ದಾಖಲೆಗಳು, ಇತಿಹಾಸದ ಪುಸ್ತಕಗಳು, ಭಿತ್ತಿ-ವರ್ಣಚಿತ್ರಗಳು ಮತ್ತು ಜನಪದ ಲಾವಣಿ
ಗಳಲ್ಲೆಲ್ಲೂ ಉಲ್ಲೇಖಿತವಾಗದ ಉರಿಗೌಡ ಮತ್ತು ನಂಜೇಗೌಡರ ಇತಿಹಾಸವನ್ನು ವರ್ತಮಾನವೇ ಹೊಸದಾಗಿ ಸೃಷ್ಟಿಸು
ತ್ತಿರುವ ಸೋಜಿಗ ಇದಾಗಿದೆ!
- ಡಾ. ಬಿ.ಆರ್.ಸತ್ಯನಾರಾಯಣ, ಬೆಂಗಳೂರು
***
ಹೀಗಿರಲಿ ಹಬ್ಬ
ಕಾಂಕ್ರೀಟ್ ಕಾಡಿನಲೂ ಕಾಣಲಿ ಆಗಾಗ
ಮಾವಿನ ಚಿಗುರು, ಬೇವಿನ ಹೂ
ಪಾಪ್, ಡಿಸ್ಕೊಗಳ ನಡುವೆ
ಕೇಳಲಿ ಕೋಗಿಲೆಯ ಕುಹೂ ಕುಹೂ!
‘ಎಣ್ಣೆ ಬಾರು’ಗಳ ನಡುವೆ
ನಡೆಯಲೊಂದು ಅಭ್ಯಂಜನ!
ಪಿಜ್ಜಾ, ಬರ್ಗರ್‌ಗಳ ನಡುವೆ
ಬದಲಾವಣೆಗೊಂದು ಹೋಳಿಗೆ ಭೋಜನ!
- ಎಲ್.ಎನ್.ಪ್ರಸಾದ್, ತುರುವೇಕೆರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.