ವಾಚಕರ ವಾಣಿ: ಸಚಿವರಿಗೆ ಅಧಿಕಾರ ವೈರಾಗ್ಯವೇಕೆ?
ಪಕ್ಷಾಂತರ ಮಾಡಿ ತಪ್ಪೆಸಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮೇ 1). ಸಚಿವರಿಗೆ ಇಂಥ ಅಧಿಕಾರ ವೈರಾಗ್ಯ ಯಾಕೆ ಎಂಬುದು ತಿಳಿಯದಾಗಿದೆ. ‘ರಾಜಕೀಯದಲ್ಲಿ ನಾನು ಹಣ ಮಾಡಬೇಕೆಂದೇನೂ ಇಲ್ಲ’ ಎಂದೂ ಹೇಳಿದ್ದಾರೆ. ರಾಜಕೀಯದ ಮೂಲಕ ಹಣ ಮಾಡುವುದೂ ಒಂದು ಮಾರ್ಗ ಎಂದು ಈ ಮೂಲಕ ಅವರು ಸೂಚ್ಯವಾಗಿ ಹೇಳಿದ್ದಾರೆ. ಎಂ.ಟಿ.ಬಿ. ಸಹಿತ 18 ಮಂದಿ ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು. ಅವರ ಈ ತ್ಯಾಗಕ್ಕೆ ಪ್ರತಿಫಲವಾಗಿ ಸಚಿವ ಸ್ಥಾನ ನೀಡಲಾಗಿದೆ.
ಬಹುತೇಕ ಆಯ್ಕೆಯಾದ ಶಾಸಕರಿಗೆ ಸಚಿವರಾಗಬೇಕು ಎಂಬ ಬಲವಾದ ಆಕಾಂಕ್ಷೆ ಇದ್ದೇ ಇರುತ್ತದೆ. ರಾಜಕಾರಣವು ಸೇವೆಯ ಒಂದು ಭಾಗ ಎಂದು ಯಾವ ರಾಜಕಾರಣಿಯೂ ತಿಳಿದಿಲ್ಲ. ಇಂಥ ಮನೋಭಾವ ಹೊಂದಿದ್ದರೆ ಇವತ್ತು ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಕಮಿಷನ್ ಸುದ್ದಿ ಮಾಡುತ್ತಿರಲಿಲ್ಲ. ಎಂ.ಟಿ.ಬಿ. ಅವರಿಗೆ ಖಾತೆಯ ಮೇಲೆ ಮುನಿಸೋ, ಸರ್ಕಾರದ ನಡೆಯ ಬಗ್ಗೆ ಅತೃಪ್ತಿಯೋ? ಅಂತೂ ಸಚಿವರಿಗೆ ಅಧಿಕಾರ ವೈರಾಗ್ಯವೇಕೆ ಎಂಬುದು ಪ್ರಶ್ನಾರ್ಹವಾಗಿದೆ.
- ಗಣಪತಿ ಶಿರಳಗಿ, ಸಾಗರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.